ಅಸ್ಥಿರತೆಯ ನೆಲೆವೀಡಾಗಿರುವ ರಾಜಕೀಯ ಪರಿಸ್ಥಿತಿಯ ನಡುವೆಯೇ ಇದೀಗ ಮತ್ತೊಂದು ಬಾಂಬ್ ಹಾಕಲಾಗಿದೆ. ‘ಕಳೆದ ಸೆಪ್ಟೆಂಬರ್‌ನಲ್ಲಿ ಉಪಮುಖ್ಯಮಂತ್ರಿ ಒ. ಪನ್ನೀರಸೆಲ್ವಂ ನನ್ನ ಭೇಟಿಗೆ ಇಚ್ಛಿಸಿದ್ದರು. ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರನ್ನು ಕೆಳಗಿಳಿಸಬೇಕೆಂದು ಅವರು ಬಯಸಿದ್ದರು’ ಎಂದು ಅಮ್ಮಾ ಮಕ್ಕಳ್‌ ಮುನ್ನೇತ್ರ ಕಳಗಂ ಪಕ್ಷದ ಅಧ್ಯಕ್ಷ ಟಿಟಿವಿ ದಿನಕರನ್‌ ‘ಬಾಂಬ್‌’ ಸಿಡಿಸಿದ್ದಾರೆ.

ಚೆನ್ನೈ :  ಅಸ್ಥಿರತೆಯ ನೆಲೆವೀಡಾಗಿರುವ ತಮಿಳುನಾಡಿನಲ್ಲಿ ಮತ್ತೊಂದು ರಾಜಕೀಯ ಹಗ್ಗಜಗ್ಗಾಟ ಉಂಟಾಗುವ ಸಾಧ್ಯತೆ ಇದೆ. ‘ಕಳೆದ ಸೆಪ್ಟೆಂಬರ್‌ನಲ್ಲಿ ಉಪಮುಖ್ಯಮಂತ್ರಿ ಒ. ಪನ್ನೀರಸೆಲ್ವಂ ನನ್ನ ಭೇಟಿಗೆ ಇಚ್ಛಿಸಿದ್ದರು. ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರನ್ನು ಕೆಳಗಿಳಿಸಬೇಕೆಂದು ಅವರು ಬಯಸಿದ್ದರು’ ಎಂದು ಅಮ್ಮಾ ಮಕ್ಕಳ್‌ ಮುನ್ನೇತ್ರ ಕಳಗಂ ಪಕ್ಷದ ಅಧ್ಯಕ್ಷ ಟಿಟಿವಿ ದಿನಕರನ್‌ ‘ಬಾಂಬ್‌’ ಸಿಡಿಸಿದ್ದಾರೆ.

‘ಇದಕ್ಕೂ ಮುನ್ನ ಪನ್ನೀರಸೆಲ್ವಂ ಅವರು ಕಳೆದ ವರ್ಷ ಜುಲೈನಲ್ಲಿ ಭೇಟಿಯಾಗಿದ್ದರು. ಬಳಿಕ ಈ ವರ್ಷ ಸೆಪ್ಟೆಂಬರ್‌ ಅಂತ್ಯಕ್ಕೆ ಭೇಟಿಯಾಗಲು ಇಚ್ಛಿಸಿದ್ದರು. ಸ್ನೇಹಿತರೊಬ್ಬರ ಮುಖಾಂತರ ಅವರು ತಮ್ಮ ಕೋರಿಕೆಯನ್ನು ಕಳಿಸಿದ್ದರು’ ಎಂದು ಹೇಳಿದ್ದಾರೆ.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ದಿನಕರನ್‌, ‘ಪನ್ನೀರಸೆಲ್ವಂ ಮಾತುಕತೆಗೆ ಇರಾದೆ ವ್ಯಕ್ತಪಡಿಸಿದ್ದು ನಿಜ. ಸರ್ಕಾರವನ್ನು ಬೀಳಿಸಲು ತಾವು ಸಿದ್ಧ. ಇದಕ್ಕೆ ಪ್ರತಿಯಾಗಿ ನನಗೆ ‘ದೊಡ್ಡ ಹುದ್ದೆ’ ಕೊಡಿಸುವ ಆಫರ್‌ ಕೂಡ ನೀಡಿದರು. ಆದರೆ ಭೇಟಿ ಮಾಡಲು ನಾನು ನಿರಾಕರಿಸಿದೆ’ ಎಂದು ದಿನಕರನ್‌ ಹೇಳಿಕೊಂಡರು.

‘ಪನ್ನೀರಸೆಲ್ವಂ ನನ್ನನ್ನು ಬಹಿರಂಗವಾಗಿ ಹೀನಾಮಾನಾ ಬೈಯುತ್ತಾರೆ. ಒಳಗೊಳಗೆ ನನ್ನ ಜತೆ ಸ್ನೇಹ ಬಯಸುತ್ತಾರೆ. ಅವರ ಇರಾದೆ ಕೇವಲ ಮುಖ್ಯಮಂತ್ರಿಯಾಗೋದು’ ಎಂದು ಟಿಟಿವಿ ಟೀಕಿಸಿದರು.

ಅಣ್ಣಾ ಡಿಎಂಕೆ ನಕಾರ:

ಸರ್ಕಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವ ಉದ್ದೇಶದಿಂದ ದಿನಕರನ್‌ ಇಂಥ ಸುಳ್ಳು ಹೇಕಿಕೆ ನೀಡುತ್ತಿದ್ದಾರೆ. ಸರ್ಕಾರ ಬೀಳಿಸಲು ವಿಫಲರಾದ ಬಳಿಕ ಅವರು ಇಂಥ ಯತ್ನಕ್ಕೆ ಕೈಹಾಕಿದ್ದಾರೆ’ ಎಂದು ಅಣ್ಣಾ ಡಿಎಂಕೆ ವಕ್ತಾರ ಆರ್‌.ಎಂ. ಬಾಲಮುರುಗನ್‌ ತಿರುಗೇಟು ನೀಡಿದ್ದಾರೆ.