ಯಡಿಯೂರಪ್ಪ ತಂದ ರೈತ ಯೋಜನೆಗಳಿಂದ ಕೇಂದ್ರದಲ್ಲೂ ಬಿಜೆಪಿ ಅಧಿಕಾರಕ್ಕೆ: ಅಮಿತ್ ಶಾ
ಪುತ್ತೂರಲ್ಲಿ ನಡೆದ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರ ಆಡಳಿತದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅಮಿತ್ ಶಾ, ರೈತರ ಏಳಿಗೆಗೆ ಯಡಿಯೂರಪ್ಪ ಅವರ ಕೊಡುಗೆ ಅಪಾರ. ಅವರ ನೇತೃತ್ವದಲ್ಲಿ ರೈತರು ಅಭಿವೃದ್ಧಿ ಕಂಡಿದ್ದಾರೆ.
ಪುತ್ತೂರು (ಫೆ.12): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿಯಲ್ಲಿ ಕಡೆಗಣಿಸಲಾಗುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ದಕ್ಷಿಣ ಕನ್ನಡ ಭೇಟಿ ವೇಳೆ ಪರೋಕ್ಷವಾಗಿ ಪ್ರತಿಪಾದಿಸಿದ್ದು, ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಕರ್ನಾಟಕದಲ್ಲಿ ಜಾರಿಗೆ ತಂದ ರೈತಪರ ಕಾರ್ಯಕ್ರಮಗಳಿಂದಾಗಿಯೇ ಕೇಂದ್ರದಲ್ಲಿ ಬಿಜೆಪಿ ಸರ್ಕಾರಕ್ಕೆ ಅಧಿಕಾರಕ್ಕೆ ಬರಲು ಸಹಾಯವಾಯಿತು ಎಂದು ಗುಣಗಾನ ಮಾಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಶನಿವಾರ ಇಡೀ ದಿನ ಯಡಿಯೂರಪ್ಪ ಅವರ ಜತೆಯಲ್ಲೇ ಪ್ರಯಾಣಿಸಿದ ಅಮಿತ್ ಶಾ, ಎಲ್ಲ ಕಾರ್ಯಕ್ರಮದಲ್ಲೂ ಯಡಿಯೂರಪ್ಪ ಅವರ ಕೊಡುಗೆಗಳನ್ನು ಶ್ಲಾಘಿಸಿದರು.
ಪುತ್ತೂರಲ್ಲಿ ನಡೆದ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರ ಆಡಳಿತದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅಮಿತ್ ಶಾ, ರೈತರ ಏಳಿಗೆಗೆ ಯಡಿಯೂರಪ್ಪ ಅವರ ಕೊಡುಗೆ ಅಪಾರ. ಅವರ ನೇತೃತ್ವದಲ್ಲಿ ರೈತರು ಅಭಿವೃದ್ಧಿ ಕಂಡಿದ್ದಾರೆ. ರೈತ ಪರ ಕಾರ್ಯಕ್ರಮಗಳಿಗಾಗಿ ಇಡೀ ದೇಶದ ಅನ್ನದಾತರು ಯಡಿಯೂರಪ್ಪ ಅವರನ್ನು ಸ್ಮರಿಸುತ್ತಾರೆ. ಅವರ ಆಡಳಿತ ವೈಖರಿಗಳಿಂದಾಗಿ ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ಶ್ಲಾಘಿಸಿದರು.
ಉ.ಕ ಬಳಿಕ ಕರಾವಳಿಗಿಂದು ಅಮಿತ್ ಶಾ: ಬಿಜೆಪಿ ಪ್ರಮುಖರ ಜೊತೆ ಚುನಾವಣಾ ಚರ್ಚೆ
ಅಮಿತ್ ಶಾ ಅವರ ಉತ್ತರ ಕರ್ನಾಟಕ ಹಾಗೂ ಮಂಡ್ಯ ಭೇಟಿ ವೇಳೆ ಯಡಿಯೂರಪ್ಪ ದೂರವಿದ್ದದ್ದು, ತೀವ್ರ ಚರ್ಚೆಗೆ ಕಾರಣವಾಗಿತ್ತು. ಇದು ಬಿಜೆಪಿ ಪಾಳೆಯದಲ್ಲಿ ಯಡಿಯೂರಪ್ಪ ಅವರನ್ನು ವರಿಷ್ಠರು ಮೂಲೆಗುಂಪು ಮಾಡುತ್ತಿದ್ದಾರೆಂಬ ಪುಕಾರು ಸೃಷ್ಟಿಗೆ ಕಾರಣವಾಗಿತ್ತು. ಕಾಂಗ್ರೆಸ್ ಸೇರಿ ಇತರೆ ವಿಪಕ್ಷಗಳು ಕೂಡ ಇದನ್ನೇ ಮುಂದಿಟ್ಟುಕೊಂಡು ರಾಜ್ಯದ ಪ್ರಭಾವಿ ಲಿಂಗಾಯತ ನಾಯಕನನ್ನು ಬಿಜೆಪಿ ಮೂಲೆಗುಂಪು ಮಾಡುತ್ತಿದೆ ಎಂಬ ಆರೋಪ ಮಾಡಿದ್ದವು. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಭೇಟಿ ವೇಳೆ ಶಾ ಅವರು ಯಡಿಯೂರಪ್ಪ ಅವರನ್ನು ಹೋದಲೆಲ್ಲ ಹತ್ತಿರದಲ್ಲೇ ಇಟ್ಟುಕೊಳ್ಳುವ ಮೂಲಕ ವಿರೋಧಿಗಳಿಗೆ ಸೂಕ್ತ ಸಂದೇಶ ರವಾನಿಸುವ ಪ್ರಯತ್ನ ಮಾಡಿದರು ಎಂದು ಹೇಳಲಾಗಿದೆ.
ಕಾಪ್ಟರ್ನಲ್ಲೂ ಜತೆ ಜತೆ: ಮುಖ್ಯಮಂತ್ರಿ ಬೊಮ್ಮಾಯಿ ಜತೆ ಈಶ್ವರಮಂಗಲಕ್ಕೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಆಗಮಿಸುವಾಗ ಅಮಿತ್ ಶಾ ಅವರು ಯಡಿಯೂರಪ್ಪರನ್ನೂ ಜತೆಯಲ್ಲಿ ಕರೆಸಿಕೊಂಡಿದ್ದರು. ಈಶ್ವರಮಂಗಲದಲ್ಲಿ ಅಮರಗಿರಿ ಭಾರತ ಮಾತೆ ಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲೂ ಶಾ ಮತ್ತು ಯಡಿಯೂರಪ್ಪ ಜತೆ ಜತೆಯಾಗಿಯೇ ಭಾಗಿಯಾಗಿದ್ದರು. ಅಲ್ಲಿ ಸೇರಿದ ಮಂದಿ ಯಡಿಯೂರಪ್ಪಗೆ ಸ್ವಾಗತ ಕೋರಿದಾಗ ಭಾರೀ ಜೈಕಾರ ಮೊಳಗಿದ್ದು ವಿಶೇಷವಾಗಿತ್ತು.
ಸಂಸದೆ ಸುಮಲತಾ ಕಾಂಗ್ರೆಸ್ ಪಕ್ಷ ಸೇರಲು ಅಭ್ಯಂತರವಿಲ್ಲ: ಡಿ.ಕೆ.ಶಿವಕುಮಾರ್
ತರುವಾಯ ಅಮಿತ್ ಶಾ-ಬಿಎಸ್‌ವೈ ಜೋಡಿ ಪುತ್ತೂರಿಗೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ್ದು, ಪುತ್ತೂರಿನಲ್ಲಿ ಕ್ಯಾಂಪ್ಕೋ ಸುವರ್ಣ ಮಹೋತ್ಸವ ವರ್ಷಾಚರಣೆಗೆ ಚಾಲನೆ ಸಂದರ್ಭದಲ್ಲೂ ವೇದಿಕೆಯಲ್ಲಿ ಜತೆಯಾಗಿಯೇ ಕಾಣಿಸಿಕೊಂಡರು. ಕಾರ್ಯಕ್ರಮ ಮುಗಿಸಿ ಶಾ ಅವರು ಸಿಎಂ, ಯಡಿಯೂರಪ್ಪ ಜತೆಗೇ ಕಾಪ್ಟರ್ನಲ್ಲಿ ಮಂಗಳೂರಿಗೆ ತೆರಳಿದರು.