ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿದೆ. ಅವರ ಬಳಿ ಶ್ವೇತಪತ್ರ ಇಲ್ಲ, ಬ್ಲ್ಯಾಕ್‌ಪೇಪರ್ ಇದೆ. ರಾಜ್ಯ ಸರ್ಕಾರ ಪ್ರತಿ ವ್ಯಕ್ತಿ ಮೇಲೆ ಹೆಚ್ಚುವರಿಯಾಗಿ ₹1 ಲಕ್ಷ ಸಾಲ ಹೊರಿಸುತ್ತಿದೆ. ಇದಕ್ಕಿಂತ ದೊಡ್ಡ ಶ್ವೇತಪತ್ರ ಬೇಕಾ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಹಾವೇರಿ (ಜೂ.27): ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿದೆ. ಅವರ ಬಳಿ ಶ್ವೇತಪತ್ರ ಇಲ್ಲ, ಬ್ಲ್ಯಾಕ್‌ಪೇಪರ್ ಇದೆ. ರಾಜ್ಯ ಸರ್ಕಾರ ಪ್ರತಿ ವ್ಯಕ್ತಿ ಮೇಲೆ ಹೆಚ್ಚುವರಿಯಾಗಿ ₹1 ಲಕ್ಷ ಸಾಲ ಹೊರಿಸುತ್ತಿದೆ. ಇದಕ್ಕಿಂತ ದೊಡ್ಡ ಶ್ವೇತಪತ್ರ ಬೇಕಾ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಬಳಿ ದುಡ್ಡಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸತ್ಯ ಹೇಳಿದ್ದಾರೆ. ಸುಳ್ಳನ್ನು ಎಷ್ಟು ದಿನ ಮರೆಮಾಚಲು ಆಗುತ್ತದೆ? ಸತ್ಯ ಹೊರಬರಲೇಬೇಕು, ಪರಮೇಶ್ವರ್ ಅವರ ಬಾಯಲ್ಲಿ ಬಂದರೆ ಶಿವನ ಬಾಯಲ್ಲಿ ಬಂದ ಹಾಗೆ ಎಂದರು.
ರಾಜ್ಯದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಶ್ವೇತಪತ್ರ ಹೊರಡಿಸಲು ಬಿಜೆಪಿ ಆಗ್ರಹಿಸುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲ ದರಗಳು, ತೆರಿಗೆ ಹೆಚ್ಚಾಗಿದೆ. ಇದಕ್ಕಿಂತ ಶ್ವೇತಪತ್ರ ಬೇಕಾ? ಎಂದರು.ವಸತಿ ಹಗರಣದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶಾಸಕ ಬಿ.ಆರ್. ಪಾಟೀಲ್ ಮೊದಲು ಮಾತಡಿದ್ದರು. ಈಗ ಬಿ.ಆರ್. ಪಾಟೀಲ್ ಸುಮ್ಮನಾಗಿದ್ದಾರೆ. ಮುಂದೆ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಅವಕಾಶ ಕೊಡಬಹುದು ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್. ಅಶೋಕ್ ದೆಹಲಿಗೆ ತೆರಳಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರವರ ಕೆಲಸಕ್ಕೆ ದೆಹಲಿಗೆ ಹೋಗುತ್ತಾರೆ, ಬರುತ್ತಾರೆ. ಅದಕ್ಕೆಲ್ಲ ಪ್ರತಿಕ್ರಿಯಿಸಲು ಆಗುತ್ತಾ ಎಂದರು.
ಕೃಷಿ ಇಲಾಖೆ ನಿರ್ಲಕ್ಷ್ಯ: ರೈತರಿಗೆ ಸರಿಯಾಗಿ ಬೀಜ, ಗೊಬ್ಬರ ಸಿಗದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಮೊನ್ನೆ ಸೋಯಾಬಿನ್ ವಿಚಾರ ಹೇಳಿದ್ದೆ. ರಾಣಿಬೆನ್ನೂರಿನಲ್ಲಿ ಕಳಪೆ ಬೀಜ ಮಾರಾಟ ಮಾಡಲಾಗಿದೆ ಎಂದು ಕೇಸ್ ಮಾಡಿದ್ದಾರೆ. ಮಳೆ ಆಗುತ್ತಿದೆ. ಗೊಬ್ಬರ ಸಿಗುತ್ತಿಲ್ಲ. ಮಳೆ ಹೆಚ್ಚಾಗುತ್ತಿರುವುದರಿಂದ ಯೂರಿಯಾ ಗೊಬ್ಬರ ಬೇಕು. ಆದರೆ ಯೂರಿಯಾ ಕೊರತೆ ಆಗುತ್ತಿದೆ. ಬಂದಿದ್ದೆಲ್ಲ ಹೋಲ್‌ಸೇಲ್‌ನಲ್ಲಿ ದುಡ್ಡಿಗೆ ಮಾರಾಟ ಮಾಡಿಕೊಂಡಿದ್ದಾರೆ ಎಂದರು.
ರಸ್ತೆ ಕಾಮಗಾರಿ ಗುಣಮಟ್ಟ ಕಾಪಾಡಿಕೊಳ್ಳಬೇಕು: ರಸ್ತೆಗಳು ಅಭಿವೃದ್ಧಿಯ ಜೀವನಾಡಿಗಳಾಗಿದ್ದು, ನಿರ್ಮಾಣ ಮಾಡುವ ರಸ್ತೆಗಳು ಉತ್ತಮ ಗುಣಮಟ್ಟದಿಂದ ಕೂಡಿರಬೇಕು. ಕಾಮಗಾರಿಯಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಸ್ಥಳೀಯ ಗದಗ ರಸ್ತೆಯ ನವನಿ ಪ್ಲಾಟ್‌ನಲ್ಲಿ ಕರ್ನಾಟಕ ರಾಜ್ಯದ ರಾಷ್ಟ್ರೀಯ ಹೆದ್ದಾರಿ (ಭಾನಾಪುರ-ಗದ್ದನಕೇರಿ ಸೆಕ್ಷನ್) ರಲ್ಲಿ ಗಜೇಂದ್ರಗಡ ಪಟ್ಟಣಕ್ಕೆ ಭಾನುವಾರ ಸಂಜೆ ಬೈಪಾಸ್ ರಸ್ತೆ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿ ಈ ದೇಶದ ಜೀವನಾಡಿ. ದೇಶ ಅಭಿವೃದ್ಧಿಯಾಗಬೇಕಾದರೆ ಅಲ್ಲಿ ಸಕ್ಷಮವಾದ ರಸ್ತೆಗಳ ನಿರ್ಮಾಣವಾಗಬೇಕಿದೆ. ಈ ದೆಸೆಯಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಮುಂದಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸಹಯೋಗದಲ್ಲಿ ನಡೆಯುವ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಲ್ಯಾಂಡ್ ಅಕ್ವಿಜೇಶನ್ ಸಹ ಪ್ರಮುಖವಾಗಿದೆ. ರೈತರ ಜಮೀನುಗಳಿಗೆ ಲೋಕೊಪಯೋಗಿ ಸಚಿವರು, ಶಾಸಕ ಜಿ.ಎಸ್. ಪಾಟೀಲ ಹಾಗೂ ನಾವು ಕೂಡಿಕೊಂಡು ರೈತರಿಗೆ ಉತ್ತಮ ಪರಿಹಾರ ಕೊಡಿಸುವ ನಿರ್ಧಾರ ಕೈಗೊಂಡಿದ್ದು ಅದನ್ನು ತಲುಪಿಸುವ ಕೆಲಸವನ್ನು ಮಾಡುತ್ತೇನೆ ಎಂದರು.
