Asianet Suvarna News Asianet Suvarna News

Karnataka Assembly Elections 2023: ಟಿಕೆಟ್‌ ಆಕಾಂಕ್ಷಿಗಳಲ್ಲಿ ಶುರುವಾಯ್ತು ತಳಮಳ..!

ಟಿಕೆಟ್‌ ಫೈಟ್‌: ಕಾಂಗ್ರೆಸ್‌ನ 5 ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿ ಘೋಷಣೆ ಬಾಕಿ, ಕಮಲ ಆಕಾಂಕ್ಷಿಗಳಲ್ಲಿದೆ ಆತಂಕ. 

Ticket Aspirants Began to Agitation of Karnataka Assembly Elections 2023 grg
Author
First Published Apr 8, 2023, 8:33 PM IST

ಶ್ರೀಶೈಲ ಮಠದ

ಬೆಳಗಾವಿ(ಏ.08): ಗಡಿ ಜಿಲ್ಲೆ ಬೆಳಗಾವಿಯಲ್ಲಿ ಚುನಾವಣೆ ಕಾವು ಹೆಚ್ಚಾಗುತ್ತಿದೆ. ಬಿಜೆಪಿ, ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಆಕಾಂಕ್ಷಿತರಲ್ಲಿ ತಳಮಳ ಶುರುವಾಗಿದೆ. ಈಗಾಗಲೇ ಕಾಂಗ್ರೆಸ್‌ ಮೊದಲ ಪಟ್ಟಿಯಲ್ಲಿ 9, 2ನೇ ಪಟ್ಟಿಯಲ್ಲಿ 4 ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಮಾಡಿದೆ. ಬಿಜೆಪಿ ಇನ್ನೂ ಮೊದಲ ಪಟ್ಟಿಯ ಅಂತಿಮ ಸಿದ್ಧತೆಯಲ್ಲಿ ತೊಡಗಿದೆ. ಕಾಂಗ್ರೆಸ್‌ 3ನೇ ಪಟ್ಟಿ ಬರಬೇಕಿದೆ. ಕಾಂಗ್ರೆಸ್‌, ಬಿಜೆಪಿ ಆಕಾಂಕ್ಷಿ ಅಭ್ಯರ್ಥಿಗಳಲ್ಲಿ ತಳಮಳ ಶುರುವಾಗಿದೆ. ಟಿಕೆಟ್‌ ಯಾರಿಗೆ ಸಿಗುತ್ತದೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ.

ಕಾಂಗ್ರೆಸ್‌ ಮೊದಲ ಪಟ್ಟಿಯಲ್ಲಿ ಬೆಳಗಾವಿ ಗ್ರಾಮೀಣ, ಖಾನಾಪುರ, ಯಮಕನಮರಡಿ, ರಾಮದುರ್ಗ, ಕುಡಚಿ, ಚಿಕ್ಕೋಡಿ ಸದಲಗಾ, ಬೈಲಹೊಂಗಲದಲ್ಲಿ ಹಾಲಿ, ಮಾಜಿ ಶಾಸಕರಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ. ಆದರೆ, ಉಳಿದ 5 ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆಯಾಗಬೇಕಿದೆ. ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಅರಬಾವಿ, ರಾಯಬಾಗ, ಅಥಣಿ ಹೀಗೆ 5 ಕ್ಷೇತ್ರಗಳಲ್ಲಿ ಟಿಕೆಟ್‌ ಘೋಷಣೆ ಕಗ್ಗಂಟಾಗಿದೆ. ಹಾಗಾಗಿ, ಟಿಕೆಟ್‌ ಆಕಾಂಕ್ಷಿ ಅಭ್ಯರ್ಥಿಗಳಲ್ಲಿ ತಳಮಳ ಉಂಟಾಗಿದೆ. ಬಿಜೆಪಿಯಲ್ಲೂ ಇದಕ್ಕಿಂತ ಭಿನ್ನ ಪರಿಸ್ಥಿತಿ ಇಲ್ಲ. ಬಿಜೆಪಿಯಲ್ಲಿಯೂ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದು ಸಹಜವಾಗಿ ಹಾಲಿ ಶಾಸಕರಿಗೆ ಟಿಕೆಟ್‌ ಸಿಗುವುದು ಖಚಿತವಾಗಿಲ್ಲ.

KARNATAKA ELECTION 2023: ಸಾಹುಕಾರನ ಮರಾಠಾ ಅಸ್ತ್ರಕ್ಕೆ ಹೆಬ್ಬಾಳ್ಕರ್ ಪಂಚಮಸಾಲಿ ಪ್ರತ್ಯಾಸ್ತ್ರ!

ಪ್ರಮುಖವಾಗಿ ಬಿಜೆಪಿಯಲ್ಲಿ ಅಥಣಿ ಕ್ಷೇತ್ರದ ಟಿಕೆಟ್‌ ಕಗ್ಗಂಟಾಗಿ ಪರಿಣಿಸಿದೆ. ಹಾಲಿ ಶಾಸಕ ಮಹೇಶ ಕುಮಟಳ್ಳಿ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ನಡುವೆ ಟಿಕೆಟ್‌ ಫೈಟ್‌ ನಡೆದಿದೆ. ಆದರೆ, ಇದನ್ನು ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಮಹೇಶ ಕುಮಟಳ್ಳಿ ಅವರಿಗೆ ಟಿಕೆಟ್‌ ಕೊಡಲೇಬೇಕು ಎಂದು ರಮೇಶ ಪಟ್ಟು ಹಿಡಿದಿದ್ದಾರೆ. ಅಲ್ಲದೇ, ಬೆಳಗಾವಿ ಗ್ರಾಮೀಣದಲ್ಲೂ ತಮ್ಮ ಬೆಂಬಲಿತ ಅಭ್ಯರ್ಥಿಗೆ ಟಿಕೆಟ್‌ ನೀಡುವಂತೆ ರಮೇಶ ಜಾರಕಿಹೊಳಿ ಪಟ್ಟುಹಿಡಿದಿದ್ದಾರೆ. ಬಿಜೆಪಿ ಹೈಕಮಾಂಡ್‌ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ, ರಾಯಬಾಗ, ಖಾನಾಪುರ ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳವಾಗಿರುವುದು ಬಿಜೆಪಿ ಹೈಕಮಾಂಡ್‌ಗೆ ತಲೆನೋವಾಗಿದೆ. ರಾಯಬಾಗದ ಹಾಲಿ ಶಾಸಕ ದುರ್ಯೋಧನ ಐಹೊಳೆ ಅವರಿಗೆ ಬಹುತೇಕ ಟಿಕೆಟ್‌ ಖಚಿತ ಎನ್ನಲಾಗಿದೆ. ಆದರೆ, ಅಂತಿಮ ನಿರ್ಧಾರ ಬಿಜೆಪಿ ಹೈಕಮಾಂಡ್‌ಗೆ ಬಿಡಲಾಗಿದೆ. ಇದೆ ಕ್ಷೇತ್ರಕ್ಕಾಗಿ ಬಿಜೆಪಿ ಟಿಕೆಟ್‌ಗಾಗಿ ಸಿದ್ದಾರ್ಥ ವಾಡೆನ್ನವರ ಪೈಪೋಟಿ ನಡೆಸುತ್ತಿದ್ದಾರೆ. ಬಿಜೆಪಿ ಕೋರ್‌ ಕಮೀಟಿ ಸಭೆಯಲ್ಲಿಯೂ ವಾಡೆನ್ನವರ ಹೆಸರು ಪ್ರಸ್ತಾಪವಾಗಿದೆ.

ಕಾಂಗ್ರೆಸ್‌ನಲ್ಲಿಯೂ ಟಿಕೆಟ್‌ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಹಾವೀರ ಮೋಹಿತೆ, ಶಂಭು ಕಲ್ಲೋಳಕರ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿವೆ. ಆದರೆ, ಇಲ್ಲಿ ಯಾರಿಗೆ ಟಿಕೆಟ್‌ ಘೋಷಣೆ ಮಾಡಿದರೂ ಬಂಡಾಯದ ಭೀತಿ ಪಕ್ಷವನ್ನು ಕಾಡುತ್ತಿದೆ.

ರಾಮದುರ್ಗ ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್‌ ತನ್ನ ಅಭ್ಯರ್ಥಿ ಘೋಷಣೆ ಮಾಡಿದೆ. ಮಾಜಿ ಶಾಸಕ ಅಶೋಕ ಪಟ್ಟಣ ಅವರಿಗೆ ಟಿಕೆಟ್‌ ಘೋಷಿಸಿದೆ. ಆದರೆ, ಹಾಲಿ ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ ಟಿಕೆಟ್‌ ಸಿಗುವ ಸಾಧ್ಯತೆ ಹೆಚ್ಚಿದೆ. ಇವರ ಜತೆಗೆ ಅವರ ಸಹೋದರ ಮಲ್ಲಣ್ಣ ಯಾದವಾಡ, ರಮೇಶ ದೇಶಪಾಂಡೆ, ಪಿ.ಎಫ್‌.ಪಾಟೀಲ, ವಿಜಯ ಗುಡದಾರಿ ಬಿಜೆಪಿ ಟಿಕೆಟ್‌ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಚನ್ನಮ್ಮನ ಕಿತ್ತೂರಿನಲ್ಲಿ ಬಾಬಾಸಾಹೇಬ ಪಾಟೀಲಗೆ ಕಾಂಗ್ರೆಸ್‌ ಟಿಕೆಟ್‌ ಘೋಷಿಸಲಾಗಿದೆ. ಇಲ್ಲಿ ಕಾಂಗ್ರೆಸ್‌ ಟಿಕೆಟ್‌ ಫೈಟ್‌ ಜೋರಾಗಿತ್ತು. ಮಾಜಿ ಸಚಿವ ಡಿ.ಬಿ.ಇನಾಮದಾರ ಅವರ ಸೊಸೆ ಲಕ್ಷ್ಮೇ ಇನಾಮದಾರ ಅವರಿಗೆ ಟಿಕೆಟ್‌ ನೀಡುವಂತೆ ಅವರ ಬೆಂಬಲಿಗರು ಪಟ್ಟು ಹಿಡಿದಿದ್ದಾರೆ. ಇಲ್ಲಿ ಬಂಡಾಯದ ಭೀತಿ ಹೆಚ್ಚಳವಾಗಿದೆ. ಬಿಜೆಪಿ ಹಾದಿ ಸುಗಮವಾಗಿದ್ದು, ಹಾಲಿ ಶಾಸಕ ಮಹಾಂತೇಶ ದೊಡ್ಡಗೌಡರ ಅವರಿಗೆ ಬಹುತೇಕ ಟಿಕೆಟ್‌ ಸಿಗಲಿದೆ. ಜಗದೀಶ ಹಾರುಗೊಪ್ಪ ಇಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

ಲಿಂಗಾಯತರಿಗೆ ಹೆಚ್ಚು ಟಿಕೆಟ್‌ ನೀಡಿ:

ಬೆಳಗಾವಿ ಉತ್ತರ ಮತ್ತು ಬೆಳಗಾವಿ ದಕ್ಷಿಣದಲ್ಲಿ ಕಾಂಗ್ರೆಸ್‌, ಬಿಜೆಪಿಯಲ್ಲಿ ಲಿಂಗಾಯತ ಸಮುದಾಯದ ಅಭ್ಯರ್ಥಿಗೆ ಟಿಕೆಟ್‌ ನೀಡಬೇಕೆನ್ನುವ ಬೇಡಿಕೆ ಪ್ರಬಲವಾಗಿ ಕೇಳಿಬರುತ್ತಿದೆ. ಬೆಳಗಾವಿ ಉತ್ತರದಲ್ಲಿ ಬಿಜೆಪಿಯ ಹಾಲಿ ಶಾಸಕ ಅನಿಲ ಬೆನಕೆ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಇವರ ಜೊತೆಗೆ ಮುರಗೇಂದ್ರಗೌಡ ಪಾಟೀಲ, ಡಾ.ರವಿ ಪಾಟೀಲ ಕೂಡ ಪ್ರಬಲ ಆಕಾಂಕ್ಷಿಗಳು. ಕಾಂಗ್ರೆಸ್‌ನಲ್ಲಿಯೂ ಮಾಜಿ ಶಾಸಕ ಫಿರೋಜ್‌ ಸೇಠ್‌, ಅವರ ಸಹೋದರ ರಾಜು ಸೇಠ್‌, ವಿನಯ ನಾವಲಗಟ್ಟಿಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿವೆ. ಬೆಳಗಾವಿ ದಕ್ಷಿಣದಲ್ಲಿ ಬಿಜೆಪಿ ಹಾಲಿ ಶಾಸಕ ಅಭಯ ಪಾಟೀಲ ಮರು ಚುನಾವಣೆಗೆ ಬಯಸಿ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಕಿರಣ ಜಾಧವ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಶಾಸಕರಾಗಿದ್ದ ದಿ. ಆನಂದ ಮಾಮನಿ ಅವರ ಪತ್ನಿ ರತ್ನಾ ಮಾಮನಿ, ವಿರೂಪಾಕ್ಷ ಮಾಮನಿ, ರುದ್ರಣ್ಣ ಚಂದರಗಿ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ವಿಶ್ವಾಸ ವೈದ್ಯ ಕಾಂಗ್ರೆಸ್‌ ಟಿಕೆಟ್‌ ಘೋಷಿಸಲಾಗಿದೆ. ಈಗಾಗಲೇ ಹಲವಾರು ರಾಜಕೀಯ ಲೆಕ್ಕಾಚಾರಗಳು ನಡೆಯುತ್ತಿವೆ. ಭಿನ್ನಮತ, ಬಂಡಾಯ, ಬಣ ರಾಜಕೀಯ ಸ್ಪೋಟವಾಗುವ ಸಾಧ್ಯತೆ ಇದೆ. ಹಾಗಾಗಿ, ಎರಡೂ ಪಕ್ಷದಲ್ಲಿ ಅಭ್ಯರ್ಥಿ ಹೆಸರು ಘೋಷಣೆ ವಿಳಂಬವಾಗುತ್ತಿದೆ. ಕೊನೆ ಕ್ಷಣದಲ್ಲಿ ಟಿಕೆಟ್‌ ಘೋಷಿಸುವ ಸಾಧ್ಯತೆಗಳಿವೆ.

ಬೆಳಗಾವಿ: ದಾಖಲೆಯಿಲ್ಲದೆ ಸಾಗಿಸುತ್ತಿದ್ದ 3.5 ಕೋಟಿ ಹಣ ವಶ

ಜಿಲ್ಲೆಯ ಹಾಲಿ ಬಿಜೆಪಿ ಶಾಸಕರಿಗೂ ಈಗ ಟಿಕೆಟ್‌ ಸಿಗುತ್ತದೆಯೋ ಇಲ್ಲವೋ ಎಂಬ ಕುರಿತು ಆತಂಕ ಶುರುವಾಗಿದೆ. ಯಾರಿಗೆ ಟಿಕೆಟ್‌ ಸಿಗಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಈಗಾಗಲೇ ಕಾಂಗ್ರೆಸ್‌ ಹಲವು ಆಕಾಂಕ್ಷಿಗಳು ಹಾಗೂ ಬಿಜೆಪಿ ಆಕಾಂಕ್ಷಿಗಳು ಬೆಂಗಳೂರು ಹಾಗೂ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ತಮ್ಮ ನಾಯಕರ ಮೂಲಕ ಟಿಕೆಟ್‌ಗಾಗಿ ಕೊನೆಯ ಹಂತದ ಕಸರತ್ತು ನಡೆಸುತ್ತಿದ್ದಾರೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Follow Us:
Download App:
  • android
  • ios