ಡಿಕೆ ಶಿವಕುಮಾರ್ ಅವರು RSS ಗೀತೆ ವಿಚಾರದಲ್ಲಿ ಕ್ಷಮೆ ಕೇಳಿರುವುದನ್ನು ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಖಂಡಿಸಿದ್ದಾರೆ. ಡಿಕೆಶಿ ಒರಿಜಿನಲ್ ಆಗಿರಬೇಕು, ಕ್ಷಮೆ ಕೇಳಿದ್ದು ಅವರ ರಾಜಕೀಯ ಬದುಕಿನ ಕಪ್ಪುಚುಕ್ಕೆ ಎಂದಿದ್ದಾರೆ. ಸಿಎಂ ಸ್ಥಾನ ಉಳಿಸಿಕೊಳ್ಳುವ ಭಯದಿಂದಲೇ ಕ್ಷಮೆ ಕೇಳಿದ್ದಾರೆ ಎಂದಿದ್ದಾರೆ.

ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕ್ಷಮೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಡಿಕೆಶಿ ಅವರಿಗೆ ಹಣಬಲವೂ ಇದೆ, ರಾಜಕೀಯ ಬಲವೂ ಇದೆ, ತೋಳ್ಬಲ ಎಲ್ಲವೂವಿದೆ. ಆದರೆ ಅವರು ಸದಾ ಸೋನಿಯಾ ಗಾಂಧಿ ಮುಂದೆ ತಲೆಬಾಗುತ್ತಾರೆ. ಆದ್ರೆ ಸೋನಿಯಾ ಗಾಂಧಿ ಮುಂದೆ. ಸದಾ ವತ್ಸಲೆ ಅಂತೇಳಿದ್ರೆ ಭಾರತ ಮಾತೆಗೆ ನಮಸ್ಕಾರ ಮಾಡೋದು ಅಂತ ಆಯ್ತು. ಭಾರತ ಮಾತೆಗೆ ನಮಸ್ಕಾರ ಮಾಡಿದ್ರೋ ಹೊರತು, ನಮ್ಮ RSS ನಮಸ್ಕಾರ ಮಾಡಲಿಲ್ಲ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ನ ಗುಲಾಮರು ಹರಿಪ್ರಸಾದ್ ಇರಬಹುದು, ಇನ್ನೊಬ್ಬರು ಇರಬಹದು. ಇಂತಹ ಗುಲಾಮರ ಮಾತು ಕೇಳಿಕೊಂಡು ಕ್ಷಮೆ ಕೇಳಿದ್ದು ಅಕ್ಷಮ್ಯ ಅಪರಾಧ. ಇದನ್ನ ನಾನು ಖಂಡಿಸ್ತಿನಿ ಎಂದಿದ್ದಾರೆ.

ಬಿ. ಸುರೇಶ್ ಗೌಡ ಅವರು ಡಿಕೆ ಶಿವಕುಮಾರ್ ಅವರನ್ನು ಬಲಿಷ್ಠ ನಾಯಕ ಎಂದು ಬಣ್ಣಿಸಿ, “ಡಿಕೆಶಿ ಒರಿಜಿನಲ್ ಡಿಕೆಶಿ ಆಗಿರಬೇಕು. ಜನರು ಅವರಲ್ಲಿ ತಾಕತ್ತು, ಧೈರ್ಯವನ್ನು ನೋಡುತ್ತಾರೆ. ಅವರು ರಾಜಕೀಯದಲ್ಲಿ ಸ್ಕ್ರಾಚ್‌ನಿಂದ ಬೆಳೆದವರು. ರಾಜ್ಯ ಕಟ್ಟುವಲ್ಲಿ ಅವರ ರಾಜಕೀಯ ಶಕ್ತಿ ಬಹಳ ಮುಖ್ಯ. ಇಂತಹ ಸಂದರ್ಭದಲ್ಲಿ ಕ್ಷಮೆ ಕೇಳಿರುವುದು ಅವರ ರಾಜಕೀಯ ಬದುಕಿನಲ್ಲೇ ಕಪ್ಪು ಚುಕ್ಕೆ ಎಂದು ಅಭಿಪ್ರಾಯಪಟ್ಟರು. RSS ಗೀತೆ ದೇಶ ವಿಭಜನೆಗೆ ಅಲ್ಲ, ದೇಶ ಒಗ್ಗೂಡಿಸಲು 100 ವರ್ಷಗಳಿಂದ ಪ್ರಯತ್ನಿಸುತ್ತಿದೆ. ಅದನ್ನು ಕಮಿನಲ್ ಎಂದು ಆರೋಪಿಸುವುದು ತಪ್ಪು. RSS ಗೀತೆಯನ್ನು ಹಾಡಿದ್ದಕ್ಕೆ ಕ್ಷಮೆ ಕೇಳುವುದು ಡಿಕೆಶಿಯ ದೊಡ್ಡ ತಪ್ಪಾಗಿದೆ ಎಂದು ಖಂಡಿಸಿದರು.

ಅದೇ ವೇಳೆ, ಕಾಂಗ್ರೆಸ್‌ನ ಆಂತರಿಕ ರಾಜಕೀಯದ ಬಗ್ಗೆ ಮಾತನಾಡಿದ ಅವರು, ಡಿಕೆಶಿ ಸಿಎಂ ಆಗಬೇಕೆಂಬ ಆಸೆ ಹೊಂದಿದ್ದಾರೆ. ಆದರೆ ಸಿಎಂ ಸ್ಥಾನ ಕಳೆದುಕೊಳ್ಳಬಾರದು ಎಂಬ ಭಯದಿಂದಲೇ ಅವರು ಕ್ಷಮೆ ಕೇಳಿದ್ದಾರೆ. ಆದರೆ ರಾಜಕೀಯದಲ್ಲಿ ಸಿಎಂ ಸ್ಥಾನಕ್ಕಿಂತ ನಡೆ ನುಡಿಗಳು ಮುಖ್ಯ. ಡಿಕೆಶಿ ಕ್ಷಮೆ ಕೇಳಿದ್ದೇ ಅವರ ನಾಯಕತ್ವಕ್ಕೆ ಧಕ್ಕೆಯಾಗುವುದು ಎಂದರು.

ಬಿ. ಸುರೇಶ್ ಗೌಡ ಅವರು ಸಚಿವ ಕೆ.ಎನ್. ರಾಜಣ್ಣ ವಜಾ ವಿಚಾರವನ್ನೂ ಉಲ್ಲೇಖಿಸಿ, ಕಾಂಗ್ರೆಸ್ ಇಡೀ ದೇಶದಲ್ಲಿ ದಬ್ಬಾಳಿಕೆ ಮಾಡಿಕೊಂಡೇ ರಾಜ್ಯಕ್ಕೆ ಬಂದಿದ್ದು. ವೀರೇಂದ್ರ ಪಾಟೀಲ್, ದೇವರಾಜ ಅರಸು, ಎಲ್ಲಾರನ್ನು ತುಳಿದುಹಾಕಿದ್ದಾರೆ. ಇನ್ನು ಡಿಕೆಶಿ, ರಾಜಣ್ಣ ಅವರನ್ನ ಬಿಡ್ತಾರಾ. ಸಿದ್ದರಾಮಯ್ಯ ನವೆಂಬರ್ ಗೆ ನೀನು ರಾಜಿನಾಮೆ ಕೊಡಲಿಲ್ಲ ಅಂದ್ರೆ ಎಂದರು.

ಸಿಎಂ ಸಿದ್ದರಾಮಯ್ಯ ಅವರ ಸ್ಥಿರತೆಗೆ ಬೆದರಿಕೆ ಇದೆ ಎಂಬ ಸಂದೇಶವನ್ನೂ ನೀಡಿದರು. “ಸಿದ್ದರಾಮಯ್ಯ ನವೆಂಬರ್‌ನಲ್ಲಿ ರಾಜೀನಾಮೆ ಕೊಡದಿದ್ದರೆ ಪನಿಷ್ ಮಾಡುವುದಾಗಿ ಈಗಾಗಲೇ ಎಚ್ಚರಿಕೆ ಬಂದಿದೆ. ಅಸೆಂಬ್ಲಿಯಲ್ಲಿ ಯಾವಾಗಲು ಬಲಿಷ್ಠವಾಗಿ ಮಾತನಾಡುವ ಸಿದ್ದರಾಮಯ್ಯ ಈ ಸಲ ಗುಬ್ಬಚ್ಚಿ ಕುಂತಂಗೆ ಕುಳಿತಿದ್ದಾರೆ. ಸೆಪ್ಟೆಂಬರ್‌ನಲ್ಲಿ ರಾಜ್ಯ ರಾಜಕೀಯದಲ್ಲಿ ಕ್ರಾಂತಿ ಸಂಭವಿಸುತ್ತದೆ ಎಂಬ ರಾಜಣ್ಣ ಹೇಳಿಕೆ 100% ಸತ್ಯವಾಗಲಿದೆ” ಎಂದು ಬಿ. ಸುರೇಶ್ ಗೌಡ ಸ್ಪಷ್ಟಪಡಿಸಿದರು.