ಕಾಶ್ಮೀರದಲ್ಲಿ ನಡೆದಿರುವ ದುರ್ಘಟನೆಗೆ ಭಾರತ ತಕ್ಕ ಉತ್ತರ ನೀಡಲಿದೆ. ಉಗ್ರರನ್ನು ಮಟ್ಟಹಾಕುವ ಶಕ್ತಿ ದೇಶಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಯಾವುದೇ ಕಾರಣಕ್ಕೂ ಉಗ್ರರನ್ನು ಬಿಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ರಾಯಚೂರು (ಏ.24): ಕಾಶ್ಮೀರದಲ್ಲಿ ನಡೆದಿರುವ ದುರ್ಘಟನೆಗೆ ಭಾರತ ತಕ್ಕ ಉತ್ತರ ನೀಡಲಿದೆ. ಉಗ್ರರನ್ನು ಮಟ್ಟಹಾಕುವ ಶಕ್ತಿ ದೇಶಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಯಾವುದೇ ಕಾರಣಕ್ಕೂ ಉಗ್ರರನ್ನು ಬಿಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. ನಗರದ ಹಳೆ ಡಿಸಿ ಕಚೇರಿ ಮುಂಭಾಗದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಿಜೆಪಿ ಜನಾಕ್ರೋಶ ಯಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಘಟನೆ ಹಿನ್ನೆಲೆಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆಯ ರ್‍ಯಾಲಿಯನ್ನು ಮೊಟಕುಗೊಳಿಸಲಾಗಿದೆ. 

ನಾಳೆ ಮತ್ತು ನಾಡಿದ್ದು ನಿಗದಿಯಾಗಿದ್ದ ಜನಾಕ್ರೋಶ ಯಾತ್ರೆಯನ್ನು ರದ್ದು ಪಡಿಸಲಾಗಿದ್ದು, ಉಗ್ರರ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲಾಗುವುದು ಎಂದರು. ಕಾಶ್ಮೀರದ ಉಗ್ರದಾಳಿಯಲ್ಲಿ 28 ಜನ ಜೀವ ಕಳೆದುಕೊಂಡಿದ್ದಾರೆ. ವಿದೇಶ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ರದ್ದುಪಡಿಸಿ ದೇಶಕ್ಕೆ ಮರಳಿದ್ದಾರೆ. ಅಮಿತ್‌ ಶಾ ಸಹ ಕಾಶ್ಮೀರಕ್ಕೆ ತೆರಳಿ ಪರಿಶೀಲಿಸಿದ್ದು ಸರಣಿ ಸಭೆಗಳನ್ನು ನಡೆಸಿದ್ದಾರೆ ಎಂದು ಹೇಳಿದರು. ಕಾಶ್ಮೀರ ಸಮಸ್ಯೆ ಜೀವಂತವಾಗಿರಲು ಕಳೆದ 60 ವರ್ಷಗಳ ಕಾಲ ಆಳಿದ ಕಾಂಗ್ರೆಸ್ ಆಡಳಿತವೇ ಕಾರಣವಾಗಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ 370 ರದ್ದುಪಡಿಸಿ ರಕ್ತದೋಕುಳಿ ಹರಿಯುತ್ತಿದ್ದ ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದಾರೆ. 

ಮನೇಲೆ ಇದ್ದರೂ ಓಂಪ್ರಕಾಶ್ ಹತ್ಯೆ ತಿಳಿಯದ ಸೊಸೆ: ಧರ್ಮೇಂದ್ರಗೆ ತನಿಖೆಯ ಹೊಣೆ

ಇದನ್ನು ಸಹಿಸದ ಪಾಕಿಸ್ತಾನ ಉಗ್ರ ಚಟುವಟಿಕೆಗಳನ್ನು ಆರಂಭಿಸಿದೆ. ಉಗ್ರರನ್ನು ಮಟ್ಡ ಹಾಕುವ ಶಕ್ತಿ ನಮ್ಮ ದೇಶಕ್ಕಿದೆ. ಉಗ್ರರು ಅಡಗಿ ಕುಳಿತಿದ್ದರೂ ಅವರನ್ನು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಬಿಡುವುದಿಲ್ಲ ಎಂದರು. ಪೆಟ್ರೋಲ್, ಡಿಸೆಲ್ ಬೆಲೆ ಹೆಚ್ಚಿಸಿದ್ದಾರೆ. ರೈತರ ಮೇಲೆ ಬರೆ ಎಳೆಯುವ ಕೆಲಸವಾಗಿದೆ, ಹಾಲಿನ ದರ ಹೆಚ್ಚಿಸಿದ್ದರು ರೈತರಿಗೆ ಲಾಭವಾಗಿಲ್ಲ, ಸ್ಟ್ಯಾಂಪ್ ಡ್ಯೂಟಿ ಬೆಲೆ ಹೆಚ್ಚಾಗಿದೆ. ಮಹಿಳೆಯರಿಗೆ ಉಚಿತ ಬಸ್ ಸಂಚಾರ ಘೋಷಿಸಿರುವ ಸರ್ಕಾರ ಪುರುಷರ ಪ್ರಯಾಣ ದರವನ್ನು ದುಪ್ಪಟ್ಟು ಮಾಡಿದ್ದಾರೆ. ಕೆಎಸ್ಆರ್‌ಟಿಸಿಗೆ ₹6,500 ಕೋಟಿ ಪಾವತಿಸಬೇಕು ಅದನ್ನು ನೀಡಿಲ್ಲ, ಗ್ಯಾರಂಟಿಗಳು ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ ಎಂದು ಆರೋಪಿಸಿದರು.

ಭ್ರಷ್ಟಾಚಾರದಲ್ಲಿ ಕರ್ನಾಟಕ ನಂ.1: ಈ ಮುಂಚೆ ಅಭಿವೃದ್ಧಿಯಲ್ಲಿ ದೇಶದಲ್ಲಿಯೇ ಗುಜರಾತ ಬಳಿಕ ಎರಡನೇ ಸ್ಥಾನದಲ್ಲಿದ್ದ ಕರ್ನಾಟಕ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಟಾಚಾರದಲ್ಲಿ ನಂ.1 ರಾಜ್ಯವಾಗಿದೆ. ಅಭಿವೃದ್ಧಿಗಾಗಿ ಅನುದಾನ ನೀಡುತ್ತಿಲ್ಲ, ಶಾಸಕರು ಹಣ ಕೇಳಿದರೆ ಕೊಡುತ್ತಿಲ್ಲ ಈ ಬಗ್ಗೆ ಕಾಂಗ್ರೆಸ್ ಶಾಸಕರೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ ಒಂದು ಕೈಯಲ್ಲಿ ಕೊಡುವುದು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಇಂತಹ ಬಡವರ, ರೈತ ವಿರೋಧಿ ಸರ್ಕಾರವನ್ನು ಕಿತ್ತೊಗೆಯಬೇಕಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಪ್ರಮಾಣದಲ್ಲಿ ಬಹುಮತವನ್ನು ತರುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ, ಎಂಎಲ್ಸಿ ಎನ್.ರವಿಕುಮಾರ, ಮಾಜಿ ಸಚಿವ ಬಿ.ಶ್ರೀರಾಮುಲು, ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿದರು. ಶಾಸಕರಾದ ಮಾನಪ್ಪ ಡಿ.ವಜ್ಜಲ್, ದೊಡ್ಡನಗೌಡ ಪಾಟೀಲ್, ಎಂಎಲ್ಸಿ ಶಶಿಲ್ ನಮೋಶಿ, ಮಾಜಿ ಶಾಸಕ ತಿಪ್ಪರಾಜು ಹವಲ್ದಾರ್, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಬಿ.ವಿ.ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ಮುಖಂಡರಾದ ರವೀಂದ್ರ ಜಲ್ದಾರ್, ಕೆ.ಎಂ.ಪಾಟೀಲ್, ಶಂಕರರೆಡ್ಡಿ, ಮಾಜಿ ಸಚಿವರು, ಮಾಜಿ ಶಾಸಕರು, ಮಾಜಿ ಸಂಸದರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ಮಂಡಲ ಅಧ್ಯಕ್ಷರು ಮತ್ತು ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

ಕನ್ನಡಿಗರ ತಂಟೆಗೆ ಬಂದರೆ ಜೋಕೆ: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ರ್‍ಯಾಲಿ ಮೊಟಕು, ಕಪ್ಪುಪಟ್ಟಿ ಧರಿಸಿ ಭಾಗಿ: ಜಮ್ಮು-ಕಾಶ್ಮೀರ ಉಗ್ರ ದಾಳಿ ದುರ್ಘಟನೆ ಹಿನ್ನೆಲೆಯಲ್ಲಿ ರಾಯಚೂರು ನಗರಕ್ಕೆ ಬುಧವಾರ ಸಂಜೆ ಆಗಮಿಸಿದ್ದ ಜನಾಕ್ರೋಶ ಯಾತ್ರೆ ರ್‍ಯಾಲಿಯನ್ನು ಮೊಟಕುಗೊಳಿಸಲಾಯಿತು. ಪೂರ್ವ ನಿಗದಿಯಂತೆ ನಗರದ ಚಂದ್ರಮೌಳೇಶ್ವರ ವೃತ್ತದಿಂದ ಹಳೆ ಡಿಸಿ ಕಚೇರಿ ತನಕ ರ್‍ಯಾಲಿಯನ್ನು ಏರ್ಪಡಿಸಲಾಗಿತ್ತು. ಆದರೆ ಉಗ್ರ ಹತ್ಯ ಘಟನೆ ಹಿನ್ನೆಲೆಯಲ್ಲಿ ರ್‍ಯಾಲಿ ರದ್ದು ಪಡಿಸಿ ಸಾಂಕೇತಿಕವಾಗಿ ವೇದಿಕೆ ಕಾರ್ಯಕ್ರಮವನ್ನು ನಡೆಸಲಾಯಿತು. ಉಗ್ರ ಘಟನೆ ಖಂಡಿಸಿ ಕಪ್ಪು ಪಟ್ಟಿ ಧರಿಸಿ ನಾಯಕರು ಸಮಾರಂಭಕ್ಕೆ ಆಗಮಿಸಿದ್ದರು.