ಸಿದ್ದು, ಎಚ್‌ಡಿಕೆಗೆ ಇದು ಲಾಸ್ಟ್ ಎಲೆಕ್ಷನ್: ಸಚಿವ ಅಶೋಕ್
ಕಾಂಗ್ರೆಸ್, ಜೆಡಿಎಸ್‌ಗೂ ಇದು ಕೊನೇ ಚುನಾವಣೆ. ಸೋಲಿನ ಭಯ ಕಾಡಲು ಆರಂಭವಾದಾಗ ಮಾತಿನ ಮೇಲೆ ಹಿಡಿತ ಇರಲ್ಲ. ಅವರಿಗೆಲ್ಲ ಮೋದಿ, ಬಿಜೆಪಿ ಕನಸು ಬೀಳುತ್ತಿದೆ. ಇದರಿಂದ ಬೆಳಗ್ಗೆ ಎದ್ದಾಗ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ಅವರ ಮಾತು ಕೇಳುತ್ತಿರುವ ಜನರಿಗೂ ಇವರು ಭಯದಲ್ಲಿದ್ದಾರೆಂಬುದು ಅರಿವಾಗಿದೆ ಎಂದ ಸಚಿವ ಅಶೋಕ್
ಚಿಕ್ಕಮಗಳೂರು(ಫೆ.06): ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಇದು ಅವರ ಜೀವನದ ಕೊನೇ ಚುನಾವಣೆ. ಈ ಚುನಾವಣೆ ಮುಗಿಯುತ್ತಿದ್ದಂತೆ ಅವರು ಗಂಟು ಮೂಟೆ ಕಟ್ಟಿಕೊಂಡು ಸೀದಾ ಯಾತ್ರೆಗೆ ಹೋಗಬೇಕು. ಅದಕ್ಕೆ ನಾನು ಶುಭ ಕೋರುತ್ತೇನೆ ಎಂದು ರಾಜ್ಯದ ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಗ್ರಾಮ ವಾಸ್ತವ್ಯ ಮಾಡಿದ್ದ ಇಲ್ಲಿನ ಹುಲಿಕೆರೆ ಗ್ರಾಮದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್, ಜೆಡಿಎಸ್‌ಗೂ ಇದು ಕೊನೇ ಚುನಾವಣೆ. ಸೋಲಿನ ಭಯ ಕಾಡಲು ಆರಂಭವಾದಾಗ ಮಾತಿನ ಮೇಲೆ ಹಿಡಿತ ಇರಲ್ಲ. ಅವರಿಗೆಲ್ಲ ಮೋದಿ, ಬಿಜೆಪಿ ಕನಸು ಬೀಳುತ್ತಿದೆ. ಇದರಿಂದ ಬೆಳಗ್ಗೆ ಎದ್ದಾಗ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ಅವರ ಮಾತು ಕೇಳುತ್ತಿರುವ ಜನರಿಗೂ ಇವರು ಭಯದಲ್ಲಿದ್ದಾರೆಂಬುದು ಅರಿವಾಗಿದೆ ಎಂದರು.
ಮೀಸಲಾತಿ ವಿಷಯದಲ್ಲಿ ಕಾಂಗ್ರೆಸ್‌ನಿಂದ ದಲಿತರಿಗೆ ಮೋಸ: ಸಿ.ಟಿ.ರವಿ
ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮೊದಲು ತಮ್ಮ ಮನೆ ಜಗಳ ಬಗೆಹರಿಸಿಕೊಳ್ಳಲಿ. ನಿತ್ಯ ಮಾಧ್ಯಮದಲ್ಲಿ ಇವರಿಬ್ಬರ ಜಗಳ ನೋಡುತ್ತಿದ್ದೇವೆ. ಇಬ್ಬರು ಒಟ್ಟಿಗೆ ಬಸ್ ಯಾತ್ರೆಯಲ್ಲಿ ಹೋದಾಗ ಒಬ್ಬರದು ಆಕಡೆ ಮುಖ, ಇನ್ನೊಬ್ಬರದು ಈ ಕಡೆ ಮುಖ. ಈಗ ಇಬ್ಬರು ಬೇರೆ ಬೇರೆ ಯಾತ್ರೆ ಮಾಡುವಾಗ ಉತ್ತರ-ದಕ್ಷಿಣ ಆಗಲಿದ್ದಾರೆ. ಇದಕ್ಕೆ ನಾನು ಶುಭ ಕೋರುತ್ತೇನೆ. ನೀವು ಉತ್ತರಕ್ಕೊಬ್ಬರು, ದಕ್ಷಿಣಕ್ಕೊಬ್ಬರಂತೆಯೇ ಇರಿ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ: ಬಿಜೆಪಿ ಚುನಾವಣಾ ರಾಜ್ಯ ಉಸ್ತುವಾರಿ ನೇಮಕ ಕುರಿತು ಮಾತನಾಡಿ, ಅಣ್ಣಾಮಲೈ ಖಡಕ್ ಪೊಲೀಸ್ ಅಧಿಕಾರಿ. ಅವರ ನೇಮಕದಿಂದ ಪಕ್ಷಕ್ಕೆ ಸಾಕಷ್ಟುಅನುಕೂಲವಾಗಲಿದೆ. ಬೇರೆ ಬೇರೆ ರಾಜ್ಯದಿಂದ ಬಂದು ನಮ್ಮ ರಾಜ್ಯದಲ್ಲಿ ಜನ ನೆಲೆಸಿದ್ದಾರೆ. ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ. ಅವರು ಸಕ್ರಿಯವಾಗಿದ್ದಾರೆ. ಯುವಕರು ಆಗಿದ್ದಾರೆ. ಅವರ ನೇಮಕವನ್ನು ಸ್ವಾಗತ ಮಾಡುತ್ತೇವೆ. ಧರ್ಮೇಂದ್ರ ಪ್ರಧಾನ್, ಈ ಹಿಂದೆ ಚುನಾವಣಾ ಉಸ್ತುವಾರಿ ಆಗಿದ್ದರು, ರಾಜ್ಯದಲ್ಲಿ ನೂರಕ್ಕೆ ನೂರು ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದರು.