ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ ಮಾಡಿರುವ ಕಮಿಷನ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕರ್ನಾಟಕವನ್ನು ದೇಶದಲ್ಲೇ ನಂಬ‌ರ್ ಒನ್ ಭ್ರಷ್ಟಾಚಾರ ಮಾಡಿರುವ ಸರ್ಕಾರ ಎಂದು ಹೇಳಿದ್ದಾರೆ. 

ಚಿಕ್ಕಮಗಳೂರು (ಏ.11): ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ ಮಾಡಿರುವ ಕಮಿಷನ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕರ್ನಾಟಕವನ್ನು ದೇಶದಲ್ಲೇ ನಂಬ‌ರ್ ಒನ್ ಭ್ರಷ್ಟಾಚಾರ ಮಾಡಿರುವ ಸರ್ಕಾರ ಎಂದು ಹೇಳಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರಡ್ಡಿಯವರೇ ಸರ್ಟಿಫಿಕೇಟ್‌ ಕೊಟ್ಟಿದ್ದಾರೆ. ಅಧಿಕಾರಕ್ಕಾಗಿ ಶೇ. 40 ಕಮಿಷನ್‌ ಸರ್ಕಾರವೆಂದು ಬಿಜೆಪಿ ಮೇಲೆ ಅಪಪ್ರಚಾರ ಮಾಡಿದ್ರು ಆದ್ರೆ ಈಗ ಇಡೀ ದೇಶದಲ್ಲಿ ಶೇ.80 ಭ್ರಷ್ಟಾಚಾರದ ಸರ್ಕಾರ ಇದ್ರೆ ಅದು ಕರ್ನಾಟಕ ಸರ್ಕಾರ ಮಾತ್ರ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಇನ್ನು ಜಾತಿ ಜನ ಗಣತಿ ಕುರಿತು ಪ್ರತಿಕ್ರಿಯೆ ನೀಡಿರುವ ವಿಜಯೇಂದ್ರ ಜಾತಿ ಜನಗಣತಿಯನ್ನು ಸಿದ್ದರಾಮಯ್ಯ ನವರು ಬೊಂಬೆ ಆಟದಂತೆ ಮಾಡಿಕೊಂಡಿದ್ದಾರೆ. ಕುರ್ಚಿ ಅಲುಗಾಡಿದಾಗ, ಸರ್ಕಾರಕ್ಕೆ ಗಂಡಾಂತರ ಬಂದಾಗ ಜಾತಿ ಜನಗಣತಿ ಬೆದರು ಬೊಂಬೆಯಾಗುತ್ತೆ. ದೇಶದಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಭ್ರಷ್ಟ ಸರ್ಕಾರ ಎಂದು ಪ್ರಚಾರ ಆಗಿದೆ, ವಾಲ್ಮೀಕಿ, ಮೂಡಾ ಹಗರಣ ಸೇರಿ ಕುರ್ಚಿ ಅಲುಗಾಡಿದಾಗ ಜನಗಣತಿ ವಿಚಾರ ಮುನ್ನೆಲೆಗೆ ಬರುತ್ತೆ ಎಂದರು.

ಕಳ್ಳ ಮಳ್ಳನನ್ನು ನಿಲ್ಲಿಸಲು ಬಂದಿದ್ದೇವೆ: ನಾವು ಜನತಾ ನ್ಯಾಯಾಲಯದ ಮುಂದೆ ಒಬ್ಬ ಕಳ್ಳ ಮತ್ತೊಬ್ಬ ಮಳ್ಳನನ್ನು ನಿಲ್ಲಿಸುಲು ಬಂದಿದ್ದೇವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ವಾಗ್ದಾಳಿ ನಡೆಸಿದರು. ನಗರದಲ್ಲಿ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿದ ಅವರು, ಬಜೆಟ್‌ ನಲ್ಲಿ ಯಾವುದೇ ತೆರಿಗೆ ವಿಧಿಸಿದೆ, ನಂತರ ಎಲ್ಲಾ ವಸ್ತುಗಳ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ಬೆಳಗ್ಗೆ 3 ರೂ. ತೆರಿಗೆ, ಮಧ್ಯಾಹ್ನಕ್ಕೆ 5 ರೂ. ಸಂಜೆಗೆ 50 ರೂ. ತೆರಿಗೆ ಹಾಕಿದ್ದಾರೆ. ಸಿದ್ದರಾಮಯ್ಯ ಸೊಳ್ಳೆಯಾದರೆ, ಡಿ.ಕೆ. ಶಿವಕುಮಾರ್‌ ತಿಗಣೆ, ಇವರು ಟೋಪಿ ಒಂದು ಹಾಕಿಲ್ಲ. ಆದರೆ ಎಲ್ಲಾ ಕಾರ್ಯಕ್ರಮಗಳನ್ನು ಟೋಪಿಗೆ ಮಾಡುತ್ತಿದ್ದಾರೆ ಎಂದು ಮೊದಲಿಸಿದರು.

ರಾಜ್ಯದಲ್ಲಿರುವುದು ಹಿಂದುಗಳ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಹಿಟ್ಲರ್ ಸರ್ಕಾರ: ವಿಜಯೇಂದ್ರ

ಶಾದಿ ಭಾಗ್ಯ, ಆ ಭಾಗ್ಯ, ಈ ಭಾಗ್ಯ ಎಲ್ಲವೂ ಆಯಿತು. ಈಗ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ಕೊಟ್ಟು ಹಿಂದುಗಳಿಗೆ ಕಡಿತಗೊಳಿಸಿದ್ದಾರೆ. ಇದನ್ನು ಗುತ್ತಿಗೆದಾರರ ಸಂಘ ಪ್ರಶ್ನಿಸುತ್ತಿಲ್ಲ. ಅದು ಜೀವ ಕಳೆದುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು. ಪ್ರಿಯಾಂಕ ಗಾಂಧಿ ಅವರಿಗೆ ಅನುಕೂಲ ಮಾಡಿಕೊಡಲು ಬಂಡೀಪುರ ಮಾರ್ಗದಲ್ಲಿ ರಾತ್ರಿ ಸಂಚಾರಕ್ಕೆ ಅನುಮತಿ ನೀಡಲಾಗುತ್ತಿದೆ. ಈಗೇನಾದರೂ ಕೇಂದ್ರ ಸರ್ಕಾರ ವಕ್ಫ್ ಬಿಲ್ ಮಂಡಿಸದಿದ್ದರೆ ಮುಂದೆ ಚಾಮುಂಡಿ ಬೆಟ್ಟವು ನಮ್ಮದೇ ಎನ್ನುತ್ತಿದ್ದರು, ಅರಮನೆಯನ್ನೂ ನಮ್ಮದು ಎನ್ನುತ್ತಿದ್ದರು. ಈ ಕಾಯ್ದೆಯಿಂದ ಲಕ್ಷಾಂತರ ಮಂದಿ ರೈತರು ಮತ್ತು ಜನಸಾಮಾನ್ಯರಿಗೆ ಅನುಕೂಲ ಆಗಿದೆ. ಒಬ್ಬ ಹದಿನಾಲ್ಕು ಸೈಟ್ ಕಳ್ಳ. ಮತ್ತೊಬ್ಬ ಬೆಂಗಳೂರು ನಗರವನ್ನು ಲೂಟಿ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಟೀಕಿಸಿದರು.