ಡೆಪ್ಯುಟಿ ಸ್ಪೀಕರ್‌ ಸ್ಥಾನ ನನಗೆ ಬೇಡ, ಶಾಸಕನಾಗಿಯೇ ಮುಂದುವರಿಯುತ್ತೇನೆ ಎನ್ನುವ ಮೂಲಕ ಶಾಸಕ ಸಿ. ಪುಟ್ಟರಂಗಶೆಟ್ಟಿ ಡೆಪ್ಯುಟಿ ಸ್ಪೀಕರ್‌ ಹುದ್ದೆಯನ್ನು ತಿರಸ್ಕರಿಸಿದ್ದಾರೆ. 

ಚಾಮರಾಜನಗರ (ಮೇ.29): ಡೆಪ್ಯುಟಿ ಸ್ಪೀಕರ್‌ ಸ್ಥಾನ ನನಗೆ ಬೇಡ, ಶಾಸಕನಾಗಿಯೇ ಮುಂದುವರಿಯುತ್ತೇನೆ ಎನ್ನುವ ಮೂಲಕ ಶಾಸಕ ಸಿ. ಪುಟ್ಟರಂಗಶೆಟ್ಟಿ ಡೆಪ್ಯುಟಿ ಸ್ಪೀಕರ್‌ ಹುದ್ದೆಯನ್ನು ತಿರಸ್ಕರಿಸಿದ್ದಾರೆ. ಚಾಮರಾಜನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಪುಟ್ಟರಂಗಶೆಟ್ಟಿ, ಈ ಮೊದಲು ನನಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಕೈ ತಪ್ಪಿದೆ. ಇದಕ್ಕೆ ಕಾರಣ ಏನೆಂದು ಗೊತ್ತಿಲ್ಲ. ಸಚಿವ ಸ್ಥಾನ ನೀಡದ ಹಿನ್ನೆಲೆ ಕಾಂಗ್ರೆಸ್‌ ಹೈಕಮಾಂಡ್‌ ಡೆಪ್ಯುಟಿ ಸ್ಪೀಕರ್‌ ಸ್ಥಾನ ನೀಡಿದೆ. 

ಆ ಹುದ್ದೆ ನನಗೆ ಬೇಡ. ಡೆಪ್ಯುಟಿ ಸ್ಪೀಕರ್‌ ಸ್ಥಾನ ಕಾರ್ಯಭಾರದ ಒತ್ತಡದಿಂದ ಕ್ಷೇತ್ರದ ಕೆಲಸ ಮಾಡಲು ಕಷ್ಟವಾಗುತ್ತದೆ ಎಂದರು. ಡೆಪ್ಯುಟಿ ಸ್ಪೀಕರ್‌ ಆದರೆ ಕ್ಷೇತ್ರದ ಜನರ ಕೈಗೆಟುಕುವುದಿಲ್ಲ. ಹಾಗಾಗಿ ಡೆಪ್ಯುಟಿ ಸ್ಪೀಕರ್‌ ಸ್ಥಾನ ಬೇಡ ಎಂಬುದು ಕ್ಷೇತ್ರದ ಮತದಾರರು ಹಾಗೂ ಬೆಂಬಲಿಗರ ಒತ್ತಾಯವಾಗಿದೆ. ನಾನು ಉಪ್ಪಾರ ಸಮಾಜದ ಏಕೈಕ ಶಾಸಕ. ಯಾವಾಗಲು ಜನರ ಜೊತೆ ಬೆರೆತು ಕೆಲಸ ಮಾಡುವವನು. ಡೆಪ್ಯುಟಿ ಸ್ಪೀಕರ್‌ ಸ್ಥಾನ ಒಪ್ಪಿಕೊಳ್ಳುವಂತೆ ಸಿದ್ದರಾಮಯ್ಯ ಹಾಗೂ ಜಮೀರ್‌ ಅಹಮದ್‌ ನನಗೆ ಒತ್ತಾಯಿಸಿದ್ದರು ಎಂದು ತಿಳಿಸಿದರು.

ನನಗೂ 200 ಯೂನಿಟ್‌ ಕರೆಂಟ್‌ ಬೇಕು, ಇಲ್ಲವಾದರೆ ಪ್ರತಿಭಟನೆ: ಶಾಸಕ ಸಿ.ಸಿ.ಪಾಟೀಲ್‌ ಎಚ್ಚರಿಕೆ

ಸುತ್ತೂರು ಶ್ರೀಗಳ ಆಶೀರ್ವಾದ: ಸತತ ನಾಲ್ಕನೇ ಬಾರಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಶಾಸಕ ಸಿ. ಪುಟ್ಟರಂಗಶೆಟ್ಟಿಅವರು ಸುತ್ತೂರಿನ ಮಠಕ್ಕೆ ಭಾನುವಾರದಂದು ಭೇಟಿ ನೀಡಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್‌, ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವು, ಕೆಪಿಸಿಸಿ ಸದಸ್ಯ ಸಯ್ಯದ್‌ ರಫಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎ.ಎಸ್‌. ಗುರುಸ್ವಾಮಿ, ಮಹಮದ್‌ ಅಸ್ಗರ್‌ ಮುನ್ನ, ಎಪಿಎಂಸಿ ಸದಸ್ಯ ಆಲೂರು ಪ್ರದೀಪ್‌, ಕಾಗಲವಾಡಿ ಚಂದ್ರು, ನಾಗವಳ್ಳಿ ನಾಗಯ್ಯ,ಗ್ರಾಪಂ ಸದಸ್ಯ ಪ್ರಸಾದ್‌, ಜಿಪಂ ಮಾಜಿ ಸದಸ್ಯ ರಮೇಶ್‌, ತಾಪಂ ಮಾಜಿ ಸದಸ್ಯ ಮಹದೇವ ಶೆಟ್ಟಿ, ಬಿಸಿಲವಾಡಿ ರವಿ, ಚನ್ನಬಸಪ್ಪ, ನಾರಾಯಣ ನಾಯಕ, ಎಪಿಎಂಸಿ ಮಾಜಿ ಸದಸ್ಯ ಬಿ.ನಾಗೇಂದ್ರ, ರಾಮಚಂದ್ರು, ಬ್ಯಾಡಮೂಡ್ಲು ನಾಗರಾಜು, ದೊರೆಸ್ವಾಮಿ, ಜಾಲಹಳ್ಳಿ ಹುಂಡಿ ಕುಮಾರ್‌, ಶೇಖರ್‌ ಉಪ್ಪಾರ್‌, ನಾಗೇಂದ್ರ ಸ್ವಾಮಿ, ಶಂಭಪ್ಪ, ಬಸವಣ್ಣ,ವಿನೋದ್‌, ಸೇರಿದಂತೆ ಇತರರು ಹಾಜರಿದ್ದರು.

ಪ್ರತಿಭಟನೆ: ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ತಾಲೂಕಿನ ಗೋಳೂರು ಗ್ರಾಮಸ್ಥರು ಪ್ರತಿಭಟಿಸಿದರು. ಗೊಳೂರು ಮಹದೇವಸ್ವಾಮಿ ಮಾತನಾಡಿ, ರಾಜ್ಯದಾದ್ಯಂತ 40 ಲಕ್ಷ ಉಪ್ಪಾರ ಜನಾಂಗವಿದ್ದು 2023ರ ವಿಧಾನಸಭಾ ಚುನಾವಣೆಯಲ್ಲಿ ಒಮ್ಮತದಿಂದ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿದ ಕಾರಣದಿಂದಾಗಿ ಕಾಂಗ್ರೆಸ್‌ ಪಕ್ಷ ಬಹುಮತ ಪಡೆಯಲು ಸಾಧ್ಯವಾಗಿದೆ. ಶಾಸಕ ಪುಟ್ಟರಂಗಶೆಟ್ಟಿಅವರು ಸಮುದಾಯದ ರಾಜ್ಯ ಅಧ್ಯಕ್ಷರಾಗಿ ಸಮಾಜವನ್ನು ಒಗ್ಗೂಡಿಸಿ ಕಾಂಗ್ರೆಸ್‌ ಪಕ್ಷದ ಪರವಾಗಿ ಮತ ಹಾಕಿಸುವಲ್ಲಿ ಸಾಕಷ್ಟುಶ್ರಮಿಸಿದ್ದಾರೆ ಎಂದರು.

ರೈತರ ಆದಾಯ ಹೆಚ್ಚುವಂತೆ ನೋಡಿಕೊಳ್ಳಬೇಕು: ಶಾಸಕ ದರ್ಶನ್‌ ಪುಟ್ಟಣ್ಣಯ್ಯ

ಕೊನೆ ಘಳಿಗೆಯಲ್ಲಿ ಅವರಿಗೆ ಸಚಿವ ಸ್ಥಾನ ನೀಡದೆ ವಂಚಿಸುತ್ತಿರುವುದು ಖಂಡನೀಯ. ಮುಂಬರುವ ತಾಪಂ ಮತ್ತು ಜಿಪಂ, ಲೋಕಸಭೆಯ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಸಮುದಾಯದ ನಾಯಕರಾದ ಪುಟ್ಟರಂಗಶೆಟ್ಟಿಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸುತ್ತೇವೆ ಎಂದರು. ಉಪ್ಪಾರ ಜನಾಂಗದ ಮಾಜಿ ಅಧ್ಯಕ್ಷ ಕೃಷ್ಣ ಮಾತನಾಡಿ, ಸಿದ್ದರಾಮಯ್ಯ ಹಿಂದುವಳಿದ ವರ್ಗದ ರಕ್ಷಕ ನಾಯಕರೆಂದು ಎಲ್ಲರೂ ಭಾವಿಸಿದ್ದೆವು. ಹಲವು ವರ್ಷಗಳಿಂದಲೂ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿರುವ ಉಪ್ಪಾರ ಜನಾಂಗಕ್ಕೆ ಈ ಬಾರಿ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡದಿರುವುದು ಖಂಡನೀಯ. ಈ ಕೂಡಲೇ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕ್ರಮವಹಿಸಿ ಪುಟ್ಟರಂಗಶೆಟ್ಟಿಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.