Asianet Suvarna News Asianet Suvarna News

ರಾಯಚೂರಿನ ಸಿಂಧನೂರು ಕ್ಷೇತ್ರದಲ್ಲಿ ಅರ್ಥವಾಗದ ರಾಜಕಾರಣ, ಕೆಆರ್‌ಪಿಪಿ ಟಫ್ ಫೈಟ್!

ಬಿಸಿಲು ನಾಡು ರಾಯಚೂರು ಜಿಲ್ಲೆಯ ಭತ್ತದ ನಾಡಾಗಿರುವ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಈ ರಾಜಕೀಯ ಲೆಕ್ಕಾಚಾರವೇ ಅರ್ಥವಾಗದಂತೆ ರಾಜಕಾರಣ ನಡೆದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಜಿದ್ದಾಜಿದ್ದಿನ ಕಾಳಗದ ಜತೆ ಈಗ ಬಿಜೆಪಿ  ಮಾತ್ರವಲ್ಲ ಕೆಆರ್‌ಪಿಪಿ ಕೂಡ  ಸೇರಿಕೊಂಡಿದೆ.

Unintelligible politics in Raichur Sindhanur constituency gow
Author
First Published Mar 18, 2023, 7:23 PM IST

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ಮಾ.18): ಬಿಸಿಲು ನಾಡು ರಾಯಚೂರು ಜಿಲ್ಲೆಯ ಭತ್ತದ ನಾಡಾಗಿರುವ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಈ ರಾಜಕೀಯ ಲೆಕ್ಕಾಚಾರವೇ ಅರ್ಥವಾಗದಂತೆ ರಾಜಕಾರಣ ನಡೆದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಜಿದ್ದಾಜಿದ್ದಿನ ಕಾಳಗದ ಜತೆ ಈಗ ಬಿಜೆಪಿ ಕೂಡ ಪ್ರಬಲ ಅಭ್ಯರ್ಥಿಯನ್ನ ಕಣಕ್ಕಿಸಿಲು ಚಿಂತನೆ ನಡೆಸಿದೆ. ಮತ್ತೊಂದು ‌ಕಡೆ ಕೆಆರ್‌ಪಿಪಿ ಕೂಡ ಅಭ್ಯರ್ಥಿ ಹೆಸರು ಘೋಷಣೆ ಮಾಡಿದ್ದು, ಕ್ಷೇತ್ರದಲ್ಲಿ ‌ತೀವ್ರ ಕುತೂಹಲ ಕೆರಳಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಟಿಕೆಟ್ ಫೈಟ್ ಕೂಡ ಜೋರಾಗಿದೆ. ಸಿಂಧನೂರು ಕ್ಷೇತ್ರದಲ್ಲಿ ಹಿಂದಿನಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ಈ ಕ್ಷೇತ್ರದಲ್ಲಿ ಭಾರೀ ಪೈಪೋಟಿ ಇದೆ. ಸಿಂಧನೂರು ಕ್ಷೇತ್ರದಲ್ಲಿ ಹೆಚ್ಚಿನ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು ಇತಿಹಾಸವಿದೆ.

ಆದ್ರೆ ಈ ಬಾರಿ ಹಾಲಿ ಶಾಸಕ ಹಾಗೂ ಮಾಜಿ ಶಾಸಕ ನಡುವೆ ಸ್ಪರ್ಧೆ ಇದೆ. ಆದ್ರೆ ಕಾಂಗ್ರೆಸ್ ಟಿಕೆಟ್ ಯಾರಿಗೆ ಎಂಬ ಕುತೂಹಲವೂ ಇದೆ. ಕಾಂಗ್ರೆಸ್ ಪಾಳಯದಲ್ಲಿ ಟಿಕೆಟ್ ಗಾಗಿ ಭಾರೀ ಫೈಟ್ ನಡುವೆಯೂ ಕೈ ಟಿಕೆಟ್ ಪಡೆಯಲು ತಾತಾ- ಮೊಮ್ಮಗ ಭರ್ಜರಿಯಾಗಿ ಕ್ಷೇತ್ರದಲ್ಲಿ ‌ಮತಬೇಟೆ ನಡೆಸಿದ್ದಾರೆ. ಕಾಂಗ್ರೆಸ್ ‌ನ ಹಿರಿಯರು ಆಗಿರುವ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಗೆ ಸಿಂಧನೂರಿನ ಕಾಂಗ್ರೆಸ್ ಟಿಕೆಟ್ ಬಹುತೇಕ ಫಿಕ್ಸ್ ಅಂತ ಹೇಳಲಾಗುತ್ತಿದೆ. ಆದ್ರೆ ಬಸನಗೌಡ ಬಾದರ್ಲಿ ಯುವ ಕಾಂಗ್ರೆಸ್ ‌ನಾಯಕರಿಗೆ ಟಿಕೆಟ್ ನೀಡುತ್ತಾರೆ ಎಂಬ ಭರವಸೆಯೊಂದಿಗೆ ಕ್ಷೇತ್ರದಲ್ಲಿ ಓಡಾಟ ನಡೆಸಿದ್ದಾರೆ. 

ಸಿಂಧನೂರು ಕ್ಷೇತ್ರದ ರಾಜಕೀಯ ಇತಿಹಾಸ:
ಸಿಂಧನೂರು ವಿಧಾನಸಭಾ ಕ್ಷೇತ್ರವೂ ಅತೀ ಹೆಚ್ಚು ನೀರಾವರಿ ಪ್ರದೇಶವಾಗಿದೆ. ದೇಶದಲ್ಲಿ ಅತೀ ಹೆಚ್ಚು ಟ್ರಾಕ್ಟರ್ ಹೊಂದಿರುವ ವಿಧಾನಸಭಾ ಕ್ಷೇತ್ರ. 1957ರಲ್ಲಿ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಚುನಾವಣೆ ‌ನಡೆಯುತ್ತೆ. ಒಟ್ಟು ಈವರೆಗೆ ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ 14 ಬಾರಿ ಚುನಾವಣೆ ನಡೆದಿದೆ. 14ರಲ್ಲಿ 8 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ. 2 ಬಾರಿ ಜೆಡಿಎಸ್, ಒಂದು ಬಾರಿ ಜೆಡಿ ಮತ್ತೊಂದು ಬಾರಿ ಜೆಡಿ(ಯು) ಮತ್ತು ಎರಡು ಬಾರಿ ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಸಿಂಧನೂರಿ‌ನ ಮೊದಲ ಶಾಸಕರಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸವಂತರಾವ್ ಬಸನಗೌಡ 11,752 ಮತಗಳು ಪಡೆದು ಶಾಸಕರಾಗಿ ಆಯ್ಕೆ ಆಗುತ್ತಾರೆ.  1962ರಲ್ಲಿಯೂ ಬಸವಂತರಾವ್ ಬಸನಗೌಡ 15,073 ಮತಗಳಿಂದ ಶಾಸಕರು ಆಗಿದ್ರು. 1967ರಲ್ಲಿ ಚುನಾವಣೆ ನಡೆದಾಗ ಸ್ವತಂತ್ರ ಅಭ್ಯರ್ಥಿಯಾದ ಎ.ಚನ್ನನಗೌಡ 23,389 ಮತಗಳಿಂದ ಗೆಲುವು ಸಾಧಿಸುತ್ತಾರೆ. ಪುನಃ 1972ರಲ್ಲಿ ಬಸವಂತರಾವ್ ಬಸನಗೌಡ 25,599 ಮತಗಳಿಂದ ಆಯ್ಕೆ ಆಗುತ್ತಾರೆ. 

1978ರಲ್ಲಿ ಇಂದಿರಾಗಾಂಧಿ ಬೆಂಬಲಿತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಗಿ ನಾರಾಯಣಪ್ಪ ಹನುಮಂತಪ್ಪ 21,536 ಮತಗಳಿಂದ ಜಯಗಳಿಸಿ ಶಾಸಕರಾಗಿ ಅಧಿಕಾರ ಸ್ವೀಕಾರ ಮಾಡಿದ್ರು. 1983ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ಆಗಿ ಕಣಕ್ಕೆ ಇಳಿದ ಮಲ್ಲಪ್ಪ ಕಾಂಗ್ರೆಸ್ ಅಭ್ಯರ್ಥಿಯನ್ನ ಸೋಲಿಸಿ 27,942 ಮತಗಳು ಪಡೆದು ಗೆಲುವು ಸಾಧಿಸಿದ್ರು. ಇನ್ನೂ 1985ರಲ್ಲಿ ನಡೆದ ಸಾರ್ವಜನಿಕ ಚುನಾವಣೆಯಲ್ಲಿ  ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾದ ಆರ್. ನಾರಾಯಣಪ್ಪ 41,723 ಮತಗಳು ಪಡೆದು ಆಯ್ಕೆಗೊಂಡರು.

1989ರಲ್ಲಿ ನಿತೀಶ್ ಕುಮಾರ್ ‌ಮತ್ತು ಶರತ್ ಯಾದವ್ ಸ್ಥಾಪನೆ ಮಾಡಿದ ಜನತಾದಳ ಪಕ್ಷದಿಂದ ಹಂಪನಗೌಡ ಬಾದರ್ಲಿ ಸ್ಪರ್ಧೆ ‌ಮಾಡಿ 59,285 ಮತಗಳು ಪಡೆದು ವಿಧಾನಸಭಾ ಪ್ರವೇಶ ಮಾಡಿದ್ರು. 1994ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ ಕೆ.ವಿರುಪಾಕ್ಷಪ್ಪ ಜನತಾದಳ ಪಕ್ಷದ ಅಭ್ಯರ್ಥಿಯಾದ ಹಂಪನಗೌಡ ಬಾದರ್ಲಿ ಗೆ ಸೋಲಿಸಿ 51,415 ಮತಗಳು ಪಡೆದು ಸಿಂಧನೂರು ಶಾಸಕರು ಆಗಿದ್ರು‌. 1999ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆಗೆ ಇಳಿದ ಕೆ. ವಿರುಪಾಕ್ಷಪ್ಪ ‌ನನ್ನ ಸೋಲಿಸಿ ಜೆಡಿ(ಯು) ಪಕ್ಷದಿಂದ ಸ್ಪರ್ಧೆ ಮಾಡಿದ ಹಂಪನಗೌಡ ಬಾದರ್ಲಿ 64,853 ಮತಗಳು ‌ಪಡೆದು ಆಯ್ಕೆ ಆಗಿದ್ರು. 

ಬದಲಾದ ರಾಜಕೀಯದಲ್ಲಿ 2004ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಗಿ ಹಂಪನಗೌಡ ಬಾದರ್ಲಿ ಕಣಕ್ಕೆ ಇಳಿದ್ರು. ಜೆಡಿಎಸ್ ನ ಅಭ್ಯರ್ಥಿಯಾದ ಹಣಮನಗೌಡ ಅಮರೇಶಪ್ಪಗೌಡನನ್ನ ಸೋಲಿಸಿ ಹಂಪನಗೌಡ ಬಾದರ್ಲಿ 79,001 ಮತಗಳು ಪಡೆದು ಗೆಲುವು ಸಾಧಿಸಿದ್ರು.

ಇನ್ನೂ 2008ರಲ್ಲಿ ಜೆಡಿಎಸ್ ನಿಂದ ವೆಂಕಟರಾವ್ ನಾಡಗೌಡ ಸ್ಪರ್ಧೆ ಮಾಡಿ ಕಾಂಗ್ರೆಸ್ ಅಭ್ಯರ್ಥಿಯಾದ ಹಂಪನಗೌಡ ಬಾದರ್ಲಿ ಗೆ ಸೋಲಿಸಿ 53,621 ಮತಗಳು ಪಡೆದು ವಿಧಾನಸಭೆಗೆ ಪ್ರವೇಶ ಮಾಡಿದ್ರು. ಇನ್ನೂ 2013ರಲ್ಲಿ BSRCP ಅಭ್ಯರ್ಥಿಯಾದ ಕೆ. ಕರಿಯಪ್ಪನನ್ನ ಸೋಲಿಸಿ ಹಂಪನಗೌಡ ಬಾದರ್ಲಿ 49,213ಮತಗಳು ಪಡೆದು ಶಾಸಕರು ಆಗಿದ್ರು. ಮತ್ತೆ 2018ರ ಚುನಾವಣೆಯಲ್ಲಿ ಮತ್ತೆ ಹಳೆಯ ಜೋಡಿಗಳಾದ ವೆಂಕಟರಾವ್ ನಾಡಗೌಡ ಮತ್ತು ಹಂಪನಗೌಡ ಬಾದರ್ಲಿ ನಡುವೆ ಬಿಗ್ ಫೈಟ್ ನಡೆದು ಹಂಪನಗೌಡ ಬಾದರ್ಲಿ ಸೋಲು ಅನುಭವಿಸಿದ್ರೆ, ವೆಂಕಟರಾವ್ ನಾಡಗೌಡ ಜೆಡಿಎಸ್ ಪಕ್ಷದಿಂದ ಗೆಲುವು ಸಾಧಿಸಿ ಸಚಿವರಾಗಿದ್ದು ಇತಿಹಾಸವಿದೆ. ಈಗ ಮತ್ತೆ ಎಲ್ಲಾ ನಾಯಕರು 2023ರ  ಚುನಾವಣೆ ಗೆಲುವಿಗಾಗಿ ಕಸರತ್ತು ಶುರು ಮಾಡಿದ್ದಾರೆ.

ಸಿಂಧನೂರು ವಿಧಾನಸಭಾ ಕ್ಷೇತ್ರದ ಮತದಾರರು:
ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,33,820ಮತದಾರರು ಇದ್ದಾರೆ. ಅತೀ ಹೆಚ್ಚು ಮಹಿಳಾ ಮತದಾರರೇ ಈ ಕ್ಷೇತ್ರದಲ್ಲಿ ಇದ್ದಾರೆ, ಪುರುಷರು 1,14, 775 ಇದ್ರೆ ಮಹಿಳೆಯರು 1,19,019 ಮತದಾರರು ಇದ್ದು, ಲಿಂಗತ್ವ ಅಲ್ಪಸಂಖ್ಯಾತರು 26 ಮತದಾರರು ಇದ್ದಾರೆ. ಹೀಗಾಗಿ ಈ ಮತದಾರರನ್ನ ಸೆಳೆಯಲು ‌ನಾನಾ ಕಸರತ್ತು ರಾಜಕೀಯ ‌ನಾಯಕರು ಶುರು ಮಾಡಿದ್ದಾರೆ.

ಕಾಂಗ್ರೆಸ್ ಟಿಕೆಟ್ ಗಾಗಿ ಫೈಟ್:
ಸಿಂಧನೂರು ವಿಧಾನಸಭಾ ಕಾಂಗ್ರೆಸ್ ‌ಟಿಕೆಟ್ ಗಾಗಿ ಮೂವರ ನಡುವೆ ಭಾರೀ ಪೈಪೋಟಿ ಇದೆ. ಆದ್ರೆ ಕಾಂಗ್ರೆಸ್ ಹೈಕಮಾಂಡ್ ‌ಮೂಲಗಳ ಪ್ರಕಾರ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಗೆ ಟಿಕೆಟ್ ಪಕ್ಕಾ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.ಆದ್ರೂ ಪಟ್ಟುಬಿಡದೇ ಯುವ ಕಾಂಗ್ರೆಸ್ ಮುಖಂಡ ಬಸನಗೌಡ ಬಾದರ್ಲಿ ಮತ್ತು ಕುರುಬ ನಾಯಕ ಕೆ.ಕರಿಯಪ್ಪ ತಮ್ಮದೇ ರೀತಿಯಲ್ಲಿ ‌ಕಸರತ್ತು ಶುರು ಮಾಡಿದ್ದಾರೆ. 

ಗೆಲುವಿನ ಹುಮ್ಮಸ್ಸಿನಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಚಾರ:
ಸಿಂಧನೂರು ಹಾಲಿ ಶಾಸಕ ವೆಂಕಟರಾವ್ ನಾಡಗೌಡ, ಚುನಾವಣೆ ಆರು ತಿಂಗಳು ಇರುವಾಗಲೇ ಕ್ಷೇತ್ರದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ರು. ಆ ಬಳಿಕ ವಾರ್ಡ್ - ವಾರ್ಡ್ ಗಳಲ್ಲಿ ಸುತ್ತಾಟ ನಡೆಸಿದ್ರು. ಅಷ್ಟೇ ಅಲ್ಲದೇ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಪಂಚರತ್ನ ಯಾತ್ರೆ ವೇಳೆ ಸಿಂಧನೂರು ಪಟ್ಟಣದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ ಮಾಡಿದ್ರು. ಈಗ ಮನೆ- ಮನೆಗೆ ಕುಮಾರಣ್ಣ ಎಂದು ಪ್ರಚಾರ ನಡೆಸಿದ್ದಾರೆ. ಮತ್ತೊಂದು ಬಾರಿ ಸಿಂಧನೂರಿನಲ್ಲಿ ಜೆಡಿಎಸ್ ಪಕ್ಷವೂ ಅಧಿಕಾರಕ್ಕೆ ಬರುತ್ತೆ ಎಂಬ ಹುಮ್ಮಸ್ಸಿನಲ್ಲಿ ಶಾಸಕ ವೆಂಕಟರಾವ್ ನಾಡಗೌಡ ಓಡಾಟ ‌ಮಾಡುತ್ತಿದ್ರು. ಮೊನ್ನೆ ಸಿಂಧನೂರು ಟೌನ್ ಹಾಲ್ ‌ನಲ್ಲಿ ಪುನೀತ್ ರಾಜ್‍ಕುಮಾರ್   ಭಾವಚಿತ್ರದ ಮೆರವಣಿಗೆ ವೇಳೆ ನಡೆದ ಗಲಾಟೆಯಿಂದಾಗಿ ಶಾಸಕ ವೆಂಕಟರಾವ್ ಪುತ್ರ ಅಭಿಷೇಕ ನಾಡಗೌಡ ಬಗ್ಗೆ ಕೆಲ ಅಪಸ್ವರದ ಮಾತುಗಳು ಕೇಳಿಬರುತ್ತಿವೆ. ಚುನಾವಣೆ ವೇಳೆಯಲ್ಲಿ ಈ ಗಲಾಟೆಯೂ  ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಚರ್ಚೆ ಆಗುತ್ತಿವೆ. 

ಸಿಂಧನೂರಿನಲ್ಲಿ ತೊಡೆ ತಟ್ಟಲು ಬಿಜೆಪಿ ತಯಾರಿ: 
ಸಿಂಧನೂರು ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಬಿಜೆಪಿ ಒಂದು ಬಾರಿಯೂ ಗೆಲುವು ಸಾಧಿಸಿಲ್ಲ. ಆದ್ರೂ ಈ ಬಾರಿ ಸಿಂಧನೂರು ಕ್ಷೇತ್ರದ ಟಿಕೆಟ್ ಗಾಗಿ 9 ಜನ ಅಭ್ಯರ್ಥಿಗಳು ಪೈಪೋಟಿ ನಡೆಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಕಾಂಗ್ರೆಸ್ ‌ನಲ್ಲಿ ಇದ್ದ ಮಾಜಿ ಸಂಸದ ಕೆ. ವಿರುಪಾಕ್ಷಪ್ಪ ಮಸ್ಕಿ ಉಪ ಚುನಾವಣೆ ವೇಳೆ ಬಿಜೆಪಿಗೆ ಸೇರ್ಪಡೆ ಆಗಿ ಪಕ್ಷ ಸಂಘಟನೆಯಲ್ಲಿ ‌ತೊಡಗಿದ್ದಾರೆ. ಕೆ‌.ವಿರುಪಾಕ್ಷಪ್ಪ ಅಲ್ಲದೆ ಇನ್ನೂ 8 ಜನ ಆಕಾಂಕ್ಷಿಗಳು ಇದ್ದು ಹೈಕಮಾಂಡ್ ‌ಕಡೆ ಮುಖಮಾಡಿಕೊಂಡು ಟಿಕೆಟ್ ಗಾಗಿ ಎದುರು ನೋಡುತ್ತಿದ್ದಾರೆ. ಆದ್ರೆ ದುರಂತದ ಸಂಗತಿ ಏನು ಅಂದ್ರೆ ಯಾವ ನಾಯಕರು ಸಹ ಗಟ್ಟಿಯಾಗಿ ಬಿಜೆಪಿ ಬಲವರ್ತನೆಗೆ ಮುಂದಾಗುತ್ತಿಲ್ಲ.

ಆರ್ ಅಶೋಕ್‌ ಕಾಲಜ್ಞಾನಿ ಎಂಬುದು ನನಗೆ ಗೊತ್ತಿರಲಿಲ್ಲ: ಎಚ್‌ಡಿಕೆ ವ್ಯಂಗ್ಯ

ಮೂವರಿಗೆ ಟಕ್ಕರ್ ಕೊಡಲು ಕಣಕ್ಕೆ ಇಳಿದ ಕೆಆರ್‌ಪಿಪಿ ಅಭ್ಯರ್ಥಿ:
ಗಣಿಧಣಿ‌ ಜನಾರ್ಧನ ರೆಡ್ಡಿ ಹೊಸ ಪಕ್ಷವಾದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಈಗಾಗಲೇ ಸಿಂಧನೂರು ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಣೆ ಮಾಡಿದೆ. ಸಿಂಧನೂರು ಕ್ಷೇತ್ರದ ಅಭ್ಯರ್ಥಿ ಮಲ್ಲಿಕಾರ್ಜುನ ನೆಕ್ಕಂಟಿ.ಸ್ಥಳೀಯ ಅಭ್ಯರ್ಥಿ  ಆಗಿದ್ದು, ಸಿಂಧನೂರು ಕ್ಷೇತ್ರದ ತುಂಬಾ ಭರ್ಜರಿ ‌ಓಡಾಟ ನಡೆಸಿದ್ದಾರೆ. ಈ ಬಾರಿ ಮೂರು ಪಕ್ಷಗಳನ್ನು ಸೋಲಿಸಿ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಜನಾರ್ಧನ ರೆಡ್ಡಿ ಪಕ್ಷವೂ ಅಧಿಕಾರಕ್ಕೆ ತರಬೇಕೆಂದು ಪಣತೊಟ್ಟು ವಿವಿಧ ಪಕ್ಷಗಳ ಮುಖಂಡರನ್ನ ಮತ್ತು ಕಾರ್ಯಕರ್ತರನ್ನ ತನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಾ ಓಡಾಟ ನಡೆಸಿದ್ದಾರೆ.

ಪಕ್ಷಕ್ಕೆ ಸೇರಿದ್ದ ರೌಡಿಶೀಟರ್ ಸೈಲೆಂಟ್‌ ಸುನೀಲನನ್ನು ಹೊರದೂಡಿದ ಬಿಜೆಪಿ: ಪ್ರಚಾರ ಮಾಡೋಕೆ ಅಡ್ಡಿಯಿಲ್ಲ

ಒಟ್ಟಿನಲ್ಲಿ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಹಲವು ರಾಜಕೀಯ ಬೆಳವಣಿಗೆ ನಿತ್ಯವೂ ನಡೆದಿವೆ. ಹಾಲಿ ಶಾಸಕ ವೆಂಕಟರಾವ್ ನಾಡಗೌಡ ಮತ್ತೊಮ್ಮೆ ಗೆಲುವು ಸಾಧಿಸುವ ನಿರೀಕ್ಷೆಯೂ ಇಟ್ಟುಕೊಂಡು ಕ್ಷೇತ್ರದಲ್ಲಿ ಪ್ರಚಾರ ಶುರು ಮಾಡಿದ್ದಾರೆ. ಆದ್ರೆ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಅಖಾಡಕ್ಕೆ ಯಾವ ಅಭ್ಯರ್ಥಿ ಕಣಕ್ಕೆ ಇಳಿಕ್ಕಿಳಿಯುತ್ತಾರೆ ಎಂಬುವುದರ ಮೇಲೆ ರಣಕಣದ ಲೆಕ್ಕಾಚಾರ ನಿಂತಿದೆ.

Follow Us:
Download App:
  • android
  • ios