ಸಿಎಂ ಸಿದ್ದರಾಮಯ್ಯ ಅಭೂತಪೂರ್ವ ಜನಸ್ಪಂದನ: ಒಟ್ಟು 12372 ಅರ್ಜಿಗಳ ಸ್ವೀಕಾರ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎರಡನೇ ‘ಜನ ಸ್ಪಂದನ’ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಬರೋಬ್ಬರಿ 12,372 ಮಂದಿ ಅಹವಾಲು ಸಲ್ಲಿಕೆ ಮಾಡಿದ್ದಾರೆ.
ಬೆಂಗಳೂರು (ಫೆ.09): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎರಡನೇ ‘ಜನ ಸ್ಪಂದನ’ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಬರೋಬ್ಬರಿ 12,372 ಮಂದಿ ಅಹವಾಲು ಸಲ್ಲಿಕೆ ಮಾಡಿದ್ದಾರೆ. ಈ ಪೈಕಿ ಸ್ಥಳದಲ್ಲೇ 246 ಅರ್ಜಿ ಇತ್ಯರ್ಥವಾಗಿದ್ದು, ವಿಲೇವಾರಿಗೆ ಬಾಕಿ ಇರುವ 12,126 ಅರ್ಜಿಗಳನ್ನು ಒಂದು ತಿಂಗಳ ಒಳಗಾಗಿ ಇತ್ಯರ್ಥಪಡಿಸುವಂತೆ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ರವಾನಿಸಿದ್ದಾರೆ. ನವೆಂಬರ್ 27ರಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದಿದ್ದ ಮೊದಲ ಜನಸ್ಪಂದನ ಕಾರ್ಯಕ್ರಮದಲ್ಲಿ 4,030 ಅರ್ಜಿಗಳು ಸಲ್ಲಿಕೆಯಾಗಿದ್ದವು.
ಕಳೆದ ಜನಸ್ಪಂದನಕ್ಕೆ ಹೋಲಿಸಿದರೆ ಗುರುವಾರ ವಿಧಾನಸೌಧ ಆವರಣದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮಕ್ಕೆ ಮೂರು ಪಟ್ಟು ಹೆಚ್ಚು ಅಹವಾಲುಗಳು ಸಲ್ಲಿಕೆಯಾಗಿವೆ. ವಿಧಾನಸೌಧ ಆವರಣದಲ್ಲಿ ನಡೆದ ಮೊದಲ ಜನತಾ ದರ್ಶನ ಇದಾಗಿತ್ತು. ರಾಜ್ಯದ ಮೂಲೆ ಮೂಲೆಗಳಿಂದ ಅಂಗವಿಕಲರು, ವಯೋವೃದ್ಧರು, ಗರ್ಭಿಣಿಯರು, ಬಾಣಂತಿಯರು ಸೇರಿದಂತೆ ಸಾವಿರಾರು ಮಂದಿ ನಾಗರಿಕರು ಮುಂಜಾನೆಯಿಂದಲೇ ವಿಧಾನಸೌಧ ಹೈಕೋರ್ಟ್ ಗೇಟ್ ಬಳಿ ಸಾಲು ನಿಂತಿದ್ದರು.
ನಡ್ಡಾ, ಸಂತೋಷ್ ಭೇಟಿಯಾಗಿ ಮಂಡ್ಯ ಟಿಕೆಟ್‌ಗೆ ಸಂಸದೆ ಸುಮಲತಾ ಮನವಿ
ಬಳಿಕ ನೋಂದಣಿ ಹಾಗೂ ವಿಲೇವಾರಿಗೆ ಮಾಡಿದ್ದ 29 ಪ್ರತ್ಯೇಕ ಕೌಂಟರ್‌ಗಳ ಮೂಲಕ ಅಹವಾಲು ನೋಂದಾಯಿಸಿಕೊಳ್ಳಲಾಯಿತು. ಈ ಪೈಕಿ ಎರಡು ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿ ಕೌಂಟರ್‌ಗೂ ಬಂದು ಹಾಜರಿದ್ದವರ ಅಹವಾಲು ಸ್ವೀಕರಿಸಿದರು. ಜತೆಗೆ ಮುಖ್ಯಮಂತ್ರಿಗಳಿಗೆ ಮಾಡಿದ್ದ ವೇದಿಕೆಯಲ್ಲೂ ನೂರಾರು ಮಂದಿಯ ಅಹವಾಲುಗಳನ್ನು ನೇರವಾಗಿ ಆಲಿಸಿ ಸ್ಥಳದಲ್ಲೇ ಪರಿಹಾರಕ್ಕೂ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಒಂದು ತಿಂಗಳ ಗಡುವು- ಸಿಎಂ: ಜನಸ್ಪಂದನ ಬಳಿಕ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜನಸ್ಪಂದನದಲ್ಲಿ 12 ಸಾವಿರಕ್ಕೂ ಹೆಚ್ಚು ಅರ್ಜಿ ಸ್ವೀಕೃತಗೊಂಡಿದ್ದು, 20 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಅಧಿಕಾರಿಗಳು ಕೆಳ ಹಂತದಲ್ಲೇ ಸಮಸ್ಯೆ ಬಗೆಹರಿಸಿದರೆ ಬೆಂಗಳೂರಿಗೆ ಜನ ಬಂದು ಅರ್ಜಿ ಕೊಡುವ ಸಂದರ್ಭ ಉದ್ಭವಿಸುವುದಿಲ್ಲ. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಸಿಇಓಗಳ ಮೇಲೆ ಈ ಜವಾಬ್ದಾರಿ ಹೆಚ್ಚಿದೆ. ಆಡಳಿತ ಜಡತ್ವದಿಂದ ಕೂಡಿರಬಾರದು. ಈ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ಕೊಡುತ್ತೇನೆ. ಜನರನ್ನು ಸರಿಯಾಗಿ ನಡೆಸಿಕೊಳ್ಳದಿದ್ದರೆ ಅಂಥವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ರವಾನಿಸಿದರು.
ಹೆಚ್ಚಾಗಿ ಕಂದಾಯ ಇಲಾಖೆಗೆ ಅರ್ಜಿಗಳು ಬಂದಿವೆ. ನೂರಾರು ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥ ಮಾಡಿ ಜತೆಗೆ ಆದೇಶಗಳನ್ನೂ ನೀಡಿದ್ದೇವೆ. ಉಳಿದ ಅರ್ಜಿಗಳನ್ನು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಇಲಾಖಾ ಕಾರ್ಯದರ್ಶಿಗಳಿಗೆ ಹಸ್ತಾಂತರಿಸಿದ್ದೇವೆ. ಅವರು ಕೂಡಲೇ ಸಂಬಂಧಪಟ್ಟ ಸಮಸ್ಯೆಗಳ ಅರ್ಜಿಗಳನ್ನು ಇತ್ಯರ್ಥ ಮಾಡಬೇಕು. ಒಂದು ತಿಂಗಳ ಒಳಗಾಗಿ ಇವು ಇತ್ಯರ್ಥವಾಗಬೇಕು, ಯಾವ ಅರ್ಜಿ ಇತ್ಯರ್ಥವಾಗುವುದಿಲ್ಲವೋ ಅವುಗಳ ಬಗ್ಗೆ ಯಾವ ಕಾರಣಕ್ಕೆ ಆಗುವುದಿಲ್ಲ ಎಂಬ ಬಗ್ಗೆ ಹಿಂಬರಹ ನೀಡಬೇಕು ಎಂದು ಸೂಚಿಸಿದರು.
ಸಿಎಂ ಸಿದ್ದರಾಮಯ್ಯ ಬಳಿ ಹಲವು ಸುಳ್ಳಿನ ಅಸ್ತ್ರಗಳಿವೆ: ಸಿ.ಟಿ.ರವಿ ಕಿಡಿ
ಜನರಿಗೆ ಅಗೌರವ ತೋರಿಸಿದರೆ ಕ್ರಮ: ಜನರು ನಿಮ್ಮ ಬಳಿಗೆ ಬಂದಾಗ ನಿಮ್ಮಿಂದ ಸಾಧ್ಯವಾದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ ಸಮಸ್ಯೆ ಬಗೆಹರಿಸಬೇಕು. ಒಂದು ವೇಳೆ ಅಧಿಕಾರಿಗಳು ನಿರ್ಲಕ್ಷ್ಯ ಹಾಗೂ ಜನರಿಗೆ ಅಗೌರವ ತೋರಿರುವುದು ನನ್ನ ಗಮನಕ್ಕೆ ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಸಚಿವರಾದ ಬೈರತಿ ಸುರೇಶ್, ಡಾ.ಎಂ.ಸಿ. ಸುಧಾಕರ್, ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್, ಶಿವರಾಜ್ ತಂಗಡಗಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಶಾಲಿನಿ ರಜನೀಶ್ ಸೇರಿದಂತೆ ಎಲ್ಲಾ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.