ಪಟನಾ(ನ.11): ಸಾಮಾನ್ಯವಾಗಿ ವಿದ್ಯುನ್ಮಾನ ಮತಯಂತ್ರದಲ್ಲಿ ನಡೆದ ಚುನಾವಣೆಗಳ ಫಲಿತಾಂಶ ಮಧ್ಯಾಹ್ನ 12ರಿಂದ ಸಂಜೆ 4 ಗಂಟೆಯೊಳಗೆ ಘೋಷಣೆ ಆಗಿಬಿಡುತ್ತವೆ. ಆದರೆ ಬಿಹಾರ ವಿಧಾನಸಭೆ ಚುನಾವಣಾ ಮತ ಎಣಿಕೆ ವಿಳಂಬದಿಂದ ಫಲಿತಾಂಶವು ಬೇಗ ಬೇಗ ಘೋಷಣೆ ಆಗದೇ ರಾತ್ರಿಯವರೆಗೂ ಪರಿಸ್ಥಿತಿಯನ್ನು ಅನಿಶ್ಚಿತತೆಯಲ್ಲಿ ನೂಕಿತು.

ಇದಕ್ಕೆ ಕಾರಣವೇನೆಂದರೆ ಚುನಾವಣಾ ಆಯೋಗ ಕೈಗೊಂಡ ಕೊರೋನಾ ಸುರಕ್ಷತಾ ಕ್ರಮಗಳು.

ಕೊರೋನಾ ಹಿನ್ನೆಲೆಯಲ್ಲಿ ಮತದಾರರ ಸಂದಣಿ ತಪ್ಪಿಸಲು ಮತಗಟ್ಟೆಗಳ ಸಂಖ್ಯೆಯನ್ನು 72 ಸಾವಿರದಿಂದ 1.06 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ಆದರೆ ಮತ ಎಣಿಕೆ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ, ಮತಗಟ್ಟೆಗಳ ಸಂಖ್ಯೆಗೆ ತಕ್ಕಂತೆ ಎಣಿಕೆ ಟೇಬಲ್‌ಗಳ ಸಂಖ್ಯೆಯನ್ನು ಹೆಚ್ಚಿಸಿರಲಿಲ್ಲ. ಬದಲಾಗಿ ಒಂದು ಮತಎಣಿಕೆ ಕೋಣೆಯಲ್ಲಿನ ಟೇಬಲ್‌ ಸಂಖ್ಯೆಯನ್ನು 14ರಿಂದ 7ಕ್ಕೆ ಇಳಿಸಲಾಗಿತ್ತು. ಹೀಗಾಗಿ ಹೀಗಾಗಿ ಸಾಮಾನ್ಯವಾಗಿ 24-26 ಸುತ್ತಿನಲ್ಲಿ ಮುಗಿಯುವ ಮತ ಎಣಿಕೆ 35 ಸುತ್ತುಗಳನ್ನು ತೆಗೆದುಕೊಂಡಿತು.

ಇದೇ ವೇಳೆ, ಕೊರೋನಾ ಕಾರಣ ಚುನಾವಣಾ ಆಯೋಗ ಕಲ್ಪಿಸಿದ ಸೌಲಭ್ಯ ಪಡೆದುಕೊಂಡು ಅಂಚೆ ಮೂಲಕ ಚಲಾವಣೆ ಆದ ಮತಗಳೂ ಹೆಚ್ಚಿದ್ದವು. ಇವುಗಳ ಎಣಿಕೆ ನಿಧಾನವಾಗಿ ನಡೆಯುವ ಕಾರಣ ಮತ ಎಣಿಕೆ ವಿಳಂಬಗೊಂಡಿತು. ಹಾಗಾಗಿಯೇ ‘ಸಂಪೂರ್ಣ ಫಲಿತಾಂಶ ಪ್ರಕಟವಾಗಲು ಮಧ್ಯರಾತ್ರಿ ಆಗಬಹುದು’ ಎಂದು ಚುನಾವಣಾ ಆಯುಕ್ತ ಚಂದ್ರಭೂಷಣ್‌ ಕುಮಾರ್‌ ಅವರು ಮಂಗಳವಾರ ಮಧ್ಯಾಹ್ನ ಸ್ಪಷ್ಟಪಡಿಸಿದರು.

ಮಧ್ಯಾಹ್ನದವರೆಗೆ ಈವರೆಗಿನ ಚುನಾವಣೆಗಳಲ್ಲಿ ಆಗುತ್ತಿದ್ದ ಶೇ.30ರಷ್ಟುಮತ ಎಣಿಕೆಯ ಬದಲು ಕೇವಲ ಶೇ.15ರಷ್ಟುಎಣಿಕೆ ಪೂರ್ಣಗೊಂಡಿತ್ತು. ಸಂಜೆ 6ಕ್ಕೆ ಕೇವಲ ಶೇ.50ರಷ್ಟುಮತ ಎಣಿಕೆ ಮುಗಿದಿತ್ತು. ಅಲ್ಲದೆ, ಸುಮಾರು 75 ಕ್ಷೇತ್ರಗಳಲ್ಲಿ ಮುನ್ನಡೆ/ಹಿನ್ನಡೆ ಅಂತರ ಕೇವಲ 500ರಿಂದ 1000 ಮತಗಳ ನಡುವೆ ಹೊಯ್ದಾಡುತ್ತಿತ್ತು. ಇಂತಹ ಹೊತ್ತಿನಲ್ಲಿ ಇಂಥ ಪಕ್ಷವೇ ಗೆಲುವು ಸಾಧಿಸಲಿದೆ ಎಂದು ಹೇಳುವ ವಾತಾವರಣ ಇರಲಿಲ್ಲ.

ಹೀಗಾಗಿ ಬೆಳಗ್ಗೆ ಆರ್‌ಜೆಡಿ-ಕಾಂಗ್ರೆಸ್‌ನ ಮಹಾಮೈತ್ರಿಕೂಟ ಮುನ್ನಡೆ ಸಾಧಿಸುತ್ತಿದೆ ಎಂದು ಕಂಡುಬಂದರೂ, ಮಧ್ಯಾಹ್ನದ ವೇಳೆಗೆ ಬಿಜೆಪಿ-ಜೆಡಿಯು ಕೂಟ ಮುನ್ನಡೆದಂತೆ ಕಂಡುಬಂತು. ಬಹುಮತದ ಗೆರೆ ದಾಟಿ ಹೋಗಿದ್ದರೂ, 75 ಕ್ಷೇತ್ರಗಳ ಮುನ್ನಡೆಯಲ್ಲಿ ಹೊಯ್ದಾಟ ನಡೆಯತ್ತಿದ್ದ ಕಾರಣ ಬಹುಮತ ಸಿಕ್ಕೇ ಸಿಗಲಿದೆ ಎಂಬ ವಿಶ್ವಾಸ ಎನ್‌ಡಿಎಗೆ ಇರಲಿಲ್ಲ. ಕೊನೇ ಕ್ಷಣದಲ್ಲಿ ಜಯ ತನ್ನ ಪಾಲಿಗೆ ಬರಬಹುದು ಎಂಬ ವಿಶ್ವಾಸದಲ್ಲೇ ಆರ್‌ಜೆಡಿ-ಕಾಂಗ್ರೆಸ್‌ ಕಾಲ ಕಳೆದವು.

ಇದರಿಂದಾಗಿ ಪಕ್ಷಗಳ ಮುಖಂಡರು ಹಾಗೂ ವಕ್ತಾರರು ಜಯ/ಸೋಲಿನ ಬಗ್ಗೆ ತಕ್ಷಣಕ್ಕೆ ಪ್ರತಿಕ್ರಿಯಿಸಲು ಹಿಂದೇಟು ಹಾಕಿದರು ಹಾಗೂ ಸಂಜೆವರೆಗೆ ಪಕ್ಷಗಳ ಮುಖ್ಯ ಕಚೇರಿಗಳು ಹಾಗೂ ಇತರ ಸ್ಥಳಗಳಲ್ಲಿ ಗೆದ್ದೇ ಬಿಟ್ಟೆವು ಎಂಬ ಸಂಭ್ರಮಾಚರಣೆಗಳು ನಡೆಯಲಿಲ್ಲ.

ವಿಳಂಬಕ್ಕೆ ಕಾರಣಗಳು

1. ಕೊರೋನಾ ಕಾರಣ ಮತಗಟ್ಟೆಗಳ ಸಂಖ್ಯೆಯನ್ನು 72 ಸಾವಿರದಿಂದ 1.06 ಲಕ್ಷಕ್ಕೆ ಹೆಚ್ಚಿಸಲಾಗಿತ್ತು

2. ಎಣಿಕೆ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಸಲುವಾಗಿ ಸಾಕಷ್ಟುಟೇಬಲ್‌ ವ್ಯವಸ್ಥೆ ಮಾಡಿರಲಿಲ್ಲ

3. ಪ್ರತಿ ಕೋಣೆಯಲ್ಲಿನ ಟೇಬಲ್‌ ಸಂಖ್ಯೆ 14ರಿಂದ 7ಕ್ಕೆ ಇಳಿಕೆ ಮಾಡಲಾಗಿತ್ತು

4. ಕೊರೋನಾ ಹಿನ್ನೆಲೆಯಲ್ಲಿ ಚಲಾವಣೆಯಾದ ಅಂಚೆ ಮತಗಳ ಸಂಖ್ಯೆಯೂ ಸಾಕಷ್ಟುಇತ್ತು

5. ಗರಿಷ್ಠ 26 ಸುತ್ತಿನಲ್ಲಿ ಮುಗಿಯಬೇಕಿದ್ದ ಮತ ಎಣಿಕೆ 35 ಸುತ್ತಿನವರೆಗೂ ಹೋಯಿತು

6. ತುರುಸಿನ ಪೈಪೋಟಿಯಿಂದಾಗಿ ಅಂತರ ಕಡಿಮೆ ಇದ್ದುದ್ದರಿಂದ ಹೊಯ್ದಾಟ ಹೆಚ್ಚಾಯಿತು