Asianet Suvarna News Asianet Suvarna News

ಡಿಎಂಕೆ ಬಳಿ ಭ್ರಷ್ಟಾಚಾರದ ಕಾಪಿರೈಟ್‌ : ಮೋದಿ ವಾಗ್ದಾಳಿ

ಭಾರತಕ್ಕೆ ಸೇರಿದ್ದ ಕಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟಿದ್ದು ಕಾಂಗ್ರೆಸ್‌ ಮತ್ತು ಡಿಎಂಕೆ ಸರ್ಕಾರಗಳು ಎಂದು ಪ್ರಧಾನಿ ನರೇಂದ್ರ ಮೋದಿ ಪುನಃ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಈ ಎರಡೂ ಪಕ್ಷಗಳು ಸನಾತನ ಧರ್ಮಕ್ಕೆ ಅವಮಾನ ಮಾಡುತ್ತಿವೆ ಎಂದೂ ಕಿಡಿಕಾರಿದ್ದಾರೆ.

Tamilnadu Lok sabha elelction 2024 PM Narendra Modi outraged against DMK Congress rav
Author
First Published Apr 11, 2024, 6:57 AM IST

ವೆಲ್ಲೋರ್‌ (ಏ.11): ಭಾರತಕ್ಕೆ ಸೇರಿದ್ದ ಕಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟಿದ್ದು ಕಾಂಗ್ರೆಸ್‌ ಮತ್ತು ಡಿಎಂಕೆ ಸರ್ಕಾರಗಳು ಎಂದು ಪ್ರಧಾನಿ ನರೇಂದ್ರ ಮೋದಿ ಪುನಃ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಈ ಎರಡೂ ಪಕ್ಷಗಳು ಸನಾತನ ಧರ್ಮಕ್ಕೆ ಅವಮಾನ ಮಾಡುತ್ತಿವೆ ಎಂದೂ ಕಿಡಿಕಾರಿದ್ದಾರೆ.

ಬುಧವಾರ ತಮಿಳುನಾಡಿನಲ್ಲಿ ಎನ್‌ಡಿಎ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಪ್ರಧಾನಿ, ಕಚತೀವು ದ್ವೀಪ ಮತ್ತು ರಾಹುಲ್‌ ಗಾಂಧಿಯವರ ‘ಶಕ್ತಿ’ ಹೇಳಿಕೆಗಳ ವಿಷಯದಲ್ಲಿ ಉಭಯ ಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದ್ರಾವಿಡ ನಾಡಿನಲ್ಲಿ ಪ್ರಧಾನಿ ಮೋದಿ ಅಬ್ಬರದ ರೋಡ್​ ಶೋ, 4 ಸ್ಥಾನ ಟಾರ್ಗೆಟ್‌!

ಡಿಎಂಕೆ ಬಳಿ ಭ್ರಷ್ಟಾಚಾರದ ಕಾಪಿರೈಟ್‌: ‘ಭ್ರಷ್ಟಾಚಾರದ ವಿಷಯದಲ್ಲಿ ಡಿಎಂಕೆ ಪಕ್ಷ ಮೊಟ್ಟಮೊದಲ ಕಾಪಿರೈಟ್‌ ಹೊಂದಿದೆ. ಕರುಣಾನಿಧಿ ಕುಟುಂಬ ತಮಿಳುನಾಡನ್ನು ಲೂಟಿ ಹೊಡೆದಿದೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಆ ಕಾರ್ಯವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಡಿಎಂಕೆ ಎಂಬುದೊಂದು ‘ಕುಟುಂಬದ ಕಂಪನಿ.’ ಅದು ರಾಜ್ಯವನ್ನು ಭಾಷೆ, ಪ್ರದೇಶ, ನಂಬಿಕೆ ಹಾಗೂ ಜಾತಿ ಆಧಾರದಲ್ಲಿ ವಿಭಜಿಸುತ್ತಿದೆ. ತನ್ಮೂಲಕ ಯುವಕರನ್ನು ಅಭಿವೃದ್ಧಿಯಿಂದ ವಂಚಿತರನ್ನಾಗಿಸುತ್ತಿದೆ. ಅವರ ಈ ಪುರಾತನವಾದ ಅಪಾಯಕಾರಿ ರಾಜಕಾರಣವನ್ನು ನಾನು ಬಯಲಿಗೆಳೆಯಲು ನಿರ್ಧರಿಸಿದ್ದೇನೆ’ ಎಂದು ಮೋದಿ ಹೇಳಿದರು.

ಮೀನುಗಾರರ ಬಗ್ಗೆ ನಕಲಿ ಅನುಕಂಪ: 1974ರಲ್ಲಿ ಕಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟಾಗ ಕೇಂದ್ರದಲ್ಲಿ ಕಾಂಗ್ರೆಸ್‌ ಮತ್ತು ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರದಲ್ಲಿದ್ದವು. ಯಾವ ಸಚಿವ ಸಂಪುಟ ಸಭೆಯಲ್ಲಿ, ಯಾರ ಅನುಕೂಲಕ್ಕಾಗಿ ಅಂತಹದ್ದೊಂದು ನಿರ್ಧಾರ ಕೈಗೊಳ್ಳಲಾಯಿತು? ಈವರೆಗೆ ಈ ಪ್ರಶ್ನೆಗೆ ಕಾಂಗ್ರೆಸ್‌ ಉತ್ತರಿಸಿಲ್ಲ. ಕಚತೀವು ದ್ವೀಪ ಬಿಟ್ಟುಕೊಟ್ಟ ಮೇಲೆ ತಮಿಳುನಾಡಿನ ಮೀನುಗಾರರನ್ನು ಶ್ರೀಲಂಕಾ ಸರ್ಕಾರಕ್ಕೆ ಬಂಧಿಸುತ್ತಿದೆ. ಅವರ ಬಗ್ಗೆ ಎರಡೂ ಪಕ್ಷಗಳು ನಕಲಿ ಅನುಕಂಪ ತೋರಿಸುತ್ತಿವೆ. ಆದರೆ ನಾವು ಶ್ರೀಲಂಕಾದಿಂದ ಬಂಧಿಸಲ್ಪಟ್ಟ ಮೀನುಗಾರರನ್ನು ಶಾಶ್ವತವಾಗಿ ಬಿಡುಗಡೆಗೊಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದೂ ಪ್ರಧಾನಿ ಮೋದಿ ಹೇಳಿದರು.

ಅಣ್ಣಾಮಲೈ ಜೋಕರ್‌ ಎಂದ ದಯಾನಿಧಿ ಮಾರನ್‌ಗೆ ದುರಂಹಕಾರ: ಮೋದಿ ಕಿಡಿ

ಎರಡೂ ಪಕ್ಷಗಳು ಹಿಂದೂ ವಿರೋಧಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಿಂದೂ ನಂಬಿಕೆಗಳ ‘ಶಕ್ತಿ’ಯನ್ನೇ ನಾಶಪಡಿಸುವ ಮಾತನಾಡುತ್ತಾರೆ. ಕಾಂಗ್ರೆಸ್‌ ಮತ್ತು ಡಿಎಂಕೆ ಎರಡೂ ಪಕ್ಷಗಳು ಸನಾತನ ಧರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತವೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಾಗೂ ಸಂಸತ್ತಿನಲ್ಲಿ ಸೆಂಗೋಲ್‌ ಪ್ರತಿಷ್ಠಾಪನೆ ಕಾರ್ಯಕ್ರಮಗಳಿಗೆ ಎರಡೂ ಪಕ್ಷಗಳಳು ಗೈರಾಗಿದ್ದವು ಎಂದು ಮೋದಿ ಕಿಡಿಕಾರಿದರು.

ಇಂಡಿಯಾ ಒಕ್ಕೂಟದವರು ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ಅಮ್ಮ ಜಯಲಲಿತಾ ಬದುಕಿದ್ದಾಗ ಅವರನ್ನು ಡಿಎಂಕೆ ಹೇಗೆ ನಡೆಸಿಕೊಂಡಿತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದೂ ಹೇಳಿದರು.

Follow Us:
Download App:
  • android
  • ios