ಹೈದರಾಬಾದ್ ‘ಭಾಗ್ಯನಗರ’ ಮಾಡುತ್ತೇವೆ: ಬಿಜೆಪಿ ಶಾಸಕ
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಹೈದರಾಬಾದ್ ಹೆಸರು ಬದಲಾಯಿಸಿ ಭಾಗ್ಯನಗರ ಎಂದು ಮರುನಾಮಕರಣ ಮಾಡಲಾಗುತ್ತದೆ ಎಂದು ತೆಲಂಗಾಣದ ಗೋಶಾಮಹಲ್ ಕ್ಷೇತ್ರದ ಶಾಸಕ ರಾಜಾ ಸಿಂಗ್ ಹೇಳಿದ್ದಾರೆ.
ತೆಲಂಗಾಣ[ನ.11]: ಒಂದು ವೇಳೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಹೈದರಾಬಾದ್ ಹೆಸರು ಬದಲಾಯಿಸಿ ಭಾಗ್ಯನಗರ ಎಂದು ಮರುನಾಮಕರಣ ಮಾಡಲಾಗುತ್ತದೆ ಎಂದು ತೆಲಂಗಾಣದ ಗೋಶಾಮಹಲ್ ಕ್ಷೇತ್ರದ ಶಾಸಕ ರಾಜಾ ಸಿಂಗ್ ಹೇಳಿದ್ದಾರೆ. ಅಲ್ಲದೇ ಪಕ್ಷವು ಅಧಿಕಾರ ಪಡೆದ ಬಳಿಕ ಸಿಕಂದರಾಬಾದ್ ಹಾಗೂ ಕರೀಂನಗರದ ಹೆಸರನ್ನೂ ಬದಲಾಯಿಸುತ್ತೇವೆ ಎಂದಿದ್ದಾರೆ.
ಈ ಕುರಿತಾಗಿ ಮಾತನಾಡಿರುವ ಬಿಜೆಪಿ ಶಾಸಕ ರಾಜಾ ಸಿಂಗ್ ‘ಮೊದಲು ಹೈದರಾಬಾದ್ ಭಾಗ್ಯನಗರ ಎಂದು ಕರೆಯಲ್ಪಡುತ್ತಿತ್ತು. ಆದರೆ 1590 ರಲ್ಲಿ ಕುಲಿ ಕುತುಬ್ ಶಾಹ್ ಇಲ್ಲಿಗೆ ಭಾಗ್ಯನಗರ ಹೆಸರು ಬದಲಾಯಿಸಿ ಹೈದರಾಬಾದ್ ಎಂದಿಟ್ಟರು. ಆ ಸಂದರ್ಭದಲ್ಲಿ ಹಲವಾರು ಹಿಂದೂಗಳ ಮೇಲೆ ದಾಳಿ ನಡೆದಿತ್ತು, ಮಂದಿರಗಳನ್ನು ಧ್ವಂಸ ಮಾಡಲಾಗಿತ್ತು. ನಾವು ಹೈದರಾಬಾದ್ ಹೆಸರು ಬದಲಾಯಿಸುವ ತಯಾರಿಯಲ್ಲಿದ್ದೇವೆ. ತೆಲಂಗಾಣದಲ್ಲಿ ಬಿಜೆಪಿಗೆ ಬಹುಮತ ಸಿಕ್ಕರೆ ರಾಜ್ಯದ ಅಭಿವೃದ್ಧಿಯೇ ನಮ್ಮ ಪ್ರಥಮಿಕ ಆದ್ಯತೆ ಆಗಲಿದೆ. ಎರಡನೆಯದಾಗಿ ಹೈದರಾಬಾದ್ ಹೆಸರು ಬದಲಾಯಿಸಿ ಭಾಗ್ಯನಗರ ಎಂದು ಮಾಡುತ್ತೇವೆ. ಸಿಕಂದರಾಬಾದ್ ಹಾಗೂ ಕರೀಂನಗರದ ಹೆಸರನ್ನೂ ಬದಲಾಯಿಸುತ್ತೇವೆ. ಇಷ್ಟೇ ಅಲ್ಲದೇ ಯಾವೆಲ್ಲಾ ಸ್ಥಳಗಳಿಗೆ ನಿಜಾಮರು ಹಾಗೂ ಮೊಘಲರ ಹೆಸರುಗಳಿವೆಯೋ ಅವೆಲ್ಲವನ್ನೂ ಬದಲಾಯಿಸಲಾಗುವುದು’ ಎಂದಿದ್ದಾರೆ.
Raja Singh, a BJP legislator in Telangana, has claimed that the party will rename Hyderabad as Bhagyanagar if voted to power in the state
— ANI Digital (@ani_digital) November 8, 2018
Read @ANI story | https://t.co/6PC8AgodAe pic.twitter.com/AMBd9Bp6Lo
ಎರಡು ದಿನಗಳ ಹಿಂದಷ್ಟೇ ಗುಜರಾತ್‌ನ ಡಿಸಿಎಂ ನಿತಿನ್ ಪಟೇಲ್ ಅಹಮದಾಬಾದ್ ಹೆಸರು ಬದಲಾಯಿಸಿ ಕರ್ಣಾವತಿ ಎಂದು ಮರುನಾಮಕರಣ ಮಾಡುವ ವಿಚಾರವನ್ನು ಪ್ರಸ್ತಾಪಿಸಿದ್ದರು. ಇದಾದ ಮರುದಿನವೇ ಹೈದರಾಬಾದ್ ಬಿಜೆಪಿ ಶಾಸಕ ಇಂತಹ ಹೇಳಿಕೆ ನೀಡಿರುವುದು ಗಮನಾರ್ಹ.
ಮಂಗಳವಾರದಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಫೈಜಾಬಾದ್ ಹೆಸರು ಬದಲಾಯಿಸಿ ಅಯೋಧ್ಯೆ ಎಂದಿಡುವುದಾಗಿ ಘೋಷಿಸಿದ್ದರು. ನಗರಗಳ ಹೆಸರು ಬದಲಾಯಿಸುವುದೇನೂ ಹೊಸದಲ್ಲ ಇತ್ತೀಚೆಗಷ್ಟೇ ಭಾರತದ ಹಲವಾರು ನಗರಗಳು ಹಾಗೂ ರೈಲ್ವೇ ನಿಲ್ದಾಣಗಳ ಹೆಸರನ್ನು ಬದಲಾಯಿಸಲಾಗಿಇತ್ತು. ಅಲಹಾಬಾದ್ ಹೆಸರನ್ನು ಪ್ರಯಾಗ್‌ರಾಜ್ ಎಂದು ಮರು ನಾಮಕರಣ ಮಾಡಿದ್ದರೆ, ಮುಘಲ್‌ಸರಾಯ್ ರೈಲ್ವೇ ನಿಲ್ದಾಣದ ಹೆಸರು ಬದಲಾಯಿಸಿ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ್ ಜಂಕ್ಷನ್ ಎಂದಿಟ್ಟಿದ್ದರು.