ಬೆಳಗಾವಿ[ಮಾ.14]: ಬೆಳಗಾವಿ ಪಿಎಲ್‌ಡಿ ಬ್ಯಾಂಕಿನ ರಾಜಕಾರಣಕ್ಕೂ ಕೆಪಿಸಿಸಿ ನೂತನ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರಾದ ಸತೀಶ್‌ ಜಾರಕಿಹೊಳಿ ಸ್ಪಷ್ಟಪಡಿಸಿದರು.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಡಿಕೆಶಿಗಾಗಲಿ, ನಮ್ಮಗಾಗಲಿ ಜಗಳ ಇಲ್ಲ. ಹಿಡನ್‌ ಅಜೆಂಡಾನೇ ಬೇರೆ. ಇದನ್ನು ನಾನು ಪದೇ ಪದೆ ಹೇಳಿದ್ದೇನೆ. ಇದು ಇರುವ ವಿಷಯ. ಡಿಕೆಶಿ ಜೊತೆ ಹಿಂದೆಯೂ ಉತ್ತಮ ಸಂಬಂಧವಿತ್ತು. ಮುಂದೆಯೂ ಇರುತ್ತದೆ ಎಂದು ಹೇಳಿದರು.

ನಮ್ಮಲ್ಲೂ ಗುಂಪುಗಾರಿಕೆ ಇದೆ:

ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಇಲ್ಲ ಎಂದಲ್ಲ. ನಮ್ಮಲ್ಲೂ ಇದೆ. ಬೇರೆ ಪಕ್ಷದಲ್ಲೂ ಗುಂಪುಗಾರಿಕೆ ಇದೆ. ವೈಯಕ್ತಿಕ ಸಮಸ್ಯೆ ಬಂದಾಗ ಗುಂಪುಗಾರಿಕೆ ಮಾಡುತ್ತೇವೆ. ಆದರೆ, ಪಕ್ಷ ಬಂದಾಗ ಪಕ್ಷದ ಪರವಾಗಿ ಕೆಲಸ ಮಾಡುತ್ತೇವೆ ಎಂದರು.

ಅಭಿನಂದಿಸಿದ ಲಕ್ಷ್ಮಿ ಹೆಬ್ಬಾಳ್ಕರ್‌:

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ಗ್ರಾಮೀಣ ಕಮೀಟಿ ಕಚೇರಿಗೆ ಆಗಮಿಸಿದ ಸತೀಶ್‌ ಜಾರಕಿಹೊಳಿ ಅವರನ್ನು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್‌ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.

ಬೆಳಗಾವಿ ಮೂವರು ಶಾಸಕರು ಕಾಂಗ್ರೆಸ್‌ ತೊರೆದು ಬಿಜೆಪಿಯಿಂದ ಆಯ್ಕೆಯಾಗಿ ಸಚಿವರಾಗಿದ್ದಾರೆ. ನಾವು ಏನು ಮಾಡಲಾಗದು. ಅವರು ಪಕ್ಷ ಬಿಟ್ಟು ಹೋಗಿದ್ದಾರೆ. ನಮ್ಮ ಸ್ಟೆ್ರಂಥ್‌ ಇದ್ದೇ ಇದೆ. ಮುಂದಿನ ಚುನಾವಣೆಯಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳುತ್ತೇವೆ. ಈಗ ಅಂದು ಏನೂ ಪ್ರಯೋಜನವಿಲ್ಲ. ಉಪಚುನಾವಣೆಯಲ್ಲಿ ನಾವು ಸೋತಿರಬಹುದು. ಆದರೆ, ನಮ್ಮ ಶಕ್ತಿಯನ್ನು ನಾವು ತೋರಿಸಿದ್ದೇವೆ. ಮುಂದಿನ ದಿನಗಳಲ್ಲಿ ಆ ಕ್ಷೇತ್ರಗಳಲ್ಲ ನಮ್ಮ ಪಾಲಾಗುತ್ತವೆ ಎಂದರು.