* ಕರ್ನಾಟಕ ವಿಧಾಣಪರಿಷತ್ ಚುನಾವಣೆ* ಅಂತಿಮವಾಗಿ ಜೆಡಿಎಸ್ ಅಭ್ಯರ್ಥಿಫೈನಲ್, * ದೊಡ್ಡಣ್ಣನ ಅಳಿಯಗೆ ತಪ್ಪಿದೆ ಟಿಕೆಟ್
ಬೆಂಗಳೂರು, (ಮೇ.24): ವಿಧಾನಪರಿಷತ್‌ನ ಒಂದು ಸ್ಥಾನಕ್ಕೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದು, ನಟ ದೊಡ್ಡಣ್ಣ ಅಳಿಯ ವೀರೇಂದ್ರಗೆ ಟಿಕೆಟ್ ತಪ್ಪಿದೆ.
ಅಧಿಕೃತವಾಗಿ ಟಿ.ಎ. ಶರವಣ ಅವರಿಗೆ ಲಕ್ ಖುಲಾಯಿಸಿದೆ. ಇದರೊಂದಿಗೆ ಶರವಣ ಅವರು ಎರಡನೇ ಬಾರಿಗೆ ವಿಧಾನಪರಿಷತ್‌ಗೆ ಆಯ್ಕೆಯಾಗಿದ್ದಾರೆ. ವೀರೇಂದ್ರ ಹಾಗೂ ಶರವಣ ನಡುವೆ ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ನಡೆದಿತ್ತು.
ಕೊನೇ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ಘೋಷಣೆ, ಪಟ್ಟಿಯಲ್ಲಿ ಮತ್ತಷ್ಟು ಅಚ್ಚರಿ
ಈಗಾಗಲೇ ಶರವಣ ಅವರು ಒಂದು ಬಾರಿ ಪರಿಷತ್‌ಗೆ ಆಯ್ಕೆಯಾಗಿದ್ದರಿಂದ ಈ ಬಾರಿ ದೊಡ್ಡಣ್ಣ ಅಳಿಯ ವೀರೇಂದ್ರ ಅವರಿಗೆ ಜೆಡಿಎಸ್ ಪರಿಷತ್ ಟಿಕೆಟ್ ಸಿಗುವುದು ಪಕ್ಕಾ ಎನ್ನಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ವೀರೇಂದ್ರ ಅವರಿಗೆ ಟಿಕೆಟ್ ಕೈತಪ್ಪಿದ್ದು, ಶರವಣ ಅವರಿಗೆ ಅದೃಷ್ಟ ಖುಲಾಯಿಸಿದೆ.
ಒಂದು ಸ್ಥಾನಕ್ಕೆ ಸಿಎಂ ಇಬ್ರಾಹಿಂ, ಆರ್ ಪ್ರಕಾಶ್, ಶರವಣ ಹಾಗೂ ವೀರೇಂದ್ರ ಅವರ ನಡುವೆ ಟಿಕೆಟ್‌ಗಾಗಿ ಪೈಪೋಟಿ ನಡೆದಿತ್ತು. ಕೊನೆಗೆ ಶರವಣ ಹಾಗೂ ವೀರೇಂದ್ರ ನಡುವೆ ಟಿಕೆಟ್ ಫೈಟ್ ಇತ್ತು. ಇದರಿಂದ ಕಡೇ ಕ್ಷಣದವರೆಗೂ ಕುತೂಹಲವಿತ್ತು. ಅಂತಿಮವಾಗಿ ಶರವಣ ಅವರಿಗೆ ಜೆಡಿಎಸ್ ಮಣೆ ಹಾಕಿದೆ.
ಜೆಡಿಎಸ್‌ನ ಯಾವುದೇ ಕಾರ್ಯಚಟುವಟಿಕೆಗಳು ನಡೆದರೂ ಸಹ ಶರವಣ ಅವರು ಮೊದಲಿಗರಾಗಿ ಭಾಗವಹಿಸುತ್ತಾರೆ.ಈ ಎಲ್ಲಾ ಅಂಶಗಳನ್ನ ಗಮನದಲ್ಲಿಟ್ಟುಕೊಂಡು ಶರವಣ ಅವರನ್ನ ಅಂತಿಮಗೊಳಿಸಲಾಗಿದೆ.
ಬಿಜೆಪಿಯಲ್ಲೂ ಅಚ್ಚರಿ ಆಯ್ಕೆ
ಬಿಜೆಪಿ ಕೊನೇ ಕ್ಷಣದಲ್ಲಿ ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಊಹಿಸದ ಹೆಸರು ಪಟ್ಟಿಯಲ್ಲಿರುವುದು ಬಿಜೆಪಿ ನಾಯಕರ ಅಚ್ಚರಿಗೆ ಕಾರಣವಾಗಿದೆ. ಅಚ್ಚರಿ ಅಂದ್ರೆ ರಾಜ್ಯ ಬಿಜೆಪಿ ಕಾರ್ಯದರ್ಶಿ ಮೂಲತಃ ಕೊಪ್ಪಳ ಜಿಲ್ಲೆಯವರಾದ ಹೇಮಲತಾ ನಾಯಕ ಅವರಿಗೆ ಟಿಕೆಟ್ ನೀಡಲಾಗಿದೆ. ಇನ್ನುಳಿದಂತೆ ಲಕ್ಷ್ಮಣ ಸವದಿ, ರಾಜ್ಯ ಬಿಜೆಪಿ ಘಟಕದ ಕಾರ್ಯದರ್ಶಿ ಕೇಶವ ಪ್ರಸಾದ್ ಹಾಗೂ ಚಲುವಾದಿ ನಾರಾಯಣಸ್ವಾಮಿ ಅವರಿಗೆ ಮಣೆ ಹಾಕಲಾಗಿದೆ.
ಕಾಂಗ್ರೆಸ್‌ನಿಂದಲೂ ಅಚ್ಚರಿ ಅಭ್ಯರ್ಥಿ ಕಣಕ್ಕೆ
ವಿಧಾನಪರಿಷತ್ ಚುನಾವಣೆ ಕಣ ರಂಗೇರಿದೆ. ಇದರ ನಡುವೆ ಕಾಂಗ್ರೆಸ್ ಎರಡು ಸ್ಥಾನಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಎಂ ನಾಗರಾಜು ಯಾದವ್ ಹಾಗೂ ಕೆ ಅಬ್ದುಲ್ ಜಬ್ಬಾರ್ ಅವರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿ ಪ್ರಕಟಿಸಿದೆ.
ಭಾರಿ ಕುತೂಹಲ ಮೂಡಿಸಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಗೊಂದಲಗಳಿಗೂ ಕಾರಣವಾಗಿತ್ತು. ಸಿದ್ದರಾಮಯ್ಯ ಬಣ ಹಾಗೂ ಡಿಕೆ ಶಿವಕುಮಾರ್ ಬಣದ ನಡುವೆ ಅಭ್ಯರ್ಥಿಗಳ ಆಯ್ಕೆಗೆ ಜಿದ್ದಾಜಿದ್ದಿ ನಡೆದಿತ್ತು ಅನ್ನೋ ವರದಿಗಳು ಹರಿದಾಡಿತ್ತು. ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ದೆಹಲಿಗೆ ತೆರಳಿ ಕಾಂಗ್ರೆಸ್ ಹೈಕಮಾಂಡ್ ಜೊತೆ ಸುದೀರ್ಘ ಚರ್ಚೆ ನಡೆಸಿತ್ತು.
