ಬೆಳಗಾವಿ ಲೋಕಸಭಾ ಬೈ ಎಲೆಕ್ಷನ್: ಬಿಜೆಪಿಯಲ್ಲಿ ತೇಲಿಬಂದ ಅಚ್ಚರಿ ಹೆಸರುಗಳು!
ರಾಜ್ಯದಲ್ಲಿ ಉಪಚುನಾವಣೆ ರಾಜಕೀಯ ಜೋರಾಗಿದ್ದು, ಟಿಕೆಟ್‌ಗಾಗಿ ಭಾರೀ ಪೈಪೋಟಿ ಶುರುವಾಗಿದೆ. ಟಿಕೆಟ್ ಆಕಾಂಕ್ಷಿಗಳು ಭರ್ಜರಿ ಲಾಬಿ ನಡೆಸುತ್ತಿದ್ದಾರೆ.
ಬೆಳಗಾವಿ, (ಮಾ.19): ರಾಜ್ಯದಲ್ಲಿ ಎರಡು ವಿಧಾನಸಭಾ ಹಾಗೂ ಒಂದು ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು, ಏಪ್ರಿಲ್ 17 ಮತದಾನ ನಡೆಯಲಿದೆ. ಮತ್ತೊಂದೆಡೆ ಟಿಕೆಟ್ ಫೈಟ್ ಸಹ ಜೋರಾಗಿದೆ.
ಕ್ಷೇತ್ರದ ಲೋಕಸಭಾ ಉಪಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ನಾಯಕರ ನಡುವೆ ಪೈಪೋಟಿ ಆರಂಭವಾಗಿದೆ. ಕಾಂಗ್ರೆಸ್ ಈಗಾಲೇ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಹೊರತುಪಡಿಸಿ ಇನ್ನುಳಿದಂತೆ ಸಿಂಧಗಿ, ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ.
ಆದ್ರೆ, ಬಿಜೆಪಿಯಲ್ಲಿ ಟಿಕೆಟ್ ಫೈಟ್ ಜೋರಾಗಿದೆ. ಅದರಲ್ಲೂ ಬೆಳಗಾವಿ ಲೋಕಸಭಾ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆದಿದೆ. ಈ ಮೊದಲು ಸುರೇಶ್ ಅಂಗಡಿ ಅವರ ಪುತ್ರಿ, ಜಗದೀಶ್ ಶೆಟ್ಟರ್ ಅವರ ಸೊಸೆ ಶ್ರದ್ಧಾ ಅವರ ಹೆರಸು ಮುಂಚೂಣೆಯಲ್ಲಿದೆ. ಇದರ ಜೊತೆಗೆ ಪ್ರಭಾಕರ್ ಕೋರೆ, ಪ್ರಮೋದ್ ಮುತಾಲಿಕ್, ರಮೇಶ್ ಕತ್ತಿ ಸಹ ರೇಸ್‌ನಲ್ಲಿದ್ದಾರೆ. ಇವರೆಲ್ಲರ ನಡುವೆ ಇನ್ನೂ ಕೆಲ ಅಚ್ಚರಿ ಹೆಸರುಗಳು ತೇಲಿಬಂದಿವೆ.
CD ಕೇಸ್: ರಮೇಶ್ ಜಾರಕಿಹೊಳಿಗೆ ಮತ್ತೊಂದು ಬಿಗ್ ಶಾಕ್ ಕೊಟ್ಟ ಬಿಜೆಪಿ
ಅಚ್ಚರಿ ಹೆಸರುಗಳು
ಬೆಳಗಾವಿ ಲೋಕಸಭಾ ಬೈ ಎಲೆಕ್ಷನ್ ಟಿಕೆಟ್‌ಗಾಗಿ ಮೂರು ವೈದ್ಯರು ಬಿಗ್ ಫೈಟ್ ನಡೆಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಡಾ.ಗಿರೀಶ್ ಸೋನಾಲ್ಕರ್, ಡಾ. ರವಿ ಪಾಟೀಲ್ ಹಾಗೂ ಡಾ.ವಿಶ್ವನಾಥ ಪಾಟೀಲ್ ನಡುವೆ ನಡುವೆ ಬಿಜೆಪಿ ಟಿಕೆಟ್‌ಗಾಗಿ ಜಂಗಿ ಕುಸ್ತಿ ಆರಂಭವಾಗಿದೆ.
ಡಾ.ವಿಶ್ವನಾಥ ಪಾಟೀಲ್ ಹಾಗೂ ಡಾ. ರವಿ ಪಾಟೀಲ್ ಕ್ಷೇತ್ರದಲ್ಲಿ ಪ್ರಬಲ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದ್ದವರಾಗಿದ್ದಾರೆ. ಇನ್ನೂ ಡಾ.ಗಿರೀಶ್ ಸೋನಾಲ್ಕರ್ ಲಿಂಗಾಯತ ರೆಡ್ಡಿ ಅವರು ಲಿಂಗಾಯತ ರೆಡ್ಡಿ ಸಮುದಾಯಕ್ಕೆ ಸೇರಿದ್ದಾರೆ.
ಕರ್ನಾಟಕದ 3 ಕ್ಷೇತ್ರಗಳ ಉಪಚುನಾವಣೆಗಳಿಗೆ ದಿನಾಂಕ ಘೋಷಣೆ
ಮೂವರು ಟಿಕೆಟ್ ಪಡೆಯಲು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಲಿಂಗಾಯತ ಪಂಚಮಸಾಲಿ ಸ್ವಾಮೀಜಿಗಳ ಮೂಲಕ ಡಾ.ರವಿ ಪಾಟೀಲ್ ಲಾಭಿ ನಡೆಸುತ್ತಿದ್ದರಂತೆ. ಇತ್ತ ಸಿಎಂ ಬಿ.ಎಸ್.ಯಡಿಯೂರಪ್ಪ ಮೂಲಕ ಡಾ.ವಿಶ್ವನಾಥ ಪಾಟೀಲ ಒತ್ತಡ ಹಾಕುವ ತಂತ್ರ ಹಾಗೂ ಡಾ.ಗಿರೀಶ್ ಅವರು ಸಂಘದ ನಾಯಕರ ಮೂಲಕ ಟಿಕೆಟ್‌ಗಾಗಿ ಹೈಕಮಾಂಡ್ ಎದುರು ಮನವಿ ಸಲ್ಲಿಸಿದ್ದಾರಂತೆ.
ಇದೆಲ್ಲದರ ನಡುವೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕೂಡ ಹಿಂದುತ್ವದ ಆಧಾರದಲ್ಲಿ ಬಿಜೆಪಿ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾರೆ. ಟಿಕೆಟ್‌ಗಾಗಿ ಹೈಕಮಾಂಡ್‌ನಲ್ಲಿ ಲಾಬಿ ನಡೆಸಿದ್ದಾರೆ.
ಸದ್ಯ ಬೆಳಗಾವಿ ಲೋಕಸಭಾ ಟಿಕೆಟ್‌ಗಾಗಿ ಭಾರೀ ಪೈಪೋಟಿ ನಡೆದಿದ್ದು, ಅಂತಿಮವಾಗಿ ಯಾರ ಕೈಗೆ ಟಿಕೆಟ್ ಸಿಗಲಿದೆ ಎಂಬ ಕುತೂಹಲ ಮೂಡಿಸಿದೆ.