Lok Sabha Elections 2024: ಈ ಚುನಾವಣೆ 2ನೇ ಸ್ವಾತಂತ್ರ್ಯ ಹೋರಾಟ: ಸಿಎಂ ಸಿದ್ದರಾಮಯ್ಯ
ಈ ಬಾರಿ 400ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದರೆ ಸಂವಿಧಾನ ಬದಲಾವಣೆ ಮಾಡುವುದಾಗಿ ಬಿಜೆಪಿಯವರು ಹೇಳುತ್ತಿದ್ದಾರೆ. ಹೀಗಾಗಿ ಈ ಚುನಾವಣೆ 2ನೇ ಸ್ವಾತಂತ್ರ್ಯ ಹೋರಾಟ ಇದ್ದಂತೆ. ದೇಶದಲ್ಲಿ ಸಂವಿಧಾನ ಉಳಿವಿಗಾಗಿ ಹೋರಾಟ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಳಗಾವಿ (ಮೇ.06): ಈ ಬಾರಿ 400ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದರೆ ಸಂವಿಧಾನ ಬದಲಾವಣೆ ಮಾಡುವುದಾಗಿ ಬಿಜೆಪಿಯವರು ಹೇಳುತ್ತಿದ್ದಾರೆ. ಹೀಗಾಗಿ ಈ ಚುನಾವಣೆ 2ನೇ ಸ್ವಾತಂತ್ರ್ಯ ಹೋರಾಟ ಇದ್ದಂತೆ. ದೇಶದಲ್ಲಿ ಸಂವಿಧಾನ ಉಳಿವಿಗಾಗಿ ಹೋರಾಟ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸುದ್ದಿಗಾರರ ಜತೆಗೆ ಮಾತನಾಡಿ, ಸಂವಿಧಾನ ನಮ್ಮ ಧರ್ಮಗ್ರಂಥ ಎಂದು ಜಾಹೀರಾತು ಮೂಲಕ ಹೇಳಿದ್ದಾರೆ. ಸಂವಿಧಾನ ಜಾರಿ ಆದ ಬಳಿಕ ಸಂವಿಧಾನ ಬಗ್ಗೆ ಬಿಜೆಪಿಯವರು ಏನು ಹೇಳಿದ್ದಾರೆ, ಏನು ಬರೆದಿದ್ದಾರೆ ಎಂದು ಇತಿಹಾಸದಲ್ಲಿ ದಾಖಲಾಗಿದೆ. ಅವರ ಹಾಲಿ ನಾಯಕರು ಸಂವಿಧಾನದ ಬಗ್ಗೆ ಏನು ಹೇಳಿದರು ಎಂಬುದು ಎಲ್ಲರಿಗೂ ಗೊತ್ತಿದೆ.
ಮೋಹನ್ ಭಾಗವತ್ ಅವರು ಸ್ವಲ್ಪ ಕಾಯಿರಿ ನಾವು ಸಂವಿಧಾನ ಬದಲು ಮಾಡುತ್ತೇವೆ ಎಂದು ಹೇಳುತ್ತಾರೆ. ಸಂಸದ ಅನಂತಕುಮಾರ್ ಹೆಗಡೆ, ಸಂವಿಧಾನ ಬದಲಿಸಲು ನಾವು ಬಂದಿದ್ದೇವೆ ಎಂದಿದ್ದಾರೆ. ಆದ್ದರಿಂದ ಈ ಚುನಾವಣೆ 2ನೇ ಸ್ವಾತಂತ್ರ್ಯ ಹೋರಾಟ ಇದ್ದ ಹಾಗೆ. 400 ಸ್ಥಾನಗಳಲ್ಲಿ ಗೆದ್ದರೆ ಸಂವಿಧಾನ ಬದಲಾವಣೆ ಮಾಡುವುದಾಗಿ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಹೇಳುತ್ತಿದೆ. ಇಗಿದೆ. ಈ ಹೋರಾಟದಲ್ಲಿ ಕಾಂಗ್ರೆಸ್ ಗೆಲ್ಲಲಿದ್ದು, ಬಿಜೆಪಿ 200 ಸ್ಥಾನ ಗೆಲ್ಲುವುದೂ ಕಷ್ಟವಿದೆ ಎಂದು ಭವಿಷ್ಯ ನುಡಿದರು.
ರಾಜ್ಯದಲ್ಲಿ ಮೇ 7ರಂದು 2ನೇ ಹಂತದಲ್ಲಿ 14 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಇವುಗಳಲ್ಲಿ 10 ಕ್ಷೇತ್ರಗಳಲ್ಲಿ ನಾವೇ ಗೆಲುವು ಸಾಧಿಸುತ್ತೇವೆ. ಮೊದಲ ಹಂತದ ಚುನಾವಣೆಯಲ್ಲಿ 14 ಕ್ಷೇತ್ರಗಳ ಪೈಕಿ 8 ರಿಂದ 9ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲಿದ್ದೇವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಒಟ್ಟು 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸೋಲಿನ ಭೀತಿಯಿಂದಾಗಿ ಹತಾಶರಾಗಿರುವ ನರೇಂದ್ರ ಮೋದಿ ಅವರು ತಾವು ಪ್ರಧಾನಿ ಎಂಬುದನ್ನೂ ಮರೆತು ಬಜರಂಗದಳದ ಕಾರ್ಯಕರ್ತರಂತೆ ಮಾತನಾಡುತ್ತಿದ್ದಾರೆ.
2 ಲಕ್ಷ ಮತಗಳಿಂದ ಗೆದ್ದು ಬರುವೆ: ಕೆ.ಎಸ್.ಈಶ್ವರಪ್ಪ ವಿಶ್ವಾಸದ ನುಡಿ
10 ವರ್ಷಗಳ ಸಾಧನೆ ಕುರಿತು ಹೇಳದ ಮೋದಿ ಅವರು ಧರ್ಮಗಳ ನಡುವೆ ಬಿರುಕು ಮೂಡುವ ರೀತಿಯಲ್ಲಿ ಭಾಷಣ ಮಾಡುತ್ತಿದ್ದಾರೆ ಎಂದರು. ಬಿಜೆಪಿಯವರಿಗೆ ಗ್ಯಾರಂಟಿ ಅಂದರೆ ಆಗುವುದಿಲ್ಲ. ಗ್ಯಾರಂಟಿ ಅನುಷ್ಠಾನ ಸಾಧ್ಯವಿಲ್ಲ, ರಾಜ್ಯ ದಿವಾಳಿ ಆಗುತ್ತದೆ, ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಹೇಳಿದ ಅವರು ಇದೀಗ ಗ್ಯಾರಂಟಿ ಜಾರಿಯಾದ ಬಳಿಕ ಗ್ಯಾರಂಟಿ ನಿಲ್ಲಿಸಿ ಬಿಡುತ್ತೇವೆ ಎಂದು ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ. ಜನರಿಗೆ ನಮ್ಮ ಮೇಲೆ ನಂಬಿಕೆ ಬರಬಾರದು ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.