* ಬಸವರಾಜ ಬೊಮ್ಮಾಯಿ ಅವರ ಸಂಪುಟಕ್ಕೆ ಸರ್ಜರಿ * ಮೋದಿ ವಿದೇಶದಿಂದ ವಾಪಸಾದ್ದರಿಂದ ಕುತೂಹಲ* ದಿಲ್ಲಿಯಿಂದ ಸಂದೇಶಕ್ಕೆ ಕಾಯುತ್ತಿರುವ ನಾಯಕರು* ಈ ತಿಂಗಳ 10ಕ್ಕೆ ಬೊಮ್ಮಾಯಿ ದಿಲ್ಲಿಗೆ: ಆಗ ಚರ್ಚೆ?

ಬೆಂಗಳೂರು(ಮೇ.06): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟಕ್ಕೆ ಸರ್ಜರಿ ನಡೆಯುವ ಬಗ್ಗೆ ಬಿಜೆಪಿ ಹೈಕಮಾಂಡ್‌ನಿಂದ ಈಗ ಸಂದೇಶ ಬರಬಹುದು ಆಗ ಸಂದೇಶ ಬರಬಹುದು ಎಂಬ ನಿರೀಕ್ಷೆಯಲ್ಲಿರುವ ರಾಜ್ಯ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸದಿಂದ ವಾಪಸಾದ ಹಿನ್ನೆಲೆಯಲ್ಲಿ ಏನಾದರೂ ನಿರ್ಧಾರ ಹೊರಬೀಳಬಹುದು ಎಂದು ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ.

ಸಂಪುಟ ಕಸರತ್ತಿನ ಚೆಂಡು ಹೈಕಮಾಂಡ್‌ ಅಂಗಳದಲ್ಲಿರುವುದರಿಂದ ಸಚಿವ ಸ್ಥಾನದ ಆಕಾಂಕ್ಷಿಗಳು ಹಾಗೂ ಸಂಪುಟ ಪುನಾರಚನೆಯಾದರೆ ಸ್ಥಾನ ಕಳೆದುಕೊಳ್ಳಬೇಕಾಗಬಹುದು ಎಂಬ ಆತಂಕದಲ್ಲಿರುವ ಸಚಿವರು ದೆಹಲಿಯತ್ತ ನೋಟ ಹರಿಸಿದ್ದಾರೆ.

ಈ ನಡುವೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಹೂಡಿಕೆದಾರರನ್ನು ಆಹ್ವಾನಿಸುವ ಸಂಬಂಧ ಇದೇ ತಿಂಗಳ 10ರಂದು ದೆಹಲಿಗೆ ತೆರಳಲಿದ್ದಾರೆ. ಎರಡು ದಿನಗಳ ಕಾಲ ವಾಸ್ತವ್ಯ ಹೂಡುವ ಸಾಧ್ಯತೆಯಿರುವುದರಿಂದ ಆ ವೇಳೆ ವರಿಷ್ಠರೊಂದಿಗೆ ಮಾತುಕತೆ ನಡೆಯಬಹುದು ಎಂಬ ಮಾತೂ ಕೇಳಿಬರುತ್ತಿದೆ.

ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಬೆಂಗಳೂರಿಗೆ ಆಗಮಿಸಿದ್ದ ವೇಳೆ ಪ್ರಧಾನಿ ಮೋದಿ ಅವರು ವಿದೇಶ ಪ್ರವಾಸದಿಂದ ವಾಪಸಾದ ಬಳಿಕ ಮಾತುಕತೆ ನಡೆಸಿ ಸಂಪುಟ ಕುರಿತು ನಿರ್ಣಯ ತಿಳಿಸುವುದಾಗಿ ರಾಜ್ಯ ನಾಯಕರಿಗೆ ಹೇಳಿದ್ದರು ಎನ್ನಲಾಗಿದೆ. ಹೀಗಾಗಿ, ನಿರ್ಣಯ ತಕ್ಷಣಕ್ಕೇ ಕೈಗೊಳ್ಳಲಾಗುತ್ತದೆಯೋ ಅಥವಾ ಇನ್ನಷ್ಟುಕಾಲ ಮುಂದೂಡಲ್ಪಡುತ್ತದೆಯೋ ಎಂಬುದು ಕುತೂಹಲಕರವಾಗಿದೆ.