ಈ ಬಾರಿಯ ನೀಟ್ ಫಲಿತಾಂಶ ಸಾಕಷ್ಟು ಅನುಮಾನಗಳಿಗೆ ಕಾರಣ: ಸಚಿವ ಬೋಸರಾಜು
ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಸಹಮಾಡಿಕೊಂಡಿದ್ದು ಕೇಂದ್ರ ಸರ್ಕಾರ ಇನ್ನಷ್ಟು ಅನಾಹುತಗಳಿಗೆ ಅವಕಾಶವಾಗದಂತೆ ಸರಿಯಾದ ತನಿಖೆ ನಡೆಸಿ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಬೇಕು ಎಂದು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಆಗ್ರಹಿಸಿದ್ದಾರೆ.
ಬೆಂಗಳೂರು (ಜೂ.10): ಈ ಬಾರಿಯ ನೀಟ್ ಫಲಿತಾಂಶ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಸಹಮಾಡಿಕೊಂಡಿದ್ದು ಕೇಂದ್ರ ಸರ್ಕಾರ ಇನ್ನಷ್ಟು ಅನಾಹುತಗಳಿಗೆ ಅವಕಾಶವಾಗದಂತೆ ಸರಿಯಾದ ತನಿಖೆ ನಡೆಸಿ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಬೇಕು ಎಂದು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಆಗ್ರಹಿಸಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಆಶ್ಚರ್ಯಕರ ರೀತಿಯಲ್ಲಿ 67 ಜನ ವಿದ್ಯಾರ್ಥಿಗಳು 720ಕ್ಕೆ 720 ಅಂಕ ಪಡೆದಿದ್ದಾರೆ. ಪ್ರತಿಷ್ಠಿತ ಏಮ್ಸ್‌ನಲ್ಲಿ ಲಭ್ಯ ಇರುವ ಪ್ರವೇಶಾತಿ ಸಂಖ್ಯೆಯೇ 56 ಆಗಿದ್ದು, ಉಳಿದ 11 ವಿದ್ಯಾರ್ಥಿಗಳ ಆಸೆ ಭಗ್ನವಾಗಿದೆ. ಈ ಹಿನ್ನೆಲೆಯಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳು ತೀವ್ರ ಅನುಮಾನ ವ್ಯಕ್ತಪಡಿಸಿದ್ದು, ತಕ್ಷಣ ಉನ್ನತ ಮಟ್ಟದ ತನಿಖೆ ನಡೆಸಬೇಕಾಗಿದೆ ಎಂದು ಹೇಳಿದ್ದಾರೆ.
ನೀಟ್ ಪರೀಕ್ಷೆ ಅಕ್ರಮದ ಬಗ್ಗೆ ತನಿಖೆ: ನೀಟ್ ಪರೀಕ್ಷೆ ಮತ್ತು ಫಲಿತಾಂಶದಲ್ಲಿ ಭಾರೀ ಅಕ್ರಮದ ಶಂಕೆ ದೇಶಾದ್ಯಂತ ವ್ಯಕ್ತವಾಗುತ್ತಿದ್ದು, ಲಕ್ಷಾಂತರ ಯುವಕರು ತಮ್ಮ ಭವಿಷ್ಯ ಮಣ್ಣುಪಾಲಾಗುವ ಆತಂಕದಲ್ಲಿದ್ದಾರೆ. ಪ್ರಧಾನಿ ಮೋದಿಯವರ ಸರ್ಕಾರ ರಚನೆ ಮತ್ತು ಸಂಸದರ ಖರೀದಿಯ ಕಸರತ್ತು ಮುಗಿದಿದ್ದರೆ ನೊಂದ ನೀಟ್ ಪರೀಕ್ಷಾರ್ಥಿಗಳ ಅಹವಾಲು ಆಲಿಸಲಿ. ನೀಟ್ ಪರೀಕ್ಷಾ ಅಕ್ರಮದ ಬಗ್ಗೆ ತನಿಖೆ ಮಾಡಿಸಲಿ... ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮೇಲ್ನೋಟಕ್ಕೆ ಪರೀಕ್ಷಾ ಅಕ್ರಮ ನಡೆದಿರುವುದು ಕಂಡುಬಂದರೂ ಎನ್‌ಟಿಎ ಮತ್ತು ಮೋದಿ ಸರ್ಕಾರ ಈ ಫಲಿತಾಂಶವನ್ನು ಸಮರ್ಥಿಸುತ್ತಿದೆ.
ನನ್ನ ಬಳಿ ಮೊಬೈಲೇ ಇಲ್ಲ: ಪ್ರಜ್ವಲ್ ರೇವಣ್ಣ ಹೊಸ ವರಸೆ!
ನೀಟ್ ಪರೀಕ್ಷೆ ಬರೆದಿರುವ 24 ಲಕ್ಷ ಯುವಜನರು, ಅವರ ಪೋಷಕರಲ್ಲಿ ಪರೀಕ್ಷೆಯ ವಿಶ್ವಾಸಾರ್ಹತೆ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯಾಗಲಿ, ಕೇಂದ್ರ ಸರ್ಕಾರವಾಗಲೀ ಉತ್ತರಿಸದೆ ಯುವಜನರ ಭವಿಷ್ಯವನ್ನು ಮಣ್ಣುಪಾಲು ಮಾಡಲು ಹೊರಟಿದೆ ಎಂದು ಕಿಡಿ ಕಾರಿದ್ದಾರೆ. ಅಕ್ರಮಗಳನ್ನು ಮುಚ್ಚಿಹಾಕುವ ಸಲುವಾಗಿಯೇ ಜೂ.4ರಂದು ಲೋಕಸಭೆ ಚುನಾವಣೆ ಫಲಿತಾಂಶ ಬರುವ ದಿನ ತರಾತುರಿಯಲ್ಲಿ ನೀಟ್ ಫಲಿತಾಂಶ ಪ್ರಕಟಿಸಿದ್ದೀರಾ ಎಂದು ಅವರು ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರ ಮತ್ತು ಎನ್‌ಟಿಎ ಮಾಡಿರುವ ಯಡವಟ್ಟಿನಿಂದಾಗಿ ನೀಟ್ ಫಲಿತಾಂಶ ಪ್ರಕಟವಾದ ನಂತರ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತಷ್ಟು ಯುವಜನರು ಪ್ರಾಣ ಕಳೆದುಕೊಳ್ಳುವ ಮುನ್ನ ಪರೀಕ್ಷಾ ಅಕ್ರಮದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಮತ್ತು ನೊಂದ ಪರೀಕ್ಷಾರ್ಥಿಗಳ ಅಹವಾಲು ಆಲಿಸಿ ಸಮಸ್ಯೆ ಬಗೆಹರಿಸಬೇಕು.