ಕೋಲ್ಕತ್ತಾ, (ಜ.29): ಮುಂಬರುವ ವಿಧಾನಸಭೆ ಚುನಾವಣೆಗೆ ಪಶ್ಚಿಮ ಬಂಗಾಳ ಸಜ್ಜಾಗುತ್ತಿದೆ. ಒಟ್ಟು 294 ಸೀಟುಗಳಿಗೆ ಚುನಾವಣೆ ನಡೆಯುತ್ತಿದ್ದು, ಈ ಬಾರಿ ಆಡಳಿತದಲ್ಲಿರುವ ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯನ್ನು ಮಣಿಸಲು ಬಿಜೆಪಿ ಭರ್ಜರಿ ಪ್ಲಾನ್‌ಗಳನ್ನು ಮಾಡಿಕೊಳ್ಳುತ್ತಿದೆ. ಅದರಲ್ಲೂ ಟಿಎಂಸಿಯ ಕೆಲ ನಾಯರುಗಳು ಬಿಜೆಪಿ ಸೇರಿದ್ದು, ದೀದಿಗೆ ಆರಂಭಿಕ ಆಘಾತವಾಗಿದೆ.

ಸಿಎಂ ಬಿಎಸ್‌ವೈ ರಾಜೀನಾಮೆ ಕೊಡುವಂತೆ ಒತ್ತಡ ಹಾಕಿ: ಶಾಸಕರುಗಳಿಗೆ ಶ್ರೀಗಳು ಸೂಚನೆ

 ಇತ್ತೀಚೆಗಷ್ಟೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮಮತಾ ಬ್ಯಾನರ್ಜಿ ಸಂಪುಟದಿಂದ ಹೊರಬಂದಿದ್ದ ಟಿಎಂಸಿ ಹಿರಿಯ ಮುಖಂಡ ರಾಜೀಬ್ ಬ್ಯಾನರ್ಜಿ ಅವರು ಶುಕ್ರವಾರ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.

ಡೊಮ್ಜೂರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ರಾಜೀಬ್ ಬ್ಯಾನರ್ಜಿ ಅವರು ಇಂದು (ಶುಕ್ರವಾರ) ವಿಧಾನಸಭೆ ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ, ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಬಳಿಕ ಪ್ರತಿಕ್ರಿಯಿಸಿರುವ ಅವರು, ನಾನು ರಾಜ್ಯ ವಿಧಾನಸಭೆಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ರಾಜೀನಾಮೆ ಪತ್ರವನ್ನು ಸ್ಪೀಕರ್‌ಗೆ ಸಲ್ಲಿಸಿದ್ದೇನೆ. ಜನರ ಸೇವೆ ಮಾಡಲು ನನಗೆ ಅವಕಾಶ ನೀಡಿದ ನನ್ನ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ, ನಾನು ಡೊಮ್ಜೂರ್ ಕ್ಷೇತ್ರದ ಜನರ ಸೇವೆಯನ್ನು ಮುಂದುವರಿಸುತ್ತೇನೆ ಎಂದಿರುವ ಅವರು ಯಾವ ಪಕ್ಷದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವುದನ್ನು ತಿಳಿಸಿಲ್ಲ. ಇದರಿಂದ ರಾಜೀಬ್ ಬ್ಯಾನರ್ಜಿ ಅವರ ಮುಂದಿನ ರಾಜಕೀಯ ನಡೆ ಕುತೂಹಲ ಮೂಡಿಸಿದೆ.