Asianet Suvarna News Asianet Suvarna News

ತೇಜಸ್ವಿ ಸೂರ್ಯ ವಿರುದ್ಧ ‘ಸೂರ್ಯ ಬಂಡಲ್‌ ಬ್ಯಾಂಕ್‌’ ಕಾಂಗ್ರೆಸ್‌ ಅಭಿಯಾನ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ‘ಸೂರ್ಯ ಬಂಡಲ್‌ ಬ್ಯಾಂಕ್‌ - ನೋ ಮನಿ ಬ್ಯಾಕ್‌’ ಹೆಸರಿನಲ್ಲಿ ಕ್ಷೇತ್ರಾದ್ಯಂತ ಎಟಿಎಂ ಕಾರ್ಡ್‌ ಹಂಚುವ ಮೂಲಕ ಕಾಂಗ್ರೆಸ್‌ ವಿನೂತನ ಪ್ರಚಾರ ನಡೆಸಿದೆ.

Surya Bundle Bank Congress campaign against Tejasvi Surya gvd
Author
First Published Apr 19, 2024, 5:38 AM IST

ಬೆಂಗಳೂರು (ಏ.19): ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ‘ಸೂರ್ಯ ಬಂಡಲ್‌ ಬ್ಯಾಂಕ್‌ - ನೋ ಮನಿ ಬ್ಯಾಕ್‌’ ಹೆಸರಿನಲ್ಲಿ ಕ್ಷೇತ್ರಾದ್ಯಂತ ಎಟಿಎಂ ಕಾರ್ಡ್‌ ಹಂಚುವ ಮೂಲಕ ಕಾಂಗ್ರೆಸ್‌ ವಿನೂತನ ಪ್ರಚಾರ ನಡೆಸಿದೆ. ಗುರು ರಾಘವೇಂದ್ರ ಬ್ಯಾಂಕ್‌ ಹಗರಣ ಮುಂದಿಟ್ಟುಕೊಂಡು ತೇಜಸ್ವಿ ಸೂರ್ಯ ಬಾಯಿಯಲ್ಲಿ ಹಣದ ಕಂತೆ ಉಳ್ಳ ಭಾವಚಿತ್ರ ಮುದ್ರಿಸಿ ಎಸ್‌ಬಿಬಿ ಬ್ಯಾಂಕ್‌ ಹೆಸರಿನಲ್ಲಿ ಕಾರ್ಡ್‌ ವಿತರಣೆ ಮಾಡಲಾಗುತ್ತಿದೆ. 

ಎಸ್‌ಬಿಬಿ-ಸೂರ್ಯ ಬಂಡಲ್ ಬ್ಯಾಂಕ್‌ ಮೂಲಕ ಹಲವು ಆಫರ್‌ ನೀಡಲಾಗುತ್ತಿದೆ. ನೀವು ಖಾತೆಯಲ್ಲಿ ಹಣ ಇಟ್ಟರೆ ಮೂರು ನಾಮಕ ಹಾಕುತ್ತೇವೆ. ಶೇ.100ರಷ್ಟು ನೋ ಮನಿ ಬ್ಯಾಕ್‌ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಎಟಿಎಂ ಕಾರ್ಡ್‌ ಹಂಚುತ್ತಿದ್ದಾರೆ. ತನ್ಮೂಲಕ ಗುರು ರಾಘವೇಂದ್ರ ಬ್ಯಾಂಕ್ ಹಗರಣವನ್ನು ಚುನಾವಣಾ ವಿಷಯವನ್ನಾಗಿ ಬಳಕೆ ಮಾಡಿಕೊಳ್ಳಲು ಕಾಂಗ್ರೆಸ್‌ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಜೈಲಿನಲ್ಲೇ ಅರವಿಂದ್ ಕೇಜ್ರಿವಾಲ್‌ ಹತ್ಯೆಗೆ ಸಂಚು: ಆಪ್‌ ಆರೋಪ

ಬೆಂಗಳೂರು ದಕ್ಷಿಣ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹೋಟೆಲ್, ಅಂಗಡಿಗಳಿಗೆ ಎಟಿಎಂ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ತನ್ಮೂಲಕ ವಿನೂತನ ಪ್ರಚಾರಕ್ಕೆ ಕಾಂಗ್ರೆಸ್‌ ಪಡೆ ಕೈ ಹಾಕಿದೆ. ಜತೆಗೆ ಕಾಂಗ್ರೆಸ್‌ನ ಯಾವುದೇ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲೂ ಈ ವಿಡಿಯೋ ಹಾಗೂ ಫೋಟೋಗಳನ್ನು ಪ್ರಕಟಿಸದೆ ಎಚ್ಚರಿಕೆ ವಹಿಸಿದೆ.

ಆಯೋಗಕ್ಕೆ ಕೈ ದೂರು: ಚುನಾವಣಾ ಪ್ರಚಾರದ ವೇಳೆ ಮತದಾರರಿಗೆ ಬೆದರಿಕೆ ಹಾಕಿದ ಹಾಗೂ ಚುನಾವಣಾ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರಹ್ಮಣ್ಯ ಸೇರಿದಂತೆ ಇತರರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಧಾನಪರಿಷತ್‌ ಸದಸ್ಯ ಯು.ಬಿ.ವೆಂಕಟೇಶ್‌ ಸೇರಿದಂತೆ ಇತರರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ಇತ್ತೀಚೆಗೆ ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತೇಜಸ್ವಿ ಸೂರ್ಯ ಮತ್ತು ರವಿ ಸುಬ್ರಹ್ಮಣ್ಯ ಅಧ್ಯಕ್ಷತೆಯಲ್ಲಿ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ಠೇವಣಿದಾರರ ಸಭೆ ನಡೆಸಲಾಗಿದೆ. ಈ ವೇಳೆ ತೇಜಸ್ವಿ ಸೂರ್ಯ, ರವಿ ಸುಬ್ರಹ್ಮಣ್ಯ, ಬಿಜೆಪಿ ಮಂಡಲ ಅಧ್ಯಕ್ಷ ಗಿರೀಶ್‌ ಸೇರಿದಂತೆ ಇತರರು ಠೇವಣಿದಾರರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. 

ಸದ್ದಿಲ್ಲದೇ 250 ಕಿ.ಮೀ. ವೇಗದ ಸ್ವದೇಶಿ ಬುಲೆಟ್‌ ರೈಲು ತಯಾರಿ ಶುರು

ಜತೆಗೆ ಈ ಸಭೆಯ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ ಚುನಾವಣಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಕ್ಯಾಮೆರಾ ಕಸಿಯಲು ಮುಂದಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೇಜಸ್ವಿ ಸೂರ್ಯ, ರವಿ ಸುಬ್ರಹ್ಮಣ್ಯ ಸೇರಿದಂತೆ ಇತರರ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ತಮ್ಮ ದೂರಿನಲ್ಲಿ ಆಗ್ರಹಿಸಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಶಂಕರ ಗುಹ, ಬ್ಯಾಂಕ್‌ ಠೇವಣಿದಾರರಾದ ವಿ. ಹರೀಶ್‌, ಲಕ್ಷ್ಮೀ ಮಂಜುಳಾ ಇದ್ದರು.

Follow Us:
Download App:
  • android
  • ios