ಆಡ್ವಾಣಿ ಸುದೀರ್ಘ ಸೇವೆಯನ್ನು ಒಂದೇ ಒಂದು ಘಟನೆಯಿಂದ ಅಳೆದು, ಅದಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಹೇಳಿದ್ದಾರೆ. ಜೊತೆಗೆ ಆಡ್ವಾಣಿ ಪರ ಬ್ಯಾಟಿಂಗ್ ಮಾಡಲು ನೆಹರೂ ಮತ್ತು ಇಂದಿರಾ ಪ್ರಕರಣ ಉಲ್ಲೇಖಿಸಿ ಮತ್ತೆ ಕಾಂಗ್ರೆಸ್‌ಗೆ ಮುಜುಗರ ಉಂಟು ಮಾಡಿದ್ದಾರೆ

ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಲಾಲ್‌ ಕೃಷ್ಣ ಆಡ್ವಾಣಿ ಸುದೀರ್ಘ ಸೇವೆಯನ್ನು ಒಂದೇ ಒಂದು ಘಟನೆಯಿಂದ ಅಳೆದು, ಅದಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಹೇಳಿದ್ದಾರೆ. ಜೊತೆಗೆ ಆಡ್ವಾಣಿ ಪರ ಬ್ಯಾಟಿಂಗ್ ಮಾಡಲು ನೆಹರೂ ಮತ್ತು ಇಂದಿರಾ ಪ್ರಕರಣ ಉಲ್ಲೇಖಿಸಿ ಮತ್ತೆ ಕಾಂಗ್ರೆಸ್‌ಗೆ ಮುಜುಗರ ಉಂಟು ಮಾಡಿದ್ದಾರೆ. ಕಾಂಗ್ರೆಸ್‌ ಸಹಜವಾಗಿ ಇದರಿಂದ ಅಂತರ ಕಾಯ್ದುಕೊಂಡಿದೆ.

ಆಡ್ವಾಣಿಯವರ ಜನ್ಮದಿನಕ್ಕೆ ಶುಭಕೋರಿದ ತರೂರ್‌

ಆಡ್ವಾಣಿಯವರ ಜನ್ಮದಿನಕ್ಕೆ ಶುಭಕೋರಿ ತರೂರ್‌ ಎಕ್ಸ್‌ನಲ್ಲಿ ಹಾಕಿದ್ದ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದ ವಕೀಲರೊಬ್ಬರು, ‘ದೇಶದಲ್ಲಿ ದ್ವೇಷ ಬೀಜವನ್ನು ಬಿತ್ತುವುದು ಸಮಾಜಸೇವೆ ಅಲ್ಲ’ ಎನ್ನುವ ಮೂಲಕ ಆಡ್ವಾಣಿ ರಾಮಜನ್ಮಭೂಮಿ ಹೋರಾಟದ ಮುಂದಾಳತ್ವ ವಹಿಸಿದ್ದನ್ನು ಉಲ್ಲೇಖಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ತರೂರ್‌, ‘ಒಪ್ಪುತ್ತೇನೆ. ಆ ಘಟನೆ ಮಹತ್ವಪೂರ್ಣವಾದುದಾದರೂ, ಅವರು ಅಷ್ಟು ವರ್ಷಗಳ ಕಾಲ ಮಾಡಿದ ಸಮಾಜ ಸೇವೆಯನ್ನು ಅಷ್ಟಕ್ಕೇ ಸೀಮಿತಗೊಳಿಸುವುದು ಸರಿಯಲ್ಲ’ ಎಂದಿದ್ದರು. ಜತೆಗೆ, ‘ನೆಹರು ಅವರ ಕೆಲಸವನ್ನು ಚೀನಾದೊಂದಿಗಿನ ಸಂಘರ್ಷದಲ್ಲಿ ಆದ ಹಿನ್ನಡೆಯಿಂದ ಅಥವಾ ಇಂದಿರಾ ಗಾಂಧಿ ಅವರ ಸೇವೆಯನ್ನು ತುರ್ತುಸ್ಥಿತಿ ಹೇರಿಕೆಯಿಂದ ಅಳೆಯಲು ಸಾಧ್ಯವಿಲ್ಲ. ಇದು ಆಡ್ವಾಣಿಯವರಿಗೂ ಅನ್ವಯಿಸುತ್ತದೆ’ ಎಂದು ವಿವರಿಸಿದ್ದರು.

ಕಾಂಗ್ರೆಸ್‌ ಪ್ರತಿಕ್ರಿಯೆ:

ತರೂರ್‌ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿರುವ ಕಾಂಗ್ರೆಸ್‌, ‘ಇದು ಅವರ ವೈಯಕ್ತಿಕ ಅಭಿಪ್ರಾಯ. ಅವರು ಇತ್ತೀಚೆಗೆ ನೀಡುತ್ತಿರುವ ಹಲವು ಹೇಳಿಕೆಗಳಿಗೂ, ಪಕ್ಷಕ್ಕೂ ಸಂಬಂಧವಿಲ್ಲ’ ಎಂದಿದೆ.