ಕೇಂದ್ರ ಸರ್ಕಾರವೇ ಚಿಕ್ಕಬಳ್ಳಾಪುರಕ್ಕೆ ಬಂದರೂ ಡಾ.ಸುಧಾಕರ್ ಪಾರ್ಲಿಮೆಂಟ್‌ಗೆ ಹೋಗಲು ಬಿಡಲ್ಲ; ಶಾಸಕ ಪ್ರದೀಪ್ ಈಶ್ವರ್
ಬಿಜೆಪಿಯ 5ನೇ ಲಿಸ್ಟ್ ನೋಡಿದಾಗಿನಿಂದ ಪ್ರಜಾಪ್ರಭುತ್ವ ಸಾಯುವುದಕ್ಕೆ ಮುನ್ನುಡಿ ಅಂತ ಅನಿಸಿದೆ. ಇಡೀ ಕೇಂದ್ರ ಸರ್ಕಾರವೇ ಚಿಕ್ಕಬಳ್ಳಾಪುರಕ್ಕೆ ಬಂದರೂ ಡಾ.ಕೆ .ಸುಧಾಕರ್ ಗೆದ್ದು ಪವಿತ್ರ ಪಾರ್ಲಿಮೆಂಟ್ ಮೆಟ್ಟಿಲು ಹತ್ತುವುದಕ್ಕೆ ಬಿಡುವುದಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದ್ದಾರೆ.
ಬೆಂಗಳೂರು (ಮಾ.25): ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ 5ನೇ ಲಿಸ್ಟ್ ನೋಡಿದಾಗಿನಿಂದ ಪ್ರಜಾಪ್ರಭುತ್ವ ಸಾಯುವುದಕ್ಕೆ ಮುನ್ನುಡಿ ಅಂತ ಅನಿಸಿದೆ. ರಾಜಕಾರಣದಲ್ಲಿ ಕೊಕ್ಕೆ ಅಥವಾ ವಕ್ರ (hook or crook) ಆಗಿರುವ ಡಾ.ಕೆ. ಸುಧಾಕರ್ ಅವರನ್ನು ಪವಿತ್ರವಾದ ಪಾರ್ಲಿಮೆಂಟ್ ಮೆಟ್ಟಿಲು ಹತ್ತುವುದಕ್ಕೂ ಕೂಡ ಬಿಡುವುದಿಲ್ಲ. ಬೇಕಿದ್ದರೆ ಕೇಂದ್ರ ಸರ್ಕಾರವೇ ಚಿಕ್ಕಬಳ್ಳಾಪುರಕ್ಕೆ ಬಂದು ನಿಂತುಕೊಳ್ಳಲಿ. ಸುಧಾಕರ್‌ಗೆ ಪಾರ್ಲಿಮೆಂಟ್ ಹೋಗಲು ಬಿಡುವುದಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಬಿಜೆಪಿ ಲಿಸ್ಟ್ ನೋಡಿದಾಗಿನಿಂದ ಪ್ರಜಾಪ್ರಭುತ್ವ ಸಾಯುವುದಕ್ಕೆ ಮುನ್ನುಡಿ ಅಂತ ಅನಿಸಿದೆ. ಕೋವಿಡ್‌ನಲ್ಲಿ 2,200 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ನಮ್ಮ ಸರ್ಕಾರ ಆರೋಪ ಮಾಡಿತ್ತು. ಆದರೆ, ಬಿಜೆಪಿ ನಾಯಕರೇ ಆದ ಯತ್ನಾಳ್ ಅವರು ತಮ್ಮ ಪಕ್ಷದ ಸರ್ಕಾರದಲ್ಲಿ ಬರೋಬ್ಬರಿ 40,000 ಕೋಟಿ ರೂ. ಅವ್ಯವಹಾರ ನಡೆದಿದೆ ಎಮದು ಆರೋಪ ಮಾಡಿದರು. ಆದರೂ ಇವರಿಗೆ ಟಿಕೆಟ್ ಹೇಗೆ ಸಿಕ್ತು? ಎಂದು ಪ್ರಶ್ನೆ ಮಾಡಿದ್ದಾರೆ.
ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಮಹಾರಾಜ ಯದುವೀರ್ ವಿರುದ್ಧ ನಟಿ ರಮ್ಯಾ ಪ್ರಚಾರ
ರಾಜ್ಯದಲ್ಲಿ ಕೆಲವೇ ಕೆಲವು ಬಿಜೆಪಿ ನಾಯಕರಿಗೆ ಸುಧಾಕರ್ ಸಹಾಯ ಮಾಡಿದ್ದಾರೆ. ಯಾವ ಥರದ ಸಹಾಯ ಅಂದ್ರೆ, ಸೂರ್ಯ ನಮಸ್ಕಾರ, ಕಪಾಲಿ ಭಾತ್, ಶವಾಸನ, ದೀರ್ಘ ದಂಡ ನಮಸ್ಕಾರ ಮಾಡಿಸಿದ್ದಾರೆ ಅನಿಸುತ್ತದೆ. ಇದೆಲ್ಲ ನಾಯಕರಿಗೆ ಮಾಡಿಸಿದ್ದಕ್ಕೆ ಬಹುಶಃ ಸುಧಾಕರ್ ಗೆ ಟಿಕೆಟ್ ಸಿಕ್ಕಿದೆ. ನಾನು ನನ್ನ ಎಲ್ಲ ಆದಾಯದ ದಾಖಲೆಗಳನ್ನು ಡಿಕ್ಲೇರ್ ಮಾಡುವುದಕ್ಕೆ ರೆಡಿ. ಸುಧಾಕರ್ ಪ್ರಾಮಾಣಿಕರಾಗಿದ್ರೆ ಅವರ ಆದಾಯದ ಮೂಲ ಬಿಡುಗಡೆ ಮಾಡುವುದಕ್ಕೆ ಸಿದ್ದ ಇದ್ದಾರಾ? ಪಾರ್ಲಿಮೆಂಟ್ ಪವಿತ್ರವಾದ ಜಾಗ. ಆದರೆ hook or crook ಸುಧಾಕರ್ ಅವರನ್ನು ಪಾರ್ಲಿಮೆಂಟ್ ಮೆಟ್ಟಿಲು ಹತ್ತುವುದಕ್ಕೂ ಕೂಡ ಬಿಡುವುದಿಲ್ಲ. ಬೇಕಿದ್ದರೆ ಕೇಂದ್ರ ಸರ್ಕಾರವೇ ಚಿಕ್ಕಬಳ್ಳಾಪುರಕ್ಕೆ ಬಂದು ನಿಂತುಕೊಳ್ಳಲಿ. ಸುಧಾಕರ್‌ಗೆ ಪಾರ್ಲಿಮೆಂಟ್ ಹೋಗುದಕ್ಕಂತೂ ಬಿಡುವುದಿಲ್ಲ ಎಂದುಹೇಳಿದರು.
ಸುಧಾಕರ್ ಬಗ್ಗೆ ಅವರದೇ ಪಕ್ಷದವರು ಗಂಭೀರ ಆರೋಪ ಮಾಡಿದ್ದಾರೆ. ಎಸ್.ಆರ್ ವಿಶ್ವನಾಥ್ ಏನೆಲ್ಲಾ ಆರೋಪ ಮಾಡಿದ್ದರು ಅಂತಾ ಗೊತ್ತಿದೆ. ಮೆಡಿಕಲ್ ಕಾಲೇಜ್, ಕ್ರಷರ್‌ನಲ್ಲಿ ಕಿಕ್ ಬ್ಯಾಕ್ ಆರೋಪ ಇದೆ. ನನ್ನ ಇಡೀ ಕುಟುಂಬದ ಆಸ್ತಿ ದಾಖಲೆಗಳನ್ನ ಸಾರ್ವಜನಿಕವಾಗಿ ಜನರ ಮುಂದಿಡುತ್ತೇವೆ. ಸುಧಾಕರ್ ಈ ಕೆಲಸ ಮಾಡುತ್ತಾರಾ? ನಮ್ಮ ಕನ್ನಡ ಇಂಡಸ್ಟ್ರಿನೇ ಚಿಕ್ಕಬಳ್ಳಾಪುರದಲ್ಲಿ ಇತ್ತು. ಸೆಲೆಬ್ರಿಟಿಗಳನ್ನ ದುಡ್ಡು ಕೊಟ್ಟು ಕರೆಸಿದ್ದರು. ಆದರೂ ಜನರು ನನ್ನನ್ನ ಕೈಹಿಡಿದರು. ಕುರಿ ಮೇಯಲು ಬಿಟ್ಟಿದ್ದೇನೆ, ಬಲಿ ಕೊಡುತ್ತೇನೆ ಅಂದಿದ್ದಾರೆ. ನಾವೇನು ಕಡಲೆಬೀಜ ತಿನ್ನುತ್ತೇವಾ? ನಮ್ಮ ಸರ್ಕಾರ ಕೋವಿಡ್ ಅಕ್ರಮದ ತನಿಖೆ ನಡೆಸುತ್ತಿದೆ. ಇವರು ಯಾರ್ಯಾರ ಬಳಿ ಹೋಗಿ ಕಣ್ಣೀರು ಹಾಕಿದ್ದಾರೆ ಎಂಬುದೆಲ್ಲಾ ಗೊತ್ತಿದೆ. ನಾನು ಈಗಾಗಲೇ ಆದಾಯದ ಸಂಪೂರ್ಣ ಮಾಹಿತಿ ನೀಡಿದ್ದೇನೆ. ಆದಾಯ ಇಲಾಖೆಗೆ ಎಲ್ಲವನ್ನೂ ನೀಡಿದ್ದೇನೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ಜಾತಿಗೆ ಅಂಟಿಕೊಳ್ಳದ ಮತದಾರ
ಈ ಹಿಂದೆ ನನ್ನ ಮೇಲೆ 22 ಕೇಸ್ ಗಳನ್ನ ಹಾಕಿಸಿದ್ದರು. ಜೈಲ್‌ಗೆ ಹೋಗುವಂತೆ ಮಾಡಿದ್ದರು. ನನಗೆ ಬೇಲ್ ಸಿಗದಂತೆ ದೊಡ್ಡ ಷಡ್ಯಂತ್ರ ನಡೆಯುತ್ತದೆ. ನಾನು ಕಾರಾಗೃಹದಲ್ಲಿ ಒಂದು ತೊಟ್ಟು ನೀರು ಕುಡಿಯೋದಿಲ್ಲ. ಆಗ ಪಬ್ಲಿಕ್ ಪ್ರಾಸಿಕ್ಯೂಟರ್ ಎಲ್ಲಾ ನೋಡಿ ಬೇಲ್ ಸಿಗುವಂತೆ ಮಾಡಿದರು. ಕಾನೂನು ಸುವ್ಯವಸ್ಥೆ ಏನು ಅವರ ಅಪ್ಪನದಾ? ಕೋವಿಡ್ ನಲ್ಲಿ ಇಷ್ಟೆಲ್ಲಾ ಭ್ರಷ್ಟಾಚಾರ ಮಾಡಿದ್ದಾರೆ. ಒಂದು ವೇಳೆ ಇವರೇನಾದರೂ ಪಾರ್ಲಿಮೆಂಟ್ ಗೆ ಹೋದರೆ ಮುಗೀತ? ಇವರು ವಿಚಿತ್ರವಾದ ರಾಜಕಾರಣಿ, ತುಂಬಾ ಕ್ರಿಮಿನಲ್ ಎಂದು ಆರೋಪ ಮಾಡಿದರು.