ಬಿಬಿಎಂಪಿಯ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರನೆಯ ಹಾಗೂ ಕೊನೆಯ ಕಂತಾಗಿ 10 ಕ್ಷೇತ್ರಗಳಲ್ಲಿನ ಆಕಾಂಕ್ಷಿಗಳ ವಿವರ ನೀಡಲಾಗುತ್ತಿದೆ. ಬೆಂಗಳೂರನ್ನು ಪ್ರತಿನಿಧಿಸುತ್ತಿರುವ ಸಚಿವರು ಹಾಗೂ ಬಹುತೇಕ ಹಾಲಿ ಶಾಸಕರ ಪೈಕಿ ಬದಲಾವಣೆ ಆಗುವ ಸಾಧ್ಯತೆ ತೀರಾ ಕಡಿಮೆ. 

ವಿಜಯ್‌ ಮಲಗಿಹಾಳ /ಎಸ್‌.ಗಿರೀಶ್‌ಬಾಬು

ಬೆಂಗಳೂರು (ಡಿ.23): ಬಿಬಿಎಂಪಿಯ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರನೆಯ ಹಾಗೂ ಕೊನೆಯ ಕಂತಾಗಿ 10 ಕ್ಷೇತ್ರಗಳಲ್ಲಿನ ಆಕಾಂಕ್ಷಿಗಳ ವಿವರ ನೀಡಲಾಗುತ್ತಿದೆ. ಬೆಂಗಳೂರನ್ನು ಪ್ರತಿನಿಧಿಸುತ್ತಿರುವ ಸಚಿವರು ಹಾಗೂ ಬಹುತೇಕ ಹಾಲಿ ಶಾಸಕರ ಪೈಕಿ ಬದಲಾವಣೆ ಆಗುವ ಸಾಧ್ಯತೆ ತೀರಾ ಕಡಿಮೆ. ಸಚಿವರ ಪೈಕಿ ಎಲ್ಲರೂ ಮತ್ತೊಮ್ಮೆ ಕಣಕ್ಕಿಳಿಯುವುದು ನಿಶ್ಚಿತವಾಗಿದೆ. ಹಾಲಿ ಶಾಸಕರ ಪೈಕಿ ಒಂದೆರಡು ಬದಲಾವಣೆ ಆಗುವುದಾದರೆ ಬಿಜೆಪಿಯಲ್ಲಿ ಮಾತ್ರ. ಅದು ಕೂಡ ಸ್ಪಷ್ಟವಿಲ್ಲ. ಇನ್ನುಳಿದಂತೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿ ಎಲ್ಲ ಶಾಸಕರೂ ಮತ್ತೆ ಸ್ಪರ್ಧಿಸಲು ವೇದಿಕೆ ಸಜ್ಜಾಗಿದೆ.

1.ಪದ್ಮನಾಭನಗರ: ಸಾಮ್ರಾಟ್‌ ಸಾಮ್ರಾಜ್ಯ ಭದ್ರ
ಕಂದಾಯ ಸಚಿವ ಆರ್‌.ಅಶೋಕ್‌ ಇಲ್ಲಿನ ಹಾಲಿ ಶಾಸಕರು. ಅಶೋಕ್‌ ಅವರು ಮತ್ತೊಮ್ಮೆ ಸ್ಪರ್ಧಿಸುವುದು ನಿಶ್ಚಿತವಾಗಿದೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೆಲ್ಲ ಸಚಿವರಾಗಿ ಅಧಿಕಾರ ನಡೆಸಿರುವ ಅಶೋಕ್‌ ಕ್ಷೇತ್ರದಲ್ಲಿ ಸಾಕಷ್ಟುಕೆಲಸವನ್ನೂ ಮಾಡಿದ್ದಾರೆ. ಅವರೊಂದಿಗೆ ಅಶೋಕ್‌ ಅವರ ಬೆಂಬಲಿಗರೇ ಆಗಿರುವ ಎಲ್‌.ಶ್ರೀನಿವಾಸ್‌, ಆಂಜನಪ್ಪ ಅವರು ಕೂಡ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಕಾಂಗ್ರೆಸ್‌ನಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗುರಪ್ಪ ನಾಯ್ಡು, ಬಿಬಿಎಂಪಿ ಮಾಜಿ ಮೇಯರ್‌ ಡಿ.ವೆಂಕಟೇಶಮೂರ್ತಿ, ಕೆಪಿಸಿಸಿ ಪದ್ಮನಾಭನಗರ ಬ್ಲಾಕ್‌ ಅಧ್ಯಕ್ಷ ರಘುನಾಥ್‌ ನಾಯ್ಡು, ಸಂಜಯ್‌ಗೌಡ ಅವರು ಪ್ರಮುಖ ಆಕಾಂಕ್ಷಿಗಳು. ಜೆಡಿಎಸ್‌ನಿಂದ ಇದುವರೆಗೆ ಪ್ರಮುಖ ಆಕಾಂಕ್ಷಿಗಳು ಹೊರಹೊಮ್ಮಿಲ್ಲ.

Ticket Fight: ಬೆಂಗಳೂರಲ್ಲಿ ಹಾಲಿ ಶಾಸಕರದ್ದೇ ಮೇಲುಗೈ

2.ಪುಲಿಕೇಶಿನಗರ (ಎಸ್‌ಸಿ): ಅಖಂಡ ಸ್ಥಾನಕ್ಕೆ ಪ್ರಸನ್ನಕುಮಾರ್‌ ಯತ್ನ
ಕಾಂಗ್ರೆಸ್‌ನ ಅಖಂಡ ಶ್ರೀನಿವಾಸಮೂರ್ತಿ ಹಾಲಿ ಶಾಸಕರು. ಆದರೆ, ಮಾಜಿ ಶಾಸಕ ಪ್ರಸನ್ನ ಕುಮಾರ್‌ ಕೂಡ ಈ ಕ್ಷೇತ್ರದ ಅಭ್ಯರ್ಥಿಯಾಗಲು ತೀವ್ರ ಪ್ರಯತ್ನ ನಡೆಸಿದ್ದಾರೆ. ಕಾಂಗ್ರೆಸ್‌ನ ಮಾಜಿ ಶಾಸಕ ಜೆಡಿಎಸ್‌ಗೆ ಹೋಗಿ ಮತ್ತೆ ಪಕ್ಷಕ್ಕೆ ಆಗಮಿಸಿದ್ದರೆ, ಜೆಡಿಎಸ್‌ ಶಾಸಕರಾಗಿದ್ದ ಅಖಂಡ ಶ್ರೀನಿವಾಸ ಮೂರ್ತಿ ಕಾಂಗ್ರೆಸ್‌ಗೆ ಬಂದು ಶಾಸಕರಾಗಿರುವವರು. ಇಬ್ಬರ ನಡುವೆ ಈ ಬಾರಿ ಪೈಪೋಟಿ ಇದೆ. ಬಿಜೆಪಿಯಿಂದ ಪ್ರಬಲ ಆಕಾಂಕ್ಷಿಗಳ ಕೊರತೆಯಿದೆ. ಆಮ್‌ ಆದ್ಮಿ ಪಕ್ಷದ ಮುಖಂಡ ಸುರೇಶ್‌ ರಾಥೋಡ್‌ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

3.ರಾಜಾಜಿನಗರ: ಸುರೇಶ್‌ಕುಮಾರ್‌ಗೆ ಎದುರಾಳಿ ಯಾರು?
ಬಿಜೆಪಿಯ ಮಾಜಿ ಸಚಿವ ಎಸ್‌.ಸುರೇಶ್‌ಕುಮಾರ್‌ ಇಲ್ಲಿನ ಶಾಸಕರು. ಸುರೇಶ್‌ಕುಮಾರ್‌ ಅವರು ಸಚಿವ ಸ್ಥಾನದಿಂದ ನಿರ್ಗಮಿಸಿದ ಬಳಿಕ ಕ್ಷೇತ್ರದಾದ್ಯಂತ ಮನೆ ಮನೆಗೆ ತೆರಳಿ ಮತದಾರರ ಜತೆ ನೇರವಾಗಿ ಮಾತುಕತೆ ನಡೆಸುವ ಕಾರ್ಯ ಆರಂಭಿಸಿದ್ದಾರೆ. ಅವರೇ ಮತ್ತೊಮ್ಮೆ ಅಭ್ಯರ್ಥಿಯಾಗುವುದು ಬಹುತೇಕ ನಿಶ್ಚಿತವಾಗಿದೆ. ಬೆಂಗಳೂರು ಕೇಂದ್ರ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಮಂಜುನಾಥ್‌ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಬ್ರಾಹ್ಮಣ ಮಹಾಸಭಾದ ಮುಖಂಡ ರಘು, ಮಾಜಿ ಶಾಸಕ ಹಾಗೂ ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ನೆ.ಲ.ನರೇಂದ್ರಬಾಬು ಅವರೂ ಟಿಕೆಟ್‌ ಬಯಸಿದ್ದಾರೆ. ಕಾಂಗ್ರೆಸ್‌ನಿಂದ ಒಕ್ಕಲಿಗ ಸಮುದಾಯದ ರಘುವೀರ್‌ ಗೌಡ ಪ್ರಬಲ ಆಕಾಂಕ್ಷಿ. ಜತೆಗೆ ಹಿಂದಿನ ಚುನಾವಣೆಯಲ್ಲಿ ಪ್ರಬಲ ಸ್ಪರ್ಧೆ ನೀಡಿದ್ದ ಬಿಬಿಎಂಪಿ ಮಾಜಿ ಮೇಯರ್‌ ಜಿ. ಪದ್ಮಾವತಿ, ಎಐಸಿಸಿ ವಕ್ತಾರರಾದ ಭವ್ಯ ನರಸಿಂಹಮೂರ್ತಿ, ಮಾಜಿ ಉಪಮೇಯರ್‌ ಲಿಂಗಾಯತ ಸಮುದಾಯದ ಪುಟ್ಟರಾಜು, ನಟ ಹಾಗೂ ನಿರ್ದೇಶಕ ಎಸ್‌. ನಾರಾಯಣ್‌ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಮೂರ್ತಿ ಅವರನ್ನು ಮುಂದಿನ ಚುನಾವಣೆಯ ಅಭ್ಯರ್ಥಿ ಎಂದು ಈಗಾಗಲೇ ಪಕ್ಷ ಘೋಷಿಸಿದೆ. ಆಮ್‌ ಆದ್ಮಿ ಪಕ್ಷದ ಮುಖಂಡ ನಾಗಣ್ಣ ಅವರು ಪಕ್ಷದ ಪ್ರಮುಖ ಆಕಾಂಕ್ಷಿಯಾಗಿ ಟಿಕೆಟ್‌ ಬಯಸಿದ್ದಾರೆ.

4.ರಾಜರಾಜೇಶ್ವರಿನಗರ: ಮುನಿರತ್ನಗೆ ಮತ್ತೆ ಕುಸುಮಾ ಎದುರಾಳಿ?
ತೋಟಗಾರಿಕಾ ಸಚಿವ ಬಿಜೆಪಿಯ ಮುನಿರತ್ನ ಅವರು ಇಲ್ಲಿನ ಶಾಸಕರು. ಕಳೆದ 2018ರ ಚುನಾವಣೆಯಲ್ಲಿ ಹಾಲಿ ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿರುವ ತುಳಸಿ ಮುನಿರಾಜುಗೌಡ ಅವರು ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ನಂತರ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಮುನಿರತ್ನ ಅವರು ವಲಸೆ ಬಿಜೆಪಿಗೆ ವಲಸೆ ಬಂದಿದ್ದರಿಂದ ಉಪಚುನಾವಣೆಯಲ್ಲಿ ಅವರೇ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ಮುಂದೆ ತುಳಸಿ ಮುನಿರಾಜುಗೌಡ ಅವರನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡಲಾಯಿತು. ಈಗ ಅವರೂ ಈ ಕ್ಷೇತ್ರದ ಟಿಕೆಟ್‌ ಬಗ್ಗೆ ಆಸಕ್ತಿ ತೋರಿಲ್ಲ. ಇನ್ನು ಕಳೆದ ಬಾರಿಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಡಿ.ಕೆ.ರವಿ ಪತ್ನಿ ಕುಸುಮಾ ಹನುಮಂತರಾಯಪ್ಪ ಈ ಬಾರಿಯೂ ಕೈ ಟಿಕೆಟ್‌ನ ಪ್ರಮುಖ ಆಕಾಂಕ್ಷಿ. ಅದೇ ರೀತಿ ಉಪಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿ.ಕೃಷ್ಣಮೂರ್ತಿ ಅವರು ಮತ್ತೊಮ್ಮೆ ಕಣಕ್ಕಿಳಿಯಲು ಬಯಸಿದ್ದಾರೆ.

5.ಸರ್ವಜ್ಞನಗರ: ಜಾರ್ಜ್‌ಗೆ ಆಮ್‌ ಆದ್ಮಿ ಪಕ್ಷ ಟಕ್ಕರ್‌
ಮಾಜಿ ಸಚಿವ ಕಾಂಗ್ರೆಸ್‌ನ ಕೆ.ಜೆ.ಜಾರ್ಜ್‌ ಇಲ್ಲಿ ಶಾಸಕರು. 2008ರಿಂದ ಸತತವಾಗಿ ಶಾಸಕರಾಗಿ ಆಯ್ಕೆಯಾಗುತ್ತಿರುವ ಜಾರ್ಜ್‌ ಮತ್ತೊಮ್ಮೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ನಿಚ್ಚಳವಾಗಿದೆ. ಬಿಜೆಪಿಯಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಪದ್ಮನಾಭ ರೆಡ್ಡಿ, ಬಿಬಿಎಂಪಿ ಮಾಜಿ ಸದಸ್ಯರಾದ ಎಂ.ಸಿ.ಶ್ರೀನಿವಾಸ್‌, ಗೋವಿಂದರಾಜು ಕೂಡ ಟಿಕೆಟ್‌ ಬಯಸಿದ್ದಾರೆ. ಜೆಡಿಎಸ್‌ನಿಂದ ಪ್ರಮುಖ ಆಕಾಂಕ್ಷಿಗಳಿಲ್ಲ. ಆಮ್‌ ಆದ್ಮಿ ಪಕ್ಷದಿಂದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಈ ಕ್ಷೇತ್ರದಿಂದ ಕಣಕ್ಕಿಳಿಯುವುದು ನಿಶ್ಚಿತವಾಗಿದ್ದು, ಕಳೆದ ಹಲವು ತಿಂಗಳುಗಳಿಂದ ತಯಾರಿ ನಡೆಸಿದ್ದಾರೆ. ಕ್ಷೇತ್ರದ ಜನರ ಮನೆ-ಮನ ತಲುಪುವ ಪ್ರಯತ್ನ ಮಾಡುತ್ತಿದ್ದಾರೆ.

6.ಶಾಂತಿನಗರ: ಹ್ಯಾರಿಸ್‌ ಗೆಲುವು ನಿಯಂತ್ರಿಸಲು ಬಿಜೆಪಿ ಯತ್ನ
ಕಾಂಗ್ರೆಸ್‌ನ ಎನ್‌.ಎ.ಹ್ಯಾರಿಸ್‌ ಇಲ್ಲಿನ ಶಾಸಕರು. 2008ರಿಂದ ಸತತವಾಗಿ ಮೂರು ಬಾರಿ ಶಾಸಕರಾಗಿರುವ ಹ್ಯಾರಿಸ್‌ ಮತ್ತೊಮ್ಮೆ ಕಣಕ್ಕಿಳಿಯಲಿದ್ದಾರೆ. ಅವರ ಗೆಲುವನ್ನು ನಿಯಂತ್ರಿಸಲು ಬಿಜೆಪಿ ಸತತವಾಗಿ ಪ್ರಯತ್ನ ನಡೆಸಿದರೂ ಇದುವರೆಗೆ ಯಶಸ್ವಿಯಾಗಿಲ್ಲ. ಕಳೆದ ಬಾರಿ ಬಿಜೆಪಿಯಿಂದ ವಾಸುದೇವಮೂರ್ತಿ ಸ್ಪರ್ಧಿಸಿ ಪೈಪೋಟಿ ನೀಡುವ ಪ್ರಯತ್ನ ಮಾಡಿದರೂ ಸಫಲವಾಗಲಿಲ್ಲ. ಈ ಬಾರಿಯೂ ವಾಸದೇವಮೂರ್ತಿ ಆಕಾಂಕ್ಷಿಯಾಗಿದ್ದಾರೆ. ಅವರೊಂದಿಗೆ ಮಾಜಿ ಮೇಯರ್‌ ಗೌತಮ್‌ ಕೂಡ ಬಿಜೆಪಿ ಟಿಕೆಟ್‌ಗೆ ಪ್ರಬಲ ಆಸೆ ಹೊಂದಿದ್ದಾರೆ. ಜೆಡಿಎಸ್‌ನಿಂದ ಆಕಾಂಕ್ಷಿಗಳು ಕಂಡು ಬರುತ್ತಿಲ್ಲ. ಆಮ್‌ ಆದ್ಮಿ ಪಕ್ಷದಿಂದ ದಕ್ಷ ಹಾಗೂ ಸರಳ ಅಧಿಕಾರಿ ಎಂಬ ಖ್ಯಾತಿ ಗಳಿಸಿದ್ದ ಮಾಜಿ ಕೆಎಎಸ್‌ ಅಧಿಕಾರಿ ಕೆ.ಮಥಾಯಿ ಸ್ಪರ್ಧಿಸುವ ಸಾಧ್ಯತೆಯಿದ್ದು, ಸಿದ್ಧತೆಯನ್ನೂ ಆರಂಭಿಸಿದ್ದಾರೆ.

7.ಶಿವಾಜಿನಗರ: ರಿಜ್ವಾನ್‌ ಮತ್ತೊಮ್ಮೆ ಕಣಕ್ಕೆ ಸಜ್ಜು
ಕಾಂಗ್ರೆಸ್‌ನ ರಿಜ್ವಾನ್‌ ಅರ್ಷದ್‌ ಇಲ್ಲಿನ ಶಾಸಕರು. ಹಾಲಿ ಶಾಸಕ ರಿಜ್ವಾನ್‌ ಅರ್ಷದ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪರಮೇಶ್ವರ್‌ ಬೆಂಬಲಿಗ ಎಸ್‌.ಎ. ಹುಸೇನ್‌ ಟಿಕೆಟ್‌ ಆಕಾಂಕ್ಷಿಗಳು. ಆದರೆ, ರಿಜ್ವಾನ್‌ ಅವರೇ ಅಭ್ಯರ್ಥಿಯಾಗುವುದು ಬಹುತೇಕ ನಿಶ್ಚಿತವಾಗಿದೆ. ಬಿಜೆಪಿಯಿಂದ ಬಿಬಿಎಂಪಿ ಮಾಜಿ ಸದಸ್ಯರಾದ ಚಂದ್ರಶೇಖರ್‌, ಗೋಪಿ ಪ್ರಮುಖ ಆಕಾಂಕ್ಷಿಗಳು. ಜೆಡಿಎಸ್‌, ಆಮ್‌ ಆದ್ಮಿ ಪಕ್ಷ ಸೇರಿದಂತೆ ಇತರ ಪಕ್ಷಗಳಿಂದ ಪ್ರಬಲ ಆಕಾಂಕ್ಷಿಗಳು ಕಂಡು ಬರುತ್ತಿಲ್ಲ.

8.ವಿಜಯನಗರ: ಕೃಷ್ಣಪ್ಪಗೆ ಉಮೇಶ್‌ ಶೆಟ್ಟಿ ಪೈಪೋಟಿ?
ಕಾಂಗ್ರೆಸ್‌ನ ಎಂ.ಕೃಷ್ಣಪ್ಪ ಇಲ್ಲಿನ ಹಾಲಿ ಶಾಸಕರು. 2008 ರಿಂದ ಮೂರು ಬಾರಿ ಶಾಸಕರಾಗಿರುವ ಕೃಷ್ಣಪ್ಪ ಈ ಬಾರಿಯೂ ಕೈ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ನಿಚ್ಚಳವಾಗಿದೆ. ಬಿಜೆಪಿಯಿಂದ ಬಿಬಿಎಂಪಿ ಮಾಜಿ ಸದಸ್ಯ ಉಮೇಶ್‌ ಶೆಟ್ಟಿ, ಕಳೆದ ಬಾರಿ ಸ್ಪರ್ಧಿಸಿ ಸೋಲುಂಡಿದ್ದ ರವೀಂದ್ರ ಅವರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಇವರಿಬ್ಬರ ಪೈಕಿ ಉಮೇಶ್‌ ಶೆಟ್ಟಿಪರ ಸಂಘ ಪರಿವಾರ ಒಲವು ತೋರಿದೆ. ಅಂತಿಮವಾಗಿ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ನಿರ್ಧರಿಸುವಲ್ಲಿ ಸೋಮಣ್ಣ ಅವರ ಮಾತೇ ನಡೆಯಲಿದೆ. ಆಮ್‌ ಆದ್ಮಿ ಪಕ್ಷದಿಂದ ರಮೇಶ್‌ ಬೆಲ್ಲಂಕೊಂಡ ಕಣಕ್ಕಿಳಿಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

Ticket Fight: ಬೆಂಗಳೂರಲ್ಲಿ ಉದ್ಭವಿಸ್ತಾರಾ ಅಚ್ಚರಿ ಅಭ್ಯರ್ಥಿಗಳು?

9.ಯಲಹಂಕ: ವಿಶ್ವನಾಥ್‌ಗೆ ಎದುರಾಳಿಗಳ ಕೊರತೆ
ಬಿಡಿಎ ಅಧ್ಯಕ್ಷರೂ ಆಗಿರುವ ಬಿಜೆಪಿಯ ಎಸ್‌.ಆರ್‌.ವಿಶ್ವನಾಥ್‌ ಇಲ್ಲಿನ ಶಾಸಕರು. ಬಿಜೆಪಿಯಲ್ಲಿ ಇತರ ಆಕಾಂಕ್ಷಿಗಳಿಲ್ಲ. ಅಭಿವೃದ್ಧಿ ಕೆಲಸಗಳ ಮೂಲಕ ಗುರುತಿಸಿಕೊಂಡಿರುವ ವಿಶ್ವನಾಥ್‌ ಮತ್ತೊಮ್ಮೆ ಸ್ಪರ್ಧಿಸುವುದು ನಿಶ್ಚಿತ. ಕಳೆದ 2018ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಎಂ.ಎನ್‌. ಗೋಪಾಲಕೃಷ್ಣ ಈ ಬಾರಿಯೂ ಆ ಪಕ್ಷದ ಆಕಾಂಕ್ಷಿ. ಕೇಶವ ರಾಜಣ್ಣ ಎಂಬ ಹೊಸ ಮುಖವೂ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ. ಅವರ ತಂದೆ ಸರ್ವಜ್ಞನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಹಿಂದೊಮ್ಮೆ ಶಾಸಕರಾಗಿದ್ದರು. ಹಾಲಿನ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಹಾಗೂ ಡಿ.ಕೆ. ಶಿವಕುಮಾರ್‌ ಬೆಂಬಲವಿರುವ ಕೇಶವ ರಾಜಣ್ಣ ಈ ಬಾರಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಯಶವಂತಪುರ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ನಾಗರಾಜು ಈ ಬಾರಿ ಯಲಹಂಕದಿಂದ ಸ್ಪರ್ಧಿಸಲು ಬಯಸಿದ್ದಾರೆ. ಜೆಡಿಎಸ್‌ನಿಂದ ಇ.ಕೃಷ್ಣಪ್ಪ ಹಾಗೂ ಹನುಮಂತೇಗೌಡ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.

10.ಯಶವಂತಪುರ: ಸೋಮಶೇಖರ್‌ಗೆ ಯಾರು ಎದುರಾಳಿ?
ಬಿಜೆಪಿಯ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಇಲ್ಲಿನ ಶಾಸಕರು. ಕಳೆದ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದ ಸೋಮಶೇಖರ್‌ ನಂತರ ನಡೆದ ಬೆಳವಣಿಗೆಯಲ್ಲಿ ಬಿಜೆಪಿಗೆ ವಲಸೆ ಬಂದು ಉಪಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದರು. ಅವರೇ ಮತ್ತೊಮ್ಮೆ ಬಿಜೆಪಿಯಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಉತ್ತರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ರಾಜ್‌ಕುಮಾರ್‌ ಮಗ ಕೃಷ್ಣ ರಾಜು, ನಟಿ ಭಾವನಾ, ಬಾಲರಾಜ ಗೌಡ ಎಂಬುವವರು ಕಾಂಗ್ರೆಸ್‌ ಪಕ್ಷದ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್‌ನಿಂದ ಜವರಾಯಿಗೌಡ ಪ್ರಮುಖ ಆಕಾಂಕ್ಷಿ. ಆಮ್‌ ಆದ್ಮಿ ಪಕ್ಷದಿಂದ ಶಶಿಧರ್‌ ಆರಾಧ್ಯ ಸ್ಪರ್ಧಿಸಲು ಆಸಕ್ತಿ ತೋರಿ ಕೆಲಸ ಆರಂಭಿಸಿದ್ದಾರೆ.