ಬೆಂಗಳೂರು[ಫೆ.25]: ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸೀಟು ಹಂಚಿಕೆ ಕುರಿತಂತೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಮಾತುಕತೆ ನಡೆಯುವ ಮುನ್ನವೇ ನಟಿ ಸುಮಲತಾ ಅಂಬರೀಷ್‌ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದೇನೆ ಎಂದು ಘೋಷಿಸಿದ್ದಾರೆ.

ಪತಿ ಅಂಬರೀಷ್‌ ಇಷ್ಟುವರ್ಷ ಕಾಂಗ್ರೆಸ್‌ನಲ್ಲಿದ್ದುದರಿಂದ ಸಹಜವಾಗಿ ನಾನೂ ಕೂಡ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಬಯಸುತ್ತೇನೆ. ಜೊತೆಗೆ ಯಾವುದೇ ಪಕ್ಷವಾದರೂ ಸರಿ ಚುನಾವಣೆಗೆ ಸ್ಪರ್ಧಿಸುವಂತೆ ಮಂಡ್ಯದ ಜನತೆ ಹಾಗೂ ಅಂಬರೀಷ್‌ ಅಭಿಮಾನಿಗಳು ಒತ್ತಡ ಹೇರುತ್ತಿದ್ದಾರೆ. ಹಾಗಾಗಿ ಜನರ ಒತ್ತಾಯದಿಂದ ಸ್ಪರ್ಧಿಸ ಬಯಸಿದ್ದೇನೆ ಎಂದಿದ್ದಾರೆ.

ಪತಿ ಅಂಬರೀಷ್‌ ಅವರ ಮೂರನೇ ತಿಂಗಳ ಪುಣ್ಯತಿಥಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರ ಜತೆಗೂಡಿ ಸುಮಲತಾ ಅವರು ಭಾನುವಾರ ನಗರದ ಕಂಠೀರವ ಸ್ಟುಡಿಯೋದ ಅಂಬರೀಷ್‌ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ ಈ ವಿಷಯ ತಿಳಿಸಿದರು.

ಮಂಡ್ಯದ ಜನರ ಜೊತೆ ಇರುತ್ತೇನೆ ಎಂದು ಅವರಿಗೆ (ಅಂಬರೀಷ್‌) ಮಾತು ಕೊಟ್ಟಿದ್ದೇನೆ. ಆ ಮಾತನ್ನು ಈಡೇರಿಸಲು ಹಾಗೂ ಮಂಡ್ಯದ ಜನರ ಋುಣ ತೀರಿಸಲು ರಾಜಕೀಯಕ್ಕೆ ಪ್ರವೇಶಿಸುತ್ತೇನೆ. ಯಾವುದೇ ಪಕ್ಷವಾದರೂ ಸರಿ, ಚುನಾವಣೆಗೆ ನಿಲ್ಲಿ ಎಂದು ಮಂಡ್ಯದ ಜನತೆ ಹಾಗೂ ಅಂಬರೀಷ್‌ ಅಭಿಮಾನಿಗಳು ಒತ್ತಡ ಹೇರುತ್ತಿದ್ದಾರೆ. ಅವರ ಪ್ರೀತಿ, ಅಭಿಮಾನಕ್ಕೆ ಸದಾ ಚಿರಋುಣಿ. ಮಂಡ್ಯದ ಬಗ್ಗೆ ಅಂಬರೀಷ್‌ ಅವರು ಅಪಾರ ಕನಸನ್ನು ಇಟ್ಟುಕೊಂಡಿದ್ದರು. ಅವರ ರಾಜಕೀಯ ಕನಸೇನಿತ್ತು, ಮಂಡ್ಯದ ಬಗ್ಗೆ ಅವರಿಟ್ಟುಕೊಂಡಿದ್ದ ಕನಸೇನು ಎಂಬುದು ನನಗೆ ಗೊತ್ತಿದೆ. ಅದನ್ನು ಈಡೇರಿಸಲು ರಾಜಕೀಯ ಪ್ರವೇಶಿಸಿದರೆ ವೇದಿಕೆ ಸಿಗಲಿದೆ ಎಂದು ಭಾವಿಸುತ್ತೇನೆ ಎಂದರು.

ಕಾಂಗ್ರೆಸ್ಸಿನಿಂದ ಸ್ಪರ್ಧಿಸುವ ಸಂಬಂಧ ತಾವು ಈವರೆಗೂ ಯಾವುದೇ ನಾಯಕರನ್ನು ಭೇಟಿ ಮಾಡಿ ಸ್ಪರ್ಧೆಗೆ ಅವಕಾಶ ಕೇಳಿಲ್ಲ. ಅಂಬರೀಷ್‌ ಅವರು ಇಷ್ಟುವರ್ಷ ಕಾಂಗ್ರೆಸ್‌ನಲ್ಲಿದ್ದುದರಿಂದ ಸಹಜವಾಗಿ ನಾನೂ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಬಯಸುತ್ತೇನೆ. ಆದರೆ, ಗೊಂದಲಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಪೊಲಿಟಿಕಲ್‌ ಗೇಮ್‌ನಲ್ಲಿ ನನಗೆ ಆಸಕ್ತಿ ಇಲ್ಲ. ಅಂತಿಮವಾಗಿ ಜನರು ಹೇಳಿದಂತೆ ಮಾತ್ರ ನಡೆಯುತ್ತೇನೆ ಎಂದು ಹೇಳಿದರು.

ಗದ್ಗದಿತರಾದ ಸುಮಲತಾ:

ಪತಿ ಅಂಬರೀಷ್‌ ಅವರು ನಿಧನರಾಗಿ ಮೂರು ತಿಂಗಳು ಆಗಿಹೋಯಿತಾ ಎನಿಸುತ್ತಿದೆ. ಅಭಿಮಾನಿಗಳ ಪ್ರೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಅವರ ಅಗಲಿಕೆಯ ನೋವು ಹಾಗೇ ಇದೆ ಎಂದು ಇದೇ ವೇಳೆ ಸುಮಲತಾ ಗದ್ಗದಿತರಾದರು. ಈ ವೇಳೆ ಪುತ್ರ ಅಭಿಷೇಕ್‌ಗೌಡ, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ನಟ ದೊಡ್ಡಣ್ಣ ಮತ್ತಿತರ ಚಿತ್ರರಂಗದ ಗಣ್ಯರು ಉಪಸ್ಥಿತರಿದ್ದರು.

ಅಂಬರೀಷ್‌ ಎಲ್ಲೂ ಹೋಗಿಲ್ಲ. ಅಭಿಮಾನಿಗಳ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ. ಅವರ ಪ್ರೀತಿ ನನ್ನನ್ನು ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ. ರಾಜಕೀಯ ಮತ್ತು ಚಿತ್ರರಂಗದಲ್ಲಿ ಸಾಕಷ್ಟುಸೇವೆ ಮಾಡಿದ್ದಾರೆ. ಅಂಬಿ ಸ್ಮಾರಕ ನಿರ್ಮಾಣದ ಮೂಲಕ ಅವರ ಸಾಧನೆಯನ್ನು ಮುಂದಿನ ಪೀಳಿಗೆಗೆ ಸಾರುವ ಕೆಲಸ ಆಗಬೇಕು. ಈ ಬಗ್ಗೆ ಸರ್ಕಾರದೊಂದಿಗೆ ಮಾತನಾಡಿದ್ದೇನೆ ಎಂದರು.