ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಅಘಾಡಿ ಸರ್ಕಾರ ಪತನಗೊಂಡು ಇದೀಗ ಬಿಜೆಪಿ ಹಾಗೂ ಶಿವಸೇನೆ ಸರ್ಕಾರ ರಚನೆಯಾಗಿದೆ. ಇದೀಗ ತೆಲಂಗಾಣದಲ್ಲಿ ಆಡಳಿತರೂಢ ಟಿಆರ್‌ಎಸ್ ಪಕ್ಷದ 15 ರಿಂದ 18 ಶಾಸಕರು ಬಿಜೆಪಿಯತ್ತ ಮುಖಮಾಡಿದ್ದಾರೆ. ಐವರು ಕಾಂಗ್ರೆಸ್ ಶಾಸಕರೂ ಬಿಜೆಪಿಗೆ ಆಗಮಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಮಾತು ಇದೀಗ ತೆಲಂಗಾಣದಲ್ಲಿ ರಾಜಕೀಯ ಬಿಕ್ಕಟ್ಟಿಗೆ ದಾರಿ ಮಾಡಿದೆ. ಸರ್ಕಾರ ಪತನವಾಗಲಿದೆ ಅನ್ನೋ ಮಾತುಗಳು ಕೇಳಿಬಂದಿದೆ.
ಹೈದರಾಬಾದ್(ಆ.03): ಮಹಾರಾಷ್ಟ್ರದಲ್ಲಿ ಶಿವಸೇನೆಯ ಏಕನಾಥ್ ಶಿಂದೆ ಬಣದ ಬಂಡಾಯದಿಂದ ಉದ್ಧವ್ ಠಾಕ್ರೆ ನೇತೃೃತ್ವದ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಶಿವಸೇನೆ ಸರ್ಕಾರ ರಚನೆಯಾಗಿದೆ. ಇದೀಗ ಇಂತದ್ದೆ ರಾಜಕೀಯ ಬಿಕ್ಕಟ್ಟು ತೆಲಂಗಾಣದಲ್ಲಿ ತಲೆದೋರು ಸಾಧ್ಯತೆ ದಟ್ಟವಾಗಿದೆ. ಆಡಳಿತರೂಡ ಟಿಆರ್‌ಎಸ್ ಪಕ್ಷದ 15 ರಿಂದ 18 ಶಾಸಕರು ಪಕ್ಷದ ವಿರುದ್ಧ ಬಂಡಾಯವೆದ್ದಿದ್ದಾರೆ. ಇವರು ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ. ಇವರ ಜೊತೆಗೆ ಐವರು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಆಗಮಿಸಲಿದ್ದಾರೆ ಎಂದು ತೆಲಂಗಾಣ ಬಿಜೆಪಿ ನಾಯಕ ಎನ್ ವೆಂಕಟ ಸುಭಾಷ್ ಹೊಸ ಬಾಂಬ್ ಸಿಡಿಸಿದ್ದಾರೆ. ಬಿಜೆಪಿ ನಾಯಕ ಮಾತಿನ ಬೆನ್ನಲ್ಲೇ ಇದೀಗ ಟಿಆರ್‌ಎಸ್ ಪಕ್ಷದೊಳಗೆ ಭಿನ್ನಮತ ಸ್ಫೋಟಗೊಂಡಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಪೊಳ್ಳು ಭರವಸೆ ನೀಡಿ ಇದೀಗ ಜನರಿಂದ ದೂರವಾಗಿರುವ ಟಿಆರ್‌ಎಸ್ ಮೇಲೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಹೀಗಾಗಿ ಇತ್ತೀಚಿನ ಬಿಜೆಪಿ ರಥ ಯಾತ್ರೆಯಲ್ಲಿ ಅತ್ಯಧಿಕ ಜನ ಸೇರಿದ್ದಾರೆ. ಬೆಜೆಪಿಗೆ ಬೆಂಬಲಿಸಿದ್ದಾರೆ. ಟಿಆರ್‌ಎಸ್ ಆಡಳಿತ ಈ ಅವಧಿಗೆ ಅಂತ್ಯವಾಗಲಿದೆ ಎಂದು ವೆಂಕಟ ಸುಭಾಷ್ ಭವಿಷ್ಯ ನುಡಿದಿದ್ದಾರೆ.
ಟಿಆರ್‌ಎಸ್ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಭರವಸೆಗಳನ್ನು ಕ್ಷೇತ್ರದ ಮತದಾರರಿಗೆ ನೀಡಲಾಗಿತ್ತು. ಆದರೆ ಯಾವುದೂ ಈಡೇರಿಲ್ಲ. ಹೀಗಾಗಿ ಕ್ಷೇತ್ರದ ಜನರು ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಟಿಆರ್‌ಎಸ್ ಶಾಸಕರು ಇದೀಗ ಕ್ಷೇತ್ರ ಪ್ರವಾಸವನ್ನೇ ಬಿಟ್ಟಿದ್ದಾರೆ. ತೆಲಂಗಾಣ ಜನ ಬಿಜೆಪಿ ಡಬಲ್ ಎಂಜಿನ್ ಸರ್ಕಾರದ ಅವಶ್ಯತೆಯನ್ನು ಬಯಸಿದ್ದಾರೆ. ಜನರ ಬೇಡಿಕೆಗಳನ್ನು ಬಿಜೆಪಿ ಈಡೇರಿಸಲಿದೆ ಅನ್ನೋ ವಿಶ್ವಾಸ ಮೂಡಿದೆ. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಬಹುಮತ ಸಾಧಿಸಿ ಸರ್ಕಾರ ರಚಿಸಲಿದೆ ಎಂದು ಸುಭಾಷ್ ಹೇಳಿದ್ದಾರೆ.
ಕೇಸರಿ ಕಲರವಕ್ಕೆ ಕೆರಳಿದ ತೆಲಂಗಾಣ TRS, ಮೋದಿ ಕಾರ್ಯಕ್ರಮದ ಹೊರಭಾಗದಲ್ಲಿ ಜೈ ಕೆಸಿಆರ್ ಬಲೂನ್!
ತೆಲಂಗಾಣದಲ್ಲಿ ಬಿಜೆಪಿ ಹೊರತು ಪಡಿಸಿ ಇನ್ನುಳಿದ ಪಕ್ಷಕ್ಕೆ ಜನ ಅಧಿಕಾರ ಕೊಟ್ಟ ನೋಡಿದ್ದಾರೆ. ಟಿಆರ್‌ಎಸ್ ಆಡಳಿತದಿಂದ ಜನರು ಭ್ರಮನಿರಸನಗೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಬೆಂಬಲ ಸಿಗುವುದರಲ್ಲಿ ಅನುಮಾನವಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ನಾಯಕತ್ವಕ್ಕೆ ಜನ ಬೆಂಬಲ ಸೂಚಿಸಿದ್ದಾರೆ. ಕಳೆದ 7 ದಿನ ಮುಖ್ಯಮಂತ್ರಿ ಕೆಸಿಆರ್ ದೆಹಲಿಯಲ್ಲಿ ಬೀಡು ಬಿಟ್ಟಿದ್ದರು. ರಾಜ್ಯಕ್ಕೆ ಬೇಕಾದ ಅಗತ್ಯ ನೆರವು, ಅನುದಾನ ಪಡೆಯುವ ಬದಲು, ಅಖಿಲೇಶ್ ಯಾದವ್ ಸೇರಿದಂತೆ ಕೆಲ ಅನಗತ್ಯ ನಾಯಕರನ್ನು ಬೇಟಿಯಾಗಿ ತಮ್ಮ ರಾಜಕೀಯ ಭವಿಷ್ಯ ಗಟ್ಟಿಮಾಡಲು ಯತ್ನಿಸಿದ್ದಾರೆ. ಕೆಸಿಆರ್ ಯಾವ ವಿಚಾರಕ್ಕೆ ದೆಹಲಿ ತೆರಳಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಇಂತಹ ಅನವಶ್ಯಕ ಭೇಟಿಯಿಂದ ರಾಜ್ಯದ ತೆರಿಗೆ ಹಣ ಪೂಲಾಗುತ್ತಿದೆ ಹೊರತು, ಅಭಿವೃದ್ಧಿಯಾಗುತ್ತಿಲ್ಲ ಎಂದು ವೆಂಕಟ ಸುಭಾಷ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೆಲಂಗಾಣ ಕಾಂಗ್ರೆಸ್ ಶಾಸಕ ರಾಜಗೋಪಾಲ ರೆಡ್ಡಿ ರಾಜೀನಾಮೆ
ಮುಂದಿನ ವರ್ಷದಲ್ಲಿ ತೆಲಂಗಾಣ ವಿಧಾನಸಭಾ ಚುನಾವಣೆ ಎದುರಿಸಲಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಶಾಸಕ ರಾಜಗೋಪಾಲ ರೆಡ್ಡಿ ಪಕ್ಷ ತೊರೆದಿದ್ದಾರೆ. ಪಕ್ಷದ ಮತದಾರರನ್ನು ಸಂಪರ್ಕಿಸಿ ಮುಂದಿನ ರಾಜಕೀಯ ನಿರ್ಧಾರ ಘೋಷಿಸುವುದಾಗಿ ರಾಜಗೊಪಾಲ ರೆಡ್ಡಿ ಹೇಳಿದ್ದಾರೆ. ರಾಜಗೋಪಾಲ ರೆಡ್ಡಿ ಈಗಾಗಲೇ ಬಿಜೆಪಿ ಸಂಪರ್ಕಿಸಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ.
