ಚಾಮುಂಡಿ ಬೆಟ್ಟ ಹಿಂದೂ ಧರ್ಮದ ಆಸ್ತಿಯಲ್ಲ ಎಂಬ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಚಾಮುಂಡೇಶ್ವರಿ ತಾಯಿಯ ದರ್ಶನ ಎಲ್ಲರ ಹಕ್ಕು, ಯಾರೊಬ್ಬರಿಗೂ ಸೀಮಿತ ಅಲ್ಲ ಎಂದು ಹೇಳಿದ್ದಾರೆ. ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಬೆಂಗಳೂರು: ಚಾಮುಂಡಿ ಬೆಟ್ಟ ಹಿಂದೂ ಧರ್ಮದ ಆಸ್ತಿಯಲ್ಲ ಎಂಬ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಚಾಮುಂಡೇಶ್ವರಿ ತಾಯಿಯ ದರ್ಶನ ಎಲ್ಲರ ಹಕ್ಕು, ಯಾರೊಬ್ಬರಿಗೂ ಸೀಮಿತ ಅಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಬಾರಿಯ ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಆಯ್ಕೆಯ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಮೈಸೂರು ರಾಜಮನೆತನದ ಯದುವೀರ್ ಒಡೆಯರ್ ಸೇರಿದಂತೆ ಬಿಜೆಪಿ ನಾಯಕರು ಡಿಕೆ ಶಿವಕುಮಾರ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದರು. ಇದೀಗ ತಮ್ಮ ಹೇಳಿಕೆಯ ಕುರಿತು ಉಪಮುಖ್ಯಮಂತ್ರಿಗಳು ಸ್ಪಷ್ಟನೆಯನ್ನು ಎಕ್ಸ್ ಖಾತೆಯ ಮೂಲಕ ನೀಡುವ ಪ್ರಯತ್ನವನ್ನು ಮಾಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಪೋಸ್ಟ್
ನಮ್ಮ ನಾಡ ಹಬ್ಬ - ದಸರಾ
ನಮ್ಮ ನಾಡ ದೇವತೆ - ಚಾಮುಂಡೇಶ್ವರಿ
ಚಾಮುಂಡೇಶ್ವರಿ ತಾಯಿ ನಮ್ಮ ನಾಡಿನ ಅಧಿದೇವತೆ. ಈ ತಾಯಿಯನ್ನು ಆರಾಧಿಸುವವರು, ನಂಬುವವರು, ಗೌರವಿಸುವವರು ಎಲ್ಲ ಜಾತಿ, ಧರ್ಮಗಳಲ್ಲೂ ಇದ್ದಾರೆ. ಆಕೆಯ ದರ್ಶನ ಎಲ್ಲರ ಹಕ್ಕು. ತಾಯಿ ಎಲ್ಲ ಭಕ್ತರ, ನಾಡಿನ ಎಲ್ಲ ಮಕ್ಕಳ ಆಸ್ತಿ, ಯಾರೊಬ್ಬರಿಗೂ ಸೀಮಿತ ಅಲ್ಲ. ತಾಯಿಯನ್ನು ಪೂಜಿಸಿದರೆ ಯಾರೂ ಬೇಡ ಅನ್ನಲು ಆಗುವುದಿಲ್ಲ. ಇದೇ ನನ್ನ ಮಾತಿನ ಸತ್ವ. ವಿವಾದ ಮಾಡೋದು ಬಿಜೆಪಿ ತತ್ವ!
ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮ, ಸಮಾಜದವರಿಗೂ ಪ್ರವೇಶವಿದೆ. ಎಲ್ಲರೂ ಬೆಟ್ಟಕ್ಕೆ ಹೋಗುತ್ತಾರೆ. ದೇವಿಯ ಪ್ರಾರ್ಥನೆ ಮಾಡುತ್ತಾರೆ. ಎಲ್ಲರ ನೋವನ್ನು ದೂರ ಮಾಡುವಳು ನಮ್ಮ ದುರ್ಗಾ ದೇವಿ. ನಾಡ ಹಬ್ಬ ದಸರಾವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದ ಜನ ಬರುತ್ತಾರೆ. ಇದಕ್ಕೆ ನಮ್ಮ ರಾಜ ವಂಶಸ್ಥರೇ ಅನುಮತಿ ನೀಡಿ ಸಾಕ್ಷಿಯಾಗಿದ್ದಾರೆ. ನಾಡ ಹಬ್ಬ ದಸರಾ ಎಲ್ಲ ಧರ್ಮದವರಿಗೂ ಸೇರಿದ್ದು. ಧರ್ಮದಲ್ಲಿ ರಾಜಕಾರಣ ಮಾಡುವುದು ಬೇಡ, ಅದನ್ನು ಆ ತಾಯಿಯೂ ಮೆಚ್ಚುವುದಿಲ್ಲ!
ಇದನ್ನೂ ಓದಿ: ಚಾಮುಂಡಿ ದೇವಾಲಯ ಹಿಂದೆ, ಇಂದು ಹಾಗೂ ಮುಂದೆಯೂ ಹಿಂದೂಗಳದ್ದೇ; ಡಿಕೆಶಿಗೆ, ಯದುವೀರ್ ಒಡೆಯರ್ ತಿರುಗೇಟು!
ಡಿಕೆ ಶಿವಕುಮಾರ್ ಹೇಳಿದ್ದೇನು?
'ಚಾಮುಂಡಿ ಬೆಟ್ಟ ಹಿಂದೂ ಧರ್ಮದ ಆಸ್ತಿಯಲ್ಲ' ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ. ಅವರ ನಂಬಿಕೆ ಅದು. ನಾವು ಮಸೀದಿ, ಜೈನ್ ಟೆಂಪಲ್, ಗುರುದ್ವಾರಕ್ಕೆ ಹೋಗುತ್ತೇವೆ. ನಮ್ಮನ್ನು ಹೋಗಬೇಡಿ ಅಂತ ಯಾರಾದರೂ ಹೇಳಿದ್ದಾರಾ? ಮುಸ್ಲಿಂಮರು ಹಿಂದೂಗಳಾಗಿಲ್ವ?ಹಿಂದೂಗಳು ಮುಸ್ಲಿಂ ಆಗಿಲ್ವ? ಅಯೋಧ್ಯೆ ರಾಮನಿಗೆ ಯಾಕೆ ಹಿಂದೂಗಳು ಮಾತ್ರ ಬರಬೇಕು ಅಂತ ಮಾಡಿಲ್ಲ ಎಂದು ಪ್ರಶ್ನೆ ಮಾಡಿದ್ದರು.
ಹಿಂದೂ ದೇವಸ್ಥಾನಗಳಿಗೆ ಸಾಕಷ್ಟು ಜನ ಮುಸ್ಲಿಮರು ಬರುತ್ತಾರೆ. ಎಲ್ಲ ಧರ್ಮದ ಜನ ಕೂಡ ಹಿಂದೂ ದೇವಸ್ಥಾನಗಳಿಗೆ ಹೋಗುತ್ತಾರೆ. ಇದು ಸಂವಿಧಾನದ ಮೇಲೆ ನಂಬಿಕೆ ಇರುವ ರಾಷ್ಟ್ರ. ಹಿಂದೂ ಹುಡುಗ ಮುಸ್ಲಿಂ ಮಹಿಳೆ ಇದ್ದರೆ, ಅವರ ಮಗು ಯಾವ ಧರ್ಮ ಬೇಕೋ ಅದನ್ನು ಆಚರಣೆ ಮಾಡುತ್ತದೆ. ಬಾನು ಮುಸ್ತಾಕ್, ಕನ್ನಡದಲ್ಲಿ ಬರೆದಾಗ ಯಾರು ಯಾಕೆ ಬರೆದೆ ಅಂತ ಕೇಳಲಿಲ್ಲ ಎಂದು ಹೇಳಿದ್ದಾರೆ. ನಾವು ಧರ್ಮದಲ್ಲಿ ರಾಜಕಾರಣ ಮಾಡಲ್ಲ . ಸಂವಿಧಾನ ಮತ್ತು ಜಾತ್ಯಾತೀತ ತತ್ವದಲ್ಲಿ ಇರುವ ರಾಷ್ಟ್ರ ಎಂದು ಹೇಳಿದ್ದರು.
