ಜೈಪುರ[ಮಾ.12]: ಕಾಂಗ್ರೆಸ್ ದಿಗ್ಗಜ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಪಕ್ಷ ತೊರೆದು ಕಮಲ ಪಾಳಯಕ್ಕೆ ಸೇರ್ಪಡೆಗೊಂಡಿದ್ದಾರೆ. ಹೀಗಿರುವಾಗ ರಾಜಸ್ಥಾನದ ಉಪ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಯುವ ನಾಯಕ ಸಚಿನ್ ಪೈಲಟ್, ಸಿಂಧಿಯಾ ಪಕ್ಷದಿಂದ ಬೇರ್ಪಟ್ಟಿರುವುದು ಬಹಳ ದುಃಖಕರ ವಿಚಾರ. ಗೊಂದಲಗಳನ್ನು, ಭಿನ್ನಾಭಿಪ್ರಾಯಗಳನ್ನು ಪಕ್ಷದೊಳಗೇ ಸರಿಪಡಿಸಬಹುದಿತ್ತು ಎಂದಿದ್ದಾರೆ.

ಹೌದು ಸಚಿನ್ ಪೈಲಟ್ ಈ ಸಂಬಂಧ ಟ್ವೀಟ್ ಮಾಡುತ್ತಾ 'ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಪಕ್ಷದಿಂದ ಬೇರ್ಪಟ್ಟಿರುವುದು ಬಹಳ ನೋವುಂಟು ಮಾಡಿದೆ. ಎಲ್ಲಾ ಗೊಂದಲಗಳನ್ನು ಪಕ್ಷದೊಳಗೇ ಪರಿಹರಿಸಬಹುದಿತ್ತು' ಎಂದಿದ್ದಾರೆ. 

ಇನ್ನು ಸಿಂಧಿಯಾ ಮಂಗಳವಾರ ಬೆಳಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದರು. ಅಂದೇ ಸಂಜೆ ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎನ್ನಲಾಗಿತ್ತಾದರೂ, ಮರುದಿನ ಅಂದರೆ ಬುಧವಾರ ಮಧ್ಯಾಹ್ನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಸಮ್ಮುಖದಲ್ಲಿ ಕಮಲ ಪಾಳಯಕ್ಕೆ ಸೇರ್ಪಡೆಗೊಂಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಸಿಂಧಿಯಾಗೆ ರಾಜ್ಯಸಭಾ ಟಿಕೆಟ್ ನೀಡುವುದಾಗಿ ಬಿಜೆಪಿ ಘೋಷಿಸಿತ್ತು. 

ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸುತ್ತಿರುವುದರಿಂದ ಸಿಂಧಿಯಾ ಬೇಸತ್ತಿದ್ದು, ಇದೇ ಕಾರಣದಿಂದ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆನ್ನಲಾಘಿದೆ. ಸಿಂಧಿಯಾ ಬೆನ್ನಲ್ಲೇ ಮಧ್ಯ ಪ್ರದೇಶದ 22 ಶಾಸಕರು ಕೂಡಾ ರಾಜೀನಾಮೆ ನೀಡಲು ಮುಂದಾಗಿದ್ದು, ಇದರಿಂದ ಸರ್ಕಾರ ಮುರಿದು ಬಿಳುವ ಹಂತಕ್ಕೆ ತಲುಪಿದೆ. ಹೀಗಿದ್ದರೂ ಮಂಗಳವಾರ ತಾವು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವುದಾಗಿ ಮುಖ್ಯಮಂತ್ರಿ ಕಮಲನಾಥ್ ಘೋಷಿಸಿದ್ದಾರೆ.

ಮಾರ್ಚ್ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ