ಬಿಜೆಪಿ ರಾಜ್ಯ ಮುಖಂಡರೊಂದಿಗೆ ಶನಿವಾರ ಪ್ರತ್ಯೇಕ ಸಭೆಯನ್ನು ನಡೆಸಲಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜ.2ರಿಂದ 10 ದಿನಗಳ ಕಾಲ ಬಿಜೆಪಿಯು ಬೂತ್‌ ವಿಜಯ ಅಭಿಯಾನ ಹಮ್ಮಿಕೊಂಡಿದೆ. 

ಬೆಂಗಳೂರು(ಡಿ.30): ಮುಂಬರುವ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿಗೆ ಬಲ ನೀಡಲು ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಗಮಿಸಿದ್ದು, ಇಂದಿನಿಂದ ಎರಡು ದಿನಗಳ ಕಾಲ ಮಂಡ್ಯ ಮತ್ತು ಬೆಂಗಳೂರಿನ ವಿವಿಧ ರಾರ‍ಯಲಿ, ಸಮಾವೇಶಗಳಲ್ಲಿ ಭಾಗವಹಿಸುತ್ತಿದ್ದಾರೆ.

ಮಂಡ್ಯದಲ್ಲಿ ಶುಕ್ರವಾರ ಮಧಾಹ್ನ 1ಕ್ಕೆ ಅಮಿತ್‌ ಶಾ ಅವರ ರಾರ‍ಯಲಿ ಮತ್ತು ಸಮಾವೇಶದಲ್ಲಿ ಹಮ್ಮಿಕೊಳ್ಳಲಾಗಿದ್ದು, ಮಂಡ್ಯ ನೆರೆಯ ಜಿಲ್ಲೆಗಳಾದ ಮೈಸೂರು, ಚಾಮರಾಜನಗರ ಮತ್ತು ಹಾಸನಗಳಿಂದ ಸುಮಾರು ಬರೋಬ್ಬರಿ ಒಂದು ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದಕ್ಕೂ ಮುನ್ನ ಸಕ್ಕರೆ ಕ್ಷೇತ್ರ ಬಲಿಷ್ಠಗೊಳಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, 5700 ವಿಎಸ್‌ಎಸ್‌ಗಳಿಗೆ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಲಭಿಸಿದ ಪ್ರಯೋಜನಗಳನ್ನು ಪರಿಶೀಲನೆ, ಮದ್ದೂರಿನ ಮೆಗಾ ಡೇರಿಯನ್ನು ಉದ್ಘಾಟಿಸಲಿದ್ದಾರೆ.

ಅಭಿವೃದ್ಧಿಗಾಗಿ ಅಮಿತ್‌ ಶಾ ಮಂಡ್ಯಕ್ಕೆ ಬರುತ್ತಿಲ್ಲ: ಕುಮಾರಸ್ವಾಮಿ

ಶುಕ್ರವಾರ ಬೆಂಗಳೂರು ಅರಮನೆಯಲ್ಲಿ ಸಂಜೆ 5.30ಕ್ಕೆ ಜರುಗುವ ಕಾರ್ಯಕ್ರಮದಲ್ಲಿ ಸಹಕಾರ ಕ್ಷೇತ್ರದಿಂದ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 24 ಸಾವಿರ ಕೋಟಿ ರು. ಸಾಲ ನೀಡುವ ಯೋಜನೆಯನ್ನು ಅಮಿತ್‌ಶಾ ಚಾಲನೆ ನೀಡಲಿದ್ದಾರೆ. ಶನಿವಾರ (ಡಿ.31) ಮಲ್ಲೇಶ್ವರದ ಸೌಹಾರ್ದ ಫೆಡರೇಶನ್‌ಗೆ ಭೇಟಿ ನೀಡಿ, ಸೌಹಾರ್ದ ಸಹಕಾರಿಗಳ ಸಭೆಯನ್ನು ಅಮಿತ್‌ ಶಾ ನಡೆಸಲಿದ್ದಾರೆ. ಆನಂತರ ಬಿಜೆಪಿ ಬೂತ್‌ ವಿಜಯ ಅಭಿಯಾನವನ್ನು ಉದ್ಘಾಟಿಸಿ, ಪಕ್ಷದ ನೂತನ ಕ್ರಿಯಾ ಯೋಜನೆಗಳ ಕುರಿತು ಅಮಿತ್‌ ಶಾ ಮಾರ್ಗದರ್ಶನ ನೀಡಲಿದ್ದಾರೆ.

ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಆದ್ಯತೆ:

ಈ ಬಾರಿಯ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಮಹತ್ವಾಕಾಂಕ್ಷೆಯ ಗುರಿಯನ್ನು ಬಿಜೆಪಿ ಹೊಂದಿದೆ. 2008 ಮತ್ತು 2018 ರಲ್ಲಿ ಬಿಜೆಪಿಗೆ ಹಳೆ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನಗಳು ಲಭ್ಯವಾಗಿರಲಿಲ್ಲ. ಅದ್ದರಿಂದ ಬಿಜೆಪಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿಯಾದರೂ ಪೂರ್ಣ ಬಹುಮತದಿಂದ ಸರ್ಕಾರ ರಚಿಸಬೇಕೆಂದರೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗಳಿಸುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆ ಒಕ್ಕಲಿಗ ಪ್ರಾಬಲ್ಯವಿರುವ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ತನ್ನ ಸಾಧನೆಯನ್ನು ಸುಧಾರಿಸಿಕೊಳ್ಳಲು ತೀವ್ರ ಪ್ರಯತ್ನ ನಡೆಸುತ್ತಿದೆ.

ಚೀನಾ ರೀತಿ ನುಗ್ತೇವೆಂದ ಮಹಾರಾಷ್ಟ್ರ ವಿರುದ್ಧ ಅಮಿತ್‌ ಶಾಗೆ ದೂರು: ಸಿಎಂ ಬೊಮ್ಮಾಯಿ

ಸದ್ಯ ಮಂಡ್ಯಕ್ಕೆ ಅಮಿತ್‌ ಶಾ ಭೇಟಿ ನೀಡುತ್ತಿರುವುದು ಪಕ್ಷದ ಬಲವರ್ಧನೆಗೆ ಪೂರಕವಾಗುವ ಸಾಧ್ಯತೆಯಿದೆ. ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ಕೊಟ್ಟು ಅದಕ್ಕಾಗಿ ತಂತ್ರಗಾರಿಕೆ ರೂಪಿಸುವಂತೆ ಈ ಹಿಂದೆ ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್‌ ಶಾ ಅವರು ಸೂಚನೆ ನೀಡಿದ್ದರು. ಇದೀಗ ತಾವೇ ಖುದ್ದಾಗಿ ಅಖಾಡಕ್ಕೆ ಇಳಿದಿದ್ದು, ಈ ಭಾಗದ ಮುಖಂಡರೊಂದಿಗೆ ಮಾತುಕತೆ ನಡೆಸಿ ಮುಂದಿನ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲಿದ್ದಾರೆ. ಇದು ಬಿಜೆಪಿಗರ ಉತ್ಸವ ಇಮ್ಮಡಿಗೊಳಿಸಿದೆ.

ನಾಳೆ ರಾಜ್ಯ ಮುಖಂಡರೊಂದಿಗೆ ಸಭೆ:

ಬಿಜೆಪಿ ರಾಜ್ಯ ಮುಖಂಡರೊಂದಿಗೆ ಶನಿವಾರ (ಡಿ.31) ಪ್ರತ್ಯೇಕ ಸಭೆಯನ್ನು ನಡೆಸಲಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜ.2ರಿಂದ 10 ದಿನಗಳ ಕಾಲ ಬಿಜೆಪಿಯು ಬೂತ್‌ ವಿಜಯ ಅಭಿಯಾನ ಹಮ್ಮಿಕೊಂಡಿದೆ. ಇದರ ಭಾಗವಾಗಿ ರಾಜ್ಯದಲ್ಲಿರುವ ಪಕ್ಷದ ಕಾರ್ಯಕರ್ತರು, ಮತದಾರರ 50 ಲಕ್ಷ ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸುವ ಕಾರ್ಯಕ್ರಮಕ್ಕೆ ಶಾ ಚಾಲನೆ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.