ಜೆಡಿಎಸ್ ಉಳಿಯಲ್ಲ ಎನ್ನುವವರಿಗೆ ಜನರಿಂದ ತಕ್ಕ ಉತ್ತರ: ನಿಖಿಲ್ ಕುಮಾರಸ್ವಾಮಿ
ಲೋಕಸಭಾ ಚುನಾವಣೆ ನಂತರ ಜೆಡಿಎಸ್ ಪಕ್ಷ ಉಳಿಯಲ್ಲ ಎನ್ನುವವರಿಗೆ ಜಿಲ್ಲೆಯ ಜನರು ತಕ್ಕ ಉತ್ತರ ನೀಡಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಮದ್ದೂರು (ಜೂ.16): ಲೋಕಸಭಾ ಚುನಾವಣೆ ನಂತರ ಜೆಡಿಎಸ್ ಪಕ್ಷ ಉಳಿಯಲ್ಲ ಎನ್ನುವವರಿಗೆ ಜಿಲ್ಲೆಯ ಜನರು ತಕ್ಕ ಉತ್ತರ ನೀಡಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಪಟ್ಟಣದಲ್ಲಿ ಕೇಂದ್ರ ಸಚಿವ, ಎಚ್ .ಡಿ.ಕುಮಾರಸ್ವಾಮಿ ಅವರೊಂದಿಗೆ ಬೃಹತ್ ರೋಡ್ ಶೋ ಮೂಲಕ ಆಗಮಿಸಿದಾಗ ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲೇ ಅತಿ ಹೆಚ್ಚು ದಾಖಲೆ ಮತಗಳಿಂದ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿದ್ದೀರಿ. ಇದರಲ್ಲಿ ಮದ್ದೂರು ತಾಲೂಕಿನಲ್ಲೇ 56 ಸಾವಿರಕ್ಕೂ ಹೆಚ್ಚು ಮತಗಳನ್ನು ಕೊಟ್ಟಿದ್ದೀರಿ. ನಿಮ್ಮ ಆಶೀರ್ವಾದದಿಂದ ನಮಗೆ ಶಕ್ತಿ ಬಂದಿದೆ ಎಂದರು.
ಲೋಕಸಭೆ ಚುನಾವಣೆ ನಂತರ ಜೆಡಿಎಸ್ ಪಕ್ಷ ಉಳಿಯುವುದಿಲ್ಲ ಎಂದು ವಿರೋಧ ಪಕ್ಷದ ನಾಯಕರು ಮಾತನಾಡುತ್ತಿದ್ದನ್ನು ಕೇಳಿದ್ದೇವೆ. ಅದಕ್ಕೆ ಜಿಲ್ಲೆಯ ಜನರೇ ತಕ್ಕ ಉತ್ತರ ನೀಡುವ ಮೂಲಕ ನಮಗೆ ಶಕ್ತಿ ತುಂಬಿದ್ದಾರೆ. ಈ ಋಣವನ್ನು ನಾವು ಎಂದಿಗೂ ಮರೆಯುವುದಿಲ್ಲ ಎಂದು ತಿಳಿಸಿದರು. ಈ ಹಿಂದೆ ಲೋಕಸಭಾ ಚುನಾವಣೆಯಲ್ಲೂ ನನಗೆ 5 ಲಕ್ಷಕ್ಕಿಂತಲೂ ಹೆಚ್ಚು ಮತಗಳನ್ನು ನೀಡಿ ಬೆಂಬಲಿಸಿದ್ದೀರಿ. ನಿಮ್ಮ ನಿರೀಕ್ಷೆ ಮೀರಿ ವಾರಕ್ಕೊಮ್ಮೆ ಜಿಲ್ಲೆಯಲ್ಲಿ ಇಡೀ ದಿನ ಪ್ರವಾಸ ಮಾಡಿ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ತಿಳಿಸಿದರು.
ರಾಮನಗರದಲ್ಲಿ ಎಚ್ಡಿಕೆಗೆ ಅದ್ಧೂರಿ ಸ್ವಾಗತ: ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾಗಿ ಅಧಿಕಾರ ಸ್ವೀಕರಿಸಿದ ತರುವಾಯ ಮೊದಲ ಬಾರಿ ರಾಮನಗರಕ್ಕೆ ಆಗಮಸಿದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಜೆಡಿಎಸ್ - ಬಿಜೆಪಿ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ನಗರದ ಅರಳೀಮರ ವೃತ್ತದಿಂದ ಜನಪದ ಕಲಾಮೇಳದೊಂದಿಗೆ ಜೆಡಿಎಸ್ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಚಾಮುಂಡೇಶ್ವರಿ ದೇವಾಲಯದವರೆಗೆ ಮೆರವಣಿಗೆಯಲ್ಲಿ ಕರೆತಂದರು. ದೇವಾಲಯದ ಆವರಣದಲ್ಲಿ ಪಟಾಕಿ ಸಿಡಿಸಿ ಜೆಸಿಬಿ ಮುಖಾಂತರ ಪುಷ್ಪಾರ್ಚನೆ ಮಾಡಿದರಲ್ಲದೆ ಆರತಿ ಬೆಳಗಿ ಕುಮಾರಸ್ವಾಮಿ ಅವರನ್ನು ಸ್ವಾಗತಿಸಿದರು.
ಮೈಸೂರು ಮೃಗಾಲಯವನ್ನು ವಿಶ್ವ ಮಟ್ಟದ ಪ್ರವಾಸಿ ತಾಣ ಮಾಡಲು ಕ್ರಮ: ಸಚಿವ ಈಶ್ವರ್ ಖಂಡ್ರೆ
ನಂತರ ದೇವಾಲಯದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜೊತೆಯಲ್ಲಿ ಪೂಜೆಯಲ್ಲಿ ಪಾಲ್ಗೊಂಡರು. ದೇವಾಲಯದಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಹೂವಿನಹಾರ, ಶಾಲು ಹಾಕಿ ಅಭಿನಂದಿಸಿದರು. ಈ ವೇಳೆ ರಾಮನಗರದಲ್ಲಿ ಸರ್ಕಾರಿ ರೇಷ್ಮೆ ಫಿಲೇಚಾರ್, ರೇಷ್ಮೆ ನೂಲು ಬಿಚ್ಚಾಣಿಕೆ, ವಸ್ತ್ರ ತಯಾರಿಕೆ ಫಿಲೇಚರ್ ಕಾರ್ಖಾನೆ ರಾಮನಗರದಲ್ಲಿ ಪ್ರಾರಂಭಿಸಬೇಕು. ಫಿಲೇಚರ್ ಕಾರ್ಮಿಕರು ತೀರ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದು ಇವರ ನೆರವಿಗೆ ಧಾವಿಸಿ ಉತ್ತಮ ಉದ್ಯೋಗ ಮತ್ತು ಕಾರ್ಮಿಕರಿಗೆ ನಿವೇಶನ ನೀಡಬೇಕೆಂದು ವಕೀಲ ವಿನೋದ್ ಭಗತ್ ಮುಖಂಡರಾದ ಲೊಕೇಶ್, ಜಯಕುಮಾರ್, ಕೆಂಪರಾಜು ಸೇರಿದಂತೆ ಹಲವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದರು.