ಜೆಡಿಎಸ್‌ ಪಕ್ಷದ ಚುಕ್ಕಾಣಿ ಪರೋಕ್ಷವಾಗಿ ನಿಖಿಲ್‌ಗೆ?: ಸದ್ಯಕ್ಕೆ ರಾಜ್ಯಾಧ್ಯಕ್ಷ HDK ಬದಲಾವಣೆ ಇಲ್ಲ

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಆಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದ್ದು, ಇನ್ನಷ್ಟು ಕಾಲ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೇ ಆ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ. 

The helm of the JDS party is indirectly to Nikhil Kumaraswamy gvd

ಬೆಂಗಳೂರು (ಜು.08): ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಆಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದ್ದು, ಇನ್ನಷ್ಟು ಕಾಲ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೇ ಆ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ. ಆದರೆ, ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಪರೋಕ್ಷವಾಗಿ ಈ ಹುದ್ದೆಯ ಜವಾಬ್ದಾರಿಗಳನ್ನು ನಿಭಾಯಿಸುವ ಮೂಲಕ ಪಕ್ಷದ ಸಂಘಟನೆ ಸಾಂಗವಾಗಿ ಮುಂದುವರೆಯಲು ನೆರವಾಗಲಿದ್ದಾರೆ ಎಂದು ತಿಳಿದು ಬಂದಿದೆ. ಲೋಕಸಭಾ ಚುನಾವಣೆಗೂ ಮೊದಲೇ ನಿಖಿಲ್ ಅವರು ಪಕ್ಷದ ಸಂಘಟನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಲು ಆರಂಭಿಸಿದ್ದರು. 

ತಂದೆ ಕುಮಾರಸ್ವಾಮಿ ಅವರ ಹೆಗಲಿಗೆ ಹೆಗಲು ನೀಡಿ ಸಭೆ- ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಇದೀಗ ಲೋಕಸಭಾ ಚುನಾವಣೆ ಮುಗಿದು ಕುಮಾರಸ್ವಾಮಿ ಅವರು ರಾಷ್ಟ್ರ ರಾಜಕಾರಣದಲ್ಲಿ ಹೆಚ್ಚು ಸಮಯ ನೀಡಬೇಕಾಗಿದ್ದರಿಂದ ಮುಂದಿನ ದಿನಗಳಲ್ಲಿ ನಿಖಿಲ್ ಅವರೇ ರಾಜ್ಯ ರಾಜಕಾರಣದ ಪ್ರಮುಖ ಜವಾಬ್ದಾರಿಗಳನ್ನು ಪರೋಕ್ಷವಾಗಿ ನಿಭಾಯಿಸಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ತಂದೆಯವರ ಜವಾಬ್ದಾರಿ ಹೊರುತ್ತೇನೆ, ಜೆಡಿಎಸ್ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ: ನಿಖಿಲ್ ಕುಮಾರಸ್ವಾಮಿ

ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇರೊಬ್ಬರನ್ನು ನೇಮಕ ಮಾಡುವ ಬಗ್ಗೆ ಜೆಡಿಎಸ್ ಪಾಳೆಯದಲ್ಲಿ ಚರ್ಚೆ ಆರಂಭವಾಗಿತ್ತು. ಇನ್ನುಳಿದ ಮುಖಂಡರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸುವ ಬದಲು ಪುತ್ರ ನಿಖಿಲ್ ಅವರನ್ನು ನೇಮಿಸುವ ಬಗ್ಗೆಯೂ ಪ್ರಸ್ತಾಪವಾಗಿತ್ತು. 

ಆದರೆ, ನಿಖಿಲ್ ಕುಮಾರಸ್ವಾಮಿ ಅವರನ್ನು ಏಕಾಏಕಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದಲ್ಲಿ ಟೀಕೆ- ಟಿಪ್ಪಣಿಗಳು ಕೇಳಿಬರಬಹುದು ಎಂಬ ಆತಂಕ ಕುಮಾರಸ್ವಾಮಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರಿಗೆ ಇದೆ ಎನ್ನಲಾಗಿದೆ.ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಇನ್ನಷ್ಟು ಕಾಲ ನಿಖಿಲ್ ಕುಮಾರಸ್ವಾಮಿ ಅವರು ಪಕ್ಷ ಸಂಘಟನೆಯಲ್ಲಿ ತೀವ್ರವಾಗಿ ತೊಡಗಿಸಿಕೊಳ್ಳಲಿ ಎಂಬ ಸಲಹೆಯನ್ನು ಪಕ್ಷ ನಾಯಕರು ನೀಡಿದ್ದಾರೆ.

ಜೆಡಿಎಸ್ ಉಳಿಯಲ್ಲ ಎನ್ನುವವರಿಗೆ ಜನರಿಂದ ತಕ್ಕ ಉತ್ತರ: ನಿಖಿಲ್ ಕುಮಾರಸ್ವಾಮಿ

ಶನಿವಾರ ನಡೆದ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಾಮೂಹಿಕ ಜವಾಬ್ದಾರಿ ಮೂಲಕ ಸಂಘಟನೆಗೆ ಹೆಚ್ಚು ಶಕ್ತಿ ತುಂಬಲು ನಿರ್ಧರಿಸಲಾಗಿತ್ತು. ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿ ಅವರು ಸಂಘಟನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಕೊಳ್ಳಬೇಕು ಎಂಬ ಸಲಹೆಯನ್ನು ಸಭೆಯಲ್ಲಿದ್ದ ಹಲವು ನೀಡಿದ್ದರು. ಅದರಂತೆ ನಿಖಿಲ್ ಕುಮಾರಸ್ವಾಮಿ ಅವರು ಪಕ್ಷದ ಸಂಘಟನೆಯಲ್ಲಿ ಹೆಚ್ಚು ಸಮಯ ತೊಡಗಿಕೊಳ್ಳಲಿದ್ದಾರೆ. ಅಲ್ಲದೇ ಎಲ್ಲ ನಾಯಕರ ಸಲಹೆ ಮತ್ತು ವಿಶ್ವಾಸವನ್ನು ಪಡೆದುಕೊಳ್ಳುವಂತೆ ತಿಳಿಸಲಾಗಿದೆ ಎಂದು ಖುದ್ದು ಕುಮಾರಸ್ವಾಮಿ ಅವರೇ ಮಾಹಿತಿ ನೀಡಿದ್ದರು.

Latest Videos
Follow Us:
Download App:
  • android
  • ios