ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆ ಮರು ಪ್ರಸ್ತಾವ ಮತ್ತೆ ಕೇಂದ್ರ ಸಂಪುಟದ ಮುಂದೆ ಮಂಡನೆಯಾಗಲಿದೆ. 

ಚಿತ್ರದುರ್ಗ (ಆ.19): ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆ ಮರು ಪ್ರಸ್ತಾವ ಮತ್ತೆ ಕೇಂದ್ರ ಸಂಪುಟದ ಮುಂದೆ ಮಂಡನೆಯಾಗಲಿದೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಬೆಂಗಳೂರಿನಲ್ಲಿ ಈ ಸಂಬಂಧ ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಕೇಂದ್ರದ ಅನುದಾನ ಪಡೆಯುವುದು ಹಾಗೂ ಭದ್ರಾ ಮೇಲ್ದಂಡೆ ಕಾಮಗಾರಿಗೆ ತೊಡಕಾಗಿರುವ ಭೂ ಸ್ವಾದೀನ ಪ್ರಕ್ರಿಯೆ ಪೂರ್ಣಗೊಳಿಸಲು ಇರುವ ಅಡೆ ತಡೆಗಳ ಶೀಘ್ರ ನಿವಾರಿಸುವಂತೆ ನಾರಾಯಣಸ್ವಾಮಿ ಈ ವೇಳೆ ಸಲಹೆ ಮಾಡಿದ್ದಾರೆ. 

ಈ ಮೊದಲು ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆಯ ರಾಷ್ಟ್ರೀಯ ಯೋಜನೆಯಾಗಿ ಘೋಷಿಸುವ ಇಚ್ಚೆ ವ್ಯಕ್ತಪಡಿಸಿ ಕಳೆದ ಬಜೆಟ್‌ನಲ್ಲಿ 5300 ಕೋಟಿ ರುಪಾಯಿ ಅನುದಾನ ಕಾಯ್ದಿರಿಸಿತ್ತು. ಆದರೆ ರಾಷ್ಟ್ರೀಯ ಯೋಜನೆ ಘೋಷಣೆ ವಿಳಂಬವಾಗುವ ಸಾಧ್ಯತೆ ಹಿನ್ನೆಲೆ ಬೇರೆ ಯೋಜನೆಯಡಿ ಅನುದಾನ ಕೋರಿ ಮರು ಪ್ರಸ್ತಾವನೆ ಸಲ್ಲಿಸುವಂತೆ ಕೇಂದ್ರ ಜಲಶಕ್ತಿ ಸಚಿವ ಶೆಖಾವತ್‌ ಸಲಹೆ ಮಾಡಿದ್ದರು. ಈ ಸಂಬಂಧ ಚಿತ್ರದುರ್ಗದಲ್ಲಿ ಸಭೆ ಮಾಡಿದ್ದ ಸಚಿವ ಎ.ನಾರಾಯಣಸ್ವಾಮಿ ಮರುಪ್ರಸ್ತಾವನೆ ಸಲ್ಲಿಸುವಂತೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು. ಇದೀಗ ಪ್ರಸ್ತಾವನೆ ರೆಡಿಯಾಗಿ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ (ಆಗಸ್ಟ್‌ 17ರಂದು)ಮಂಡನೆಯಾಗಿದೆ.

ಮಠಗಳು ಮನುಷ್ಯರ ಪಾಪ ತೊಳೆವ ಮಾರ್ಗದರ್ಶನ ಕೇಂದ್ರ: ಕೋಡಿಮಠ ಸ್ವಾಮೀಜಿ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭೇಟಿ ನಂತರ ಕನ್ನಡಪ್ರಭದೊಂದಿಗೆ ಮಾತನಾಡಿದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದಂತೆ 5300 ಕೋಟಿ ರುಪಾಯಿ ಅನುದಾನ ಪಡೆಯಲು ಕರ್ನಾಟಕದಿಂದ ಮರು ಪ್ರಸ್ತಾವ ಹೋಗಿದೆ. ಈಗ ನಮ್ಮ ಜವಾಬ್ದಾರಿ ಹೆಚ್ಚಿದೆ. ಅನುದಾನ ಬಿಡುಗಡೆಗೂ ಮುನ್ನ ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಪಡೆಯಬೇಕಾಗಿದೆ. ಹಾಗಾಗಿ ಸೋಮವಾರ ಇಲ್ಲವೇ ಮಂಗಳವಾರದಂದು ಕೇಂದ್ರ ಜಲಶಕ್ತಿ ಸಚಿವ ಶೆಖಾವತ್‌ ಅವರನ್ನು ಭೇಟಿ ಮಾಡಿ, ಸಂಪುಟ ಸಭೆಗೆ ಟಿಪ್ಪಣಿ ಮಂಡಿಸಲು ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಮನವಿ ಮಾಡಿಕೊಳ್ಳುವುದಾಗಿ ಹೇಳಿದರು.

ತರಿಕೆರೆ ಸಮೀಪ ಅಬ್ಬಿನಹೊಳಲು ಬಳಿ ಕಾಲುವೆ ತೋಡಲು 1.6 ಕಿಮೀ ನಷ್ಟು ಭೂಮಿ ಸ್ವಾಧೀನಕ್ಕೆ ರೈತರು ಅಡ್ಡಿ ಪಡಿಸಿರುವ ವಿಷಯವನ್ನು ಡಿ.ಕೆ.ಶಿವಕುಮಾರ್‌ ಗಮನಕ್ಕೆ ತರಲಾ ಯಿತು. ತಕ್ಷಣವೇ ತರಿಕೆರೆ ಶಾಸಕ ಶ್ರೀನಿವಾಸ್‌ ಅವರನ್ನು ಸಂಪರ್ಕಿಸಿದ ಶಿವಕುಮಾರ್‌, ಸ್ವತಹ ಮುಂದೆ ನಿಂತು ಸಮಸ್ಯೆ ಬಗೆ ಹರಿಸಬೇಕು. ರೈತರೊಂದಿಗೆ ಖುದ್ದು ಮಾತುಕತೆ ನಡೆಸಿ ವಾರದೊಳಗೆ ಕಾಮಗಾರಿ ಪುನರ್‌ ಆರಂಭಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರೆಂದು ನಾರಾಯಣಸ್ವಾಮಿ ತಿಳಿಸಿದರು.

ರಾಜ್ಯ​ದಲ್ಲಿ ವಿಚಿತ್ರವಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಸರ್ಕಾರ: ಶಾಸಕ ಬಿ.ವೈ.ವಿಜಯೇಂದ್ರ

ಕೇಂದ್ರಕ್ಕೆ ಕಳುಹಿಸಿದ ಮರು ಪ್ರಸ್ತಾವದಲ್ಲಿನ ಪ್ರಮುಖ ಅಂಶ: ಈ ಮೊದಲು ಭದ್ರಾ ಮೇಲ್ದಂಡೆಯ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಕೇಂದ್ರ ಸಚಿವ ಸಂಪುಟದ ಮುಂದೆ ಮಂಡಿಸಿದ್ದ ಪ್ರಸ್ತಾವವನ್ನೇ ಯಥಾವತ್ತಾಗಿ ದಾಖಲು ಮಾಡಿದ್ದು, ಕಡೆ ಪ್ಯಾರಾ ಮಾತ್ರ ಬದಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಗೆ ಸೇರಿಸುವ ಪ್ರಕ್ರಿಯೆ ವಿಳಂಬವಾಗಿದ್ದು, ಕೇಂದ್ರದ ನೆರವು ಬಿಡುಗಡೆಯಾಗದ ಕಾರಣ ಯೋಜನೆಯ ಪ್ರಗತಿ ಕುಂಠಿತವಾಗಿದೆ. ಯೋಜನೆಯ ಪ್ರಗತಿಯನ್ನು ವೇಗಗೊಳಿಸಲು ಕೇಂದ್ರದ ಸಹಾಯವನ್ನು ಪಡೆಯುವುದು ಬಹಳ ಅವಶ್ಯಕವಾಗಿದೆ. ಆದ್ದರಿಂದ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ-ವೇಗವರ್ಧಿತ ನೀರಾವರಿ ಪ್ರಯೋಜನ ಕಾರ್ಯಕ್ರಮ (ಪಿಎಂಕೆಎಸ್‌ವೈ- ಎಐಬಿಪಿ) ಅಡಿಯಲ್ಲಿ ಭದ್ರಾ ಮೇಲ್ದಂಡೆಗೆ 5300 ಕೋಟಿಗಳ ಕೇಂದ್ರ ಸಹಾಯಕ್ಕಾಗಿ ಅನುಮೋದನೆ ಕೋರಲಾಗಿದೆ ಎಂಬ ಅಂಶವ ಪ್ರಧಾನವಾಗಿ ಬಿಂಬಿಸಲಾಗಿದೆ.