ಕ್ಷೇತ್ರದ ಜನರ ಏಳಿಗೆಗಾಗಿ ದುಡಿಯುವ ನನ್ನ ಉತ್ಸಾಹ ಎಂದಿಗೂ ಕಡಿಮೆ ಆಗಲ್ಲ ಎಂದು ಹು-ಧಾ ಸೆಂಟ್ರಲ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಗದೀಶ ಶೆಟ್ಟರ್‌ ಹೇಳಿದರು.

ಹುಬ್ಬಳ್ಳಿ (ಏ.29) : ಕ್ಷೇತ್ರದ ಜನರ ಏಳಿಗೆಗಾಗಿ ದುಡಿಯುವ ನನ್ನ ಉತ್ಸಾಹ ಎಂದಿಗೂ ಕಡಿಮೆ ಆಗಲ್ಲ ಎಂದು ಹು-ಧಾ ಸೆಂಟ್ರಲ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಗದೀಶ ಶೆಟ್ಟರ್‌ ಹೇಳಿದರು.

ಅವರು ಹು-ಧಾ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದ ಅಕ್ಷಯ ಕಾಲನಿಯ ಪ್ರಮುಖರನ್ನು ಹಾಗೂ ವಾರ್ಡ್‌ ಸಂಖ್ಯೆ 48, 49ರ ವಿವಿಧ ಬಡಾವಣೆ, ಸಂಖ್ಯೆ 55ರ ಆಸರ ಹೊಂಡ ಪ್ರದೇಶಕ್ಕೆ ಭೇಟಿ ನೀಡಿ ಚುನಾವಣಾ ಪ್ರಚಾರ ಸಭೆ ನಡೆಸಿ ಮತಯಾಚಿಸಿದರು.

ಕ್ಷೇತ್ರಕ್ಕಾಗಿ, ಕ್ಷೇತ್ರದ ಜನರ ಒಳಿತಿಗಾಗಿ ನಾನು ಸದಾ ಶ್ರಮವಹಿಸಿ ಕಾರ್ಯನಿರ್ವಾಹಿಸುತ್ತೇನೆ. ಮುಂದೆಯೂ ಈ ಕಾರ್ಯ ಹೀಗೆ ಮುಂದುವರಿಯುತ್ತದೆ. ಅದಕ್ಕಾಗಿ ನಿಮ್ಮೆಲ್ಲರ ಸಹಕಾರ ನನಗೆ ಅತ್ಯಂತ ಅವಶ್ಯಕ. ಶಿರೂರ ಪಾರ್ಕ್, ಅಕ್ಷಯ ಕಾಲನಿ ಮುಂತಾದ ಬಡಾವಣೆಯಲ್ಲಿ ಬರುವ ಟೆಂಡರ್‌ ಶ್ಯೂರ್‌ ರಸ್ತೆ ಉತ್ತರ ಕರ್ನಾಟಕದ ಪ್ರಥಮ ಟೆಂಡರ್‌ ಶ್ಯೂರ ರಸ್ತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ ಪ್ರಮುಖವಾಗಿ ತೋಳನಕೆರೆ ಅಭಿವೃದ್ಧಿ ಹಾಗೂ ಸುತ್ತಲಿನ ಅನೇಕ ಬಡಾವಣೆಯ ಉದ್ಯಾನವನದ ಅಭಿವೃದ್ಧಿ ಪ್ರಗತಿಯಲ್ಲಿದೆ. ಕಾಳಿದಾಸ ನಗರ, ರಾಜೀವ ನಗರ, ಹನಮಂತ ನಗರ, ಶ್ರೇಯಾ ಎಸ್ಟೇಟ್‌ ಮುಂತಾದ ಬಡಾವಣೆಯಲ್ಲಿ ಪ್ರಮುಖ ರಸ್ತೆಗಳ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಕ್ಷೇತ್ರದ ಅಭಿವೃದ್ಧಿಗೆ ಇಂದಿಗೂ ಬದ್ಧ ಎಂದರು.

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ; ಬಿಜೆಪಿಯಿಂದ 27 ಶೆಟ್ಟರ್‌ ಬೆಂಬಲಿಗರ ಉಚ್ಚಾಟನೆ

ನಂತರ ಜವಳಿ ಗಾರ್ಡನ್‌ ವಿದ್ಯಾನಗರದ ಕೆಲ ಭಾಗ, ವಾರ್ಡ್‌ ನಂ. 43ರಲ್ಲಿ ಬರುವ ಅಂಬಿಕಾ ನಗರ, ರಾಜೇಂದ್ರ ಪ್ರಸಾದ್‌ ಕಾಲೋನಿ, ಶಾಂತಿ ಕಾಲೋನಿಯಲ್ಲಿ ಪ್ರಚಾರ ಮಾಡಲಾಯಿತು. ವಾರ್ಡ್‌ ನಂ. 55ರಲ್ಲಿ ಬರುವ ಸಿಕ್ಕಲಗಾರ ಸಮಾಜದ ಪ್ರಮುಖರೊಂದಿಗೆ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ಸಲೀಂ ಅಹ್ಮದ, ವಿಧಾನ ಪರಿಷತ್‌ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಹಿರಿಯ ಮುಖಂಡ ಪ್ರಫುಲಚಂದ್ರ ರಾಯನಗೌಡ್ರ, ಮಾಜಿ ಮೇಯರ್‌ ಅನೀಲಕುಮಾರ ಪಾಟೀಲ, ರಜತ ಉಳ್ಳಾಗಡ್ಡಿಮಠ ಸೇರಿದಂತೆ ಹಲವರಿದ್ದರು.