ನಿಜವಾದ ಕೋಮುವಾದಿ ಪಕ್ಷ ಕಾಂಗ್ರೆಸ್ ಹೊರತು ಬಿಜೆಪಿ ಅಲ್ಲ: ರಮೇಶ ಜಾರಕಿಹೊಳಿ
ಕಾಂಗ್ರೆಸ್ ಲೀಡರ್‌ಶಿಪ್ ಒಂದೇ ಇತ್ತು. ಸೋನಿಯಾ ಗಾಂಧಿ ಬಳಿ ಹೋಗಬೇಕಿತ್ತು. ಅದು ಕುಟುಂಬ ಆಧಾರಿತ ಪಕ್ಷವಾಗಿಯೇ ಗುರುತಿಸಿಕೊಂಡಿದೆ. ಕಾಂಗ್ರೆಸ್ ಹಾಗೂ ರಾಜ್ಯಮಟ್ಟದ ಪಕ್ಷ ಜಾತಿವಾದಿಯಾಗಿವೆ. ವಿರೋಧ ಪಕ್ಷಗಳು ಕೇವಲ ಶೇ.40 ಸುಳ್ಳು ಆರೋಪ ಮಾಡುತ್ತಿದೆ ಎಂದು ಆರೋಪಿಸಿದ ರಮೇಶ ಜಾರಕಿಹೊಳಿ
ಗೋಕಾಕ(ಫೆ.26): ಕಾಂಗ್ರೆಸ್ ಒಂದೇ ಸಮುದಾಯದ ಒಲೈಕೆ ಹಿಂದೆ ಬಿದ್ದು ಹಾಳಾಗಿ ಹೋಗಿದೆ. ನಿಜವಾದ ಕೋಮುವಾದಿ ಪಕ್ಷ ಕಾಂಗ್ರೆಸ್ ಹೊರತು ಬಿಜೆಪಿ ಅಲ್ಲ. ಭ್ರಷ್ಟಾಚಾರ ಪಿತಾಮಹ ಕಾಂಗ್ರೆಸ್ ಪಕ್ಷ ಎನ್ನುವುದು ದೇಶದ ಜನತೆಗೆ ಗೊತ್ತಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ನಗರದ ಹೊರವಲಯದಲ್ಲಿರುವ ಮಾಲದಿನ್ನಿ ಕ್ರಾಸ್ ಹತ್ತಿರ ಶನಿವಾರ ನಡೆದ ಮಮದಾಪುರ ಮತ್ತು ಮಕ್ಕಳಗೇರಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಲೀಡರ್‌ಶಿಪ್ ಒಂದೇ ಇತ್ತು. ಸೋನಿಯಾ ಗಾಂಧಿ ಬಳಿ ಹೋಗಬೇಕಿತ್ತು. ಅದು ಕುಟುಂಬ ಆಧಾರಿತ ಪಕ್ಷವಾಗಿಯೇ ಗುರುತಿಸಿಕೊಂಡಿದೆ. ಕಾಂಗ್ರೆಸ್ ಹಾಗೂ ರಾಜ್ಯಮಟ್ಟದ ಪಕ್ಷ ಜಾತಿವಾದಿಯಾಗಿವೆ. ವಿರೋಧ ಪಕ್ಷಗಳು ಕೇವಲ ಶೇ.40 ಸುಳ್ಳು ಆರೋಪ ಮಾಡುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕರ ಕೊಟ್ಟರೇ ಮತ್ತೆ ಬ್ಲ್ಯಾಕ್ ಮೇಲ್ ಶುರುವಾಗುತ್ತದೆ. ಕಾಂಗ್ರೆಸ್ ಪಕ್ಷ ನಂಬದ ಆಶ್ವಾಸನೆಗಳನ್ನು ನೀಡುತ್ತದೆ. ಅದನ್ನು ಜಾರಿಗೊಳಿಸಲು ಎಂದಿಗೂ ಸಾಧ್ಯವಿಲ್ಲ, ಸುಳ್ಳು ಹೇಳುತ್ತಿದೆ. ಬಿಜೆಪಿ ನುಡಿದಂತೆ ನಡೆಯುವ ಪಕ್ಷವಾಗಿದೆ. ಎಲ್ಲ ಜಾತಿ, ಜನಾಂಗ ಬೆಂಬಲಿಸುವ ಬಿಜೆಪಿಯನ್ನು ಮತ್ತೆ ಜನ ಗೆಲ್ಲಿಸುವುದರಲ್ಲಿ ಯಾವ ಸಂದೇಹ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
PM Modi Visit Belagavi: ಮೋದಿ ಸ್ವಾಗತಿಸಲು ಸಜ್ಜಾದ ಕುಂದಾನಗರಿ, 10.7ಕಿಮೀ ಅದ್ಧೂರಿ ರೋಡ್ ಶೋ!
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸರ್ವ ಸಮಾಜವನ್ನು ಒಗ್ಗೂಡಿಸಿಕೊಂಡು ಹೋಗುತ್ತಿದೆ. ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಮತ್ತೆ ಲೋಕಸಭೆಗೆ ಆಯ್ಕೆ ಮಾಡಬೇಕು. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕರ್ನಾಟಕದಲ್ಲಿ ಅಭಿವೃದ್ಧಿ ಕೆಲಸಗಳು ಸಾಕಷ್ಟು ನಡೆದಿವೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ವೃದ್ಧಿಯಾಗಿದೆ. ನೆರೆಯ ಪಾಕಿಸ್ತಾನದ ಮುಸ್ಲಿಂ ಬಂಧು ನಮ್ಮ ದೇಶದಲ್ಲೂ ಪ್ರಧಾನಿ ಮೋದಿ ಅವರು ಪ್ರಧಾನಿ ಆಗಬೇಕು ಎಂಬ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ನಮ್ಮ ದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ಪ್ರಗತಿ ಪಥದಲ್ಲಿ ಮುನ್ನುಗುತ್ತಿವೆ. ಬಿಜೆಪಿಯಲ್ಲಿ ಬಲಿಷ್ಠ ನಾಯಕತ್ವವಿದೆ. ಇಲ್ಲಿ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸುವ ಕೆಲಸ ನಡೆಯುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ, ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ, ಗೋಕಾಕ ನಗರ ಬಿಜೆಪಿ ಅಧ್ಯಕ್ಷ ಭೀಮಶಿ ಭರಮಣ್ಣವರ, ಗೋಕಾಕ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೊಳ, ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ತಪಸಿ, ಗೋಕಾಕ ಕ್ಷೇತ್ರದ ಚುನಾವಣಾ ಪ್ರಭಾರಿ ಗುರುಪಾದ ಕಳ್ಳಿ, ಜಿಪಂ ಮಾಜಿ ಸದಸ್ಯ ಟಿ.ಆರ್.ಕಾಗಲ್ ಸೇರಿದಂತೆ ಅನೇಕ ನಾಯಕರು, ಮಮದಾಪುರ ಹಾಗೂ ಮಕ್ಕಳಗೇರಿ ಜಿಲ್ಲಾ ಪಂಚಾಯಿತಿ ರಮೇಶ ಜಾರಕಿಹೊಳಿಯವರ ಅಭಿಮಾನಿಗಳು, ಕಾರ್ಯಕರ್ತರು ಸಹಸ್ರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸೋತರೂ ಆ ವ್ಯಕ್ತಿ ಪಾಠ ಕಲಿತಿಲ್ಲ: ರಮೇಶ
ಗೋಕಾಕ ವಿಧಾನಸಭಾ ಚುನಾವಣೆಯಲ್ಲಿ ನನ್ನ ಎದುರಾಳಿ ನನ್ನ ವಿರುದ್ಧ ವೈಯಕ್ತಿಕವಾಗಿ ಆರೋಪ ಮಾಡುತ್ತಿದ್ದಾರೆ. ಈ ಹಿಂದೆ ಹಲವು ಚುನಾವಣೆಗಳಲ್ಲೂ ಸೋತರೂ ಆ ವ್ಯಕ್ತಿ ಪಾಠ ಕಲಿತಿಲ್ಲ. ಅದಕ್ಕೆ ನಾನು ಈಗ ಉತ್ತರ ಕೊಡಲಾರೆ. ಚುನಾವಣೆ ಮುಗಿದ ನಂತರ ಅದಕ್ಕೆ ಉತ್ತರ ಕೊಡುವೆ ಎಂದು ಎದುರಾಳಿಗೆ ಶಾಸಕ ರಮೇಶ ಜಾರಕಿಹೊಳಿ ಟಾಂಗ್ ನೀಡಿದರು.
ದೇಶದ ಸಂಸ್ಕೃತಿ, ಧರ್ಮ ಉಳಿಬೇಕಂದ್ರ ಬಿಜೆಪಿಗೆ ವೋಟು ಹಾಕಿ: ಪಿಎಫ್ ಪಾಟೀಲ್
ಚುನಾವಣೆ ಐತಿಹಾಸಿಕವಾಗಿರಲಿದೆ. ನನ್ನ ಗೆಲುವಿಗೆ ಈ ಸಲ ನೀವೇ ಶ್ರಮಿಸಬೇಕು. ಆ ವಿಶ್ವಾಸ ನನಗಿದೆ. ಬಿಜೆಪಿ ವರಿಷ್ಠರು ನನಗೆ ಈ ಬಾರಿ ಹಲವು ಕ್ಷೇತ್ರಗಳನ್ನು ಗೆಲ್ಲಿಸುವ ಜವಾಬ್ದಾರಿ ವಹಿಸಿರುವುದರಿಂದ ನಾನು ಬೇರೆ ಬೇರೆ ಜಿಲ್ಲೆಗಳಲ್ಲಿ ಸುತ್ತಾಡಬೇಕಿದೆ. ಶಿಕ್ಷಣ, ಆರೋಗ್ಯ ಸೇರಿದಂತೆ ಹಲವಾರು ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಬಿಜೆಪಿ ಕಂಕಣ ತೊಟ್ಟಿದ್ದು, ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಬೇಕಿದೆ. ಮುಂದಿನ ದಿನಗಳಲ್ಲಿ ಗೋಕಾಕ ಮತಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ವಿಧಾನಸಭಾ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲು ಸಂಕಲ್ಪ ತೊಟ್ಟಿದ್ದೇನೆ ಎಂದು ಭರವಸೆ ನೀಡಿದರು.
ಮಮದಾಪುರ ಹಾಗೂ ಮಕ್ಕಳಗೇರಿ ಜಿಲ್ಲಾ ಪಂಚಾಯಿತಿ ಮತದಾರರಿಗೆ ನಾನು ಸದಾ ಚಿರರುಣಿಯಾಗಿರುತ್ತೇನೆ. ವಿಧಾನಸಭಾ ಚುನಾವಣೆ ಘೋಷಣೆ ಪೂರ್ವದಲ್ಲಿ ಬಿಜೆಪಿ ಸಮಾವೇಶ ಮಾಡಿ ಮುಗಿಸೋಣ. ಇಂದಿನ ಕಾರ್ಯಕ್ರಮ ನೋಡಿ ನನಗೆ ಮತ್ತಷ್ಟು ಉತ್ಸಾಹ ಬಂದಿದೆ. ಈ ಕಾರ್ಯಕ್ರಮ ಗಮನಿಸಿದರೇ ವಿರೋಧಿಗಳಿಗೆ ಈಗಾಗಲೇ ಸ್ಪಷ್ಟಸೂಚನೆ ಕೊಟ್ಟಂತಾಗಿದೆ. 1999ರ ವಿಧಾನಸಭಾ ಚುನಾವಣೆ ಫಲಿತಾಂಶದ ಲೀಡ್ ಮುರಿಯುತ್ತದೆ ಅನಿಸುತ್ತಿದೆ. ಲಕ್ಷ ಮತಗಳಿಂದ ಬೇಡ, ಈ ಸಲ 60 ಸಾವಿರ ಲೀಡ್‌ನಿಂದ ಗೆದ್ದು ವಿಧಾನಸಭೆ ಪ್ರವೇಶಿಸುವುದರಲ್ಲಿ ಯಾವ ಸಂದೇಹವೂ ಇಲ್ಲ. ಅದು ಈ ಬಾರಿ ಇಮ್ಮಡಿಯಾಗುತ್ತದೆ ಅಂತ ಶಾಸಕ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.