ಮಂಡ್ಯ, (ನ.14): ಮಂಡ್ಯ ಸಂಸದೆ ಸುಮಲತಾ ಅಂಬರೀಶ್  ಅವರ ಕಾರ್ಯ ವೈಖರಿ ಬಗ್ಗೆ ಹಗುರವಾಗಿ ಮಾತನಾಡಿದ ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ.

ಆ ಯಮ್ಮ ಯಾವುದೇ ಕೆಲಸ ಮಾಡಲ್ಲ. ದೇವೇಗೌಡರ ಕುಟುಂಬವನ್ನ ಸೋಲಿಸಲು ಅವರನ್ನ ಗೆಲ್ಲಿಸಿದ್ದಾರೆ. ಮಂಡ್ಯದ ಯಾವುದೇ ಕೆಲಸ ಇದ್ದರೂ ನನಗೆ ಹೇಳಿ. ಅವರು ಕೆಲಸ ಮಾಡಲು ಬಿಡಲ್ಲ ಎಂದು ಪ್ರತಾಪ್​ ಸಿಂಹ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಹಿನ್ನೆಲೆ ಆಕ್ರೋಶಗೊಂಡಿರುವ ಅಂಬರೀಶ್‌ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್, ಮಂಡ್ಯ ಜನರ ಸ್ವಾಭಿಮಾನವನ್ನ ಕೆಣಕಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೀವೇನು ಮೈಸೂರನ್ನ ಸಿಂಗಾಪುರ ಮಾಡಿದ್ದೀರ..? ಎಂದು ಪ್ರತಾಪ್‌ಸಿಂಹರನ್ನ ಪ್ರಶ್ನಿಸಿದ್ರು.

ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಗಂಭೀರ ಆರೋಪ ಮಾಡಿದ ಪ್ರತಾಪ್ ಸಿಂಹ 

ಪ್ರತಾಪ್ ಸಿಂಹ ತೋರ್ಪಡಿಕೆಗೋಸ್ಕರ ಉಡಾಫೆ ಹೇಳಿಕೆ ಕೊಟ್ಟಿದ್ದಾರೆ. ಇದು ಬಿಜೆಪಿಯ ಹೇಳಿಕೆಯಲ್ಲ, ಪ್ರತಾಪ್‌ಸಿಂಹರ ಸಣ್ಣತನದ ಹೇಳಿಕೆ. ಭ್ರಷ್ಟ ಅಧಿಕಾರಿಯನ್ನ ಸಮರ್ಥಿಸುವ ಭರದಲ್ಲಿ ಸುಮಲತಾ ಅಂಬರೀಶ್ ವಿರುದ್ಧ ಟೀಕೆ ಮಾಡಿದ್ದಾರೆ ಎಂದು ಕಿಡಿಕಾರಿದರು.

 ಪ್ರತಾಪ್‌ಸಿಂಹರ ಈ ಹೇಳಿಕೆ ಪ್ರಜ್ಞಾವಂತ ಮೈಸೂರು ಜನತೆ ತಲೆ ತಗ್ಗಿಸುವಂತಹದ್ದು. ಮೈಸೂರಿಗೆ ಪ್ರಧಾನಿ ಬಂದ ವೇಳೆ ಸುಮಲತಾ ಹೆಸರನ್ನ ಹೇಳಿದ್ದಾರೆ, ಪ್ರತಾಪ್‌ಸಿಂಹ ಹೆಸರು ಹೇಳಿಲ್ಲ, ಅಲ್ಲೆ ಗೊತ್ತಾಗುತ್ತೆ ನಿಮ್ಮ ಯೋಗ್ಯತೆ ಏನು ಅಂತ ಎಂದು ವಾಗ್ದಾಳಿ ನಡೆಸಿದರು.