ತಿರುಪತಿ ತಿರುಮಲದಲ್ಲಿ ರಾಜ್ಯ ಮುಜರಾಯಿ ಇಲಾಖೆಗೆ ಸಂಬಂಧಿಸಿದ ಅಭಿವೃದ್ಧಿ ಕಾಮಗಾರಿಗಳನ್ನು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಮಂಗಳವಾರ ತಿರುಮಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಂಗಳೂರು (ಡಿ.25): ತಿರುಪತಿ ತಿರುಮಲದಲ್ಲಿ ರಾಜ್ಯ ಮುಜರಾಯಿ ಇಲಾಖೆಗೆ ಸಂಬಂಧಿಸಿದ ಅಭಿವೃದ್ಧಿ ಕಾಮಗಾರಿಗಳನ್ನು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಮಂಗಳವಾರ ತಿರುಮಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿಯೊಂದಿಗೆ ರಾಜ್ಯದ ಭಕ್ತರಿಗೆ ಅನುಕೂಲವಾಗುವಂತೆ ವಿಚಾರಗಳ ಕುರಿತು ಚರ್ಚೆ ನಡೆಸಿದರು. ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಕೆಲ ಶಾಸಕರು ತಿರುಪತಿ ತಿರುಮಲದಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿನ ನ್ಯೂನತೆ ಪ್ರಸ್ತಾಪಿಸಿದ್ದರು.

Add Asianetnews Kannada as a Preferred SourcegooglePreferred

ಅದಕ್ಕೆ ಖುದ್ದು ತಾವೇ ತಿರುಪತಿ ತಿರುಮಲಕ್ಕೆ ರಾಜ್ಯದಿಂದ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ನಡೆಸುವುದಾಗಿ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ಮಂಗಳವಾರ ತಿರುಪತಿ ತಿರುಮಲಕ್ಕೆ ಭೇಟಿ ನೀಡಿದ್ದ ರಾಮಲಿಂಗಾರೆಡ್ಡಿ, ಟಿಟಿಡಿ ಅಧಿಕಾರಿಗಳೊಂದಿಗೆ ಕರ್ನಾಟಕ ಸರ್ಕಾರದ 3 ಅತಿಥಿ ಗೃಹಗಳು, ಛತ್ರಗಳ ಗುಣಮಟ್ಟ ಪರಿಶೀಲನೆ ನಡೆಸಿದರು. ಉಳಿದಂತೆ ಏನೇ ಸಮಸ್ಯೆಗಳಿದ್ದರೂ ಶೀಘ್ರ ಬಗೆಹರಿಸಬೇಕು ಹಾಗೂ ಚಾಲ್ತಿ ಕಾಮಗಾರಿಗಳನ್ನು 2026ರ ಮಾರ್ಚ್‌ ಒಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜ್ಯದ ಭಕ್ತರ ವಿಚಾರಗಳ ಚರ್ಚೆ

ಈ ಸಂದರ್ಭದಲ್ಲಿ ತಿರುಮಲದಲ್ಲಿ ಮುಜರಾಯಿ ಇಲಾಖೆಗೆ ನೀಡಲಾಗಿರುವ ಭೂಮಿ ಗುತ್ತಿಗೆ ಅವಧಿ ವಿಸ್ತರಣೆ ಕುರಿತು ಟಿಟಿಡಿ ಅಧಿಕಾರಿಗಳೊಂದಿಗೆ ರಾಮಲಿಂಗಾರೆಡ್ಡಿ ಚರ್ಚೆ ನಡೆಸಿದರು. ಜತೆಗೆ ಟಿಟಿಡಿ ವಾಪಸ್‌ ಪಡೆದ ಭೂಮಿಗೆ ಬದಲಾಗಿ ತಿರುಪತಿಯಲ್ಲಿ 30 ಸೆಂಟ್ಸ್‌ (12 ಗುಂಟೆ) ಭೂಮಿ ನೀಡಬೇಕು. ತಿರುಮಲದಲ್ಲಿ ಕರ್ನಾಟಕದ ಪರ ಟಿಟಿಡಿ ಕೈಗೊಂಡಿರುವ ಕಾಮಗಾರಿಗಳ ಮೇಲೆ ವಿಧಿಸಲಾಗಿರುವ ಸೆಂಟೇಜ್‌ ಶುಲ್ಕದಿಂದ ವಿನಾಯಿತಿ ನೀಡಬೇಕು.

ತಿರುಮಲದಲ್ಲಿ ರಾಜ್ಯದ ಅತಿಥಿ ಗೃಹಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಹಸ್ತಾಂತರಿಸಬೇಕು. ಜತೆಗೆ ಹಾಲಿ ಇರುವ ಅತಿಥಿ ಗೃಹಗಳಲ್ಲಿನ ದುರಸ್ತಿ ಕಾಮಗಾರಿಗಳು, ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸಬೇಕು. ಹಾಗೆಯೇ, ಕರ್ನಾಟಕದಿಂದ ಬರುವ ಭಕ್ತರಿಗೆ ವಿಶೇಷ ದರ್ಶನ ಸೌಲಭ್ಯ ಒದಗಿಸುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ರಾಮಲಿಂಗಾರೆಡ್ಡಿ ಹೇಳಿದರು. ಮುಜರಾಯಿ ಇಲಾಖೆ ಆಯುಕ್ತ ಶರತ್‌, ಟಿಟಿಡಿ ಟ್ರಸ್ಟ್‌ ಸದಸ್ಯ ದರ್ಶನ್‌ ಇದ್ದರು.