ಬಿಜೆಪಿಯಲ್ಲಿ ಸಿದ್ಧವಾಗುತ್ತಿದೆ ಮಾಸ್ಟರ್ ಪ್ಲಾನ್ : ಭರ್ಜರಿ ಗೆಲುವಿವಾಗಿ ತಂತ್ರಗಾರಿಕೆ
ರಾಜ್ಯಕ್ಕೆ ಕೇಂದ್ರ ಸಚಿವ ಅಮಿತ್ ಶಾ ಆಗಮಿಸುತ್ತಿದ್ದು ಇಂದು ನಡೆಯುವ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಹಲವು ತಂತ್ರಗಾರಿಕೆಗಳು ಸಿದ್ಧವಾಗಲಿದೆ
ಬೆಂಗಳೂರು(ಜ.16): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಒಂದೂವರೆ ವರ್ಷ ಪೂರೈಸಿದ ಬೆನ್ನಲ್ಲೇ ಸರ್ಕಾರದ ವರ್ಚಸ್ಸು ಹೆಚ್ಚಿಸುವ ಮತ್ತು ಪಕ್ಷದ ಸಂಘಟನೆ ಬಲಪಡಿಸುವ ಉದ್ದೇಶದಿಂದ ಬಿಜೆಪಿಯ ವರಿಷ್ಠ ನಾಯಕರೂ ಆಗಿರುವ ಕೇಂದ್ರದ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಶನಿವಾರ ಮಹತ್ವದ ಕೋರ್ ಕಮಿಟಿ ಸಭೆ ನಡೆಯಲಿದೆ.
ಪಕ್ಷದ ಕಚೇರಿಯಲ್ಲಿ ರಾತ್ರಿ 7.30ರ ವೇಳೆಗೆ ನಡೆಯುವ ಸಭೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ, ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರೂ ಭಾಗವಹಿಸುವ ನಿರೀಕ್ಷೆಯಿದೆ.
ಇತ್ತೀಚೆಗೆ ಯಡಿಯೂರಪ್ಪ ಅವರು ದೆಹಲಿಗೆ ತೆರಳಿದ ವೇಳೆ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಅರುಣ್ ಸಿಂಗ್ ಅವರು ಸುಮಾರು ಒಂದೂವರೆ ಗಂಟೆ ಕಾಲ ಮಾತುಕತೆ ನಡೆಸಿ ಹಲವು ಸಲಹೆ- ಸೂಚನೆಗಳನ್ನು ನೀಡಿದ್ದರು. ಇದೇ ವೇಳೆ ಯಡಿಯೂರಪ್ಪ ಅವರೂ ತಮ್ಮ ಅಭಿಪ್ರಾಯಗಳನ್ನು ವರಿಷ್ಠರ ಮುಂದಿಟ್ಟಿದ್ದರು.
ಅಮಿತ್ ಶಾ ಭೇಟಿ ಬಳಿಕ ಖಾತೆ ಫೈನಲ್, ಕುತೂಹಲ ಮೂಡಿಸಿದೆ ಕ್ಲೈಮ್ಯಾಕ್ಸ್..! ..
ಇದೀಗ ಯಡಿಯೂರಪ್ಪ ಹಾಗೂ ಪಕ್ಷದ ಇತರ ಹಿರಿಯ ನಾಯಕರ ಸಮ್ಮುಖದಲ್ಲೇ ವರಿಷ್ಠ ನಾಯಕರು ಸರ್ಕಾರದ ಮುಂದಿನ ಎರಡೂವರೆ ವರ್ಷ ಅವಧಿಯ ರೂಟ್ ಮ್ಯಾಪ್ ಸಿದ್ಧಪಡಿಸುವ ಸಂಭವವಿದೆ. ಇದುವರೆಗೆ ಆಗಿರುವ ಲೋಪದೋಷಗಳನ್ನು ಸರಿಪಡಿಸಿಕೊಂಡು ಮುಂದಿನ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಭರ್ಜರಿ ಗೆಲುವು ಪಡೆಯುವುದಕ್ಕೆ ಬೇಕಾದ ತಂತ್ರಗಾರಿಕೆಯನ್ನು ಈಗಿನಿಂದಲೇ ಅನುಸರಿಸಲು ವರಿಷ್ಠರು ಸೂಚಿಸುವ ನಿರೀಕ್ಷೆಯಿದೆ.
ಶಾಸಕರ ಅಸಮಾಧಾನ ಪ್ರಸ್ತಾಪ: ಇತ್ತೀಚೆಗೆ ಕಳೆದ ಕೆಲವು ತಿಂಗಳುಗಳಿಂದ ಪಕ್ಷದ ಶಾಸಕರು ಬಹಿರಂಗವಾಗಿಯೇ ಅನುದಾನ ಹಂಚಿಕೆ ಸೇರಿದಂತೆ ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸುತ್ತಿದ್ದರು. ಜೊತೆಗೆ ಸಂಪುಟ ವಿಸ್ತರಣೆ ಬಳಿಕ ಶಾಸಕರ ಅಸಮಾಧಾನ ದೊಡ್ಡ ಪ್ರಮಾಣದಲ್ಲಿ ಹೊರಬಿದ್ದಿದೆ.
ಹೀಗಾಗಿ, ಶಾಸಕರನ್ನು ಸಮಾಧಾನಪಡಿಸುವ ಬಗ್ಗೆಯೂ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಯಲಿದೆ. ಶಾಸಕರ ಅಸಮಾಧಾನಕ್ಕೆ ಕಾರಣವಾದ ಅಂಶಗಳನ್ನು ಹೇಗೆ ಪರಿಹರಿಸಬೇಕು ಎಂಬುದರ ಬಗ್ಗೆ ವರಿಷ್ಠರು ಸಲಹೆ ನೀಡುವ ಸಂಭವವಿದೆ ಎನ್ನಲಾಗಿದೆ.
ಎಲ್ಲರ ವಿಶ್ವಾಸದೊಂದಿಗೆ ಪ್ರಮುಖ ನಿರ್ಧಾರ: ಇದೇ ವೇಳೆ ಸರ್ಕಾರದ ನೀತಿ ನಿರೂಪಣೆಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಪಕ್ಷದ ಎಲ್ಲ ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂಬ ದೂರೂ ವರಿಷ್ಠರ ಕೈಸೇರಿತ್ತು. ಹೀಗಾಗಿ, ಇನ್ನು ಮುಂದೆ ಪ್ರಮುಖ ನಿರ್ಧಾರ ಕೈಗೊಳ್ಳುವ ಮೊದಲು ಕೋರ್ ಕಮಿಟಿ ಸಭೆಯಲ್ಲಿ ಪ್ರಸ್ತಾಪ ಮಾಡಿ, ವಿಸ್ತೃತ ಚರ್ಚೆ ನಡೆಸಬೇಕು ಎಂಬ ಸೂಚನೆಯನ್ನು ವರಿಷ್ಠರು ನೀಡುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮುಂಬರುವ ಚುನಾವಣೆಗೆ ರಣತಂತ್ರ : ಅಲ್ಲದೆ, ಮುಂಬರುವ ಚುನಾವಣೆ ಹಾಗೂ ಉಪಚುನಾವಣೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆಯಿದೆ. ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಜೊತೆಗೆ ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷವನ್ನು ಭರ್ಜರಿಯಾಗಿ ಗೆಲ್ಲಿಸುವ ಬಗ್ಗೆ ರಣತಂತ್ರ ರೂಪಿಸುವ ಸಂಭವವಿದೆ ಎನ್ನಲಾಗಿದೆ.