ಬೆಂಗ​ಳೂರು[ಫೆ.03]: ಮಂಡ್ಯ ಲೋಕ​ಸಭಾ ಕ್ಷೇತ್ರ​ಕ್ಕೆ ರೆಬೆಲ್‌ ಸ್ಟಾರ್‌ ದಿ. ಅಂಬ​ರೀಷ್‌ ಪತ್ನಿ ಸುಮ​ಲತಾ ಅವ​ರ ಹೆಸ​ರನ್ನು ತೇಲಿಬಿಡಲಾಗಿರುವುದು ಏಕೆ?

ಇದು ಕಾಂಗ್ರೆ​ಸ್‌ನ ಹಾಲಿ ಸಂಸ​ದರ ಕ್ಷೇತ್ರ​ಗಳ ಮೇಲೆ ಕಣ್ಣಿ​ಟ್ಟಿ​ರುವ ಜೆಡಿ​ಎಸ್‌ ಅನ್ನು ಕಟ್ಟಿ​ಹಾ​ಕುವ ಕಾಂಗ್ರೆಸ್‌ನ ತಂತ್ರವೋ ಅಥವಾ ಮಂಡ್ಯ ಜಿಲ್ಲೆಗೆ ಪ್ರವೇಶ ಮಾಡಲು ಮುಂದಾ​ಗಿ​ರುವ ಮುಖ್ಯ​ಮಂತ್ರಿ ಎಚ್‌.ಡಿ.ಕುಮಾ​ರ​ಸ್ವಾಮಿ ಅವರ ಪುತ್ರ ನಿಖಿಲ್‌ರನ್ನು ತಡೆ​ಯುವ ಯತ್ನವೋ?

ಮಂಡ್ಯ​ದಿಂದ ರಾಜ​ಕೀಯ ಪ್ರವೇಶ ಮಾಡುವ ಇಂಗಿ​ತ​ವನ್ನು ಸುಮ​ಲತಾ ವ್ಯಕ್ತ​ಪ​ಡಿ​ಸು​ತ್ತಿ​ದ್ದಂತೆಯೇ ರಾಜ್ಯ ರಾಜ​ಕೀಯ ವಲ​ಯ​ದಲ್ಲಿ ಪ್ರಬ​ಲ​ವಾಗಿ ಕೇಳಿಬರು​ತ್ತಿ​ರುವ ಪ್ರಶ್ನೆ​ಗ​ಳಿವು. ವಾಸ್ತ​ವ​ವಾಗಿ ಸುಮ​ಲತಾ ಅವ​ರಿಗೆ ಚುನಾ​ವಣಾ ರಾಜ​ಕಾ​ರ​ಣ​ದಲ್ಲಿ ಆಸ​ಕ್ತಿ​ಯಿದೆ. ಮಂಡ್ಯದಲ್ಲಿ ಅಂಬ​ರೀಷ್‌ ನಿಧ​ನದ ನಂತರ ಸಹ​ಜ​ವಾ​ಗಿಯೇ ಅವರ ಕುಟುಂಬದ ಪರ ಅನು​ಕಂಪದ ಅಲೆ ಭರ್ಜ​ರಿ​ಯಾ​ಗಿದೆ. ಹೀಗಾಗಿ ಸುಮ​ಲತಾರನ್ನು ಕಾಂಗ್ರೆ​ಸ್‌​ನಿಂದ ಕಣಕ್ಕೆ ಇಳಿ​ಸಿ​ದರೆ ಗೆಲುವು ಸುಲಭ ಎಂಬುದು ನಿರ್ವಿ​ವಾದ. ಸುಮ​ಲತಾ ಇಲ್ಲ​ದಿ​ದ್ದರೆ ಈ ಕ್ಷೇತ್ರ​ವನ್ನು ತನಗೆ ಬಿಟ್ಟು​ಕೊ​ಡು​ವಂತೆ ಕೇಳುವ ಸ್ಥಿತಿ​ಯಲ್ಲಿ ಕಾಂಗ್ರೆಸ್‌ ಇರು​ತ್ತಲೇ ಇರ​ಲಿಲ್ಲ. ಇನ್ನು ಮಂಡ್ಯ ಜಿಲ್ಲೆ​ಯಲ್ಲಿ ಉತ್ತಮ ಜನಬೆಂಬಲ ಹೊಂದಿ​ರುವ ಅಂಬ​ರೀಷ್‌ ಪತ್ನಿಯನ್ನು ಕಣಕ್ಕೆ ಇಳಿ​ಸ​ಬಾ​ರದು ಎಂದು ಗಟ್ಟಿ​ಯಾಗಿ ಹೇಳುವ ಸ್ಥಿತಿ​ಯಲ್ಲಿ ಜೆಡಿ​ಎಸ್‌ ಕೂಡ ಇಲ್ಲ.

ಹೀಗಾ​ಗಿಯೇ ಈ ಸಂದ​ರ್ಭದ ಲಾಭ​ವನ್ನು ಪಡೆ​ಯಲು ಕಾಂಗ್ರೆಸ್‌ ನಾಯ​ಕರು ಮುಂದಾ​ಗಿ​ದ್ದು, ಜೆಡಿ​ಎಸ್ಸನ್ನು ಎರಡು ರೀತಿ​ಯಿಂದ ಕಟ್ಟಿಹಾಕುವ ಪ್ರಯತಕ್ಕೆ ಮುಂದಾ​ಗಿ​ದ್ದಾ​ರೆ.

1. ಜೆಡಿ​ಎಸ್‌ ನಾಯಕರು ಹಳೆ ಮೈಸೂರು ಭಾಗ​ದಲ್ಲಿ ಕಾಂಗ್ರೆಸ್‌ ಹಾಲಿ ಸಂಸ​ದ​ರನ್ನು ಹೊಂದಿ​ರುವ ಚಿಕ್ಕ​ಬ​ಳ್ಳಾ​ಪುರ, ತುಮ​ಕೂರು ಸೇರಿ​ದಂತೆ ಹಲವು ಕ್ಷೇತ್ರ​ಗ​ಳನ್ನು ತಮಗೆ ಬಿಟ್ಟು​ಕೊ​ಡು​ವಂತೆ ಕೇಳು​ತ್ತಿದ್ದಾರೆ. ಈ ಕ್ಷೇತ್ರ​ಗಳು ಒಕ್ಕ​ಲಿಗ ಪ್ರಾಧಾ​ನ್ಯತೆ ಹೊಂದಿ​ರುವ ಕಾರಣ ನೇರಾನೇರ ಜೆಡಿ​ಎ​ಸ್‌ನ ಈ ಬೇಡಿ​ಕೆ​ಯನ್ನು ತಳ್ಳಿಹಾಕುವ ಸ್ಥಿತಿ​ಯಲ್ಲೂ ಕಾಂಗ್ರೆಸ್‌ ಇರ​ಲಿಲ್ಲ. ಜೆಡಿ​ಎ​ಸ್‌ನ ಇಂತ​ಹ ಆಗ್ರ​ಹಕ್ಕೆ ಕಡಿ​ವಾಣ ಹಾಕಲು ಸುಮ​ಲತಾ ರಾಜ​ಕೀಯ ಪ್ರವೇಶ ಕಾಂಗ್ರೆ​ಸ್‌ಗೆ ಉತ್ತಮ ಅಸ್ತ್ರ​ವಾಗಿ ದೊರ​ಕಿದೆ. ಗೆಲ್ಲುವ ಮಾನ​ದಂಡವೇ ಮುಖ್ಯ​ವಾ​ದರೆ ಸುಮ​ಲತಾ ಅವರು ಜೆಡಿ​ಎ​ಸ್‌ನ ಭದ್ರ​ಕೋ​ಟೆ​ಯೆ​ನಿ​ಸಿದ ಮಂಡ್ಯ​ದಲ್ಲಿ ಕಾಂಗ್ರೆಸ್‌ ಟಿಕೆ​ಟ್‌​ನಿಂದಲೂ ಗೆಲ್ಲುವ ಸಾಮರ್ಥ್ಯ ಹೊಂದಿ​ದ್ದಾರೆ. ಹೀಗಾಗಿ ಈ ಕ್ಷೇತ್ರವನ್ನು ತನ​ಗೆ ​ಬಿ​ಟ್ಟು​ಕೊ​ಡ​ಬೇಕು ಎಂದು ವಾದಿ​ಸಲು ಕಾಂಗ್ರೆ​ಸ್‌ಗೆ ಅವ​ಕಾಶ ದೊರ​ಕಿ​ದೆ. ಜೆಡಿ​ಎಸ್‌ ಮಂಡ್ಯ ತನಗೆ ಬೇಕೇಬೇಕು ಎಂದು ಹಟಕ್ಕೆ ಬಿದ್ದರೆ ಆಗ ಕಾಂಗ್ರೆ​ಸ್‌ನ ಹಾಲಿ ಸಂಸ​ದರ ಕ್ಷೇತ್ರ​ಗ​ಳನ್ನು ಗಟ್ಟಿ​ಧ್ವ​ನಿ​ಯಲ್ಲಿ ಕೇಳಲು ಆಗು​ವು​ದಿಲ್ಲ.

2. ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಅವ​ರ ಪುತ್ರ ನಿಖಿಲ್‌ ಮಂಡ್ಯ​ದಿಂದ ಸ್ಪರ್ಧಿಸುವುದನ್ನು ತಪ್ಪಿ​ಸುವ ಪ್ರಯ​ತ್ನ. ಕುತೂ​ಹ​ಲ​ಕಾ​ರಿ ಸಂಗ​ತಿ​ಯೆಂದರೆ, ಜೆಡಿ​ಎ​ಸ್‌ನ ಮಂಡ್ಯ ಜಿಲ್ಲೆಯ ಪ್ರಮುಖ ನಾಯ​ಕರೇ ಇದಕ್ಕೆ ಪರೋಕ್ಷ ಬೆಂಬಲ ನೀಡು​ತ್ತಿ​ದ್ದಾರೆ ಎನ್ನ​ಲಾ​ಗಿದೆ. ಈ ಬೆಂಬಲ ಇರು​ವು​ದ​ರಿಂದಲೇ ಸುಮ​ಲತಾ ಅವರಿಗೂ ಸ್ಪರ್ಧಿ​ಸುವ ಉಮೇದಿ ಬಂದಿದೆ ಎಂಬುದು ಕಾಂಗ್ರೆಸ್‌ ನಾಯ​ಕರ ಅಂಬೋಣ.

ಅಷ್ಟೇ ಅಲ್ಲ, ಒಂದು ವೇಳೆ ಕಾಂಗ್ರೆ​ಸ್‌-ಜೆಡಿ​ಎ​ಸ್‌ ನಡುವೆ ಮೈತ್ರಿ ಏರ್ಪಟ್ಟು ಮಂಡ್ಯ ಕ್ಷೇತ್ರ​ವನ್ನು ಜೆಡಿ​ಎ​ಸ್‌ಗೆ ಬಿಟ್ಟು​ಕೊ​ಡ​ಬೇಕು ಎಂಬ ನಿರ್ಧಾ​ರ​ವಾ​ದರೂ ಕೂಡ ಸುಮ​ಲತಾ ಅವ​ರನ್ನು ಬಂಡಾಯ ಅಭ್ಯ​ರ್ಥಿ​ಯಾಗಿ ಕಣಕ್ಕೆ ಇಳಿ​ಸುವ ಪ್ರಯತ್ನ ಸಹ ನಡೆ​ಯ​ಲಿದೆ ಎಂದೇ ಹೇಳ​ಲಾ​ಗು​ತ್ತಿದೆ. ಏಕೆಂದರೆ, ನಿಖಿಲ್‌ ಮಂಡ್ಯ ಜಿಲ್ಲೆ ರಾಜ​ಕಾ​ರಣ ಪ್ರವೇಶ ಮಾಡು​ವುದು ಕಾಂಗ್ರೆ​ಸ್ಸಿ​ಗ​ರಿ​ಗಷ್ಟೇ ಅಲ್ಲ ಸ್ಥಳೀಯ ಜೆಡಿ​ಎಸ್‌ ನಾಯ​ಕ​ರಿಗೂ ಬೇಕಿಲ್ಲ ಎಂದೇ ಹೇಳ​ಲಾ​ಗು​ತ್ತಿದೆ.

ಹಾಸನ ಮೂಲದ ದೇವೇ​ಗೌ​ಡರ ಕುಟುಂಬ ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಅವರ ಪ್ರವೇ​ಶ​ದಿಂದ ಈಗಾ​ಗಲೇ ರಾಮ​ನ​ಗರ ಜಿಲ್ಲೆ​ಯನ್ನು ತನ್ನ ಸುಪ​ರ್ದಿಗೆ ತೆಗೆ​ದು​ಕೊಂಡಿದೆ. ಈಗ ತರುಣ ನಿಖಿಲ್‌ ಮಂಡ್ಯ ಜಿಲ್ಲೆಯ ರಾಜ​ಕಾ​ರಣ ಪ್ರವೇ​ಶ ಮಾಡಿ​ದರೆ ಮುಂದಿನ ಮೂರ್ನಾಲ್ಕು ದಶ​ಕ​ಗಳ ಕಾಲ ಸ್ಥಳೀಯ ಜೆಡಿ​ಎಸ್‌ ನಾಯ​ಕ​ರಿಗೆ ರಾಜ​ಕಾ​ರಣ ಮಾಡಲು ಅವ​ಕಾ​ಶವೇ ಇಲ್ಲ​ದಂತಾ​ಗು​ತ್ತದೆ. ಹೀಗಾಗಿ ಅವರು ಪರೋ​ಕ್ಷ​ವಾಗಿ ಸುಮ​ಲತಾ ಕಣಕ್ಕೆ ಇಳಿ​ಯಲಿ ಎಂದು ಬಯ​ಸು​ತ್ತಿ​ದ್ದಾರೆ ಎನ್ನ​ಲಾ​ಗಿದೆ. ಈ ಬೆಳ​ವ​ಣಿ​ಗೆ​ಯನ್ನು ಬಳ​ಸಿ​ಕೊ​ಳ್ಳಲು ಕಾಂಗ್ರೆಸ್‌ ನಾಯ​ಕರು ಮುಂದಾ​ಗಿದ್ದು, ಮೈತ್ರಿಯ ಚೌಕಾಸಿ ನಡೆ​ಯು​ವಾಗ ಸುಮ​ಲತಾ ವಿಚಾ​ರ​ವನ್ನು ಮುಂದಿ​ಟ್ಟು​ಕೊಂಡು ಒಂದಷ್ಟುಲಾಭ ಮಾಡಿ​ಕೊ​ಳ್ಳಲು ಪ್ರಯತ್ನಿಸಲಿ​ದ್ದಾರೆ ಎಂದೇ ವ್ಯಾಖ್ಯಾ​ನಿ​ಸ​ಲಾ​ಗು​ತ್ತಿ​ದೆ.

ಟಿಕೆಟ್‌ ಚರ್ಚೆ ಆಗಿಲ್ಲ

ಯಾವ್ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್‌ ನೀಡಬೇಕೆಂಬ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ. ಅದೇ ರೀತಿಯಲ್ಲಿ ಮಂಡ್ಯದಲ್ಲಿ ಲೋಕಸಭಾ ಟಿಕೆಟ್‌ ವಿಚಾರದ ಕುರಿತು ಇದುವರೆಗೂ ಯಾವುದೇ ಚರ್ಚೆ ಆಗಿಲ್ಲ. ಯಾವ್ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು ಎಂಬುದನ್ನು ನೋಡಿಕೊಂಡು ಟಿಕೆಟ್‌ ಹಂಚಿಕೆ ಮಾಡಲಾಗುವುದು.

- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

-ಎಸ್‌.​ಗಿ​ರೀಶ್‌ ಬಾಬು