Asianet Suvarna News Asianet Suvarna News

Ticket Fight: ಬೆಂಗಳೂರಲ್ಲಿ ಹಾಲಿ ಶಾಸಕರದ್ದೇ ಮೇಲುಗೈ

ರಾಜ್ಯ ರಾಜಕಾರಣದಲ್ಲಿ ಇತರ ಭಾಗದ ತೂಕ ಒಂದಾದರೆ ರಾಜಧಾನಿ ಬೆಂಗಳೂರಿನ ತೂಕವೇ ಮತ್ತೊಂದು. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳಿವೆ. 

Ticket Fight There is a possibility of change in the BJP ticket at Bengaluru gvd
Author
First Published Dec 22, 2022, 6:26 AM IST

ಬೆಂಗಳೂರು (ಡಿ.22): ರಾಜ್ಯ ರಾಜಕಾರಣದಲ್ಲಿ ಇತರ ಭಾಗದ ತೂಕ ಒಂದಾದರೆ ರಾಜಧಾನಿ ಬೆಂಗಳೂರಿನ ತೂಕವೇ ಮತ್ತೊಂದು. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳಿವೆ. ರಾಜಧಾನಿಯಲ್ಲಿ ಹೆಚ್ಚು ಸ್ಥಾನ ಗಳಿಸಿರುವ ಪಕ್ಷ ಸಹಜವಾಗಿಯೇ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಅಥವಾ ಅತಿಹೆಚ್ಚು ಸ್ಥಾನ ಗಳಿಸಿದ ಪಕ್ಷವಾಗಿ ಹೊರಹೊಮ್ಮಲಿದೆ. 

1.ದಾಸರಹಳ್ಳಿ: ಜೆಡಿಎಸ್‌ ತನ್ನ ಏಕೈಕ ಸ್ಥಾನ ಉಳಿಸಿಕೊಳ್ಳುವುದೇ?
ಬೆಂಗಳೂರಿನಲ್ಲಿ ಜೆಡಿಎಸ್‌ ಪ್ರತಿನಿಧಿಸುವ ಏಕೈಕ ಶಾಸಕ ದಾಸರಹಳ್ಳಿಯ ಆರ್‌.ಮಂಜುನಾಥ್‌. ಈಗಾಗಲೇ ಮಂಜುನಾಥ್‌ ಅವರನ್ನೇ ಮುಂದಿನ ಚುನಾವಣೆಯ ಅಭ್ಯರ್ಥಿಯನ್ನಾಗಿ ಜೆಡಿಎಸ್‌ ಘೋಷಿಸಿರುವುದರಿಂದ ಪಕ್ಷದ ಇತರ ಆಕಾಂಕ್ಷಿಗಳ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಬಿಜೆಪಿಯ ಮಾಜಿ ಶಾಸಕ ಎಸ್‌.ಮುನಿರಾಜು ಅವರು ಮತ್ತೊಮ್ಮೆ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ದಾಸರಹಳ್ಳಿ ಮಂಡಲ ಅಧ್ಯಕ್ಷ ಲೋಕೇಶ್‌ಗೌಡ ಹೆಸರೂ ಬಿಜೆಪಿಯಿಂದ ಕೇಳಿಬರುತ್ತಿದೆ. ಇನ್ನು ಕಾಂಗ್ರೆಸ್‌ನಿಂದ ಗೀತಾ ಶಿವರಾಂ ಪ್ರಬಲವಾಗಿ ಕೇಳಿ ಬರುತ್ತಿರುವ ಹೆಸರು. ಇವರ ತಂದೆ ಮದ್ದೂರು ವಿಧಾನಸಭೆ ಕ್ಷೇತ್ರದಲ್ಲಿ ಎರಡು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದವರು. ಗೀತಾ ಶಿವರಾಂ 19ನೇ ವರ್ಷಕ್ಕೆ ಚನ್ನಪಟ್ಟಣದಲ್ಲಿ ನಗರ ಸಭೆ ಸದಸ್ಯರಾಗಿದ್ದರು. ಕುರುಬ ಸಮುದಾಯದ ಇವರಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಇಬ್ಬರ ಬೆಂಬಲವೂ ಇದೆ ಎನ್ನಲಾಗಿದೆ. ಮತ್ತೊಂದೆಡೆ ಸಿದ್ದಾರ್ಥ ಕಾಲೇಜು ದಂತ ವೈದ್ಯ ಪ್ರೊಫೆಸರ್‌ ನಾಗಲಕ್ಷ್ಮೇ ಚೌದರಿ ಸಹ ಆಕಾಂಕ್ಷಿಯಾಗಿದ್ದು, ಇವರೂ ಕುರುಬ ಸಮುದಾಯದವರೇ ಆಗಿದ್ದಾರೆ. ಉಳಿದಂತೆ 2018ರಲ್ಲಿ ಕಾಂಗ್ರೆಸ್‌ ಸ್ಪರ್ಧಿಯಾಗಿದ್ದ ಪಿ.ಎನ್‌. ಕೃಷ್ಣ ಮೂರ್ತಿ, 2008ರಲ್ಲಿ ಅಭ್ಯರ್ಥಿಯಾಗಿದ್ದ ಕೆ.ಸಿ.ಅಶೋಕ್‌ ಕೂಡ ಟಿಕೆಟ್‌ ಬಯಸಿದ್ದಾರೆ. ಆಮ್‌ ಆದ್ಮಿ ಪಕ್ಷದಿಂದ ಕೀರ್ತನ ಮಂಜಪ್ಪ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

Ticket Fight: ಬೆಂಗಳೂರಲ್ಲಿ ಉದ್ಭವಿಸ್ತಾರಾ ಅಚ್ಚರಿ ಅಭ್ಯರ್ಥಿಗಳು?

2.ಗಾಂಧಿನಗರ: ದಿನೇಶ್‌ ಗುಂಡೂರಾವ್‌ ಮಣಿಸಲು ಸಾಧ್ಯವೇ?
ಕಾಂಗ್ರೆಸ್‌ನ ದಿನೇಶ್‌ ಗುಂಡೂರಾವ್‌ ಇಲ್ಲಿನ ಹಾಲಿ ಶಾಸಕರು. 1999ರಿಂದ ಸತತವಾಗಿ ಐದು ಬಾರಿ ಶಾಸಕರಾಗಿರುವ ದಿನೇಶ್‌ ಗುಂಡೂರಾವ್‌ ಅವರ ಗೆಲುವಿನ ಓಟವನ್ನು ತಡೆಯಲು ಬಿಜೆಪಿಯಿಂದ ನಿರಂತರ ಪ್ರಯತ್ನ ನಡೆಯುತ್ತಿದ್ದರೂ ಪ್ರಯೋಜನವಾಗಿಲ್ಲ. ಕಾಂಗ್ರೆಸ್‌ನಿಂದ ಬೇರೆ ಆಕಾಂಕ್ಷಿಗಳ ಮಾತೇ ಇಲ್ಲ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸಪ್ತಗಿರಿಗೌಡ, ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಹಾಗೂ ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಬಿಬಿಎಂಪಿ ಮಾಜಿ ಸದಸ್ಯ ಕೆ.ಎಲ್‌.ಶಿವಕುಮಾರ್‌ ಅವರ ಹೆಸರುಗಳು ಪ್ರಮುಖವಾಗಿ ಪ್ರಸ್ತಾಪವಾಗಿವೆ. ಜೆಡಿಎಸ್‌ನಿಂದ ವಿ.ನಾರಾಯಣಸ್ವಾಮಿ ಅವರನ್ನು ಅಭ್ಯರ್ಥಿ ಎಂದು ಮೊನ್ನೆಯಷ್ಟೇ ಘೋಷಣೆ ಮಾಡಲಾಗಿದೆ.

3.ಗೋವಿಂದರಾಜನಗರ: ಸೋಮಣ್ಣ ಅಥವಾ ಪುತ್ರ ಅರುಣ್‌ ಪೈಕಿ ಯಾರು?
ವಿಜಯನಗರದ ವೀರಪುತ್ರ ಎಂದೇ ಹೆಸರು ಗಳಿಸಿರುವ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಇಲ್ಲಿನ ಹಾಲಿ ಶಾಸಕರು. ಆದರೆ, ಸೋಮಣ್ಣ ಅವರು ಇದೇ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅವರ ಪುತ್ರ ಡಾ.ಅರುಣ್‌ ಸೋಮಣ್ಣ ಕೂಡ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಸೋಮಣ್ಣ ಅವರು ಪುತ್ರನಿಗೆ ಇಲ್ಲಿ ಟಿಕೆಟ್‌ ಕೊಡಿಸಿ ಬೇರೆಡೆ ಸ್ಪರ್ಧಿಸುವ ಚಿಂತನೆ ನಡೆಸಿದ್ದಾರೆ. ಅವರೇ ಸ್ಪರ್ಧಿಸುವುದಾದರೆ ಪುತ್ರನಿಗೆ ಬೇರೆಡೆ ಟಿಕೆಟ್‌ ಕೊಡಿಸುವ ಪ್ರಯತ್ನವೂ ನಡೆದಿದೆ. ಆದರೆ, ಅಂತಿಮವಾಗಿ ಪಕ್ಷದ ಹೈಕಮಾಂಡ್‌ ಯಾವ ತೀರ್ಮಾನ ಕೈಗೊಳ್ಳುವುದು ಎಂಬುದು ಕುತೂಹಲಕರವಾಗಿದೆ. ಕಾಂಗ್ರೆಸ್‌ನಿಂದ 2013ರಲ್ಲಿ ಶಾಸಕರಾಗಿದ್ದ ಪ್ರಿಯ ಕೃಷ್ಣ 2018ರಲ್ಲಿ ಸೋಲು ಅನುಭವಿಸಿದ್ದರು. ಮಾಜಿ ಸಚಿವ ಎಂ.ಕೃಷ್ಣಪ್ಪ ಪುತ್ರರಾದ ಪ್ರಿಯಕೃಷ್ಣ ಮತ್ತೊಮ್ಮೆ ಕಣಕ್ಕಿಳಿಯುವುದು ನಿಶ್ಚಿತವಾಗಿದೆ. ಜೆಡಿಎಸ್‌ ಮಹಾನಗರ ಘಟಕದ ಅಧ್ಯಕ್ಷ ಆರ್‌.ಪ್ರಕಾಶ್‌ ಈ ಕ್ಷೇತ್ರದ ಅಭ್ಯರ್ಥಿ ಎಂದು ಪಕ್ಷದ ನಾಯಕರು ಘೋಷಿಸಿದ್ದಾರೆ.

4.ಹೆಬ್ಬಾಳ: ಬೈರತಿ ವಿರುದ್ಧ ಕಟ್ಟಾಸ್ಪರ್ಧೆ?
ಕಾಂಗ್ರೆಸ್ಸಿನ ಬೈರತಿ ಸುರೇಶ್‌ ಇಲ್ಲಿನ ಹಾಲಿ ಶಾಸಕರು. ಒಂದು ಬಾರಿ ಪರಿಷತ್‌ ಸದಸ್ಯ ಹಾಗೂ ಹಾಲಿ ಹೆಬ್ಬಾಳ ಶಾಸಕರಾಗಿರುವ ಬೈರತಿ ಸುರೇಶ್‌ ಮತ್ತೆ ಕ್ಷೇತ್ರದ ಕೈ ಅಭ್ಯರ್ಥಿಯಾಗುವುದು ನಿಶ್ಚಿತವಾಗಿದೆ. ಕ್ಷೇತ್ರದಲ್ಲಿ ಬಲವಾದ ಹಿಡಿತ ಸಾಧಿಸಿರುವ ಬೈರತಿ ಸುರೇಶ್‌ ಅವರನ್ನು ಸೋಲಿಸುವುದಕ್ಕಾಗಿ ಬಿಜೆಪಿ ರಣತಂತ್ರ ಹೆಣೆಯುತ್ತಿದೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ವೈ.ಎ.ನಾರಾಯಣಸ್ವಾಮಿ ಈಗ ವಿಧಾನಪರಿಷತ್‌ ಸದಸ್ಯರಾಗಿದ್ದಾರೆ. ಅವರು ಕೂಡ ಆಕಾಂಕ್ಷಿಯಾಗಿದ್ದಾರೆ. ಆದರೆ, ಮಾಜಿ ಸಚಿವ ಕಟ್ಟಾಸುಬ್ರಮಣ್ಯನಾಯ್ಡು ಈ ಕ್ಷೇತ್ರದ ಅಭ್ಯರ್ಥಿಯಾಗಲು ತೀವ್ರ ಪ್ರಯತ್ನ ನಡೆಸಿದ್ದಾರೆ. ತಮ್ಮ ವಿರುದ್ಧದ ಹಗರಣದಿಂದಾಗಿ ಚುನಾವಣಾ ರಾಜಕಾರಣದಿಂದ ದೂರ ಉಳಿದಿದ್ದ ಕಟ್ಟಾಈ ಚುನಾವಣೆ ಮೂಲಕ ಮತ್ತೆ ಮುಂಚೂಣಿಗೆ ಬರಲು ಪ್ರಯತ್ನ ನಡೆಸಿದ್ದಾರೆ. ಪಕ್ಷದ ನಾಯಕರು ಕೂಡ ಕಟ್ಟಾಅವರಿಗೆ ಆಶ್ವಾಸನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಜೆಡಿಎಸ್‌ನಿಂದ ಮೋಹಿದ್‌ ಅಲ್ತಾಫ್‌ ಅವರನ್ನು ಪಕ್ಷದ ಅಭ್ಯರ್ಥಿ ಎಂದು ಮೊದಲ ಸಂಭಾವ್ಯ ಪಟ್ಟಿಯಲ್ಲೇ ಘೋಷಿಸಲಾಗಿದೆ. ಆಮ್‌ ಆದ್ಮಿ ಪಕ್ಷದಿಂದ ಮಂಜುನಾಥ್‌ ನಾಯ್ಡು ಪ್ರಬಲ ಆಕಾಂಕ್ಷಿಯಾಗಿದ್ದು, ಕೆಲಸ ಆರಂಭಿಸಿದ್ದಾರೆ.

5.ಜಯನಗರ: ಎನ್‌.ಆರ್‌.ರಮೇಶ್‌ಗೆ ಬಿಜೆಪಿ ಟಿಕೆಟ್‌ ಸಿಗುತ್ತಾ?
ಕಾಂಗ್ರೆಸ್ಸಿನ ಸೌಮ್ಯ ರೆಡ್ಡಿ ಹಾಲಿ ಶಾಸಕರು. ಅವರೇ ಇಲ್ಲಿ ಮತ್ತೊಮ್ಮೆ ಕಣಕ್ಕಿಳಿಯುವುದು ಬಹುತೇಕ ನಿರ್ಧಾರವಾಗಿದೆ. ಬಿಜೆಪಿ ಈ ಕ್ಷೇತ್ರವನ್ನು ಮರಳಿ ಪಡೆಯಲು ಪ್ರಯತ್ನ ನಡೆಸಿದ್ದು, ಹಲವರು ಬಯಕೆ ತೋರಿದ್ದಾರೆ. ಈ ಪೈಕಿ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಬಿಬಿಎಂಪಿಯ ಮಾಜಿ ನಾಯಕ ಎನ್‌.ಆರ್‌.ರಮೇಶ್‌ ಅವರು ಮುಂಚೂಣಿಯಲ್ಲಿದ್ದಾರೆ. ಪ್ರತಿಪಕ್ಷಗಳ ಮುಖಂಡರ ಹಲವು ಹಗರಣಗಳನ್ನು ದಾಖಲೆ ಸಮೇತ ಬಿಡುಗಡೆ ಮಾಡುವ ರಮೇಶ್‌ ಅವರ ಬಗ್ಗೆ ಸಂಘ ಪರಿವಾರದವರಿಗೂ ಒಲವಿದೆ. ಪಕ್ಷದ ಕಾರ್ಯಕರ್ತರ ಬೆಂಬಲವೂ ಇದೆ. ಈ ನಡುವೆ ಬಿಬಿಎಂಪಿ ಮಾಜಿ ಸದಸ್ಯ ಸಿ.ಕೆ.ರಾಮಮೂರ್ತಿ, ಮಾಜಿ ಮೇಯರ್‌ ಎಚ್‌.ಕೆ.ನಟರಾಜ್‌ ಅವರೂ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್‌ನಿಂದ ಪ್ರಬಲ ಆಕಾಂಕ್ಷಿಗಳು ಈವರೆಗೆ ಹೊರಹೊಮ್ಮಿಲ್ಲ.

6.ಕೆ.ಆರ್‌.ಪುರ: ಬೈರತಿಗೆ ಎದುರಾಳಿ ಯಾರು?
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಇಲ್ಲಿನ ಶಾಸಕರು. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ನಂದೀಶ್‌ ರೆಡ್ಡಿ ಅವರು ಆಕಾಂಕ್ಷಿಯಾಗಿದ್ದರೂ ಈಗ ಆಸೆ ಬಿಟ್ಟಿದ್ದಾರೆ. ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್‌ ಪಕ್ಷದಿಂದ ಕೇಂಬ್ರಿಡ್ಜ್‌ ವಿದ್ಯಾಸಂಸ್ಥೆಗಳ ಮಾಲೀಕರು ಹಾಗೂ ಎ.ಕೃಷ್ಣಪ್ಪ ಅವರ ಸಂಬಂಧಿ ಯಾದವ ಸಮುದಾಯದ ಡಿ.ಕೆ. ಮೋಹನ್‌ಬಾಬು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇದರ ಜತೆಗೆ ಹಾಲಿ ಪರಿಷತ್‌ ಸದಸ್ಯ ಹಾಗೂ ಉಪ ಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ನಾರಾಯಣಸ್ವಾಮಿ ಅವರೂ ಆಕಾಂಕ್ಷಿಯಾಗಿದ್ದಾರೆ. ಜೆಡಿಎಸ್‌ ಮತ್ತು ಆಮ್‌ ಆದ್ಮಿ ಪಕ್ಷದಿಂದ ಇದುವರೆಗೆ ಪ್ರಮುಖ ಆಕಾಂಕ್ಷಿಗಳು ಕಾಣಿಸಿಲ್ಲ.

7.ಮಹದೇವಪುರ: ಲಿಂಬಾವಳಿ ಹ್ಯಾಟ್ರಿಕ್‌ಗೆ ಬ್ರೇಕ್‌ ಬೀಳುತ್ತಾ?
ಬಿಜೆಪಿಯ ಅರವಿಂದ್‌ ಲಿಂಬಾವಳಿ ಇಲ್ಲಿನ ಶಾಸಕರು. ಮಾಜಿ ಸಚಿವರೂ ಆಗಿರುವ ಲಿಂಬಾವಳಿ ಅವರು ಮೂರನೇ ಬಾರಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಬಿಬಿಎಂಪಿ ಮಾಜಿ ಸದಸ್ಯ ಶ್ರೀಧರ್‌ ರೆಡ್ಡಿ ಅವರೂ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪಾ ಅಮರನಾಥ್‌, 2018ರಲ್ಲಿ ಪಕ್ಷೇತರವಾಗಿ ನಿಂತಿದ್ದ ನಲ್ಲೂರಹಳ್ಳಿ ನಾಗೇಶ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾವು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಕಮಲಾಕ್ಷಿ ರಾಜಣ್ಣ, ಕೆಪಿಸಿಸಿ ಸಮನ್ವಯಕಾರರಾದ ವಿನೋದ.

8.ಮಹಾಲಕ್ಷ್ಮಿ ಲೇಔಟ್‌: ಗೋಪಾಲಯ್ಯ ವಿರುದ್ಧ ಪ್ರಬಲ ಅಭ್ಯರ್ಥಿ ಕೊರತೆ?
ಅಬಕಾರಿ ಸಚಿವ ಕೆ.ಗೋಪಾಲಯ್ಯ ಇಲ್ಲಿನ ಶಾಸಕರು. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ಗೋಪಾಲಯ್ಯ ನಂತರ ಬಿಜೆಪಿ ವಲಸೆ ಬಂದು ಉಪಚುನಾವಣೆ ಎದುರಿಸಿ ಗೆಲುವು ಸಾಧಿಸಿದರು. ಮಾಜಿ ಉಪಮೇಯರ್‌ ಎಸ್‌.ಹರೀಶ್‌ ಅವರೂ ಆಕಾಂಕ್ಷಿಯಾಗಿದ್ದಾರೆ. ವೇಗಾಸ್‌ ಆಸ್ಪತ್ರೆ ಮಾಲೀಕ ಹಾಗೂ ಒಕ್ಕಲಿಗ ಸಂಘದ ನಿರ್ದೇಶಕರಾಗಿರುವ ನಾರಾಯಣಸ್ವಾಮಿ ಟಿಕೆಟ್‌ ಬಯಸಿದ್ದಾರೆ. ಜೆಡಿಎಸ್‌ನಿಂದ ಪಕ್ಷದ ಮುಖಂಡರಾದ ಸಿ.ರಾಜಣ್ಣ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಬೈರೇಗೌಡ ಕೂಡ ಟಿಕೆಟ್‌ ಬಯಸಿದ್ದಾರೆ. ಆಮ್‌ ಆದ್ಮಿ ಪಕ್ಷದಿಂದ ಶಾಂತಲಾ ದಾಮ್ಲೆ ಕಣಕ್ಕಿಳಿಯಲು ಸಜ್ಜಾಗಿದ್ದು, ಕಳೆದ ಹಲವು ತಿಂಗಳುಗಳಿಂದ ಕ್ಷೇತ್ರದಾದ್ಯಂತ ಚಟುವಟಿಕೆಯಿಂದ ಸಂಚರಿಸುತ್ತಿದ್ದಾರೆ. ಹಲವು ಹೋರಾಟಗಳನ್ನು ಕೈಗೊಂಡಿದ್ದಾರೆ.

Ticket Fight: ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸೇ ಇಲ್ಲಿ ಬಂಡವಾಳ!

9.ಮಲ್ಲೇಶ್ವರ: ಅಶ್ವತ್ಥನಾರಾಯಣ ವಿರುದ್ಧ ಯಾರು ಕಣಕ್ಕೆ?
ಉನ್ನತ ಶಿಕ್ಷಣ, ಐಟಿ-ಬಿಟಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಇಲ್ಲಿನ ಶಾಸಕರು. ಪ್ರಕಾಶ್‌ ಅಯ್ಯಂಗಾರ್‌ ಆಕಾಂಕ್ಷಿಯಾಗಿದ್ದರೂ ಅಶ್ವತ್ಥನಾರಾಯಣ ಅವರಿಗೇ ಟಿಕೆಟ್‌ ನೀಡುವುದು ನಿಶ್ಚಿತವಾಗಿದೆ. ಕಾಂಗ್ರೆಸ್‌ನಿಂದ, ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ರಶ್ಮಿ ರವಿಕಿರಣ್‌ ಹಾಗೂ ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಬೆಂಬಲಿಗರಾದ ಅನೂಪ್‌ ಅಯ್ಯಂಗಾರ್‌ ಆಕಾಂಕ್ಷಿ. ಜೆಡಿಎಸ್‌ನಿಂದ ಅಶೋಕ್‌ಕುಮಾರ್‌ ಎಂಬುವರು ಆಕಾಂಕ್ಷಿಯಾಗಿದ್ದಾರೆ. ಆಮ್‌ ಆದ್ಮಿ ಪಕ್ಷದಿಂದ ಸುಮನ ಪ್ರಶಾಂತ್‌ ಕಣಕ್ಕಿಳಿಯುವ ತಯಾರಿ ಆರಂಭಿಸಿದ್ದಾರೆ.

ಬಲಾಬಲ
ಒಟ್ಟು 28
ಬಿಜೆಪಿ 15
ಕಾಂಗ್ರೆಸ್‌ 12
ಜೆಡಿಎಸ್‌ 1

Follow Us:
Download App:
  • android
  • ios