Asianet Suvarna News Asianet Suvarna News

ದೇಶ ವಿಭಜನೆಯ ಅಸ್ತ್ರ ಕರ್ನಾಟಕದಿಂದ ಶುರು: ನಿರ್ಮಲಾ ಸೀತಾರಾಮನ್

ದೇಶ ವಿಭಜಿಸುವ ಯತ್ನವನ್ನು ಕಾಂಗ್ರೆಸ್ ಮೊದಲಿನಿಂದಲೂ ಮಾಡುತ್ತಲೆ ಇದೆ. ಈಗ ದೇಶ ವಿಭಜನೆಯ ಅಸ್ತ್ರವನ್ನು ಕರ್ನಾಟಕದಿಂದ ಶುರು ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.

The weapon of division of the country starts with Karnataka Says Nirmala Sitharaman gvd
Author
First Published Feb 8, 2024, 6:03 AM IST

ನವದೆಹಲಿ (ಫೆ.08): ದೇಶ ವಿಭಜಿಸುವ ಯತ್ನವನ್ನು ಕಾಂಗ್ರೆಸ್ ಮೊದಲಿನಿಂದಲೂ ಮಾಡುತ್ತಲೆ ಇದೆ. ಈಗ ದೇಶ ವಿಭಜನೆಯ ಅಸ್ತ್ರವನ್ನು ಕರ್ನಾಟಕದಿಂದ ಶುರು ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ. ಸಂಸದ ಡಿ.ಕೆ.ಸುರೇಶ್ ಅವರ ದೇಶ ವಿಭಜನೆ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ನಿರ್ಮಲಾ ಸೀತಾರಾಮನ್, ದೇಶ ವಿಭಜಿಸುವ ಯತ್ನವನ್ನು ಕಾಂಗ್ರೆಸ್ ಮಾಡುತ್ತಲೆ ಇದೆ. ಡಿ.ಕೆ.ಸುರೇಶ್ ಹೇಳಿಕೆಯನ್ನು ಹಲವರು ಪುನರುಚ್ಚಾರ ಮಾಡಿದ್ದಾರೆ. ಇವರೆಲ್ಲಾ ತುಕಡೆ ತುಕಡೆ ಗ್ಯಾಂಗ್ ಗೆ ಸಾಥ್ ನೀಡುವವರು. ಕಳೆದ ಎರಡು ವರ್ಷಗಳ ಹಿಂದೆ ಜೆಎನ್ ಯು ನಲ್ಲಿ ತುಕಡೆ ಗ್ಯಾಂಗ್ ಜೊತೆ ರಾಹುಲ್ ಗಾಂಧಿ ಸೇರಿಕೊಂಡಿದ್ರು. ದೇಶವನ್ನು ತುಂಡು, ತುಂಡು ಮಾಡಲು ಅವರು ಈ ರೀತಿಯ ಅಸ್ತ್ರಗಳನ್ನು ಆಗಾಗ ಬಳಸಿಕೊಳ್ಳುತ್ತಾರೆ. ಈಗದು ಕರ್ನಾಟಕದಿಂದಲೇ ಶುರುವಾಗಿದೆ ಎಂದು ಆರೋಪಿಸಿದರು.

ಅನುದಾನ ತಾರತಮ್ಯ ಆರೋಪಕ್ಕೆ ತಿರುಗೇಟು: ಕೇಂದ್ರ ಸರ್ಕಾರ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಬುಧವಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಕರ್ನಾಟಕ ಸರ್ಕಾರ ಸಜ್ಜಾಗಿರುವಾಗಲೇ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಾರತಮ್ಯ ಆರೋಪವನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ. ಬಿಜೆಪಿಯೇತರ ಸರ್ಕಾರಗಳು ಆಳ್ವಿಕೆ ನಡೆಸುತ್ತಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅನುದಾನ ತಡೆ ಹಿಡಿದಿದೆ ಎಂಬುದು ರಾಜಕೀಯ ಪ್ರೇರಿತ ಆರೋಪ. ಅದನ್ನು ಹೇಳಿಕೊಳ್ಳಲು ಪಟ್ಟಭದ್ರ ಹಿತಾಸಕ್ತಿಗಳಿಗೆ ಸಂತೋಷವಿದೆ ಎಂದು ಚಾಟಿ ಬೀಸಿದ್ದಾರೆ.

ತೆರಿಗೆ ನ್ಯಾಯಕ್ಕಾಗಿ ಚಲೋ ದಿಲ್ಲಿ: ಸಿದ್ದು ನೇತೃತ್ವದಲ್ಲಿ #ನನ್ನತೆರಿಗೆನನ್ನಹಕ್ಕು ಹ್ಯಾಶ್‌ಟ್ಯಾಗ್‌ ಅಡಿ ಹೋರಾಟ

ಕೇಂದ್ರ ಸರ್ಕಾರ ತನಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಕರ್ನಾಟಕ ಸರ್ಕಾರ ಆರೋಪಿಸುತ್ತಿದೆ ಎಂದು ಲೋಕಸಭೆಯ ಶೂನ್ಯವೇಳೆಯಲ್ಲಿ ಸೋಮವಾರ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರು ಗಮನಸೆಳೆದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನಿರ್ಮಲಾ, ಆ ರೀತಿ ಆಗಲು ಸಾಧ್ಯವೇ ಇಲ್ಲ. ಏಕೆಂದರೆ, ವ್ಯವಸ್ಥೆ ಅತ್ಯುತ್ತಮವಾಗಿದೆ. ಹಣಕಾಸು ಆಯೋಗದ ವರದಿಯನುಸಾರ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಹೇಳಿದರು. ‘ನನಗೆ ಈ ರಾಜ್ಯ ಇಷ್ಟವಿಲ್ಲ, ಅನುದಾನ ನಿಲ್ಲಿಸಿಬಿಡಿ’ ಎಂದು ಯಾವುದೇ ಹಣಕಾಸು ಸಚಿವರು ಕೂಡ ಮಧ್ಯಪ್ರವೇಶಿಸಿ ಸೂಚನೆ ನೀಡಲು ಆಗದು. ಆ ರೀತಿ ಆಗಲು ಅವಕಾಶವೇ ಇಲ್ಲ. 

ಏಕೆಂದರೆ ವ್ಯವಸ್ಥೆ ಅತ್ಯುತ್ತಮವಾಗಿದೆ. ನನ್ನ ಮನಸ್ಸಿಗೆ ತೋಚಿದಂತೆ ನಿಯಮಗಳನ್ನು ಬದಲಾವಣೆ ಮಾಡಲು ಆಗುವುದಿಲ್ಲ. ನಾನು ಶೇ.100ರಷ್ಟು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅದನ್ನೇ ನನ್ನ ಅವಧಿಯಲ್ಲಿ ಮಾಡಿದ್ದೇನೆ. ಎಲ್ಲ ಹಣಕಾಸು ಸಚಿವರೂ ಅದನ್ನೇ ಮಾಡುತ್ತಾರೆ. ಹಣಕಾಸು ಆಯೋಗದ ಶಿಫಾರಸುಗಳನ್ನು ಜಾರಿ ಮಾಡಬೇಕಾಗುತ್ತದೆ ಎಂದರು. ಯಾರಿಗಾದರೂ ನಾನು ಅನುದಾನ ತಡೆ ಹಿಡಿದಿದ್ದೇನೆ ಎಂದು ಅನ್ನಿಸಿದರೆ, ಅಂಥವರು ಹಣಕಾಸು ಆಯೋಗದ ಜತೆ ಮಾತನಾಡಿ. ಬೇಡಿಕೆಗಳು, ಅವಶ್ಯಕತೆಗಳು ಹಾಗೂ ಸ್ಥಿತಿಗತಿಯನ್ನು ಹೇಳಿಕೊಳ್ಳಿ. 

ತಪ್ಪು ಮುಚ್ಚಲು ಕೇಂದ್ರದ ಮೇಲೆ ಸಿದ್ದರಾಮಯ್ಯ ಆರೋಪ: ಮಾಜಿ ಸಿಎಂ ಬೊಮ್ಮಾಯಿ

ಸಾಂವಿಧಾನಿಕ ಸಂಸ್ಥೆಯಾಗಿರುವ ಆಯೋಗವೇ ನಿರ್ಧಾರ ಕೈಗೊಳ್ಳಲಿ. ಕರ್ನಾಟಕದ ಉಪಮುಖ್ಯಮಂತ್ರಿಗಳು ತಮ್ಮನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಅವರಿಗೆ ವಾಸ್ತವ ತಿಳಿಸಿದ್ದೇನೆ ಎಂದು ವಿವರಿಸಿದರು. ಹಣಕಾಸು ಆಯೋಗ ಹೇಳಿದ್ದನ್ನು ಬಿಟ್ಟು ನಾನು ಬೇರೆ ಏನೂ ಮಾಡಲು ಆಗುವುದಿಲ್ಲ. ಹಣಕಾಸು ಆಯೋಗ ಇಂಥದ್ದು ಮಾಡು ಎಂದರೆ, ಅದನ್ನು ಬಿಟ್ಟು ಬೇರೆ ಏನೂ ಮಾಡುವುದಿಲ್ಲ. ಹಣಕಾಸು ಆಯೋಗದ ಶಿಫಾಸುಗಳ ವಿಚಾರದಲ್ಲಿ ನನಗೆ ನನ್ನದೇ ಆದ ವಿವೇಚನೆ ಇದೆ ಎಂದು ಕಲ್ಪಿಸಿಕೊಳ್ಳಬೇಡಿ. ದಯವಿಟ್ಟು ಹಣಕಾಸು ಆಯೋಗದ ಜತೆ ಮಾತನಾಡಿ ಎಂದರು.

Follow Us:
Download App:
  • android
  • ios