Asianet Suvarna News Asianet Suvarna News

ಕರ್ನಾಟಕದಲ್ಲಿ ಕುಗ್ಗಿದ ಪಕ್ಷೇತರರ ಕಮಾಲ್‌: 1967ರಲ್ಲಿ 41 ಪಕ್ಷೇತರರಾಗಿ ಆಯ್ಕೆಯಾಗಿದ್ದೇ ಇತಿಹಾಸ

ಪ್ರತಿ ಚುನಾವಣೆ ವೇಳೆ ತಮ್ಮ ಖದರ್‌ ಪ್ರದರ್ಶಿಸುತ್ತಿದ್ದ ಪಕ್ಷೇತರರು ಈಗ ಅಕ್ಷರಶಃ ಅತಂತ್ರ. ಸರ್ಕಾರ ರಚನೆ ವೇಳೆ ಪ್ರತಿಬಾರಿ ನಂಬರ್‌ ಗೇಮ್‌ಗೆ ಆಸರೆಯಾಗುತ್ತಿದ್ದವರು ಈ ಪಕ್ಷೇತರರೇ. 

The number of non partisans in Karnataka has shrunk gvd
Author
First Published May 15, 2023, 9:26 AM IST | Last Updated May 15, 2023, 9:26 AM IST

ಸಂತೋಷ್‌ ಕವಚೂರು

ಬೆಳಗಾವಿ (ಮೇ.15): ಪ್ರತಿ ಚುನಾವಣೆ ವೇಳೆ ತಮ್ಮ ಖದರ್‌ ಪ್ರದರ್ಶಿಸುತ್ತಿದ್ದ ಪಕ್ಷೇತರರು ಈಗ ಅಕ್ಷರಶಃ ಅತಂತ್ರ. ಸರ್ಕಾರ ರಚನೆ ವೇಳೆ ಪ್ರತಿಬಾರಿ ನಂಬರ್‌ ಗೇಮ್‌ಗೆ ಆಸರೆಯಾಗುತ್ತಿದ್ದವರು ಈ ಪಕ್ಷೇತರರೇ. ಆದರೀಗ 16ನೇ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟಬಹುಮತ ಬಂದಿರುವುದರಿಂದ ಪಕ್ಷೇತರರನ್ನು ಕೇಳುವವರೇ ಇಲ್ಲ ಎಂಬಂತಾಗಿದೆ. 1994ರಿಂದ ಈಚೆಗೆ ಮೂರು ದಶಕಗಳಲ್ಲಿ ಅತಿ ಹೆಚ್ಚು ಅಂದರೆ ಸಾವಿರಾರು ಸಂಖ್ಯೆಯಲ್ಲಿ ಪಕ್ಷೇತರರು ಚುನಾವಣಾ ಅಖಾಡಕ್ಕೆ ಧುಮುಕುತ್ತಿದ್ದಾರೆ. ಆದರೆ ಗೆದ್ದು ಬಂದವರು ಬೆರಳೆಣಿಕೆಯಷ್ಟುಮಂದಿ ಮಾತ್ರ. 

2018ರ ಚುನಾವಣೆಯಲ್ಲಿ 1,142 ಮಂದಿ ಪಕ್ಷೇತರ ಅಭ್ಯರ್ಥಿಗಳು ಚುನಾವಣೆ ಎದುರಿಸಿದರೂ ಶೇಕಡಾವಾರು ಮತದಲ್ಲಿ 3.96ರಷ್ಟುಅಷ್ಟೇ ಪಡೆದಿದ್ದಾರೆ. ಇವರಲ್ಲಿ ಗೆದ್ದದ್ದು ಮಾತ್ರ ಒಬ್ಬರೇ ಒಬ್ಬ. ಈಗ 2023ರ ಚುನಾವಣೆಯಲ್ಲಿ 918 ಪಕ್ಷೇತರರು ಮತ್ತು ಮಾನ್ಯತೆ ಸಿಗದೇ ಇರುವ ಪಕ್ಷಗಳಿಂದ 693 ಅಭ್ಯರ್ಥಿಗಳು ಸೇರಿ ಒಟ್ಟು 1,611 ಮಂದಿ ಕಣದಲ್ಲಿದ್ದರು. ಈ ಪೈಕಿ ಗೆದ್ದವರು ನಾಲ್ವರಷ್ಟೇ! 1967ರಲ್ಲಿ 41 ಶಾಸಕರು: 1957ರ ಚುನಾವಣೆಯಲ್ಲಿ ರಾಜ್ಯಾದ್ಯಂತ 251 ಮಂದಿ ಪಕ್ಷೇತರರಾಗಿ ಸ್ಪರ್ಧಿಸಿ 35 ಮಂದಿ ಗೆಲುವು ಸಾಧಿಸಿದ್ದರು. 1962ರಲ್ಲಿ 179 ಮಂದಿ ಪಕ್ಷೇತರರಾಗಿ ಸ್ಪರ್ಧಿಸಿ 27 ಮಂದಿ ಗೆಲುವು ದಾಖಲಿಸಿದ್ದರು. 

ಸೋಲಿನ ಕಾರಣ ಗುರುತಿಸಿ ಮುಂದೆ ಸಾಗೋಣ, ಇದು ಮೋದಿ ಸೋಲು ಅಲ್ಲ: ಬೊಮ್ಮಾಯಿ

1967ರಲ್ಲಿ ಕೇವಲ 331 ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸಿ 41 ಮಂದಿ ಗೆದ್ದಿದ್ದರು. ಇದೇ ಈವರೆಗಿನ ಐತಿಹಾಸಿಕ ದಾಖಲೆ. ಆದರೆ, 1967ರ ನಂತರದ 6 ದಶಕಗಳಲ್ಲಿ ಸಾವಿರಾರು ಅಭ್ಯರ್ಥಿಗಳು ಮತ ಪರೀಕ್ಷೆಗೆ ಒಡ್ಡಿಕೊಂಡರೂ ಗೆದ್ದು ಬಂದವರು ಮಾತ್ರ ಕಡಿಮೆ. 2023ರಲ್ಲಿ ಅಧಿಕ ಮಂದಿ ಕಣಕ್ಕೆ: ಪ್ರಸಕ್ತ ಚುನಾವಣೆಯಲ್ಲಿ 918 ಪಕ್ಷೇತರರು ಮತ್ತು 693 ಮಾನ್ಯತೆ ಸಿಗದ ಪಕ್ಷಗಳ ಅಭ್ಯರ್ಥಿಗಳು ಸೇರಿ ಒಟ್ಟು 1,611 ಪಕ್ಷೇತರರು ಕಣದಲ್ಲಿದ್ದರು. ಈವರೆಗಿನ ಎಲ್ಲ ಚುನಾವಣೆಗಳಿಗಿಂತ ಅತಿ ಹೆಚ್ಚು ಪಕ್ಷೇತರರು ಮತ್ತು ಮಾನ್ಯತೆ ಸಿಗದ ಪಕ್ಷದಿಂದ ಅಭ್ಯರ್ಥಿಗಳು ಸ್ಪರ್ಧಿಸಿದ್ದು ದಾಖಲೆ.

ಗಣನೀಯ ಮತದಾನ: 1978ರಲ್ಲಿ ಅತಿ ಕಡಿಮೆ ಅಂದರೆ 9,40,677 ಮತದಾರರು ಮಾತ್ರ ಪಕ್ಷೇತರರಿಗೆ ಬೆಂಬಲ ಕೊಟ್ಟಿದ್ದಾರೆ. ನಂತರದಲ್ಲಿ ಪಕ್ಷೇತರರ ಪರ ಮತದಾನ ಪ್ರಮಾಣ ಗಣನೀಯ ಏರಿಕೆ ಕಂಡಿದೆ. ಪ್ರಸಕ್ತ 2023ರ ಚುನಾವಣೆಯಲ್ಲಿ 22,54,882 (ಶೇ.5.81)ಮತದಾರರು ಸ್ವತಂತ್ರರ ಪರ ಮತ ನೀಡಿದ್ದಾರೆ. 1999ರಲ್ಲಿ 26,66,444 ಮತದಾರರು ಹಕ್ಕು ಚಲಾಯಿಸಿದ್ದಾರೆ. 2013ರಲ್ಲಿ 23,13,386 ಮತ್ತು 1967ರಲ್ಲಿ 21,29,786 ಮತದಾರರು ಪಕ್ಷೇತರರ ಪರ ವೋಟ್‌ ಮಾಡಿದ್ದಾರೆ.

ಸ್ವತಂತ್ರರು ಅತಂತ್ರರೇ!: 1967ರಲ್ಲಿ ಬರೊಬ್ಬರಿ 41 ಕ್ಷೇತ್ರಗಳಲ್ಲಿ ತಮ್ಮ ಪ್ರಭುತ್ವ ಸಾಧಿಸುವ ಮೂಲಕ ಪಕ್ಷಗಳು ಮತ್ತು ಸರ್ಕಾರವನ್ನು ಕಪಿಮುಷ್ಟಿಯಲ್ಲಿರಿಸಿಕೊಂಡಿದ್ದ ಪಕ್ಷೇತರರು 2018ರ ಹೊತ್ತಿಗೆ ಸಂಪೂರ್ಣ ರಾಷ್ಟ್ರೀಯ ಪಕ್ಷಗಳ ಅಬ್ಬರದ ಮುಂದೆ ಪ್ರಭಾವ ಕಳೆದುಕೊಂಡರು. ಈಗ 2023ರ ಚುನಾವಣೆಯಲ್ಲೂ ಅದೇ ಆಗಿದೆ. ಈ ಬಾರಿ ಅದೆಷ್ಟೇ ಪ್ರಭಾವಿಗಳು ಪಕ್ಷೇತರರಾಗಿ ಕಣಕ್ಕಿಳಿದಿದ್ದರೂ ನಾಲ್ವರನ್ನು ಬಿಟ್ಟರೆ ಉಳಿದವರೆಲ್ಲ ನೆಲೆ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಅತಿ ಹೆಚ್ಚು ಪಕ್ಷೇತರರ ಸ್ಪರ್ಧೆ
1985 ರಲ್ಲಿ 1200 ಸ್ವತಂತ್ರರು ಸ್ಪರ್ಧೆ; 13 ಮಂದಿ ಗೆಲುವು
1994 ರಲ್ಲಿ 1256 ಸ್ಪರ್ಧಿಗಳು ಕಣಕ್ಕೆ; 18 ಮಂದಿ ಗೆಲುವು
2013 ರಲ್ಲಿ 1217 ಅಭ್ಯರ್ಥಿಗಳ ಸ್ಪರ್ಧೆ; 9 ಮಂದಿ ಗೆಲುವು
2018 ರಲ್ಲಿ 1142 ಮಂದಿ ಸ್ಪರ್ಧೆ; ಒಬ್ಬರ ಗೆಲುವು
2023 ರಲ್ಲಿ 1611 ಮಂದಿ ಸ್ಪರ್ಧೆ; ನಾಲ್ವರ ಗೆಲುವು
ಅತಿ ಕಡಿಮೆ ಪಕ್ಷೇತರರು ಕಣಕ್ಕೆ; ಗೆದ್ದವರು ಅತಿ ಹೆಚ್ಚು
1957 ರಲ್ಲಿ 251 ಜನ ಸ್ಪರ್ಧೆ. 35 ಮಂದಿಗೆ ಗೆಲುವು
1967 ರಲ್ಲಿ 331 ಸ್ವತಂತ್ರ ಅಭ್ಯರ್ಥಿಗಳ ಸ್ಪರ್ಧೆ. 41 ಮಂದಿಗೆ ಗೆಲುವು
1962 ರಲ್ಲಿ 179 ಜನ ಸ್ಪರ್ಧೆ, 27 ಮಂದಿಗೆ ಗೆಲುವು

ಸಿದ್ದುಗೆ ಸಹಕಾರ ಕೊಟ್ಟಿದ್ದೆ, ಅವರೂ ಕೊಡುವ ವಿಶ್ವಾಸವಿದೆ​​: ಡಿ.ಕೆ.ಶಿವಕುಮಾರ್‌

ಪಕ್ಷೇತರರ ಪರ ಅತಿ ಹೆಚ್ಚು ಮತದಾನ
2023ರಲ್ಲಿ 22,54,882 ಮತ
2013 ರಲ್ಲಿ 23,13,386 ಮತ
1999 ರಲ್ಲಿ 26,66,444 ಮತ
1967 ರಲ್ಲಿ 21,29,786 ಮತ

ಅತಿ ಕಡಿಮೆ ಮತದಾನ
1978ರಲ್ಲಿ ಅತಿ ಕಡಿಮೆ ಅಂದರೆ 9,40,677 ಮತದಾರರು ಮಾತ್ರ ಪಕ್ಷೇತರರಿಗೆ ಬೆಂಬಲ ಕೊಟ್ಟಿದ್ದಾರೆ.

Latest Videos
Follow Us:
Download App:
  • android
  • ios