ಪ್ರತ್ಯೇಕ ರಾಷ್ಟ್ರದ ಕೂಗು ಅನಿವಾರ್ಯ: ಸಚಿವ ಎಂ.ಸಿ.ಸುಧಾಕರ್
ಪ್ರತ್ಯೇಕ ದೇಶದ ಕೂಗು ವಿಚಾರ ಸಂಸದ ಡಿ.ಕೆ.ಸುರೇಶ್ ಅತ್ಯಂತ ನೋವಿನಿಂದ ಮಾತನಾಡಿದ್ದಾರೆ. ಹಿಂದಿ ಹೇರಿಕೆ, ದಕ್ಷಿಣ ರಾಜ್ಯಗಳ ಆರ್ಥಿಕ ವಿಚಾರದಲ್ಲಿ ತಾರತಮ್ಯ, ಸೇರಿದಂತೆ ಸಾಕಷ್ಟು ಅನ್ಯಾಯವಾಗುತ್ತಿದೆ ಎಂದು ವಾಸ್ತವವನ್ನೇ ಪ್ರಸ್ತಾಪಿಸಿ, ನಾನು ಭಾರತೀಯ ಎಂದೂ ಹೇಳಿದ್ದಾರೆ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ (ಫೆ.03): ಪ್ರತ್ಯೇಕ ದೇಶದ ಕೂಗು ವಿಚಾರ ಸಂಸದ ಡಿ.ಕೆ.ಸುರೇಶ್ ಅತ್ಯಂತ ನೋವಿನಿಂದ ಮಾತನಾಡಿದ್ದಾರೆ. ಹಿಂದಿ ಹೇರಿಕೆ, ದಕ್ಷಿಣ ರಾಜ್ಯಗಳ ಆರ್ಥಿಕ ವಿಚಾರದಲ್ಲಿ ತಾರತಮ್ಯ, ಸೇರಿದಂತೆ ಸಾಕಷ್ಟು ಅನ್ಯಾಯವಾಗುತ್ತಿದೆ ಎಂದು ವಾಸ್ತವವನ್ನೇ ಪ್ರಸ್ತಾಪಿಸಿ, ನಾನು ಭಾರತೀಯ ಎಂದೂ ಹೇಳಿದ್ದಾರೆ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು. ನಗರದ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿ, ರೋಗಿಗಳ ಸಮಸ್ಯೆ ಆಲಿಸಿದ ನಂತರ ಸುದ್ದಿಗಾರರು ಸಂಸದ ಡಿ.ಕೆ.ಸುರೇಶ್ ವಿವಾದಿತ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಹಿಂದೆ ಬಿಜೆಪಿಯವರೂ ಹೇಳಿದ್ದರು: ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ದಕ್ಷಿಣ ರಾಜ್ಯಗಳು ಇದರ ಬಗ್ಗೆ ಮಾತನಾಡುತ್ತಿವೆ. ಈ ಹಿಂದೆ ಬಿಜೆಪಿಯವರು ಪ್ರತ್ಯೇಕ ಕರ್ನಾಟಕ ರಾಜ್ಯ ಆಗಬೇಕೆಂದು ಮಾತನಾಡುತ್ತಿದ್ದರು. ಆಗ ಯಾಕೆ ಇದಕ್ಕೆ ಪ್ರತಿರೋಧ ಮಾಡಲಿಲ್ಲ. ಮಂಡ್ಯದಲ್ಲಿ ಬಿಜೆಪಿಯವರು ಮಾಡಿದ್ದೇನು, ರಾಷ್ಟ್ರಧ್ವಜ ಕರ್ನಾಟಕ ಧ್ವಜವನ್ನು ಹಾರಿಸಲು ಅನುಮತಿ ಪಡೆದಿದ್ದರು. ಆದರೆ ಬಿಜೆಪಿಯವರು ಮಾಡಿದ್ದೇನು, ರಾಷ್ಟ್ರಧ್ವಜ ಹಾಕಿ ಸಂಜೆ ಹನುಮನ ಧ್ವಜ ಹಾರಿಸುತ್ತಾರೆ. ನಾವ್ಯಾರು ಹಿಂದುಗಳಲ್ಲವೇ ಆಂಜನೇಯ ಬಗ್ಗೆ ನಮಗೂ ಭಕ್ತಿ ಇಲ್ಲವೇ ಎಂದು ಪ್ರಶ್ನಿಸಿದರು.
ಶೋಷಿತರ ಹೆಸರಿನಲ್ಲಿ ಸಿಎಂ ಸಿದ್ದರಾಮಯ್ಯ ಮಜಾ: ಎಚ್.ಡಿ.ಕುಮಾರಸ್ವಾಮಿ
ಅನುದಾನ ಹಂಚಿಕೆಯಲ್ಲಿ ತಾರತಮ್ಯ: ದೇಶದಲ್ಲೇ ಅತಿ ಹೆಚ್ಚು ಜಿಎಸ್‌ಟಿ ನೀಡುವ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿ ನಮ್ಮ ಕರ್ನಾಟಕ ರಾಜ್ಯವಿದೆ. ದಕ್ಷಿಣ ಭಾರತದ ತೆರಿಗೆ ಹಣವನ್ನು ಉತ್ತರ ಭಾರತಕ್ಕೆ ಹಂಚಿಕೆ ಮಾಡುತ್ತಿದ್ದಾರೆ. ಇದರಿಂದ ನಮಗೆ ಆರ್ಥಿಕವಾಗಿ ಅನ್ಯಾಯವಾಗುತ್ತಿದೆ. ನಮ್ಮ ರಾಜ್ಯಗಳ ಹಣ ನಮಗೇ ಹಂಚಿಕೆಯಾಗಬೇಕಾದರೆ ಪ್ರತ್ಯೇಕ ರಾಷ್ಟ್ರದ ಕೂಗು ಅನಿವಾರ್ಯವಾಗಿದೆ. ಮುಂದೆ ದಕ್ಷಿಣ ಭಾರತದ ರಾಜ್ಯಗಳು ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಲಿವೆ. ಪ್ರತ್ಯೇಕ ರಾಷ್ಟ್ರದ ಕೂಗು ಏಳುವ ಮುನ್ನವೇ ಕೇಂದ್ರ ಸರ್ಕಾರ ಈ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬೇಕು. ದಕ್ಷಿಣ ಭಾರತದ ತೆರಿಗೆ ಹಣವನ್ನು ದಕ್ಷಿಣ ಭಾರತಕ್ಕೇ ಖರ್ಚು ಮಾಡಬೇಕು. ನಮ್ಮ ಹಣವನ್ನು ಉತ್ತರ ಭಾರತಕ್ಕೆ ಹಂಚಿಕೆ ಮಾಡಬಾರದು ಎಂಬ ಅರ್ಥದಲ್ಲಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡರು.
ಜಿಲ್ಲಾಸ್ಪತ್ರೆಗೆ ಭೇಟಿ, ಪರಿಶೀಲನೆ: ಜಿಲ್ಲಾಸ್ಪತ್ರೆಗೆ ಧಿಡೀರ್ ಬೇಟಿ ಕೊಟ್ಟು ಪರಿಶೀಲನೆ ನಡೆಸಿದ್ದೇನೆ. ಕೆಲ ರೋಗಿಗಳಿಂದ ದೂರು ಮತ್ತು ಸಮಸ್ಯೆಗಳನ್ನು ಹೇಳಿದ್ದಾರೆ. ಆಸ್ಪತ್ರೆಯು ಶುಚಿಯಾಗಿಡಲು ರೋಗಿಗಳು ಸಹಕಾರ ನೀಡಬೇಕೆಂದರು. ತಾಯಿ ಮಕ್ಕಳ ಆಸ್ಪತ್ರೆಗೆ ಮೀಸಲಿಟ್ಟಿದ್ದ ಹಳೆ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಮಾರ್ಪಡು ಮಾಡಿದ್ದಾರೆ. ಕೋವಿಡ್ ಮೊದಲಿನಷ್ಟು ಪರಿಣಾಮಕಾರಿಯಾಗಿಲ್ಲ, 50 ಹಾಸಿಗೆಗಳನ್ನು ಕೋವಿಡ್ ಆಸ್ಪತ್ರೆಗೆ ಮೀಸಲಿಟ್ಟು, ಉಳಿದ 100 ಹಾಸಿಗೆಗಳನ್ನು ತಾಯಿ ಮಕ್ಕಳ ಆಸ್ಪತ್ರೆಗೆ ಕೊಟ್ಟು ಆಸ್ಪತ್ರೆ ತೆರೆಯುವಂತೆ ಸೂಚನೆ ನೀಡಿದ್ದೇನೆ ಎಂದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಜಾಗೃತಿ ಸಮಾವೇಶ: ಸಚಿವ ಸಂತೋಷ್ ಲಾಡ್
ಇನ್ನೂ 2 ಮಹಡಿ ನಿರ್ಮಾಣ: ಈ ಗಿನ ಜಿಲ್ಲಾಸ್ಪತ್ರೆಯ ಮೇಲೆ 8.25 ಕೋಟಿ ವೆಚ್ಚದಲ್ಲಿ ಮತ್ತೆ ಹೊಸದಾಗಿ ಎರಡು ಅಂತಸ್ತು , ಈಗಿನ ಪಾರ್ಕಿಂಗ್ ಜಾಗದಲ್ಲಿ ಇಂಟಿಗ್ರಿಟಿ ಡಯಾಗ್ನಸ್ಟಿಕ್ ಲ್ಯಾಬ್, ಸಿಟಿ,ಎಂಆರ್ ಐ, ಮತ್ತು ಆಧುನಿಕ ರಕ್ತ ಪರೀಕ್ಷಾ ಪ್ರಯೋಗಾಲಯಕ್ಕೆ ವಿನ್ಯಾಸ ಮಾಡಿದ್ದು. ಆಸ್ಪತ್ರೆಯಲ್ಲಿ ಇದಕ್ಕೆ 1.1 ಕೋಟಿ ಹಣ ಇದೆ. ಉಳಿದ ಹಣ ಬಿಡುಗಡೆ ಮಾಡಿಸಲಾಗುವುದು ಎಂದು ಹೇಳಿದರು. ಈ ವೇಳೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ,ಮೆಡಿಕಲ್ ಕಾಲೇಜಿನ ಡೀನ್ ಡಾ.ಮಂಜುನಾಥ್, ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ಪಿ.ವಿ.ರಮೇಶ್, ಮೆಡಿಸನ್ ವಿಭಾಗದ ಮುಖ್ಯಸ್ಥ ಡಾ. ರಮೇಶ್, ಉಪ ವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ಅಡಿಷನಲ್ ಎಸ್ ಪಿ.ರಾಜಾ ಇಮಾಂ ಕಾಸೀಂ ಇದ್ದರು.