ಚನ್ನಪಟ್ಟಣದಲ್ಲಿ ನಿಖಿಲ್ ಸ್ಪರ್ಧೆಗೆ ಒತ್ತಡ ಇದೆ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಚನ್ನಪಟ್ಟಣ ಉಪ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಕಾರ್ಯಕರ್ತರಿಂದ ಒತ್ತಡ ಇದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ರಾಮನಗರ (ಅ.13): ಚನ್ನಪಟ್ಟಣ ಉಪ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಕಾರ್ಯಕರ್ತರಿಂದ ಒತ್ತಡ ಇದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಮುಂಬರುವ ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಡದಿ ಸಮೀಪದ ಕೇತಗಾನಹಳ್ಳಿಯ ತಮ್ಮ ತೋಟದಲ್ಲಿ ಶನಿವಾರ ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಸಭೆ ಕರೆದು ಸಮಾಲೋಚನೆ ನಡೆಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ನಿಖಿಲ್ ಕುಮಾರಸ್ವಾಮಿ ನಿಲ್ಲಬೇಕು ಅಂತ ಶೇ.95ರಷ್ಟು ನಾಯಕರು, ಮುಖಂಡರ ಅಭಿಪ್ರಾಯವಿದೆ.
ಆದರೆ, ನಾವು ಈಗಿರುವ ಸನ್ನಿವೇಶ ನೋಡಿಕೊಂಡು ನಿರ್ಧಾರ ಕೈಗೊಳ್ಳಬೇಕು. ಏನೇನು ಬೆಳವಣಿಗೆಗಳು ಇವೆ ಅಂತ ನೋಡಬೇಕಿದೆ ಎಂದು ಹೇಳಿದರು. ನಿಖಿಲ್ ಅವರನ್ನು ಮಂಡ್ಯದಲ್ಲಿ ನಿಲ್ಲಿಸಿದಾಗ ಎಲ್ಲಾ ಪಕ್ಷಗಳು ಒಂದಾಗಿ ಸೋಲಿಸಿದರು. ಸಂಘಟಿತ ಷಡ್ಯಂತ್ರ ಸೋಲಿಸಲಾಯಿತು. ನಾನು ಈಗ ಎನ್‌ಡಿಎ ಭಾಗ, ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕು. ಯಾರೇ ನಿಂತು ಗೆದ್ದರೂ ಅದು ಎನ್‌ಡಿಎ ಗೆಲುವು, ಆ ಮೂಲಕ ಕಾಂಗ್ರೆಸ್ ವಿರೋಧಿ ಹೋರಾಟಕ್ಕೆ, ಪ್ರಧಾನಿ ನರೇಂದ್ರ ಮೋದಿ ಅವರ ಹೋರಾಟಕ್ಕೆ ನಾವೂ ಕೈಜೋಡಿಸಿದ ಹಾಗಾಗುತ್ತದೆ ಎಂದು ಹೇಳಿದರು.
ಉಪಚುನಾವಣೆಗೆ ಜೆಡಿಎಸ್ – ಬಿಜೆಪಿ ಮೈತ್ರಿ ಅಭ್ಯ ರ್ಥಿಯನ್ನು ದೆಹಲಿ ಮಟ್ಟದಲ್ಲಿ ಬಿಜೆಪಿ ವರಿಷ್ಠರು ಹಾಗೂ ನಾವು ಚರ್ಚಿಸಿ ಇನ್ನೊಂದು ವಾರದಲ್ಲಿ ತೀರ್ಮಾನ ಮಾಡುತ್ತೇವೆ. ಚುನಾವಣೆ ದಿನಾಂಕ 4-5 ದಿನಗಳಲ್ಲಿ ಯಾವಾಗ ಬೇಕಾದರೂ ಘೋಷಣೆ ಆಗಬಹುದು. ಕೂಡಲೇ ಬಿಜೆಪಿ ಹೈಕಮಾಂಡ್, ರಾಜ್ಯ ನಾಯಕರ ಜತೆ ಚರ್ಚೆ ಮಾಡಿ ಅಭ್ಯರ್ಥಿ ಫೈನಲ್ ಮಾಡುತ್ತೇವೆ ಎಂದರು. ಚನ್ನಪಟ್ಟಣಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪದೇಪದೆ ಭೇಟಿ ನೀಡುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರು ಎಷ್ಟು ಸಲ ಭೇಟಿ ಕೊಟ್ಟರೂ ಉಪಯೋಗ ಇಲ್ಲ, ಚುನಾವಣೆ ಬಂದಿದೆ. ಅದಕ್ಕೆ ಪದೇಪದೆ ಬರುತ್ತಿದ್ದಾರೆ ಅಷ್ಟೇ. ಚುನಾವಣೆ ಮುಗಿದ ಮೇಲೆ ಈ ಕಡೆ ತಲೆ ಹಾಕುವುದಿಲ್ಲ ಎಂದರು.
ಮುಖ್ಯಮಂತ್ರಿ ಹುದ್ದೆ ಖಾಲಿ ಇದೆ ಅಂತ ನಿಮಗ್ಯಾರು ಹೇಳಿದ್ದು?: ಸಚಿವರಿಗೆ ಸಂಪುಟದಲ್ಲಿ ಸಿಎಂ ಕ್ಲಾಸ್
ಭರ್ಜರಿ ಬಾಡೂಟ: ವಿಜಯದಶಮಿ ಹಬ್ಬದಂದು ಬಿಡದಿ ಸಮೀಪದಕೇತಗಾನಹಳ್ಳಿಯತಮ್ಮ ತೋಟದಲ್ಲಿ ಪಕ್ಷದಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ ಕುಮಾರಸ್ವಾಮಿ, ಜೆಡಿಎಸ್ ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ಅನುಸರಿಸಬೇಕಾದ ಕ್ರಮಗಳ ಕುರಿತು ಸೂಚನೆ ನೀಡಿದರು. ಬಳಿಕ, ಎಲ್ಲರಿಗೂ ಬಾಡೂಟದ ಜೊತೆ ಸಿಹಿ ಊಟದ ವ್ಯವಸ್ಥೆಯನ್ನೂ ಮಾಡಿದ್ದರು.