ಹೈದರಾಬಾದ್ ಪಾಲಿಕೆ ರಿಸಲ್ಟ್: ಬಿಜೆಪಿಯ ಭಾಗ್ಯನಗರದ ಕನಸಿಗೆ ಹಿನ್ನಡೆ..!
ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು, ಯಾರು ಮುನ್ನಡೆ? ಯಾರು ಹಿನ್ನಡೆ ಎನ್ನುವ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ.
ಹೈದರಾಬಾದ್, (ಡಿ.04): ತೀವ್ರ ಕುತೂಹಲ ಮೂಡಿಸಿರುವ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು, ಆರಂಭದಲ್ಲಿ ಮುನ್ನಡೆ ಸಾಧಿಸಿದ ಬಿಜೆಪಿ ಇದೀಗ ಹಿಂದೆ ಬಿದ್ದಿದೆ.
ಸದ್ಯದ ಫಲಿತಾಂಶದ ಪ್ರಕಾರ ಆಡಳಿತಾರೂಢ ಟಿಆರ್ ಎಸ್ ಭರ್ಜರಿ ಮುನ್ನಡೆ ಸಾಧಿಸಿದ್ದು, ಬಿಜೆಪಿ ಹಿನ್ನಡೆ ಅನುಭವಿಸಿದೆ. ಈ ಮೂಲಕ ಭಾಗ್ಯನಗರದ ಕನಸಿಗೆ ಹಿನ್ನಡೆಯಾದಂತಾಗಿದೆ.
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ಹೈದರಾಬಾದ್ ನಗರಪಾಲಿಕೆ ಚುನಾವಣೆಯಲ್ಲಿ 57ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಭಾರತೀಯ ಜನತಾ ಪಕ್ಷ 22 ಹಾಗೂ ಒವೈಸಿ ಎಐಎಂಐಎಂ ಪಕ್ಷ 33 ವಾರ್ಡ್ ಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ತಿಳಿದುಬಂದಿದ.
ಹೈದರಾಬಾದ್ ‘ಭಾಗ್ಯನಗರ’ ಮಾಡುತ್ತೇವೆ: ಬಿಜೆಪಿ ಶಾಸಕ
ಬೆಳಗ್ಗೆ ಮತಎಣಿಕೆ ಸಂದರ್ಭದಲ್ಲಿ ಬಿಜೆಪಿ 80ಕ್ಕೂ ವಾರ್ಡ್ ಗಳಲ್ಲಿ, ಟಿಆರ್ ಎಸ್ 31 ಹಾಗೂ ಎಐಎಂಐಎಂ 16 ವಾರ್ಡ್ ಗಳಲ್ಲಿ ಮುನ್ನಡೆ ಸಾಧಿಸಿರುವುದಾಗಿ ವರದಿಯಾಗಿತ್ತು. ಆದರೆ ಮಧ್ಯಾಹ್ನದ ವೇಳೆ ಟ್ರೆಂಡ್ ಬದಲಾಗಿದ್ದು, ಇದೀಗ ಆಡಳಿತಾರೂಢ ಟಿಆರ್ ಎಸ್ ಮುನ್ನಡೆ ಸಾಧಿಸಿದೆ.
ಒಟ್ಟು 150 ಸ್ಥಾನಗಳ ಹೈದರಾಬಾದ್ ಪಾಲಿಕೆಯಲ್ಲಿ ಆರಂಭದಲ್ಲಿ 80ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಇದೀಗ ಬಿಜೆಪಿ ಮುನ್ನಡೆಯಲ್ಲಿರುವ ಕ್ಷೇತ್ರಗಳ ಸಂಖ್ಯೆ 30ಕ್ಕೆ ಕುಸಿದಿದೆ. ಕಾಂಗ್ರೆಸ್ ಕೇವಲ 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾರ್ಯ ಸಂಜೆ ವೇಳೆಗೆ ಚುನಾವಣೆಯ ಸಂಪೂರ್ಣ ಚಿತ್ರಣ ಲಭ್ಯವಾಗಲಿದೆ.
ಭಾಗ್ಯನಗರವೆಂದಿದ್ದ ಸಂತೋಷ್ ಜೀ
ಹೌದು....ಮತ ಎಣಿಕೆ ಆರಂಭದಲ್ಲಿ ಬಿಜೆಪಿ 80ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಹುತೇಕ ಈ ಬಾರಿ ಅಧಿಕಾರ ಬಿಜೆಪಿ ಪಾಲಾಗಲಿದೆ ಎನ್ನುವ ಟ್ರೆಂಡ್ ಇತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಸಂತಸ ವ್ಯಕ್ತಪಡಿಸಿ ಹೈದರಾಬಾದ್ ಭಾಗ್ಯನಗರವಾಗಲಿದೆ ಎಂದು ಪರೋಕ್ಷವಾಗಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎನ್ನುವ ಅರ್ಥದಲ್ಲಿ ಟ್ವೀಟ್ ಮಾಡಿದ್ದರು. ಆದ್ರೆ, ಇದೀಗ ಫಲಿತಾಂಶ ಉಲ್ಟಾ ಆಗುತ್ತಿದ್ದಯ, ಬಿಜೆಪಿ ಮೊದಲಿನ ಟ್ರೆಂಡ್‌ನಿಂದ ಕೆಳಕ್ಕೆ ಕುಸಿಯುತ್ತಿದೆ.
ಘಟಾನುಘಟಿ ನಾಯಕರ ಪ್ರಚಾರ
ಈ ಬಾರಿಯ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯನ್ನು ಬಿಜೆಪಿ ಪ್ರತಿಷ್ಠೆಯಾಗಿ ತೆಗೆದುಕೊಮಡಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿಯ ಸ್ಟಾರ್ ನಾಯಕರಾದ ಅಮಿತ್ ಶಾ, ಯೋಗಿ ಆಧಿತ್ಯನಾಥ್ ಜೆಪಿ, ನಡ್ಡಾ, ತೇಜಸ್ವಿ ಸೂರ್ಯ ಸೇರಿದಂತೆ ಘಟಾನುಘಟಿ ನಾಯಕರುಗಳು ಪ್ರಚಾರ ಮಾಡಿದ್ದರು. ಈ ವೇಳೆ ಈ ಬಾರಿ ಬಿಜೆಪಿ ಅಧಿಕಾಕ್ಕೆ ಬಂದ್ರೆ ಹೈದರಾಬಾದ್ ಬದಲಾಗಿ ಭಾಗ್ಯನಗರ ಎಂದು ಹೊಸ ಹೆಸರು ನಾಮಕರಣ ಮಾಡಲಾಗುವುದು ಎಂದು ಯುಪಿ ಸಿಎಂ ಯೋಗಿ ಘೋಷಣೆ ಮಾಡಿದ್ದರು.
2016ರ ರಿಸಲ್ಟ್
2016ರ ಫೆಬ್ರುವರಿಯಲ್ಲಿ ನಡೆದ ಬೃಹತ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಡಳಿತಾರೂಢ ಟಿಆರ್ ಎಸ್ 99 ಸ್ಥಾನ ಪಡೆದಿದ್ದು, ಅಸಾದುದ್ದೀನ್ ಒವೈಸಿಯ ಎಐಎಂಐಎಂ 44 ಸ್ಥಾನಗಳಲ್ಲಿ ಗೆಲುವು ಪಡೆದಿತ್ತು. ಬಿಜೆಪಿ 04 ಹಾಗೂ ಕಾಂಗ್ರೆಸ್ 02, ಟಿಡಿಪಿ 1 ಸ್ಥಾನದಲ್ಲಿ ಮಾತ್ರ ಜಯ ಸಾಧಿಸಿತ್ತು.