ದುರಸ್ತಿಗೆ ನಿರ್ಧಾರ ತೆಗೆದುಕೊಳ್ಳಬೇಕಿದ್ದರೂ ತುಂಗಭದ್ರಾ ಜಲಾಶಯ ಮಂಡಳಿ ಕೈಗೊಳ್ಳಬೇಕು. ಈಗಾಗಲೇ ಗೇಟ್ ನಿರ್ಮಿಸಲು ಅನುಮೋದನೆ ನೀಡಿದೆ ಎಂದು ಸಚಿವರೂ ಆದ ಸಭಾನಾಯಕ ಬೋಸರಾಜು ಹೇಳಿದರು.
ವಿಧಾನ ಪರಿಷತ್ತು (ಆ.19): ತುಂಗಭದ್ರ ಜಲಾಶಯದ 32 ಗೇಟುಗಳನ್ನು ತಯಾರು ಮಾಡಲು ಗುತ್ತಿಗೆ ಪಡೆದ ಕಂಪನಿಯು 15 ತಿಂಗಳ ಕಾಲಾವಧಿ ಕೇಳಿದ್ದು, ಆ ನಂತರ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಸಚಿವರೂ ಆದ ಸಭಾನಾಯಕ ಬೋಸರಾಜು ಹೇಳಿದರು. ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯೆ ಹೇಮಲತಾ ನಾಯಕ ಅವರು ತುಂಗಭದ್ರಾ ಜಲಾಶಯದ 19ನೇ ಗೇಟ್ ಸೇರಿ 8 ಕ್ರಸ್ಟ್ ಗೇಟ್ ದುರಸ್ತಿ ಕುರಿತು ಪ್ರಸ್ತಾಪಿಸಿದರು.
ಇದಕ್ಕೆ ಉತ್ತರಿಸಿದ ಬೋಸರಾಜು, ದುರಸ್ತಿಗೆ ನಿರ್ಧಾರ ತೆಗೆದುಕೊಳ್ಳಬೇಕಿದ್ದರೂ ತುಂಗಭದ್ರಾ ಜಲಾಶಯ ಮಂಡಳಿ ಕೈಗೊಳ್ಳಬೇಕು. ಈಗಾಗಲೇ ಗೇಟ್ ನಿರ್ಮಿಸಲು ಅನುಮೋದನೆ ನೀಡಿದೆ. ಮುಂಗಾರು ಆರಂಭಕ್ಕೂ ಒಂದು ತಿಂಗಳ ಮುಂಚೆಯೇ ಜಲಾಶಯಕ್ಕೆ 64 ಟಿಎಂಟಿ ನೀರು ಹರಿದು ಬಂದಿದ್ದರಿಂದ 19ನೇ ಗೇಟು ಕೂರಿಸಲು ಆಗಲಿಲ್ಲ ಎಂದರು. ಪ್ರಸ್ತುತ ತಜ್ಞರು ಎಲ್ಲ ಗೇಟ್‌ಗಳನ್ನು ಬದಲಾಯಿಸಬೇಕೆಂದು ವರದಿ ನೀಡಿದ್ದರಿಂದ 32 ಗೇಟ್‌ಗಳನ್ನು ಬದಲಿಸಲು ನಿರ್ಧರಿಸಿದ್ದು, ಟೆಂಡರ್ ಕೂಡ ಆಗಿದೆ ಎಂದು ತಿಳಿಸಿದರು.
ಪ್ರತಿಪಕ್ಷಗಳಿಗೆ ಬೇರೆ ಕೆಲಸ ಇಲ್ಲ: ಯಾರೋ ಒಂದಿಬ್ಬರು ಶಾಸಕರು ಹೇಳಿದ್ದನ್ನೇ ಮುಂದಿಟ್ಟುಕೊಂಡು ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಎಲ್ಲಾ ಶಾಸಕರು ಸಮಾಧಾನದಿಂದಿದ್ದರೂ ಒಂದಿಬ್ಬರಿಗೆ ಮಾತ್ರ ತೊಂದರೆ ಎಂದರೆ ಅದು ಸ್ಥಳೀಯ ಸಮಸ್ಯೆ ಅಷ್ಟೆ ಎಂದು ಹೇಳಿದ್ದಾರೆ. ಅನುದಾನ ಹಂಚಿಕೆ ಸೇರಿದಂತೆ ಸರ್ಕಾರದಲ್ಲಿ ಎಲ್ಲಾ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯುತ್ತಿದ್ದು, ಒಂದಿಬ್ಬರು ಶಾಸಕರು ಹೇಳಿದ್ದನ್ನೇ ಸತ್ಯ ಎಂದು ಆರೋಪ ಮಾಡುತ್ತಿರುವ ಪ್ರತಿಪಕ್ಷಗಳಿಗೆ ಮಾಡಲು ಬೇರೆ ಕೆಲಸ ಇಲ್ಲ ಎಂದು ಕೊಡಗು ಜಿಲ್ಲಾ ಉಸ್ತುವಾರಿಯೂ ಆಗಿರುವ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಇತ್ತೀಚಿನ ರಾಜಕೀಯ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಮೇಲೆ ವಿನಾ ಕಾರಣ ಆರೋಪ: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಹಾರಂಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನುದಾನ ಹಂಚಿಕೆ, ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಒಂದಿಬ್ಬರು ಶಾಸಕರು ಮಾತನಾಡಿದ್ದಾರೆ. ಉಳಿದೆಲ್ಲಾ ಶಾಸಕರಿಗೆ ಯಾವುದೇ ಸಮಸ್ಯೆ ಆಗುತ್ತಿಲ್ಲ. ಹೀಗಿರುವಾಗ ಸರ್ಕಾರದ ಮೇಲೆ ವಿನಾ ಕಾರಣ ಆರೋಪ ಮಾಡಲಾಗುತ್ತಿದೆ. ಸರ್ಕಾರದಲ್ಲಿ ಸಾಕಷ್ಟು ಹಣ ಇದ್ದು, ಯೋಜನೆಗಳ ಅನುಷ್ಠಾನಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದರು. ವಸತಿ ಯೋಜನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸಚಿವರಿಂದ ಸಮಸ್ಯೆಯಾಗಿದೆ ಎಂದು ಅವರು ಹೇಳಿಲ್ಲ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಗುತ್ತಿರುವುದನ್ನು ಹೇಳಿದ್ದಾರೆ. ಮುಖ್ಯಮಂತ್ರಿಯವರು ಬಿ.ಆರ್.ಪಾಟೀಲ್ ಅವರನ್ನು ಕರೆಸಿ ಮಾತನಾಡಿದ್ದಾರೆ. ಸಮಸ್ಯೆ ಇತ್ಯರ್ಥವಾಗಿದೆ ಎಂದು ಹೇಳಿದರು.
