ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಯಾವುದೇ ಮುನಿಸಿಲ್ಲ, ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು. 

ಬೆಳಗಾವಿ (ಜ.26): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಯಾವುದೇ ಮುನಿಸಿಲ್ಲ, ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಬೆಳಗಾವಿ ಜಿಲ್ಲೆ ಹುಕ್ಕೇರಿಯಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮದ ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಡಿ.ಕೆ.ಶಿವಕುಮಾರ್ ಜೊತೆ ಯಾವುದೇ ಮುನಿಸಿಲ್ಲ‌. ಮೊನ್ನೆ ಎಲ್ಲರೂ ಸೇರಿ ಬೆಳಗಾವಿಯಲ್ಲಿ ಅತ್ಯಂತ ಯಶಸ್ವಿ ಕಾರ್ಯಕ್ರಮ ಮಾಡಿದ್ದೇವೆ. ಮುನಿಸು ಅನ್ನುವ ಪ್ರಶ್ನೆ ಬರಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತ ಪ್ರಶ್ನೆಗೆ, ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಹೈಕಮಾಂಡ್ ಪ್ರಶ್ನೆ ಮಾಡಬೇಕು. ಆ ಬಗ್ಗೆ ಹೇಳುವ ಅಧಿಕಾರ ನನಗೆ ಇಲ್ಲ ಎಂದರು‌.

ಶ್ರೀರಾಮುಲು ಕಾಂಗ್ರೆಸ್ ಗೆ ಬರ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿ, ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬರುವ ಎಲ್ಲರಿಗೂ ಸ್ವಾಗತ. ಖಾಸಗಿಯಾಗಿ ಶ್ರೀರಾಮುಲು ನನ್ನ ಸಂಪರ್ಕದಲ್ಲಿದ್ದಾರೆ. ರಾಜಕೀಯವಾಗಿ ಇಲ್ಲ.‌ ಪಕ್ಷಕ್ಕೆ ಬರುವುದು, ಬಿಡುವುದು ಅವರವರಿಷ್ಟ. ನಾವು ಕರೆದರೆ ಯಾರೂ ಬರಲ್ಲ, ಅವರೇ ಬರಬೇಕಾಗುತ್ತದೆ‌. ಶ್ರೀರಾಮುಲುರನ್ನು ಕಾಂಗ್ರೆಸ್ ಗೆ ಕರೆ ತರುವ ಪ್ರಯತ್ನದ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದರು. 2028ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ಮುಖ್ಯಮಂತ್ರಿ ಹುದ್ದೆಗೆ ಕ್ಲೇಮ್ ಮಾಡ್ತೀನಿ. ನಾನು 2028ಕ್ಕೆ ಸಿಎಂ ಅಭ್ಯರ್ಥಿ ಎಂದು ಹೇಳಿದ್ದೇನೆ. ಸಿಎಂ ಆಗ್ತೀನಿ ಎಂದು ಹೇಳಿಲ್ಲ.‌ ನನ್ನನ್ನು ಸಿಎಂ ಮಾಡುವುದು, ಬಿಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಹೇಳಿದರು.

ಮೈಕ್ರೋ ಫೈನಾನ್ಸ್‌ ಕಿರುಕುಳದ ವಿರುದ್ಧ ಕಠಿಣ ಕ್ರಮ: ರಾಜ್ಯದಲ್ಲಿ ಒಂದು ತಿಂಗಳಿನಿಂದ ಮೈಕ್ರೋ ಫೈನಾನ್ಸ್‌ ಕಿರುಕುಳ ಪ್ರಕರಣಗಳ ಬಗ್ಗೆ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ಇದು ವಿಪರೀತ ಹಂತಕ್ಕೆ ತಲುಪಿದ್ದು, ಇದೀಗ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಿರುಕುಳ ಕೊಡುವ ವರದಿಗಳು ಬರುತ್ತಿವೆ. ತೊಂದರೆ ಕೊಟ್ಟರೆ ದೂರು ದಾಖಲು ಮಾಡುವಂತೆ ತಿಳಿಸಿದ್ದೇವೆ. ಫೈನಾನ್ಸ್‌ ಕಿರುಕುಳದ ಬಗ್ಗೆ ಗೊಂದಲ ಇದೆ. ಸಾಲ‌ ಪಡೆಯೋದು, ಕಿರುಕುಳ ಕೋಡೊದು ಬೇರೆ ವಿಚಾರ. ಸಬ್ಸಿಡಿ ಹೆಸರಿನಲ್ಲಿ ಸಾವಿರಾರು ಜನರಿಗೆ ಸಾಲ ಕೊಟ್ಟಿದ್ದಾರೆ ಎಂದರು.

ಬಣಜಗಳ ಮೇಲ್ಮಟ್ಟದಲ್ಲಿದೆ, ತಳಮಟ್ಟದಲ್ಲಿ ಅಲ್ಲ: ಮುಖಾಮುಖಿಯಲ್ಲಿ ಶಾಸಕ ವಿ.ಸುನೀಲ್‌ಕುಮಾರ್‌ ಹೇಳಿದ್ದೇನು?

ಹಣ ತುಂಬುವ ವಿಚಾರದಲ್ಲಿ ಈಗ ಸಂಘರ್ಷ ಆರಂಭವಾಗಿದೆ. ಅಲ್ಲದೆ ಈಗಾಗಲೇ ಡಿಸಿ ನೇತೃತ್ವದಲ್ಲಿ ಒಂದು ಸಭೆ ನಡೆಸಿದ್ದೇನೆ. ಎರಡು ತಿಂಗಳ‌ ಸಮಯ ಕೇಳಿದ್ದೇವೆ. ಈ ನಿಟ್ಟಿನಲ್ಲಿ ಒಂದು ನಿರ್ದಿಷ್ಟ ಪರಿಹಾರ ಕಂಡುಕೊಳ್ಳಲಾಗುವುದು. ಇನ್ನೊಂದು ತಿಂಗಳಲ್ಲಿ ಸಾಧ್ಯವಿರುವ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಹೇಳಿದರು. ಶಿರೂರನಲ್ಲಿ ಮೈಕ್ರೋ ಫೈನಾನ್ಸ್‌ಗೆ ಸಂಬಂಧಿಸಿದಂತೆ ಮಹಿಳೆ ಆತ್ಮಹತ್ಯೆ ಪ್ರಕರಣ ನಡೆದಿದೆ. ದೂರು ದಾಖಲು ಮಾಡಲು ಸೂಚನೆ ನೀಡಲಾಗಿದೆ. ಮಧ್ಯವರ್ತಿಗಳೊಂದಿಗೆ ಫೈನಾನ್ಸ್‌ನವರು ಸೇರಿದ್ದಾರೆ ಎನ್ನುವ ಆರೋಪ ಇದೆ. ಮಧ್ಯವರ್ತಿಗಳಿಗೆ ಹಣ ಕೊಟ್ಟಿದ್ದಾರೆ, ಪೊಲೀಸ್ ತನಿಖೆ ನಡೆಸುವಂತೆ ಸೂಚನೆ ಕೊಡಲಾಗಿದೆ. ಈ ಸಂಬಂಧ ವರದಿ ಬಂದ ಕೂಡಲೇ ಸಂಬಂಧಪಟ್ಟವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿದರು.