2008, 2103, 2018ರ ರೀತಿಯ ಯಾವುದೇ ಅಲೆಯೂ ಈ ಬಾರಿ ರಾಜ್ಯದಲ್ಲಿ ಇಲ್ಲ, ಅಲೆ ರೂಪ ಪಡೆಯಲು ವಿಫಲವಾದ ಕಾಂಗ್ರೆಸ್‌ನ 40 ಪರ್ಸೆಂಟ್‌ ಸರ್ಕಾರ ಆರೋಪ.

ಬೆಂಗಳೂರು(ಏ.15): ಕನಾರ್ಟಕದ ಚುನಾವಣೆಗಳು ಸಾಮಾನ್ಯವಾಗಿ ಒಂದು ಅಲೆಯ ಆಧಾರದ ಮೇಲೆ ನಡೆಯುತ್ತದೆ. ಆದರೆ, ಈ ಬಾರಿಯ ವಿಶೇಷತೆಯೆಂದರೆ ಭಾರಿಯೆನಿಸುವ ಅಲೆ ಇಲ್ಲದ ಚುನಾವಣೆಯಿದು ಎಂದು ಸಮೀಕ್ಷೆ ಅಭಿಪ್ರಾಯ ಪಟ್ಟಿದೆ.

2018ರ ವಿಧಾನಸಭಾ ಚುನಾವಣೆ ವೇಳೆ ಸಿದ್ದರಾಮಯ್ಯ ಅವರ ಸರ್ಕಾರದ ವಿರುದ್ಧ ಪ್ರಬಲ ಆಡಳಿತ ವಿರೋಧಿ ಅಲೆಯೇನೂ ಇರಲಿಲ್ಲವಾದರೂ ಧರ್ಮ ವಿಭಜನೆ ವಿಚಾರ ಲಿಂಗಾಯತ ಪ್ರಾಬಲ್ಯದ ಪ್ರದೇಶಗಳಲ್ಲಿ ವಿರೋಧಿ ಅಲೆ ಸೃಷ್ಟಿಯಾಗಿತ್ತು. 2013ರ ಚುನಾವಣೆಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಮೂರು ಮುಖ್ಯಮಂತ್ರಿಗಳನ್ನು ಕಂಡು ಪಕ್ಷ ವಿಭಜನೆಯಾಗಿ ಯಡಿಯೂರಪ್ಪ ಕೆಜೆಪಿ ಹಾಗೂ ಶ್ರೀರಾಮುಲು ಅವರ ಬಿಎಸ್‌ಆರ್‌ ಪಕ್ಷ ಸ್ಥಾಪನೆಗೊಂಡ ಹಿನ್ನಲೆಯಲ್ಲಿ ಕಾಂಗ್ರೆಸ್‌ ಪರ ಅಲೆ ನಿಮಾರ್ಣವಾಗಿತ್ತು.

ಈ ಸಲ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ: ಜನ್‌ ಕೀ ಬಾತ್‌ ಸಮೀಕ್ಷೆ

2008ರ ಚುನಾವಣೆಯಲ್ಲಿ ಹಿಂದಿನ ಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರ್ಕಾರದಅವಧಿಯಲ್ಲಿ ಒಪ್ಪಂದದ ಪ್ರಕಾರ ಅಧಿಕಾರವ ನ್ನು ಬಿಜೆಪಿಗೆ ಬಿಡಲಿಲ್ಲ ಎಂಬ ಕಾರಣಕ್ಕೆ ಯಡಿಯೂರಪ್ಪ ಅವರ ಪರವಾಗಿ ಅಲೆಯೊಂದು ನಿಮಾರ್ಣವಾಗಿತ್ತು.
ಆದರೆ, ಈ ಬಾರಿಯ ಚುನಾವಣೆಯಲ್ಲಿ ಅಂತಹ ಯಾವುದೇ ಅಲೆ ನಿಮಾರ್ಣವಾಗಿಲ್ಲ. ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್‌ ಸರ್ಕಾರ ಎಂದು ಬಿಂಬಿಸಿ ಆಡಳಿತ ವಿರೋಧಿ ನರೇಟಿವ್‌ ರೂಪಿಸುವಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ ಸಾಕಷ್ಟು ಯಶಸ್ವಿಯಾಗಿದ್ದರೂ, ಅದು ಅಲೆಯ ರೂಪ ಪಡೆದಿಲ್ಲ. ಹೀಗಾಗಿ ಈ ಚುನಾವಣೆಯಲ್ಲಿ ದೊಡ್ಡ ಮಟ್ಟದ ಸ್ಥಾನ ಪಲ್ಲಟ ಉಂಟಾಗುವುದಿಲ್ಲ ಎಂದು ‘ಜನ್‌ ಕಿ ಬಾತ್‌’ ಸಮೀಕ್ಷೆ ಅಭಿಪ್ರಾಯ ಪಟ್ಟಿದೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.