ಕಾಂಗ್ರೆಸ್‌ ವಿರುದ್ಧ ಬಿಜೆಪಿಯಿಂದ ತೆರಿಗೆ ಭಯೋತ್ಪಾದನೆ: ಸಚಿವ ಪ್ರಿಯಾಂಕ್ ಖರ್ಗೆ

ಆದಾಯ ತೆರಿಗೆ ಇಲಾಖೆ ರು. 14 ಲಕ್ಷ ದೇಣಿಗೆಯ ಪೂರ್ವ ಅಂದಾಜು ಸಿಗುತ್ತಿಲ್ಲ ಎಂದು 1823.08 ಕೋಟಿ ರು. ತೆರಿಗೆ ಡಿಮ್ಯಾಂಡ್ ನೋಟಿಸ್‌ ಕೊಟ್ಟಿದ್ದಾರೆ. ಯಾವುದೇ ಅಸೆಸ್ಮೆಂಟ್ ಆರ್ಡರ್ ಇಲ್ಲದೆ. ಯಾವ ಆಧಾರದ ಮೇಲೆ ನೋಟಿಸ್‌ ನೀಡಿದ್ದಾರೋ ಗೊತ್ತಿಲ್ಲ ಎಂದ ಸಚಿವ ಪ್ರಿಯಾಂಕ್ ಖರ್ಗೆ 

Tax Terrorism by BJP against Congress Says Minister Priyank Kharge grg

ಕಲಬುರಗಿ(ಮಾ.31): ಇಡಿ, ಐಟಿ ಮೊದಲಾದ ತನಿಖಾ ಸಂಸ್ಥೆಗಳು ಬಿಜೆಪಿಯ ಮುಂಚೂಣಿ ಘಟಕಗಳಾಗಿದ್ದು, ವಿರೋಧಪಕ್ಷಗಳಿಗೆ ಆಗಾಗ ನೋಟೀಸ್‌, ದಂಡ ರೂಪದಲ್ಲಿ ಲವ್ ಲೆಟರ್ ಕಳಿಸುವುದು ಈ ತನಿಖಾ ಸಂಸ್ಥೆಗಳ ಕೆಲಸವಾಗಿದೆ, ಬಿಜೆಪಿ ಇವುಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್‌ ವಿರುದ್ಧ ತೆರಿಗೆ ಭಯೋತ್ಪಾದನೆ ಯುದ್ಧ ಸಾರಿದೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆದಾಯ ತೆರಿಗೆ ಇಲಾಖೆ ರು. 14 ಲಕ್ಷ ದೇಣಿಗೆಯ ಪೂರ್ವ ಅಂದಾಜು ಸಿಗುತ್ತಿಲ್ಲ ಎಂದು 1823.08 ಕೋಟಿ ರು. ತೆರಿಗೆ ಡಿಮ್ಯಾಂಡ್ ನೋಟಿಸ್‌ ಕೊಟ್ಟಿದ್ದಾರೆ. ಯಾವುದೇ ಅಸೆಸ್ಮೆಂಟ್ ಆರ್ಡರ್ ಇಲ್ಲದೆ. ಯಾವ ಆಧಾರದ ಮೇಲೆ ನೋಟಿಸ್‌ ನೀಡಿದ್ದಾರೋ ಗೊತ್ತಿಲ್ಲ ಎಂದರು. ಇಡಿ, ಸಿಬಿಐ, ಐಟಿ, ಇಡಿ ಇವೇ ಬಿಜೆಪಿಯ ಮುಂಚೂಣಿ ಘಟಕಗಳಾಗಿವೆ, ವಾಸ್ತವದಲ್ಲಿ ಬಿಜೆಪಿಯಲ್ಲಿರುವ ಅನೇಕ ಮೋರ್ಚಾ, ಸೆಲ್‌ಗಳು ನಿಷ್ಕ್ರೀಯವಾಗಿವೆ ಎಂದು ಲೇವಡಿ ಮಾಡಿದರು.

ಡಿಎನ್ಎ ಟೆಸ್ಟ್ ಮಾಡಿಸಿದ್ರೆ ಕುಟುಂಬ ರಾಜಕಾರಣ ಬಯಲು: ಸಚಿವ ಪ್ರಿಯಾಂಕ್‌ ಖರ್ಗೆ

ಎಲ್ಲ ರಾಜಕೀಯ ಪಕ್ಷಗಳಿಗೆ ಆರ್ ಟಿ ಅಧಿನಿಯಮದ ಸೆಕ್ಷನ್ 13ರ ಅಡಿಯಲ್ಲಿ ರಿಯಾಯಿತಿ ಇರುತ್ತದೆ. ಯಾರಾದರೂ ವ್ಯಕ್ತಿ ದಾನದ ರೂಪದಲ್ಲಿ ಹಣ ಕೊಟ್ಟರೆ ಫಾರಂ 24ರ ಅಡಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಬೇಕು. ನಂತರ ಚುನಾವಣಸ ಆಯೋಗ ಮಾಹಿತಿಯನ್ನು ಅಧಿಕೃತ ವೆಬ್ ಸೈಟ್ ಮೂಲಕ ಪ್ರಕಟಿಸುತ್ತಾರೆ. ಹಾಗೆ ಅಧಿಕೃತವಾಗಿ ಪ್ರಕಟಿಸಿದ ಮಾಹಿತಿಯ ಬಗ್ಗೆ ನೋಟಿಸು ಜಾರಿ ಮಾಡಿ, ದಂಡ ಭರಿಸುವಂತೆ ಸೂಚಿಸಿರೋದು ಅಚ್ಚರಿ ಉಂಟು ಮಾಡಿದೆ ಎಂದರು.

ಕೇಜ್ರಿವಾಲ್ ಅವರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರನ್ನು ಅರೆಸ್ಟ್ ಮಾಡಿರುವುದಕ್ಕೆ ಜರ್ಮನ್, ಅಮೆರಿಕಾ ಹಾಗೂ ವಿಶ್ವಸಂಸ್ಥೆಯವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿಯವರಿಗೆ ಭಯ ಪ್ರಾರಂಭವಾಗಿದೆ. ಹಾಗಾಗಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ದೂರಿದರು.

ರಾಜ್ಯ ಬಿಜೆಪಿಯಲ್ಲಿ ಬಂಡಾಯ ಪ್ರಾರಂಭವಾಗಿದೆ. ಯಡಿಯೂರಪ್ಪ ಸೇರಿದಂತೆ ನಾಯಕರ ವಿರುದ್ದ ಅವರದೇ ಪಕ್ಷದವರಿಂದ ವಿರೋಧವಾಗುತ್ತಿದೆ. ಹೀಗಾಗಿ ಬಿಜೆಪಿಗೆ ಸೋಲಿನ ಭೀತಿ ಕಾಡುತ್ತಿದೆ. ಅವರದ್ದೇ ಆಂತರಿಕ ಸಮೀಕ್ಷೆ ಪ್ರಕಾರ 200 ಸ್ಥಾನ ಬರುವುದಿಲ್ಲ ಎಂಬುದು ಗೊತ್ತಾಗಿದೆ. ಅಬ್ ಕೀ ಬಾರ್ ಚಾರ್ ಸೌ ಪಾರ್ ಎಂದು ಸುಮ್ಮನೆ ಹೇಳುತ್ತಾರೆ. ಕಾಂಗ್ರೆಸ್ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಖರ್ಗೆ ಸಾಹೇಬರನ್ನು ಸೋಲಿಸಿರುವ ಜಾಧವ್ ಸಂಸದರ ತರಹ ವರ್ತಿಸುವ ಬದಲು ಮೋದಿ ಅಭಿಮಾನಿ ಬಳಗದ ಘಟಕದ ಅಧ್ಯಕ್ಷರಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ ಅವರು ಜಾಧವ್ 50 ಸಾಧನೆ ಮಾಡಿರುವಾಗಿ ಹೇಳಿದ್ದಾರೆ. ಕೇವಲ 5 ಸಾಧನೆ ತಿಳಿಸಲಿ ಸಾಕು ಎಂದರು.

ಬಿಜೆಪಿಯಿಂದ 3 ಆರ್‌ ಪ್ರಚಾರ:

ರೀನೇಮಿಂಗ್, ರಿಪ್ಯಾಕೇಜಿಂಗ್, ರೀಲಾಂಚಿಂಗ್ ಎನ್ನುವ ಮೂರು ಆರ್ ಗಳನ್ನು ಬಿಜೆಪಿ ಸರ್ಕಾರ ಪಾಲಿಸುತ್ತಿದೆ. ಕಾಂಗ್ರೆಸ್ ಅಧಿಕಾರದ ಯೋಜನೆಗಳನ್ನೇ ಪುನರ್ ನಾಮಕರಣ ಮಾಡಲಾಗಿದೆ. ಮೋದಿ ಸರ್ಕಾರದ ಯಾವ ಯೋಜನೆಗಳು ಹೊಸವಲ್ಲ. ಈಗ ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ. ಬಿಜೆಪಿಯವರೇ ಗಮನಸಿ ನೀವು ಏನೇ ಮಾಡಿದರು ಅದರಲ್ಲಿ ಕನ್ನಡಿಗರ ಪಾಲು ಇರುತ್ತದೆ. ಯಾವುದಾದರೂ ಹೊಸ ಯೋಜನೆ ಇದ್ದರೆ ಹೇಳಲಿ ಎಂದು ಚಾಲೆಂಜ್ ಮಾಡುತ್ತೇನೆ. ಮೋದಿ ಗ್ಯಾರಂಟಿ ಎಂದು ಹೇಳಿಕೊಳ್ಳುವ ಕೇಂದ್ರದ ಪ್ರಾಯೋಜಿಕ ಯೋಜನೆಗಳಲ್ಲಿ ರಾಜ್ಯ ಸರ್ಕಾರದ ಸಮಪಾಲು ಇರುವಾಗ ಅದ್ಹೇಗೆ ಮೋದಿ ಗ್ಯಾರಂಟಿ ಆಗುತ್ತದೆ ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ಅವರು ಹೇಳಲಿ. ನಮ್ಮ ಸರ್ಕಾರದ ಸಾಧನೆ ಬಗ್ಗೆ ನಾನು ಹೇಳುತ್ತೇನೆ. ನಾನೇ ವೇದಿಕೆ ಸಿದ್ದಪಡಿಸುತ್ತೇನೆ ಹಾಗೂ ಬಹಿರಂಗ ಚರ್ಚೆಗೆ ಸಿದ್ದನಿದ್ದೇನೆ. ಅವರ ಕಡೆಯಿಂದ ಯಾರೂ ಬೇಕಾದರೂ ಬರಲಿ ಅಥವಾ ನಮ್ಮ ಅಭಿವೃದ್ದಿ ನೋಡಬೇಕಿದ್ದರೆ ಎಸಿ ಸೌಲಭ್ಯ ಹೊಂದಿರುವ ಬಸ್ ವ್ಯವಸ್ಥೆ ಮಾಡುತ್ತೇನೆ ಜೊತೆಗೆ ಒಬ್ಬ ಗೈಡ್ ವ್ಯವಸ್ಥೆ ಮಾಡುತ್ತೇನೆ ಬಿಜೆಪಿಗರು ನಮ್ಮೊಂದಿಗೆ ಬರಲಿ ಎಂದು ಪಂಥಾಹ್ವಾನ ನೀಡಿದರು.

ಮನುವಾದಿಗಳಿಂದ ನನಗೆ ಜೀವ ಬೆದರಿಕೆ ಇದೆ ಎಂದು ಹೇಳಿದ್ದೇನೆ. ಆದರೆ ಅದಕ್ಕೆ ಜಾಧವ್ ಪ್ರತಿಕ್ರಿಯಿಸಿದ್ದಾರೆ. ನಾನು ಮನುವಾದಿಗಳು ಎಂದಿದ್ದೇನೆ ಅದಕ್ಕೆ ಜಾಧವ ಯಾಕೆ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿನೋಡಿಕೊಳ್ಳಬೇಕು ? ನಾನೇನಾದರೂ ಜಾಧವ ಹೆಸರು ಹೇಳಿದ್ದೇನಾ? ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ತುಘಲಕ್‌ ಆಡಳಿತ: ಕೇಂದ್ರ ಸಚಿವ ಭಗವಂತ ಖುಬಾ

ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಜಾಧವ್ ಕೇಳುತ್ತಾರೆ, ಕಾಂಗ್ರೆಸ್ ಸರ್ಕಾರ ನಿರ್ಮಿಸಿದ್ದ ಕಾಲೇಜಿನಲ್ಲಿ ಓದಿ, ಸರ್ಕಾರದ ಆಸ್ಪತ್ರೆಯಲ್ಲಿ ಕೆಲಸ ಮಾಡಿ. ಮುಂದೆ ಕೆಲಸಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿಕೊಂಡಿದ್ದಕ್ಕೆ ಅವರನ್ನು ನಾಯಕರನ್ನಾಗಿ ಮಾಡಿದೆ ಎಂದು ಕುಟುಕಿದರು.

ಜಾಧವ್‌ಗೆ ಪ್ರಿಯಾಂಕ್‌ ಕಿವಿಮಾತು:

ಭೀಮಾ ನದಿಗೆ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಜಾಧವ್ ಸರಿಯಾಗಿ ವರ್ತಿಸಬೇಕು. ಹೋರಾಟಗಾರರ ಬಿಪಿ ಚೆಕ್ ಮಾಡುವ ಕೆಲಸ ಬೇರೆಯವರು ಮಾಡುತ್ತಾರೆ. ಅದರ ಬದಲಿ ಮಹಾರಾಷ್ಟ್ರದಲ್ಲಿ ಅವರದೇ ಸರ್ಕಾರ ಇದೆಯಲ್ಲ ಅವರೊಂದಿಗೆ ಮಾತನಾಡಲಿ ಎಂದು ಕಿವಿಮಾತು ಹೇಳಿದರು. ಮಲ್ಲಿಕಾರ್ಜುನ ಖರ್ಗೆ ಅವರು ಸಂಸದರಾಗಿದ್ದ ವೇಳೆ ಮಾಡಿದ ಆರ್ಟಿಕಲ್ 371 (ಜೆ), ಕೇಂದ್ರೀಯ ವಿಶ್ವವಿದ್ಯಾಲಯ, ಇಎಸ್ ಐಸಿ, ರಾಷ್ಟ್ರೀಯ ಹೆದ್ದಾರಿಗಳು, ಗುಲಬರ್ಗಾ ಗುತ್ತಿ- ರಾಷ್ಟ್ರೀಯ ಹೆದ್ದಾರಿ, ರೇಲ್ವೆ ಸ್ಟೇಷನ್ ಉನ್ನತೀಕರಣ, ಓವರ್ ಬ್ರಿಜ್, ಕಲಬುರಗಿ- ಹೊಟಗಿ ಡಬ್ಲಿಂಗ್, 27 ಹೊಸ ರೇಲ್ವೆಗಳು ಸೇರಿದಂತೆ ಹಲವಾರು ಅಭಿವೃದ್ದಿ ಕಾರ್ಯಗಳ ಪಟ್ಟಿ ಓದಿದ ಸಚಿವರು ಇಂತಹ ಯಾವುದಾರೊಂದು ಯೋಜನೆ ಇದ್ದರೆ ಹೇಳಲಿ ಎಂದು ಸವಾಲು ಹಾಕಿದರು. ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ್, ಶಾಸಕ ಅಲ್ಲಮಪ್ರಭು ಪಾಟೀಲ್, ಡಾ. ಕಿರಣ್ ದೇಶಮುಖ, ಪ್ರವೀಣ ಹರವಾಳ ಹಾಗೂ ಮತ್ತಿತರಿದ್ದರು.

Latest Videos
Follow Us:
Download App:
  • android
  • ios