Asianet Suvarna News Asianet Suvarna News

Karnataka Assembly Election 2023; ಟಿಕೆಟ್‌ ಕೋರಿದ ಅಪ್ಪ-ಮಕ್ಕಳ ಜೋಡಿ ಸಂಖ್ಯೆ 10ಕ್ಕೆ ಏರಿಕೆ!

  • ಟಿಕೆಟ್‌ ಕೋರಿದ ಅಪ್ಪ-ಮಕ್ಕಳ ಜೋಡಿ ಸಂಖ್ಯೆ 10ಕ್ಕೆ ಏರಿಕೆ
  • ಕಾಂಗ್ರೆಸ್‌ ವಿಧಾನಸಭಾ ಟಿಕೆಟ್‌ಗೆ ಅರ್ಜಿ ಸಲ್ಲಿಕೆ
The number of father-son pairs who requested tickets has increased to 10 congress rav
Author
First Published Nov 22, 2022, 10:26 PM IST

ಬೆಂಗಳೂರು (ನ.22) : ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರುವ ಅಪ್ಪ-ಮಕ್ಕಳ ಜೋಡಿ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಟಿಕೆಟ್‌ ಕೋರಿ ಈ ಹಿಂದೆ ಅರ್ಜಿ ಸಲ್ಲಿಸಿದ್ದ 8 ಜೋಡಿಗಳ ಜತೆಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ, ಹಾಲಿ ಶಾಸಕ ಪಿ.ಟಿ.ಪರಮೇಶ್ವರ ನಾಯಕ್‌ ಮತ್ತು ಅವರ ಪುತ್ರ ಭರತ್‌ ಟಿಕೆಟ್‌ಗಾಗಿ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ.

ಸಿದ್ದರಾಮಯ್ಯ ಅವರು ತಮ್ಮ ಅರ್ಜಿಯಲ್ಲಿ ಯಾವುದೇ ಕ್ಷೇತ್ರದ ಹೆಸರು ನಮೂದಿಸಿಲ್ಲ. ಯತೀಂದ್ರ ಅವರು ಹಾಲಿ ಪ್ರತಿನಿಧಿಸುವ ವರುಣ ಕ್ಷೇತ್ರದಿಂದ, ಪರಮೇಶ್ವರ ನಾಯಕ್‌ ತಮ್ಮ ಹಾಲಿ ಕ್ಷೇತ್ರ ಹೂವಿನಹಡಗಲಿ ಮತ್ತು ಅವರ ಪುತ್ರ ಭರತ್‌ಗೆ ಶಿರಹಟ್ಟಿಯಿಂದ ಸ್ಪರ್ಧೆಗೆ ಅರ್ಜಿ ಸಲ್ಲಿಸಿದ್ದಾರೆ. ತನ್ಮೂಲಕ ಟಿಕೆಟ್‌ ಕೇಳಿರುವ ಅಪ್ಪ-ಮಕ್ಕಳ ಜೋಡಿ ಸಂಖ್ಯೆ ಹತ್ತಕ್ಕೇರಿದೆ.

ಕಾಂಗ್ರೆಸ್‌ ಟಿಕೆಟ್‌ಗೆ ಅರ್ಜಿ: ಅಪ್ಪ ಮಕ್ಕಳ ಸಂಖ್ಯೆ 7ಕ್ಕೇರಿಕೆ

ಇದಕ್ಕೂ ಮೊದಲು ಪಾವಗಡ ಶಾಸಕ ವೆಂಕಟರವಣಪ್ಪ ಹಾಗೂ ಅವರ ಪುತ್ರ ವೆಂಕಟೇಶ್‌ ಇಬ್ಬರೂ ಪಾವಗಡ ಕೇತ್ರಕ್ಕೆ, ಮಾಜಿ ಶಾಸಕ ದಿವಾಕರ್‌ಬಾಬು ಹಾಗೂ ಅವರ ಪುತ್ರ ಹನುಮ ಕಿಶೋರ್‌ ಇಬ್ಬರೂ ಬಳ್ಳಾರಿ ಕ್ಷೇತ್ರಕ್ಕೆ, ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರು ನಂಜನಗೂಡು ಕ್ಷೇತ್ರ ಹಾಗೂ ಅವರ ಪುತ್ರ ಸುನೀಲ್‌ ಬೋಸ್‌ ಟಿ. ನರಸೀಪುರ ಕ್ಷೇತ್ರ, ಮತ್ತೊಬ್ಬ ಮಾಜಿ ಸಚಿವ ಶಿವಾನಂದ ಪಾಟೀಲ ಅವರು ವಿಜಯಪುರ ನಗರ ಹಾಗೂ ಅವರ ಪುತ್ರಿ ಸಂಯುಕ್ತಾ ಪಾಟೀಲ ಬಸವನ ಬಾಗೇವಾಡಿ ಕ್ಷೇತ್ರ, ಬಿ.ಬಿ. ಚಿಮ್ಮನಕಟ್ಟಿಹಾಗೂ ಅವರ ಪುತ್ರ ಭೀಮಸೇನ ಚಿಮ್ಮನಕಟ್ಟಿಬಾದಾಮಿ ಕ್ಷೇತ್ರದ ಟಿಕೆಟ್‌ಗೆ, ಹಿರಿಯ ನಾಯಕ ಅಲ್ಲಂ ವೀರಭದ್ರಪ್ಪ ಹಾಗೂ ಅವರ ಪುತ್ರ ಅಲ್ಲಂ ಪ್ರಶಾಂತ್‌ ಅವರು ಬಳ್ಳಾರಿ ಕ್ಷೇತ್ರಕ್ಕೆ, ಬೆಂಗಳೂರಿನ ವಿಜಯನಗರ ಕ್ಷೇತ್ರಕ್ಕೆ ಎಂ. ಕೃಷ್ಣಪ್ಪ ಹಾಗೂ ಗೋವಿಂದರಾಜ ನಗರ ಕ್ಷೇತ್ರಕ್ಕೆ ಕೃಷ್ಣಪ್ಪ ಪುತ್ರ ಪ್ರಿಯ ಕೃಷ್ಣ, ರಾಮಲಿಂಗಾರೆಡ್ಡಿ ಬಿಟಿಎಂ ಬಡಾವಣೆ ಹಾಗೂ ಪುತ್ರಿ ಸೌಮ್ಯಾರೆಡ್ಡಿ ಜಯನಗರ ಕ್ಷೇತ್ರಕ್ಕೆ ಅರ್ಜಿ ಸಲ್ಲಿಸಿದ್ದರು.

ಮಾವ ಅಳಿಯ: ಮತ್ತೊಂದೆಡೆ ಮಾಜಿ ಸಚಿವ ಎಚ್‌.ಆಂಜನೇಯ (ಹೊಳಲ್ಕೆರೆ) ಮತ್ತು ಅವರ ಅಳಿಯ (ಅಕ್ಕನ ಮಗ) ಎಚ್‌.ಎಸ್‌.ಬಸವಂತಪ್ಪ ಅವರು ಮಾಯಕೊಂಡ ಕ್ಷೇತ್ರದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ರಾಜ್ಯ ರಾಜಕಾರಣ ಬಯಸಿದ ಮಾಜಿ ಸಂಸದರು

ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್‌ನ ಮೂವರು ಮಾಜಿ ಸಂಸದರು ರಾಜ್ಯ ರಾಜಕಾರಣದತ್ತ ಮುಖ ಮಾಡುತ್ತಿದ್ದು, ಮುಂಬರುವ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಚಾಮರಾಜನಗರದ ಮಾಜಿ ಸಂಸದ ಆರ್‌.ಧ್ರುವನಾರಾಯಣ, ಕೋಲಾರ ಮಾಜಿ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಮತ್ತು ಚಿತ್ರದುರ್ಗದ ಮಾಜಿ ಸಂಸದ ಜಿ.ಎನ್‌.ಚಂದ್ರಪ್ಪ 2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ಕೋರಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಆರ್‌.ಧ್ರುವನಾರಾಯಣ ಅವರು ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್‌ ಕೋರಿ ಕೆಲ ದಿನಗಳ ಹಿಂದೆಯೇ ಅರ್ಜಿ ಹಾಕಿದ್ದಾರೆ. ಕೆ.ಎಚ್‌.ಮುನಿಯಪ್ಪ ಮತ್ತು ಚಂದ್ರಪ್ಪ ಸೋಮವಾರವಷ್ಟೆಅರ್ಜಿ ಸಲ್ಲಿಸಿದ್ದು ಅರ್ಜಿಯಲ್ಲಿ ಕ್ಷೇತ್ರವನ್ನು ನಮೂದಿಸಿಲ್ಲ. ಬದಲಿಗೆ ಹೈಕಮಾಂಡ್‌ ನಿರ್ಧಾರಕ್ಕೆ ಬಿಟ್ಟಿರುವುದಾಗಿ ಹೇಳಿದ್ದಾರೆ. ಮಾಹಿತಿ ಪ್ರಕಾರ ಮುನಿಯಪ್ಪ ಅವರು ದೇವನಹಳ್ಳಿ ಕ್ಷೇತ್ರದಿಂದ, ಚಂದ್ರಪ್ಪ ಅವರು ಪಾವಗಡ ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತಿ ವಹಿಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ.

ಅಪ್ಪ-ಮಕ್ಕಳಿಂದ ಕಾಂಗ್ರೆಸ್ ಅಧಪತನ: ನಿಜವಾಯ್ತು BSY ಭವಿಷ್ಯ

ಹೈಕಮಾಂಡ್‌ಗೆ ಕ್ಷೇತ್ರದ ಆಯ್ಕೆ ಬಿಟ್ಟನಾಲ್ವರು!

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ನಾಲ್ವರು ಪ್ರಮುಖ ನಾಯಕರು ಟಿಕೆಟ್‌ಗಾಗಿ ಸಲ್ಲಿಸಿರುವ ಅರ್ಜಿಯಲ್ಲಿ ಯಾವುದೇ ಕ್ಷೇತ್ರದ ಹೆಸರು ನಮೂದಿಸದೆ ಹೈಕಮಾಂಡ್‌ ಆಯ್ಕೆಗೆ ಬಿಟ್ಟಿದ್ದಾರೆ. ಸಿದ್ದರಾಮಯ್ಯ ಅವರಲ್ಲದೆ ಮಾಜಿ ಸಂಸದರಾದ ಕೆ.ಎಚ್‌.ಮುನಿಯಪ್ಪ, ಚಂದ್ರಪ್ಪ ಮತ್ತು ಮಾಜಿ ಸಚಿವ ಎಚ್‌.ಎಂ.ರೇವಣ್ಣ ಪಕ್ಷದ ಟಿಕೆಟ್‌ಗಾಗಿ ಸಲ್ಲಿಸಿರುವ ಅರ್ಜಿಯಲ್ಲಿ ಕ್ಷೇತ್ರದ ಹೆಸರು ದಾಖಲಿಸಿಲ್ಲ. ಬದಲಿಗೆ ಹೈಕಮಾಂಡ್‌ ಹೇಳಿದ ಕ್ಷೇತ್ರದಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿರುವುದು ಕುತೂಹಲ ಮೂಡಿಸಿದೆ.

Follow Us:
Download App:
  • android
  • ios